varthabharthi

ಸಂಪಾದಕೀಯ

ಮೇಲೇರದ ಬ-ಜೆಟ್

ವಾರ್ತಾ ಭಾರತಿ : 6 Mar, 2020

ಹಲವು ‘ಕಡಿತ’ಗಳ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಕಲ್ಯಾಣ ಕರ್ನಾಟಕದ ಕನಸು ಕಂಡಿದ್ದಾರೆ. ಆದರೆ ಅವರು ಹಾರಿಸಲು ಹೊರಟ ಅಭಿವೃದ್ಧಿಯ ಜೆಟ್ ಹಣವೆಂಬ ತೈಲದ ಕೊರತೆಯಿಂದ ಮೇಲಕ್ಕೆ ಹಾರುವ ಲಕ್ಷಣ ಕಾಣುತ್ತಿಲ್ಲ. ಯಡಿಯೂರಪ್ಪ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಅದೆಷ್ಟು ಅಸಹಾಯಕರಾಗಿದ್ದರು ಎಂದರೆ, ತನ್ನ ಬಜೆಟ್‌ನ ಮಿತಿಯನ್ನು ಅವರು ಸದನದಲ್ಲಿ ಬಹಿರಂಗವಾಗಿ ಒಪ್ಪಿಕೊಂಡರು. ಕರ್ನಾಟಕಕ್ಕೆ ಕೇಂದ್ರ ಮಾಡುತ್ತಿರುವ ಅನ್ಯಾಯದ ಕಾರಣದಿಂದಾಗಿಯೇ ಯಡಿಯೂರಪ್ಪ ಈ ಬಾರಿ ಬಜೆಟ್‌ನಲ್ಲಿ ಅನಿವಾರ್ಯವಾಗಿ ಕಡಿತಗಳನ್ನು ಮಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗೆಂದು, ಬಜೆಟ್‌ನ ವೈಫಲ್ಯವನ್ನು ಕೇಂದ್ರದ ತಲೆಗೆ ಕಟ್ಟಿ ಪಾರಾಗುವಂತಹ ಸ್ಥಿತಿ ರಾಜ್ಯ ಸರಕಾರದ ಮುಂದಿಲ್ಲ. ಯಾಕೆಂದರೆ, ಕೇಂದ್ರದಲ್ಲಿರುವುದು ಯಡಿಯೂರಪ್ಪಾದಿಗಳ ನೆಚ್ಚಿನ ಮೋದಿ ನೇತೃತ್ವದ ಬಿಜೆಪಿ ಸರಕಾರ. ಕೇಂದ್ರ ಅನುದಾನವನ್ನು ಬಿಡುಗಡೆ ಮಾಡಿಲ್ಲ, ರಾಜ್ಯಕ್ಕೆ ಸೇರಬೇಕಾದ ಜಿಎಸ್‌ಟಿ ಪರಿಹಾರ ಧನವನ್ನು ನೀಡಿಲ್ಲ ಎಂದರೆ ಅದಕ್ಕೆ ರಾಜ್ಯದ ಜನರು ಹೊಣೆಗಾರರು ಅಲ್ಲ. ಈ ರಾಜ್ಯ ಅತ್ಯಧಿಕ ಸಂಸದರನ್ನು ಕೊಟ್ಟು ಕೇಂದ್ರ ಸರಕಾರವನ್ನು ಸುಭದ್ರಗೊಳಿಸಿದೆ. ಬಿಜೆಪಿಯ ಅಷ್ಟೂ ಸಂಸದರು ಕೇಂದ್ರದ ಕತ್ತು ಪಟ್ಟಿ ಹಿಡಿದು ರಾಜ್ಯಕ್ಕೆ ಸಿಗಬೇಕಾದ ಹಣವನ್ನು ತಂದು ಕೊಡಬೇಕಾಗಿತ್ತು. ಆದರೆ ಅವರೆಲ್ಲ ಕೇಂದ್ರದ ಗುಲಾಮರಂತೆ ವರ್ತಿಸಿ ಕರ್ನಾಟಕ ರಾಜ್ಯಕ್ಕೆ ದ್ರೋಹವೆಸಗಿದ್ದಾರೆ. ರಾಜ್ಯದ ಹಿತಾಸಕ್ತಿಗಿಂತ ಇವರಿಗೆ ಗುಜರಾತ್ ಮುಖ್ಯವಾಗಿದೆ. ಮೋದಿಯ ಭಜನೆ ಮುಖ್ಯವಾಗಿದೆ. ಬೆನ್ನೆಲುಬಿಲ್ಲದ ಸಂಸದರು ರಾಜ್ಯವನ್ನು ಪ್ರತಿನಿಧಿಸುತ್ತಿರುವಾಗ, ಕೇಂದ್ರ ಸರಕಾರವಾದರೂ ರಾಜ್ಯಕ್ಕೆ ಯಾಕೆ ನ್ಯಾಯವನ್ನು ನೀಡೀತು? ಅದರ ಫಲವನ್ನು ನಾವು ರಾಜ್ಯ ಬಜೆಟ್‌ನಲ್ಲಿ ಸ್ಪಷ್ಟವಾಗಿ ಅನುಭವಿಸಿದ್ದೇವೆ.

