varthabharthi

ನಿಮ್ಮ ಅಂಕಣ

ಮಾ.8: ವಿಶ್ವ ಮಹಿಳಾ ದಿನಾಚರಣೆ

ಮಹಿಳೆಯರಿಗಿಲ್ಲಿ ಜಾಗವಿಲ್ಲ!?

ವಾರ್ತಾ ಭಾರತಿ : 7 Mar, 2020
ಅನುಪಮಾ ಜೋಶಿ (ರಿಟೈರ್ಡ್ ವಿಂಗ್ ಕಮಾಂಡರ್, ಭಾರತೀಯ ವಾಯುಸೇನೆ) ಕನ್ನಡಕ್ಕೆ: ಕಸ್ತೂರಿ

ಯಾವುದೇ ಇತರ ಸರಕಾರಿ ಇಲಾಖೆಯಂತೆ ಸೈನ್ಯ ಕೂಡಾ ತಾನು ಪ್ರಾತಿನಿಧ್ಯ ವಹಿಸುತ್ತಿರುವ ಸಮಾಜಕ್ಕೆ ಪ್ರತಿಬಿಂಬ ಮಾತ್ರವೇ. ಆದ್ದರಿಂದ ಸಮಾಜದಲ್ಲಿ ನಡೆಯುತ್ತಿರುವಂತೆ ಸೈನ್ಯದಲ್ಲಿ ಸಹ ಸಾಮಾಜಿಕ ಸುಧಾರಣೆ ನಡೆಯಬೇಕು. ಸಮಾಜದ ಪುರೋಗಮನಕ್ಕಾಗಿ ಸೈನ್ಯದಲ್ಲೂ ಬದಲಾವಣೆ ಮಾಡುವುದರಲ್ಲಿ ತಪ್ಪಿಲ್ಲ.


ಸೈನಿಕ ಎನ್ನುತ್ತಲೇ ನಮ್ಮ ಮನಸ್ಸಿನಲ್ಲಿ ಸುಳಿವ ಪರಿಭಾಷೆಯೊಂದೇ. ಪ್ರತಿಷ್ಠೆ, ಗೌರವ, ಸಮಗ್ರತೆ. ಒಂದು ವ್ಯವಸ್ಥೆಯಾಗಿ ಸೈನ್ಯ ತನ್ನ ಸರ್ವೀಸನ್ನು ಸ್ವಾರ್ಥಕ್ಕೆ ಅತೀತವಾಗಿ ಇಡುತ್ತಾ ಸಾಹಸಕ್ಕೆ ಅತಿಹೆಚ್ಚು ವೌಲ್ಯ ಕೊಟ್ಟು ಕಾಪಾಡಿಕೊಳ್ಳುತ್ತದೆ. ಆದರೆ ಸೈನ್ಯದಲ್ಲಿ ಮಹಿಳೆಯರನ್ನು ನಾಯಕತ್ವಕ್ಕೆ ತೆಗೆದುಕೊಳ್ಳುವ ಪ್ರಸ್ತಾಪ ಬರುವಷ್ಟರಲ್ಲಿ ಈ ಪ್ರತಿಷ್ಠೆ, ಗೌರವ, ಸಮಗ್ರತೆಗಳೆಲ್ಲ ಬದಿಗೆ ಜಾರಿಕೊಳ್ಳುತ್ತವೆ. ಇಲ್ಲೇ ವಿಷಯುಕ್ತವಾದ ಪುರಷಾಹಂಕಾರ ಬುಸುಗುಟ್ಟುತ್ತಾ ತನ್ನ ವಿಕಾರಮುಖವನ್ನು ನಿರ್ಲಜ್ಜೆಯಿಂದ ಪ್ರದರ್ಶಿಸಿಕೊಳ್ಳುತ್ತದೆ. ಯಾವುದೇ ಇತರ ಸರಕಾರಿ ಇಲಾಖೆಯಂತೆ ಸೈನ್ಯ ಕೂಡಾ ತಾನು ಪ್ರಾತಿನಿಧ್ಯ ವಹಿಸುತ್ತಿರುವ ಸಮಾಜಕ್ಕೆ ಪ್ರತಿಬಿಂಬ ಮಾತ್ರವೇ. ಆದ್ದರಿಂದ ಸಮಾಜದಲ್ಲಿ ನಡೆಯುತ್ತಿರುವಂತೆ ಸೈನ್ಯದಲ್ಲಿ ಸಹ ಸಾಮಾಜಿಕ ಸುಧಾರಣೆ ನಡೆಯಬೇಕು. ಸಮಾಜದ ಪುರೋಗಮನಕ್ಕಾಗಿ ಸೈನ್ಯದಲ್ಲೂ ಬದಲಾವಣೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ 100ಕ್ಕೆ 100ಶೇ. ಪುರುಷರಿಂದ ಕೂಡಿದ ಉನ್ನತ ಸೇನಾಧಿಕಾರಿ ವರ್ಗದ ದೃಷ್ಟಿಕೋನ ಗಮನಿಸಿದರೆ ತಮ್ಮಿಂದಿಗೆ ಸೇರಿ ಹೋರಾಡುತ್ತಿರುವ ಮಹಿಳಾ ಸೈನಿಕರಿಗೆ ಸಮಾನತೆ ಎಂಬಂಶದ ವಿಷಯದಲ್ಲಿ ಬಾಗಿಲುಗಳು ಮುಚ್ಚಿಕೊಂಡಂತೇ ಕಾಣಿಸುತ್ತದೆ. ಮಹಿಳಾಧಿಕಾರಿಗಳ ಮುಳ್ಳು ಚುಚ್ಚುವಂತೆ ಲೆಫ್ಟಿನೆಂಟ್ ಜನರಲ್ ಕಡ್ಯಾನ್ ಮಾಡಿರುವ ವ್ಯಾಖ್ಯಾನಗಳಿಗೆ ಬುನಾದಿ ಇಲ್ಲೇ ಇದೆ.

