varthabharthi

ವಿಶೇಷ-ವರದಿಗಳು

ಇಂದು ವಿಶ್ವ ಮಹಿಳಾ ದಿನಾಚರಣೆ

ಮಹಿಳೆ ಸಬಲೆ ಅಲ್ಲ 'ಅಬಲೆ'

ವಾರ್ತಾ ಭಾರತಿ : 8 Mar, 2020

ಭಾರತ ದೇಶದ ಶ್ರೇಷ್ಠ ಮಹಿಳೆಯರು

ಕಿತ್ತೂರು ರಾಣಿ ಚೆನ್ನಮ್ಮಾ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದಿಟ್ಟ ಮಹಿಳೆಯರಾದರೆ, ಮದರ್ ತೆರೆಸಾ ದೀನದಲಿತರಿಗೆ ಮಹಾಮಾತೆಯಾದವರು. ಜೊತೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ, ಗಗನಯಾನಿ ಕಲ್ಪನಾ ಚಾವ್ಲಾ, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಬಾಕ್ಸಿಂಗ್ ಆಟಗಾರ್ತಿ ಮೇರಿ ಕೋಮ್, ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿ, ದೇಶದ ಕೀರ್ತಿ ಹೆಚ್ಚಿಸಿದವರು. ಇಂತಹವರ ಸಾಧನೆಗಳನ್ನು ನಮ್ಮ ಮುಂದಿನ ಯುವ ಪೀಳಿಗೆಯೂ ಮಾದರಿಯಾಗಿರಿಸಿಕೊಂಡರೆ ಭಾರತದ ಭವಿಷ್ಯ ಬೆಳಗುವುದರಲ್ಲಿ ಸಂದೇಹವೇ ಇಲ್ಲ.