 ಈ ಬಾರಿಯ ಬಜೆಟ್‌ನ ಅತ್ಯಂತ ಮುಖ್ಯ ಅಂಶವೆಂದರೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿರುವುದು. ಸಾಧಾರಣವಾಗಿ, ಆ ರಾಜ್ಯಗಳು ಇರುವ ತೆರಿಗೆಗಳನ್ನು ಕಡಿತ ಗೊಳಿಸಿ ತಮ್ಮ ಜನರಿಗೆ ತೈಲವನ್ನು ಅಗ್ಗವಾಗಿಸುವುದು ಸಂಪ್ರದಾಯ. ಆದರೆ ರಾಜ್ಯದಲ್ಲಿ ತೆರಿಗೆಯನ್ನು ಇನ್ನಷ್ಟು ಹೆಚ್ಚಳಗೊಳಿಸಲಾಗಿದೆ. ಇದು ದೇಹದ ಪ್ರಮುಖ ಭಾಗದ ಮಾಂಸವನ್ನು ಕಿತ್ತು, ಇತರ ಗಾಯಗಳನ್ನು ಮುಚ್ಚಲು ಹೊರಟ ವೈದ್ಯನ ಸಾಹಸದಂತೆ ಇದೆ. ಸರಿ, ಈ ತೆರಿಗೆಯ ಮೂಲಕ ಸಂಗ್ರಹಿಸುವ ಹಣದಿಂದ ಜನತೆಗೆ ಅನುಕೂಲಕರ ಬಜೆಟ್‌ನ್ನು ಮಂಡಿಸಿದ್ದಾರೆಯೇ ಎಂದರೆ ಅದೂ ಇಲ್ಲ. ಒಂದು ರೀತಿಯಲ್ಲಿ ಎಲ್ಲ ಕ್ಷೇತ್ರಗಳ ಮೂಗಿಗೂ ಸಣ್ಣದಾಗಿ ಬೆಣ್ಣೆಯನ್ನು ಸವರುವ ಕೆಲಸವನ್ನಷ್ಟೇ ಮಾಡಿದ್ದಾರೆ. ಬಜೆಟ್‌ನಲ್ಲಿ ದಮನಿತ ವರ್ಗವನ್ನು ಸಂಪೂರ್ಣ ನಿರ್ಲಕ್ಷ ಮಾಡಲಾಗಿದೆ. ಕನಿಷ್ಠ ಈ ಹಿಂದಿನ ಬಜೆಟ್‌ನಲ್ಲಿ ಏನನ್ನು ನೀಡಲಾಗಿತ್ತೋ ಅದನ್ನೇ ಮುಂದುವರಿಸಿದ್ದರೂ ಸಮಾಧಾನ ಪಡಬಹುದಾಗಿತ್ತು. ಬದಲಿಗೆ ಈ ಹಿಂದೆ ನೀಡಿದ ಅನುದಾನಗಳಿಗೆಲ್ಲ ಕತ್ತರಿ ಹಾಕಲಾಗಿದೆ.ಮುಖ್ಯವಾಗಿ ಅಲ್ಪಸಂಖ್ಯಾತ ಮತ್ತು ದಲಿತರೇ ಅದರ ನೇರ ಗುರಿಯಾಗಿದ್ದಾರೆ.