ಮೊದಲಿಗೆ ಸೈನ್ಯದೊಳಗೆ ಮಹಿಳೆಯರನ್ನು ಸೇರಿಸಿಕೊಳ್ಳುವುದರ ಬಗ್ಗೆ ಈಗ ಎಂತಹ ವಾದಗಳೂ ತಲೆ ಎತ್ತುವುದಿಲ್ಲ. ಏಕೆಂದರೆ ಭಾರತೀಯ ಸೇನೆಯೊಳಗೆ 26 ವರ್ಷಗಳ ಹಿಂದೆಯೇ ಮಹಿಳೆಯರು ಪ್ರವೇಶಿಸಿದ್ದಾರೆ. ಅಭ್ಯಂತರಗಳು ಏನಾದರೂ ಇದ್ದರೆ ಅವನ್ನು ನಾವು ದಾಟಿಕೊಂಡು ಮುಂದೆ ಹೋಗಿದ್ದೇವೆ. ಹಾಗಾದರೆ ಸೈನ್ಯದಲ್ಲಿ ಮಹಿಳಾಧಿಕಾರಿಗಳ ಮೇಲ್ವಿಚಾರಣೆಯನ್ನು ಜವಾನರು ಒಪ್ಪುವುದಿಲ್ಲ ಎಂಬ ಪ್ರಶ್ನೆ ಎಲ್ಲಿಂದ ಬಂದಿತು? ಈ ಜವಾನರೇ ಎರಡು ದಶಕಗಳಿಂದ ಮಹಿಳಾ ಸೈನಿಕರನ್ನು ಅಂಗೀಕರಿಸುತ್ತಾ ಬಂದಿದ್ದಾರೆ. ಆದ್ದರಿಂದ ಮಹಿಳೆಯರಿಗೆ ಸಹ ಶಾಶ್ವತ ಕಮಿಷನ್ ಇರಬೇಕೆಂಬ ಅಂಶವನ್ನು ಅವರೇಕೆ ವಿರೋಧಿಸುತ್ತಾರೆ?