ಮಹಿಳೆಯರಲ್ಲಿ ಆತ್ಮಗೌರವ, ಚೈತನ್ಯವನ್ನು, ಸ್ವಾವಲಂಬಿಯಾಗಿ ಜೀವಿಸುವ ಉದ್ದೇಶದಿಂದ 1910, ಮಾ.8ರಂದು ವಿಶ್ವಸಂಸ್ಥೆಯು ಅಂತರ್‌ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಘೋಷಿಸಿತು. 2020ನೇ ಸಾಲಿನ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶ ''Each For Equal”. ನೂರು ವರ್ಷಗಳ ಹಿಂದೆ 1910ರಲ್ಲಿ ಕ್ಯಾರಾ ಜಟ್ಕೆನ್‌ನಂತಹ ಕಮ್ಯೂನಿಸ್ಟ್ ಮಹಿಳೆಯಿಂದ ಶ್ರಮಿಕ ಮಹಿಳೆಯರಿಗೆ ಚೈತನ್ಯ ಹುಟ್ಟಿಸುವ ಗುರಿಯಿಂದ ಪ್ರಾರಂಭವಾದದ್ದು ಅಂತರ್‌ರಾಷ್ಟ್ರೀಯ ಮಹಿಳಾ ದಿನೋತ್ಸವ. ಮುಂದೆ ಬರಬರುತ್ತ ಶ್ರಮಿಕ ಮಹಿಳೆಯರ ಪದ ಬಿಟ್ಟು ಹೋಯಿತು. ಈಗ ಸ್ತ್ರೀಯರೆಲ್ಲರೂ ಒಂದೇ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಮನುಷ್ಯನ ಜೀವನದಲ್ಲಿ ಹೆಚ್ಚು ಸ್ಮರಣೆಯಲ್ಲಿರುವುದು ದೇವರು ಮತ್ತು ಸ್ತ್ರೀ. ಹಾಗೆ ನೋಡಿದರೆ ದೇವರು ಭಯದಲ್ಲಿ ನಮ್ಮ ಅಲೌಕಿಕ ಪ್ರಪಂಚದಲ್ಲಿ ಅವತರಿಸಿದ್ದರೆ, ಹೆಣ್ಣು ನಮ್ಮ ಎದುರಿಗಿನ ಭಾವಜಗತ್ತಿನ ಶಕ್ತಿ, ಹೆಣ್ಣು ನಮ್ಮ ಬದುಕಿನ ಉದ್ದಕ್ಕೂ ಉಸಿರಂತೆ ಒಂದಾದ ಜೀವ. ಶಿಶುವಿನಿಂದ ಶೈಶವಾವಸ್ಥೆವರೆಗೂ ಹೆಣ್ಣು ವಿವಿಧ ಹಂತದಲ್ಲಿ ನಮ್ಮ ಬದುಕಿನ ಜೀವ ಸೆಲೆಯಾಗಿ ಜೊತೆಯಾದವಳು.ಮಾತೆ, ಮಡದಿ, ಸಂಗಾತಿಯಾಗಿ ಕೊನೆಯವರೆಗೂ ಬದುಕಿನ ಶಕ್ತಿಯಾಗಿ ಸಲಹಿದವಳು. ಅಂತರ್‌ರಾಷ್ಟ್ರೀಯ ಮಹಿಳಾ ದಿನವನ್ನು ಮಹಿಳೆಯರು ಆತ್ಮಗೌರವದಿಂದ ಜೀವಿಸುವ ಉದ್ದೇಶದಿಂದ ಆಚರಿಸಲಾಗುತ್ತಿದೆ. ಆದರೆ ಜಗತ್ತಿನಾದ್ಯಂತ ಸ್ತ್ರೀಯರನ್ನು ಕಡೆಗಣಿಸುತ್ತಾ ಸಾಗಿರುವುದು ವಿಪರ್ಯಾಸ. ನಮ್ಮ ದೇಶದಲ್ಲೂ ರಾಜಾರಾಮ್ ಮೋಹನ್ ರಾಯ್‌ರಂತಹವರು ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ, ಅಸಮಾನತೆಯನ್ನು ನಿವಾರಿಸಲು ಶ್ರಮಿಸಿದರು, ಅವರ ಶ್ರಮಕ್ಕೆ ಸ್ವಲ್ಪಮಟ್ಟಿಗೆ ಫಲ ನೀಡಿದೆ, ಆದರೆ ಪೂರ್ಣವಾಗಿ ನಿವಾರಣೆಯಾಗಿಲ್ಲ.

ನಮ್ಮ ದೇಶದ ಆಧುನಿಕ ಮಹಿಳೆಯರು ಸೈನ್ಯದಲ್ಲಿ ಸೇರುತ್ತಿದ್ದಾರೆ, ಅಂತರಿಕ್ಷಕ್ಕೆ ಹಾರಿದ್ದಾರೆ, ವಿಜ್ಞಾನ ತಂತ್ರಜ್ಞಾನದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ವಿಶ್ವ ಸುಂದರಿ, ಭುವನ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಆದರೂ, ಪುರುಷರು ಮಾಡುವ ಎಲ್ಲ ಸಾಧನೆಗಳನ್ನೂ ಮಹಿಳೆಯರು ಮಾಡಿದರೂ ಅವರಿಂದು ಶಾರೀರಿಕವಾಗಿ, ಮಾನಸಿಕವಾಗಿ, ಶೋಷಣೆಗೊಳಗಾಗುವುದು ನಿಂತಿಲ್ಲ. ಪುರುಷ-ಸ್ತ್ರೀ ಸಂಖ್ಯೆಯಲ್ಲಿ ಅಸಮತೋಲನ ವ್ಯಾಪಕವಾಗಿದೆ. ಪುರುಷರು-ಮಹಿಳೆಯರಿಗೆ ಸರಿಸಮಾನ ಸ್ಥಾನ ಸಿಗುತ್ತಿಲ್ಲ. ಮಹಿಳೆಯರ ಮೇಲಿನ ಶೋಷಣೆ, ತಾರತಮ್ಯ, ಅಸಮಾನತೆ ಇಂದಿಗೂ ಮುಂದುವರಿಯುತ್ತಿರುವುದು ವಿಷಾದನೀಯ.