ಕಳೆದ ಸಾಲಿನ ಬಜೆಟ್‌ಗೆ ಹೋಲಿಸಿದರೆ, ಈ ಬಾರಿಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಶೇ. 36ರಷ್ಟು ಅನುದಾನವನ್ನು ಕಡಿತ ಮಾಡಲಾಗಿದೆ. ಈ ಹಿಂದೆ 1,985 ಕೋಟಿ ರೂಪಾಯಿ ಒದಗಿಸಲಾಗಿದ್ದರೆ, ಈ ಬಾರಿ ಅದು 1,237ಕ್ಕೆ ಇಳಿದಿದೆ. ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆಗಳ ಅನುದಾನಗಳೂ ಇಳಿಕೆಯಾಗಿವೆ. ಶಿಕ್ಷಣ, ಆರೋಗ್ಯ ಎಲ್ಲ ಅನುದಾನಗಳು ಈ ಹಿಂದಿನ ಬಜೆಟ್‌ಗೆ ಹೋಲಿಸಿದರೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿವೆ. ಮಹಿಳಾ ಆರ್ಥಿಕ ಸ್ವಾವಲಂಬನೆಗೆ ಹಾಗೂ ಸಬಲೀಕರಣಕ್ಕೂ ಬಜೆಟ್‌ನ ಕೊಡುಗೆ ಶೂನ್ಯ. ಕೆಲವೆಡೆ ಕೊಟ್ಟಂತೆ ನಟಿಸಿ, ಕಿತ್ತುಕೊಂಡಿದ್ದಾರೆ. ಆಶಾಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜಧಾನಿಯಲ್ಲಿ ಭಾರೀ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದರು. ಆದರೆ ಬಜೆಟ್‌ನಲ್ಲಿ ಅವರ ಬೇಡಿಕೆಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ವಿಪರ್ಯಾಸವೆಂದರೆ ಗಾರ್ಮೆಂಟ್ಸ್ ನೌಕರರಿಗೆ ಉಚಿತ ಪಾಸ್‌ನ ಭರವಸೆ ನೀಡಲಾಗಿದೆ. ಆದರೆ ಅವರ ಕನಿಷ್ಠ ವೇತನವನ್ನು ರೂ. 9,975ಕ್ಕೆ ಇಳಿಸಲಾಗಿದೆ. ಅಂದರೆ ನಾಲ್ಕು ಸಾವಿರ ರೂಪಾಯಿಯನ್ನು ಅವರಿಂದ ಸರಕಾರ ಕಿತ್ತುಕೊಂಡಿದೆ. ಒಂದೆಡೆ ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವ ಈ ತಂತ್ರವನ್ನು ಮಂಡಿಸಿದ ಬಜೆಟ್‌ನ ಉದ್ದಕ್ಕೂ ಕಾಣಬಹುದು. ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲೂ ವಿಶೇಷ ಕಾರ್ಯಕ್ರಮಗಳು ರೂಪಿಸಿಯೇ ಇಲ್ಲ. ಒಂದು ರೀತಿಯಲ್ಲಿ, ಇಂತಹ ತೇಪೆ ಬಜೆಟ್‌ನ್ನು ರಾಜ್ಯ ಕಂಡಿರುವುದು ಇದೇ ಮೊದಲು.