ಸೈನ್ಯದಲ್ಲಿ ಮಹಿಳೆಯರ ಪ್ರವೇಶವನ್ನು ಸಾಮಾಜಿಕ ಪ್ರಯೋಗಕ್ಕೋಸ್ಕರ ನಡೆಯುತ್ತಿರುವ ಪ್ರಯೋಗಶಾಲೆಯಂತಹದು ಎಂದು ಯಾರಾದರೂ ವರ್ಣಿಸಿದರೆ, 1990ರಲ್ಲಿ ಮಾತ್ರವೇ ಅಂದರೆ ಸೈನ್ಯದೊಳಗೆ ಮಹಿಳೆಯರು ಪ್ರವೇಶಿಸಿದ ಕಾಲದಲ್ಲಿ ಹೇಳಿದ್ದರೆ ಅರ್ಥಪೂರ್ಣವಾಗಿರುತ್ತಿತ್ತು. ಆ ಪ್ರಯೋಗ ಈಗಾಗಲೇ ಪೂರ್ತಿಯಾಗಿದೆ ಎಂದೂ, ಆಚರಣೆಯಲ್ಲಿ ಅದು ಕೂಡ ಸಾನುಕೂಲ ಫಲಿತಾಂಶಗಳೊಂದಿಗೆ ಯಶಸ್ವಿಯಾಗಿದೆ ಎಂದು ಜನರಲ್ ಕಡ್ಯಾನ್ ಗುರುತಿಸಬೇಕಾಗಿದೆ. ಗಂಡಸರಿಗಿಂತ ಕಡಿಮೆ ಸ್ಥಾನದಲ್ಲಿ ಮಹಿಳೆಗೆ ಅವಕಾಶ ಕಲ್ಪಿಸಬೇಕೆಂದರೆ, ಇಲ್ಲವೇ ಕೆಲ ರಂಗಗಳಲ್ಲಿ ಮಾತ್ರವೇ ಸಮಾನರಾಗಿ ನಿಲ್ಲಬಲ್ಲರು ಎಂಬ ಆಲೋಚನೆ ಸೇನಾರಂಗದಲ್ಲೂ ನಡೆಯುವುದಿಲ್ಲ. ಮಹಿಳೆಯನ್ನು ತುಸು ಉನ್ನತ ಸ್ಥಾನದಲ್ಲಿ ನಿಲ್ಲಿಸುವುದು ಎಂದರೆ ಜೇನು ಗೂಡನ್ನು ಕದಲಿಸುವುದಕ್ಕೆ ಸಮಾನವೆ. ಇಲ್ಲಿ ಸಮಸ್ಯೆ ಎಲ್ಲಾ ಜವಾನರ ಮನೋಭಾವದಲ್ಲಿ ಇಲ್ಲ. ಮಿಲಿಟರಿಯಲ್ಲಿ ಅತ್ಯುನ್ನತ ಸ್ಥಾನಗಳಲ್ಲಿ ಇರುವವರ ಮೆದುಳುಗಳಲ್ಲಿ ಇದೆ. ಮಹಿಳೆಯರನ್ನು ಜಿಲ್ಲಾ ನ್ಯಾಯಾಧೀಶರಾಗಿ, ಪೊಲೀಸ್ ಅಧಿಕಾರಿಣಿಯರಾಗಿ ಗುರುತಿಸಿ ಅವರ ಆದೇಶಗಳನ್ನು ಪಾಲಿಸುವುದನ್ನು ಅಂಗೀಕರಿಸುತ್ತಿರುವ ಈ ಸಮಾಜದಿಂದಲೇ ಜವಾನರು ಹುಟ್ಟಿದ್ದಾರೆ. ನಮ್ಮ ಸಮಾಜದಲ್ಲಿ ಎಲ್ಲರೂ ಒಂದೇ ರೀತಿ ಆಲೋಚಿಸುತ್ತಾ ಇದ್ದಿದ್ದಾದರೆ ನಾವೆಲ್ಲರೂ ಹಿಂದಿನಂತೆ ಕೇವಲ ಮೇಲ್ಜಾತಿಯವರ ಆಡಳಿತದಲ್ಲಿ ಬಿದ್ದಿರುತ್ತಿದ್ದೆವು.