ಮಹಾತ್ಮಾ ಗಾಂಧೀಜಿ ‘‘ಮಧ್ಯರಾತ್ರಿಯೂ ಒಂಟಿ ಮಹಿಳೆ ಭಾರತದಲ್ಲಿ ಸಂಚರಿಸುವ ಸಾಮರ್ಥ್ಯ ಬಂದಾಗ ಅದು ನಿಜವಾದ ಸ್ವಾತಂತ್ರ್ಯ.’’ ಎಂದಿದ್ದರು. ಈ ನಿಟ್ಟಿನಲ್ಲಿ ದೇಶ ಮುಂದಡಿಯಿಟ್ಟಾಗ ಮಾತ್ರ ಭಾರತ ನಿಜವಾದ ಸ್ವಾತಂತ್ರ ಪಡೆದೀತು. ಡಾ.ಎಸ್.ರಾಧಾಕೃಷ್ಣನ್ ಹೇಳಿದ ಹಾಗೆ ‘‘ಎಲ್ಲಿಯವರೆಗೆ ಮಹಿಳೆಯರನ್ನು ಆಳಿನಂತೆ ನಡೆಸಿಕೊಳ್ಳುತ್ತೇವೆಯೋ ಅಲ್ಲಿಯವರೆಗೆ ಸಮಾಜದಲ್ಲಿ ದುಸ್ಥಿತಿ ಮುಂದುವರಿಯುತ್ತದೆ.’’ ಹಾಗೆಯೇ ‘‘ಒಂದು ಜನಾಂಗ ಎಷ್ಟರಮಟ್ಟಿಗೆ ಪ್ರಗತಿ ಸಾಧಿಸಿದೆ ಎಂಬುದನ್ನು ನೋಡಬೇಕಾದರೆ ಆ ಜನಾಂಗ ಸ್ತ್ರೀಯರನ್ನು ಯಾವ ದೃಷ್ಟಿಯಲ್ಲಿ ನೋಡುತ್ತಿದ್ದಾರೆಂಬುದಾಗಿದೆ’’ ಎಂದು ಹೇಳಿದ್ದಾರೆ ಸ್ವಾಮಿ ವಿವೇಕಾನಂದರು. ಅವರ ಮಾತಿನಂತೆ ಹೆಣ್ಣು ಮಕ್ಕಳು ಸುಶಿಕ್ಷಿತರಾಗಿ ಸಮಾಜದಲ್ಲಿ ಗೌರವ ಸ್ಥಾನ ಪಡೆಯುವುದರ ಮೂಲಕ ತಲೆ ಎತ್ತಿ ಬದುಕುವ, ಆತ್ಮಾಭಿಮಾನದಿಂದ ಮುನ್ನಡೆಯುವ ಹಕ್ಕು ಅವರಿಗಿದೆ. ಅದನ್ನು ಕಸಿಯುವ ಹಕ್ಕು ಕಡೆಗಣಿಸುವ ಹಕ್ಕು ಯಾರಿಗೂ ಇಲ್ಲ.

ನಮ್ಮ ದೇಶದಲ್ಲಿ ಕಾನೂನುಗಳು ಬಿಗಿಯಾಗಿರಬೇಕು. ಆಡಳಿತಗಾರರು ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ತಪ್ಪು ಮಾಡಿದವರು ಯಾರೇ ಇರಲಿ, ಅವರನ್ನು ರಕ್ಷಿಸಬಾರದು. ಪುರುಷನಾದವನು ಸ್ತ್ರೀಯಲ್ಲಿ ತಾಯಿ, ಅಕ್ಕ, ತಂಗಿಯನ್ನು ಕಾಣಬೇಕು. ಅಂತಹ ಮನೋಧರ್ಮವನ್ನು ಮನದಲ್ಲಿ ಮೂಡಿಸಿಕೊಳ್ಳಬೇಕು.