46,072 ಕೋಟಿ ರೂಪಾಯಿಗಳ ವಿತ್ತೀಯ ಕೊರತೆಯನ್ನು ಎದುರಿಸುತ್ತಿರುವ ಈ ಬಜೆಟ್, ಖಂಡಿತವಾಗಿಯೂ ಯಡಿಯೂರಪ್ಪರ ಕಲ್ಯಾಣ ಕರ್ನಾಟಕದ ಕನಸನ್ನು ನನಸು ಮಾಡಲಾರದು. ಇದು ಸ್ವತಃ ಯಡಿಯೂರಪ್ಪ ಅವರಿಗೇ ಗೊತ್ತಿದೆ. ಆ ಕಾರಣಕ್ಕಾಗಿಯೇ ರಾಜ್ಯ ಎದುರಿಸುತ್ತಿರುವ ಆರ್ಥಿಕ ಸಂಕಟಗಳನ್ನು ಅವರು ಸದನದ ಮುಂದಿಟ್ಟರು. ಈ ಸಂಕಟಗಳನ್ನು ಪರಿಹರಿಸುವವರಾದರೂ ಯಾರು? ಕೇಂದ್ರದಲ್ಲಿರುವ ನಾಯಕರು ಕರ್ನಾಟಕಕ್ಕೆ ನೀಡಬೇಕಾಗಿರುವ ಅನುದಾನಗಳನ್ನು ಕಡಿತ ಗೊಳಿಸಿರುವ ಬಗ್ಗೆ ಹಾಗೂ, ಕರ್ನಾಟಕಕ್ಕೆ ಸಿಗಬೇಕಾಗಿರುವ ಸಹಸ್ರಾರು ಕೋಟಿ ರೂಪಾಯಿ ಜಿಎಸ್‌ಟಿ ಪರಿಹಾರವನ್ನು ನೀಡದೇ ಇರುವ ಬಗ್ಗೆ ರಾಜ್ಯ ಸರಕಾರ ಯಾಕೆ ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳುತ್ತಿಲ್ಲ? ಸಾಧಾರಣವಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಅಸ್ತಿತ್ವದಲ್ಲಿದ್ದರೆ ಅದರಿಂದ ರಾಜ್ಯಕ್ಕೆ ಹೆಚ್ಚು ಲಾಭವಾಗುತ್ತದೆ, ಕೇಂದ್ರದ ಮೇಲೆ ಒತ್ತಡ ಹೇರಿ ರಾಜ್ಯಗಳಿಗೆ ಸೌಲಭ್ಯ ದೊರಕಿಸಲು ಅನುಕೂಲವಾಗುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಈ ಬಾರಿ ಅದು ತಿರುವು ಮುರುವಾಗಿದೆ. ಬಿಜೆಪಿಯ ಅತ್ಯಧಿಕ ಸಂಸದರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರಾದರೂ, ಇವರು ರಾಜ್ಯಕ್ಕೆ ಸಿಗಬೇಕಾದ ಅನುದಾನ ಮತ್ತು ಇನ್ನಿತರ ಪರಿಹಾರಗಳಿಗಾಗಿ ಕೇಂದ್ರಕ್ಕೆ ಒತ್ತಡ ಹಾಕಲು ಅಂಜುತ್ತಿದ್ದಾರೆ. ಮೋದಿ ಮತ್ತು ಅಮಿತ್ ಶಾ ಸರ್ವಾಧಿಕಾರಕ್ಕೆ ತಮ್ಮ ತಲೆಯನ್ನು ಒಪ್ಪಿಸಿ ಬಿಟ್ಟಿದ್ದಾರೆ. ಬರೇ ಮೋದಿ ಭಜನೆಯಿಂದಲೇ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ಭಾವಿಸಿದ್ದಾರೆ. ಸಂಸದರ ಈ ದ್ರೋಹವನ್ನು ಜನರು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ತಮ್ಮ ತಮ್ಮ ಕ್ಷೇತ್ರಗಳ ಸಂಸದರಿಗೆ ಅವರ ಹೊಣೆಗಾರಿಕೆಯನ್ನು ನೆನಪಿಸುವ ಅಗತ್ಯವಿದೆ. ಕನಿಷ್ಠ ರಾಜ್ಯಕ್ಕೆ ಸಿಗಬೇಕಾದ ನ್ಯಾಯ ಬದ್ಧ ಹಣವಾದರೂ ಸಿಗುವಂತೆ ನೋಡಿಕೊಳ್ಳುವುದು ಸಂಸದರ ಕರ್ತವ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)