ಸಾಮಾನ್ಯವಾಗಿ ಗ್ರಾಮೀಣ ಭಾರತದಲ್ಲಿ ಜಾತಿ ವಿಭಜನೆ ಇದೆಯಾದರೂ ಸಮಾನತೆಯನ್ನು ಎತ್ತಿ ಹಿಡಿಯುವ ಜವಾಬ್ದಾರಿ ಸರಕಾರದ್ದೇ ಆಗಿದೆ. ಅದೇ ಸಮಯದಲ್ಲಿ ವಿಶ್ವಾದ್ಯಂತ ಶ್ರಮಿಕ ವರ್ಗಗಳೆಲ್ಲದರಲ್ಲೂ ಬೆಟ್ಟ ಪ್ರದೇಶಗಳಲ್ಲಿನ ಮಹಿಳೆಯರೇ ಅತಿಹೆಚ್ಚು ಕಾಯಕಷ್ಟ ಮಾಡುವವರಾಗಿ ಇರುತ್ತಾರೆಂದು ಬಹುತೇಕ ಎಲ್ಲ ಅಧ್ಯಯನಗಳೂ ನಮಗೆ ಹೇಳುತ್ತಿವೆ. ಆದರೆ ತನ್ನ ಅಭಿಪ್ರಾಯಗಳು ಸೈನ್ಯದಲ್ಲಿನ ಪುರುಷರು, ಮಹಿಳೆಯರ ಸಮಷ್ಟಿ ಅಭಿಪ್ರಾಯಕ್ಕೆ ಪ್ರಾತಿನಿಧ್ಯ ವಹಿಸುತ್ತಿವೆ ಎಂದು ಲೆ.ಜ.ಕಡ್ಯಾನ್ ಹೇಳುತ್ತಿದ್ದಾರೆ ಎಂದರೆ ಅದನ್ನು ವಿಧಾಯಕವಾಗಿ ನೋಡಬೇಕಾಗಿರುತ್ತದೆ. ಆದರೆ ಸೈನ್ಯದಲ್ಲಿನ ಪುರುಷರೆಲ್ಲರೂ ಲಿಂಗತಾರತಮ್ಯವಾದಿಗಳಲ್ಲ. ಅದೇ ನಿಜವಾದರೆ, ಭಾರತೀಯ ವಾಯುಸೇನೆಯಲ್ಲಿನ ಮಹಿಳೆಯರು ಹೋರಾಟರಂಗದಲ್ಲಿನ ವಿಧಿಯೊಳಗೆ ಸೇರಬಲ್ಲವರಾಗುವುದು ಬಹಳ ಕಷ್ಟವಾಗುತ್ತಿತ್ತು. ನಮ್ಮ ಸಹ ಅಧಿಕಾರಿಗಳು ಪ್ರಮುಖವಾಗಿ ಪುರುಷರಿಂದ ಭಾರೀ ಬೆಂಬಲ ಪಡೆದಿದ್ದರಿಂದಲೇ ನಾವು ಆ ಯುದ್ಧದಲ್ಲಿ ಗೆಲ್ಲಬಲ್ಲವರಾದೆವು ಎನ್ನುವುದು ವಾಸ್ತವ. ಆದರೆ ಕೆಲ ಉನ್ನತ ಸೇನಾಧಿಕಾರಿಗಳು ಈಗಲೂ ತಮ್ಮ ಹಳೇ ಕಾಲದ ಅಭಿಪ್ರಾಯಗಳಿಗೆ ಅಂಟಿಕೊಂಡೇ ಇದ್ದಾರೆ. ಅದಕ್ಕೆ ಸೈನ್ಯದಲ್ಲಿ ಮಹಿಳೆಯರಿಗೆ ಶಾಶ್ವತ ಕಮೀಷನ್, ನಾಯಕತ್ವ ಸ್ಥಾನಗಳ ಹೊಂದುವುದೆನ್ನುವುದು ತುಂಬಾ ಪ್ರಾಧಾನ್ಯತೆಯುಳ್ಳ ವಿಷಯ. ಈಗಲೂ ಸೈನ್ಯದಲ್ಲಿ ಮಹಿಳೆಯರಿಗೆ ನಾಯಕತ್ವದ ಪಾತ್ರಗಳನ್ನು ಕಲ್ಪಿಸುತ್ತಿಲ್ಲ. ಈ ವಿಷಯದಲ್ಲಿ ಸೈನ್ಯವನ್ನು ಸಂಸ್ಕರಿಸಬೇಕೆಂಬ ದೃಷ್ಟಿ ಲೋಪಗೊಂಡಿದೆ.