ಹೆಣ್ಣೊಂದು ಕಲಿತರೆ, ಪಾಠಶಾಲೆ ತೆರೆದಂತೆ ಎಂಬ ಗಾದೆಯಂತೆ, ಮಹಿಳೆಯರಿಗೆ ಶಿಕ್ಷಣ ನೀಡಿದರೆ, ಆ ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಒಳ್ಳೆ ನಾಗರಿಕರನ್ನಾಗಿ ಬೆಳೆಸುತ್ತಾರೆ. ಇದರಿಂದ ನಾಗರಿಕ ಸಮಾಜಕ್ಕೂ ಒಳ್ಳೆಯದಾಗುತ್ತದೆ. ಮಹಿಳಾ ದಿನೋತ್ಸವ ಆಚರಣೆಗಳೆನ್ನುವುದು, ಶ್ರಮ ಜೀವನದ ಮಹಿಳೆಯರಲ್ಲಿ ಚೈತನ್ಯವನ್ನುಂಟು ಮಾಡುವ ಪ್ರಯತ್ನಗಳನ್ನೇನಾದರೂ ಮಾಡಿದ್ದಾದರೆ ಇಂತಹ ಆಚರಣೆಗಳು ಸಾರ್ಥಕವಾಗುತ್ತವೆ.

ಜಗದೀಶ ವಡ್ಡಿನ, ಗ್ರಂಥಪಾಲಕರು, ಕಾರವಾರ

****************************

► ಮಹಿಳಾ ದಿನಾಚರಣೆ ಎಂದರೆ...

ಮಹಿಳೆಗೆ ಔದ್ಯೋಗಿಕ, ಕ್ಷೇತ್ರದಲ್ಲಿ ಮದುವೆಯ ಆಯ್ಕೆಯಲ್ಲಿ, ಪುರುಷರ ಕಾಮಕ್ಕೆ ಬಲಿಯಾಗದ, ಕುಟುಂಬದಲ್ಲಿ ಮಕ್ಕಳನ್ನು ಹೆಡೆಯುವ ಸ್ವಾತಂತ್ರ, ನಿರ್ಭಯವಾಗಿ ಎಲ್ಲ ರೀತಿಯಲ್ಲಿ ಮಹಿಳೆಗೆ ಸಾಮಾನ್ಯವಾದ ಆಯ್ಕೆಯ ಸ್ವಾತಂತ್ರ ದೊರೆಯುತ್ತದೊ, ಅದು ಯಾವ ಒತ್ತಡವೂ ಅಡಚಣೆಯೂ ಇಲ್ಲದೆ , ಸಹಜವಾಗಿ ದೊರೆಯುತ್ತದೋ ಆಗ ಮಹಿಳೆಯರಿಗೆ ನಿಜವಾದ ಸ್ವಾತಂತ್ರ ಬಂದಂತೆ.

ಗೌರಿ, ಬೆಂಗಳೂರು

************

ಅಮ್ಮನಾಗಿ, ಅಕ್ಕಳಾಗಿ, ತಂಗಿಯಾಗಿ, ಪತ್ನಿಯಾಗಿ.. ಹೀಗೆ ಜೀವನ ರೂಪಿಸಿಕೊಟ್ಟ ಸ್ತ್ರೀಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ, ಗೌರವ ಸಿಗುವಂತಾಗಬೇಕು. ‘‘ಯತ್ರ ನಾರ್ಯಾಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ’’ ಈ ಶ್ಲೋಕ ಪರಿಪಾಲನೆಯಾಗಬೇಕು. ಆಗ ಮಹಿಳೆಗೆ ಉತ್ತಮ ಬದುಕು ಸಿಗಬಹುದು. ಅತ್ಯಾಚಾರ, ಶೋಷಣೆ ಇಲ್ಲವಾದೀತು. ಅಂತಹ ಗೌರವಯುತ ಜೀವನಕ್ಕೆ ಅವಕಾಶ ಸಿಕ್ಕಾಗ ಅದುವೇ ಮಹಿಳಾ ಸ್ವಾತಂತ್ರ, ಮಹಿಳಾ ದಿನಾಚರಣೆ.

ಸಂಧ್ಯಾ ಜಿ. ಬಳ್ಳಾರಿ

************

ಮಹಿಳೆಯೆಂದರೆ ಕೀಳಾಗಿ ನೋಡುವ ಈ ಸಮಾಜದಲ್ಲಿ ಅವರಿಗೆ ಸಮಾನ ಹಕ್ಕನ್ನು ನೀಡಿ ಅವರ ಕನಸ್ಸುಗಳನ್ನು ನನಸ್ಸಾಗಿಸಲು ಅವಕಾಶ ಮಾಡಿ ಕೊಡುವುದೇ ಮಹಿಳೆಗೆ ನೀಡುವ ದೊಡ್ಡ ಗೌರವ. ಮಹಿಳೆಯು ಕೇವಲ ಭೋಗದ ವಸ್ತುವಲ್ಲ ಸಮಾಜದ ನಿರ್ಮಾಣದಲ್ಲಿ ಅವಳ ಪಾತ್ರವೂ ಪ್ರಮುಖವಾಗಿದೆ.

ರೀಹಾ ಪರ್ವೀನ್, ವಿದ್ಯಾರ್ಥಿನಿ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹೂಡೆ

************

ಪ್ರಚಲಿತ ದಿನಗಳಲ್ಲಿ ಮಹಿಳೆಯ ಸಾಮರ್ಥ್ಯಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಈ ಮಣ್ಣಿನಲ್ಲಿ ಜೀವಿಸುವ ಹಕ್ಕಿಗಾಗಿ, ಸ್ವಾತಂತ್ರ್ಯಕ್ಕಾಗಿ, ಕರಾಳ ಕಾನೂನಿನ ಉಚ್ಛಾಟನೆಗಾಗಿ ಅವಳಿಂದು ಬೀದಿಗಿಳಿದು ಹೋರಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಒಂದು ದಿನ ಮಹಿಳಾ ದಿನಾಚರಣೆ ಮಾಡಿ ಕೊಂಡಾಡುವುದಕ್ಕಿಂತ ಆಕೆಯ ನ್ಯಾಯಬದ್ಧ ಹೋರಾಟಕ್ಕೆ ಬೆಂಬಲ ನೀಡಿ, ಹಕ್ಕುಗಳನ್ನು ರಕ್ಷಿಸಿ ಆ ಮೂಲಕ ಮಹಿಳೆಯರಿಗೆ ಗೌರವ ನೀಡುವಂತಾಗಬೇಕಾಗಿದೆ. ಆಗಲೇ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಬಲ್ಲದು.

ಆಯಿಷಾ ಯು.ಕೆ., ಉಳ್ಳಾಲ

************

ಮಹಿಳೆಯನ್ನು ಮನುಷ್ಯಳೆಂದು ತಿಳಿದುಕೊಂಡಾಗ, ಅವಳಿಗೂ ಭಾವನೆಗಳಿವೆ ಎಂದು ಅರ್ಥ ಮಾಡಿಕೊಂಡಾಗ, ಅವಳು ಹುಟ್ಟಿದಾಗ, ಹದಿಹರೆಯಕ್ಕೆ ಕಾಲಿಟ್ಟಾಗ ಮಗಳಾಗಿ ಪ್ರೀತಿಸಲ್ಪಟ್ಟಾಗ, ಹೆಣ್ಣು ಮಗು ನಮ್ಮ ಸೌಭಾಗ್ಯ ಎಂದು ಅರಿತುಕೊಂಡಾಗ, ಪತ್ನಿಯಾಗಿ, ತಾಯಿಯಾಗಿ ಆಕೆಯ ಪಾತ್ರವನ್ನು ಗೌರವಿಸಿದಾಗ, ಕಾಳಜಿ ಮತ್ತು ರಕ್ಷಣೆಯಿಂದ ಅವಳನ್ನು ಕಂಡಾಗ, ಆಕೆಯ ಮುಖದಲ್ಲಿ ಸಂತೃಪ್ತಿ ಮತ್ತು ಸುರಕ್ಷತೆಯ ವಿಶ್ವಾಸದ ‘ನಗು’ ಹರಡಿದಾಗ ಮಹಿಳಾ ದಿನಾಚರಣೆ ಸಾರ್ಥಕವಾಗುತ್ತದೆ.