ಕಳೆದ 26 ವರ್ಷಗಳಿಂದ ಸೈನ್ಯದಲ್ಲಿನ ಹಿರಿತಲೆಗಳು ಮಹಿಳೆಯರನ್ನು ಹತ್ತಿಕ್ಕುವುದಕ್ಕೆ ಇದೇ ರೀತಿಯ ವಾದಗಳನ್ನು ಮಾಡುತ್ತಿರುವುದರ ಬಗ್ಗೆ ಯಾರೇ ಆಗಲಿ ಆಲೋಚಿಸಬೇಕಾಗಿದೆ. ಆದರೆ ಪ್ರತಿಸಲ ಹಳೆ ಗಾಯ ಹೊಸದಾಗಿ ನಮ್ಮ ಅನುಭವದೊಳಗೆ ಬರುತ್ತ್ತಾ ಇರುತ್ತದೆ. ನನ್ನ ಸಮರ್ಥತೆ ಕಾರಣದಿಂದ ಅಲ್ಲದೇ ನನ್ನ ಜೆಂಡರ್ ಕಾರಣದಿಂದ ನನ್ನ ಪುರುಷಾಧಿಕಾರಿಗಿಂತ ನಾನು ಕಡಿಮೆ ಅಸ್ತಿತ್ವ ಹೊಂದುವುದು ಎಂದರೆ ಈ ನೈಜ ಸಮಸ್ಯೆಯನ್ನು ಯಾರೂ ಲಕ್ಷಿಸಿಲ್ಲ ಎಂದೇ ಅರ್ಥ. ಒಂದು ವೈಜ್ಞಾನಿಕವಾದ ಇಲ್ಲವೇ ತಾರ್ಕಿಕ ಬುನಾದಿಯುಳ್ಳ ಕಾರಣ ಎನ್ನುವುದೇ ಇಲ್ಲದೇ ಭಾರತೀಯ ಸೈನ್ಯ ಈ ಅಂಶದಲ್ಲಿ ದಿಲ್ಲಿ ಹೈಕೋರ್ಟ್ ಆದೇಶವನ್ನು ಇಷ್ಟು ಬಹಿರಂಗವಾಗಿ ಉಲ್ಲಂಘಿಸುವುದೇ ಆಶ್ಚರ್ಯಕರ.