ಶಹನಾಝ್ ಎಂ. ಸಂಪಾದಕರು, ಅನುಪಮ ಮಾಸಿಕ

************

ವಿಶ್ವ ಮಹಿಳಾ ದಿನವನ್ನು ಆಚರಿಸಲು ನಮಗೆ ಈಗ ಹೆಮ್ಮೆ ಆಗುತ್ತದೆ. ಮೊದಲು ಮಹಿಳೆಯರು ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಈಗ ಮಹಿಳೆಯರಲ್ಲಿ ಹೆಚ್ಚು ಧೈರ್ಯ ತುಂಬಿದೆ. ಮಹಿಳೆ ಇಂದು ಪುರುಷನನ್ನು ಅಲಂಬಿಸದೆ ಸ್ವತಃ ತಾನೇ ದುಡಿದು ಆರ್ಥಿಕವಾಗಿ ಸದೃಢಳಾಗಿದ್ದಾಳೆ. ಆದರೆ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು, ಇದರಿಂದ ಭಯದ ವಾತಾ ವರಣನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಇನ್ನಷ್ಟು ಪ್ರೋತ್ಸಾಹ ಅಗತ್ಯ. 

ಡೋರಾ ಅರೋಜಾ, ಉದ್ಯಾವರ

************

ಮಹಿಳೆಯರಿಗೆ ಸಾಮಾಜಿಕ ಸಮಾನತೆ ಬೇಕು. ಎಲ್ಲ ಕ್ಷೇತ್ರದಲ್ಲೂ ಸ್ವಯಂ ನಿರ್ಧಾರ ಕೈಗೊಳ್ಳುವ ಸ್ವಾವಲಂಬನೆ ಬಂದಾಗ ಮಾತ್ರ ಮಹಿಳಾ ಸ್ವಾತಂತ್ರಕ್ಕೆ ಅರ್ಥ ಬರುತ್ತದೆ. ಮಹಿಳಾ ದೌರ್ಜನ್ಯಕ್ಕೆ ಸಂಪೂರ್ಣ ಕಡಿವಾಣ ಬಿದ್ದಾಗ ಮಾತ್ರ ಮಹಿಳಾ ದಿನಾಚರಣೆ ಸಾರ್ಥಕತೆಯಾಗುತ್ತದೆ.

ಜಯಲತಾ ಅಮೀನ್, ಬಿಕರ್ನಕಟ್ಟೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ

************

ಮಹಿಳಾ ದಿನಾಚರಣೆಯ ಉದ್ದೇಶಗಳು ಕಾರ್ಯ ರೂಪಕ್ಕೆ ಬರಬೇಕು. ಮಹಿಳೆಯರ ಸಬಲೀಕರಣಕ್ಕಾಗಿ ಈ ದಿನ ಆಚರಿಸಲಾಗುತ್ತಿದೆ. ಕೇವಲ ಶಾಲಾ-ಕಾಲೇಜು, ಸಭೆ-ಸಮಾರಂಭಗಳಲ್ಲಿ ಆಚರಿಸಿದರೆ ಉದ್ದೇಶ ಪೂರ್ಣಗೊಳ್ಳಲ್ಲ. ಈ ಮೊದಲು ಮಹಿಳೆಯರು ಹೊರಗೆ ಬರುತ್ತಿರಲಿಲ್ಲ. ಶಿಕ್ಷಣ ಕ್ಷೇತ್ರದಲ್ಲೂ ಸಮಾನತೆ ಕಲ್ಪಿಸಲಾಗುತ್ತಿರಲಿಲ್ಲ. ಆದರೆ ಕಾಲ ಬದಲಾಗಿದೆ. ಮಹಿಳೆಯರೂ ಎಲ್ಲ ಕ್ಷೇತ್ರಗಳಲ್ಲೂ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ ಇನ್ನೂ ಮಹಿಳಾ ಸಬಲೀಕರಣ ಪೂರ್ಣಪ್ರಮಾಣದಲ್ಲಿ ಆಗುತ್ತಿಲ್ಲ. ಭವಿಷ್ಯದಲ್ಲಾದರೂ ಪ್ರಗತಿ ಸಾಧಿಸಲಿ ಎನ್ನುವುದು ನಮ್ಮ ಆಶಯ.