ನಮ್ಮ ಸಂವಿಧಾನ ಎತ್ತಿಟ್ಟ ಆದರ್ಶಗಳಿಗಿಂತ ಭಾರತೀಯ ಸೈನ್ಯ ಅತೀತವಾದುದು ಎಂಬ ಪೂರ್ವಾಗ್ರಹದಿಂದ ಇಂತಹ ವಾದಗಳು ಬರುತ್ತಿವೆ. ಪಿತೃಪ್ರಧಾನ, ಜಾತೀಯತೆಯುಳ್ಳ ಭಾರತೀಯ ಸಮಾಜ ಕ್ಷೇತ್ರದ ವಾಸ್ತವಗಳತ್ತ ನಮ್ಮ ಸಂವಿಧಾನ ನಿರ್ಮಾತೃಗಳು ಪೂರ್ಣ ಜಾಗರೂಕತೆಯಿಂದ ವ್ಯವಹರಿಸಿದ್ದಾರೆ. ಆ ಕ್ಷೇತ್ರ ವಾಸ್ತವಗಳನ್ನು ಗುರುತಿಸಿ ಸಮಾನತೆ, ಸ್ವೇಚ್ಛೆ, ಸ್ವತಂತ್ರ ಭಾರತದ ಆದರ್ಶವನ್ನೇ ಅವರು ಆಯ್ಕೆ ಮಾಡಿಕೊಂಡರು. ಡಾ.ಬಿ.ಆರ್.ಅಂಬೇಡ್ಕರ್ ಅದ್ಭುತವಾಗಿ ಬರೆದಿದ್ದಾರೆ: ‘‘ಸಂವಿಧಾನ ನೀತಿ ಎನ್ನುವುದು ಸಹಜ ಮನೋಭಾವ ಅಲ್ಲ. ಅದನ್ನು ರೂಪಿಸಬೇಕಾಗಿದೆ. ನಮ್ಮ ಜನರು ಆ ನೀತಿಯನ್ನು ಇನ್ನೂ ತಿಳಿದುಕೊಳ್ಳಬೇಕಾಗಿದೆ ಎಂದು ನಾವು ತಪ್ಪದೇ ಗುರುತಿಸಬೇಕು. ಭಾರತೀಯ ಪ್ರಜಾಪ್ರಭುತ್ವ ಎನ್ನುವುದು ಸಾರಾಂಶದಲ್ಲಿ ಅಪ್ರಜಾಸ್ವಾಮಿಕವಾಗಿ ಇರುತ್ತಿರುವ ಭಾರತ ನೆಲದ ಮೇಲೆ ಹೊರಗೆ ಪೂರ್ತಿಯಾಗಿ ಬಟ್ಟೆ ಕಟ್ಟಿಕೊಳ್ಳುವುದರಂತಹದ್ದೆ’’. ನಮ್ಮ ಸೈನ್ಯದಲ್ಲಿನ ಉನ್ನತಾಧಿಕಾರಿಗಳ ಪೇಲವವಾದ ವಾದಗಳನ್ನೇ ಅಂಬೇಡ್ಕರ್ ಆಗಲೀ, ಸಂವಿಧಾನ ಸಭೆಯಾಗಲೀ ಹಂಚಿಕೊಂಡಿದ್ದರೆ ಏನಾಗುತ್ತಿತ್ತೋ ಊಹಿಸಿಕೊಳ್ಳಿ. ಅಂತಹ ಸ್ಥಾನಭ್ರಷ್ಟ ಸ್ಥಿತಿಯಲ್ಲಿ ಬದುಕಬೇಕೆಂದು ಯಾರಾದರೂ ಬಯಸುತ್ತಾರಾ? ಹಿಂದೂ ವಿವಾಹ ಕಾಯ್ದೆ, ಹಿಂದೂ ವಾರಸತ್ವ ಕಾಯ್ದೆಗೆ ವಿರೋಧ, ಅವಕ್ಕೆ ಇತ್ತೀಚಿನ ತಿದ್ದುಪಡಿಗಳು ಹಾಗೂ ಇವುಗಳೊಂದಿಗೆ ಇನ್ನಿತರ ಕೆಲವು ಘರ್ಷಣೆಗಳು. ಇಂತಹ ಹಿನ್ನೆಲೆಯಲ್ಲಿ ಶ್ರೇಷ್ಠ ಸಂವಿಧಾನ ಇಲ್ಲದೆ ನಾವೇನಾಗುತ್ತಿದ್ದೆವು?