ಅಶ್ವಿತಾ, ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿನಿ

************

ಮಹಿಳೆ ಯಾವುದೇ ಫಲಾಪೇಕ್ಷೆ ಇಲ್ಲದೇ ನಾಲ್ಕು ಗೋಡೆಗಳ ಮಧ್ಯೆಯೇ ಕಷ್ಟಪಟ್ಟು ಕೆಲಸ ಮಾಡುತ್ತಾಳೆ. ತನ್ನ ಗಂಡ, ಮಕ್ಕಳಿಗೆ ರುಚಿರುಚಿಯಾದ ಅಡುಗೆ ಮಾಡಿ ಉಣಿಸುತ್ತಾಳೆ. ಪುರುಷರಿಗೆ ಸಮಾನವಾಗಿಯೂ ಕರ್ತವ್ಯ ನಿರ್ವಹಿಸುತ್ತಾರೆ. ಗೃಹಿಣಿಯಾದವರಿಗೆ ವಿಶ್ರಾಂತಿ ಎನ್ನುವುದೇ ಇರಲ್ಲ. ಮಹಿಳಾ ಸಬಲೀಕರಣಕ್ಕೆ ಸರಕಾರಗಳು ಯೋಜನೆಗಳನ್ನು ರೂಪಿಸುತ್ತಿವೆಯಾದರೂ ಅವುಗಳು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಬೇಕು.

ರೇಣುಕಾ ಮಂಗಳೂರು, ಗೃಹಿಣಿ

************

ಮಹಿಳೆಯರು ಈ ಹಿಂದೆ ಶಿಕ್ಷಣ ಇಲ್ಲದ ಕಾರಣ ದೌರ್ಜನ್ಯ, ಶೋಷಣೆಗೆ ಒಳಗಾಗುತ್ತಿದ್ದರು. ಆದರೆ ಈಗ ಶಿಕ್ಷಣದಲ್ಲಿ ಮಹಿಳೆಯರೇ ಮುಂದಿದ್ದಾರೆ. ರಾಜಕೀಯವಾಗಿ ಮಹಿಳಾ ಸಬಲೀಕರಣವಾಗಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಮಹಿಳಾ ಜನಪ್ರತಿನಿಧಿಗಳು ಅದಕ್ಕೆ ಅಗತ್ಯವಾಗಿರುವ ಮಾರ್ಗಸೂಚಿಯನ್ನು ಸರಕಾರಕ್ಕೆ ನೀಡಬೇಕು. 

ಬೇಬಿ ಎಚ್.ಸಾಲ್ಯಾನ್, ಅಧ್ಯಕ್ಷರು, ಮಹಿಳಾ ಹಸಿ ಮೀನು ಮಾರಾಟಗಾರರ ಸಂಘ, ಉಡುಪಿ ತಾಲೂಕು

************

ಮನೆಯಲ್ಲಿ ನಾನೊಬ್ಬಳೇ ಇರುವುದು. ವಯಸ್ಸು 73. ಜೀವನೋಪಾಯಕ್ಕಾಗಿ ಹುರಿದ ಶೇಂಗಾ ಮಾರುವೆ. ಮೂವರು ಮಕ್ಕಳಿದ್ದರೂ ತಮ್ಮ ಮಡದಿಯರ ಜತೆ ಹೋಗಿದ್ದಾರೆ. ಮಂಗಳೂರಿಗೆ ಶೇಂಗಾ ಮಾರಲು ಬೆಳಗ್ಗೆ ಬಂದರೆ ವಾಪಸಾಗುವುದು ಸಂಜೆಯೇ. ದಿನಕ್ಕೆ 300 ರೂ. ಆದಾಯವಿದೆ. ಅರ್ಧದಷ್ಟು ಖರ್ಚೂ ಇದೆ. ಒಂಟಿಮಹಿಳೆಗೆ ಇಷ್ಟು ಸಾಕು. ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯೆನೋ ಇದೆ. ದುಡಿಯುವವರಿಗೆ ಆಚರಣೆಗಳು ಯಾಕೆ ಬೇಕು?

ವಿಶಾಲಾಕ್ಷಿ ತೊಕ್ಕೊಟ್ಟು, ಶೇಂಗಾ ಮಾರುವ ಮಹಿಳೆ

************

ದೇಶದಲ್ಲಿ ಮಹಿಳೆಗೆ ಎಲ್ಲ ಕ್ಷೇತ್ರಗಳಲ್ಲೂ ಸ್ವಾತಂತ್ರ ಕೊಡಬೇಕು. ಮಹಿಳೆಯರಿಗೆ ವಿಶೇಷವಾಗಿ ಗೌರವಿಸುವ ದಿನವೇ ಮಹಿಳಾ ಅಂತರ್‌ರಾಷ್ಟ್ರೀಯ ದಿನವಾಗಿದೆ. 

ರಾಜೀವಿ, ಬಿಕರ್ನಕಟ್ಟೆ ಸರಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ

************

ಸರಕಾರವು ಶಿಕ್ಷಣ ಮತ್ತು ಆರೋಗ್ಯವನ್ನು ಖಾಸಗೀಕರಣಗೊಳಿಸದೆ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಬೇಕು. ವಿಶೇಷವಾಗಿ ಮಹಿಳಾ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಹಿಳಾ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಬೇಕು.

 ರಾಫಿಯಾ ಬಳ್ಳಾರಿ, ವಿದ್ಯಾರ್ಥಿನಿ

************

ವಯಸ್ಸು 76 ಆದರೂ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಮನಸಾಗಲ್ಲ. ಮಕ್ಕಳು ದುಡಿದ ಹಣದಲ್ಲಿ ಜೀವನ ಸಾಗಿಸುವ ಬದಲು ಸ್ವಾವಲಂಬಿಯಾಗಿ ಬದುಕಬೇಕು. ಇದರಿಂದ ಆತ್ಮತೃಪ್ತಿ ಇರುತ್ತದೆ. ಪುರುಷರಿಗೆ ಸಿಗುವ ಗೌರವ ಮಹಿಳೆಯರಿಗೂ ಸಿಗಬೇಕು.

ಕಮಲಾ, ಬೀದಿಬದಿ ಕಡಲೆ ಮಾರಾಟಗಾರ್ತಿ

************

ಜೀವನದಲ್ಲಿ ಮಹಿಳೆಯರು ವಿಭಿನ್ನ ಪಾತ್ರಗಳನ್ನು ವಹಿಸುತ್ತಾರೆ. ಹಾಗಾಗಿ ಮಹಿಳಾ ದಿನವನ್ನು ಪ್ರತಿವರ್ಷವೂ ಆಚರಿಸಲಾಗುತ್ತದೆ. ಈ ಮೂಲಕ ಹೆಣ್ಣಿನ ಕಠಿಣ ಪರಿಶ್ರಮ, ವಾತ್ಸಲ್ಯವನ್ನು ಒಪ್ಪಿಕೊಳ್ಳುವುದು ಒಳ್ಳೆಯ ವಿಚಾರ.

ಲಾವಣ್ಯಾ ಬಳ್ಳಾಲ್, ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಸಾಮಾಜಿಕ ಮಾಧ್ಯಮ ಸಂಯೋಜಕಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)