ಈಗ ಭಾರತೀಯ ಸೈನ್ಯ, ದಿಲ್ಲಿ ಹೈಕೋರ್ಟ್- ವಿಂಗ್ ಕಮಾಂಡರ್ ಅನುಪಮ ಜೋಶಿ / ಯೂನಿಯನ್ ಆಫ್ ಇಂಡಿಯಾ ಕೇಸ್‌ನಲ್ಲಿ ಕೊಟ್ಟಿರುವ ತೀರ್ಪಿಗೆ ಮತ್ತಷ್ಟು ಬದ್ಧರಾಗಿರಬೇಕು. ಏರ್ ಇಂಡಿಯಾ / ನರ್ಗೇಷ್ ಮಿರ್ಜಾಸೇಟ್ ಕೇಸ್‌ನಲ್ಲಿ..... ಏರ್ ಇಂಡಿಯಾದಲ್ಲಿ ಮಹಿಳಾ ಫ್ಲೈಟ್ ಅಟೆಂಡೆಂಟ್‌ಗಳ ಉದ್ಯೋಗ ನಿಬಂಧನೆಯಲ್ಲಿ ಲಿಂಗ ತಾರತಮ್ಯವನ್ನು ಕೋರ್ಟು ತಳ್ಳಿ ಹಾಕಿತು. ಸೈನ್ಯದ ಅಂತರ್ಗತ ನೀತಿಗಳನ್ನು ಕೆದಕುವುದಕ್ಕೆ ಸಂಬಂಧಿಸಿ ಕೋರ್ಟು ಜಾಗ್ರತೆ ವಹಿಸಿದರೂ ಅಷ್ಟರಲ್ಲೇ ಅವರು ತಮ್ಮ ನೀತಿಗಳನ್ನು ಸಮೀಕ್ಷಿಸಿಕೊಳ್ಳುವುದರ ಮೇಲೆ ದೃಷ್ಟಿ ಇಟ್ಟರು. ಅಂದಿನ ಭಾರತ ಪ್ರಧಾನಿ ಇಂದಿರಾಗಾಂಧಿ ನೇತೃತ್ವದಲ್ಲಿ 1971ರ ಯುದ್ಧದಲ್ಲಿ ಭಾರತೀಯ ಸೇನೆ ಹೋರಾಡಿತು. ಈ ಸೈನ್ಯಕ್ಕೆ ಯಾವ ಜಾತಿ, ಮತಗಳ ಹಂಗೂ ಇರಲಿಲ್ಲ. ಜಾತಿ, ಮತ ಎನ್ನುವವು ಅಪ್ರಮುಖವಾದಾಗ ಅವರ ಜೆಂಡರ್ ಮಾತ್ರ ಸದಾ ಪ್ರಶ್ನಾರ್ಥಕವಾಗಿ ಏಕೆ ಉಳಿಯಬೇಕು? ಸೈನ್ಯದಲ್ಲಿ ಮಹಿಳೆಯರನ್ನು ಮಾತ್ರವೇ ಕೆಳಗಿನ ಸ್ಥಾಯಿಗಳಲ್ಲೇ ಏಕೆ ಬಿಟ್ಟುಬಿಡುತ್ತಿದ್ದಾರೆ?

ಜನರಲ್ ಕಡ್ಯಾನ್ ಹೇಳಿದ ಅಂಶಗಳಲ್ಲಿ ಮತ್ತೊಂದು ಏನೆಂದರೆ ಸೈನ್ಯದಲ್ಲಿ ಪುರುಷ ಅಧಿಕಾರಿಗಳು ಅನುಸರಿಸುತ್ತಿರುವ ಅತ್ಯಂತ ಕಠಿಣವಾದ ಶಿಕ್ಷಣ ವ್ಯವಸ್ಥೆಯನ್ನು ಸ್ತ್ರೀಯರು ತಡೆದುಕೊಳ್ಳಲಾರರು ಎನ್ನುವುದು. ಸರ್, ಮೊದಲು ಮಹಿಳೆಯರನ್ನು ಸ್ಪರ್ಧಿಸಲು ಬಿಡಿ. ನಿಮ್ಮ ಪ್ರಮಾಣದಲ್ಲಿ ಗೆದ್ದವರನ್ನೇ ಅರ್ಹರು ಎಂದು ಪ್ರಕಟಿಸಿರಿ. ಶಿಕ್ಷಣದಲ್ಲಿ ಅವರು ತಮ್ಮನ್ನು ತಾವು ನಿರೂಪಿಸಿಕೊಳ್ಳಲು ಬಿಡಿರಿ. ಅವರು ಸೈನಿಕ ಶಿಕ್ಷಣವನ್ನು ತಡೆದುಕೊಂಡರೆ ಒಳ್ಳೆಯದೆ. ಇಲ್ಲವಾದರೆ ಅದೇನೂ ಅಷ್ಟೇ ಕೆಟ್ಟ ವಿಷಯ ಅಲ್ಲ. ಅವರು ಯಾವುದಾದರೂ ಸುಲಭದ ಅಡ್ಡದಾರಿ ತೋರಿಸಿ ಎಂದರೆ ಅವರಿಗೆ ಅಂತಹ ಐಚ್ಛಿಕವನ್ನು ಸುತರಾಂ ಕೊಡಬೇಡಿ. ಪುರುಷರು ಪಾಲ್ಗೊಳ್ಳುವ ಅದೇ ಕ್ರೀಡಾರಂಗದಲ್ಲಿ ಮಹಿಳೆಯರನ್ನೂ ಸ್ಪರ್ಧಿಸಲು ಬಿಡಿ. ಅವರಿಗೆ ರಿಯಾಯಿತಿಗಳನ್ನು ಕೊಡಬೇಡಿ. ಆದರೆ ನಾಯಕತ್ವ ವಹಿಸುವುದಕ್ಕೆ ಅವಕಾಶ ಕೊಡಿ ಸಾಕು.
ಮತ್ತೊಂದು ಸಲ ಹೇಳುತ್ತಿರುವೆ. ಅವರ ಜೆಂಡರ್ ಕಾರಣದಿಂದ ಅಲ್ಲದೆ ಅವರ ಸಮರ್ಥತೆಯ ಆಧಾರದಲ್ಲೇ ಅವರ ಮೇಲೆ ತೀರ್ಪು ಹೇಳಿ ಸರ್. ಆಗ ನಾನು ನನ್ನ ಕೇಸನ್ನು ಹಿಂದಕ್ಕೆ ತೆಗೆದುಕೊಳ್ಳುವೆನು.

 (ಮಹಿಳೆಯರಿಗೆ ಸೇನೆಯಲ್ಲಿ ಖಾಯಂ ಸೇವೆಗೆ ಅವಕಾಶ ನೀಡುವ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿಗೆ ಪ್ರತಿಕ್ರಯಿಸಿ ಸೇನಾ ಪಡೆಯ ಮಾಜಿ ಲೆ.ಜ. ರಾಜ್ ಕಾಡ್ಯನ್, ನಮ್ಮ ಸೈನಿಕರು ಮಹಿಳೆಯರನ್ನು ಉನ್ನತ ಸೇನಾಧಿಕಾರಿಗಳನ್ನಾಗಿ ಒಪ್ಪಿಕೊಳ್ಳಲಾರರು ಎನ್ನುವುದಕ್ಕೆ ಪ್ರತಿಕ್ರಿಯಿಸಿ)

ಕೃಪೆ: thewire

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)