ಕೈದಿ ಬಾಲಿವುಡ್ ರಿಮೇಕ್ಗೆ ಅಜಯ್ದೇವಗನ್ ಹೀರೋ
2020ನೇ ಇಸವಿಯು ಅಜಯ್ ದೇವಗನ್ಗೆ ಆರಂಭದಲ್ಲೇ ಗೆಲುವನ್ನು ತಂದುಕೊಟ್ಟಿದೆ. ಅವರು ನಾಯಕನಾಗಿ ನಟಿಸಿರುವ ತಾನಾಜಿ: ದಿ ಅನ್ಸಂಗ್ ಹೀರೋ ಬಾಕ್ಸ್ಆಫೀಸ್ನಲ್ಲಿ ಭಾರೀ ಜಯಭೇರಿ ಬಾರಿಸಿದೆ. ವಿಮರ್ಶಕರು ಚಿತ್ರದ ಬಗ್ಗೆ ಸಮ್ಮಿಶ್ರ ಪ್ರತಿಕ್ರಿಯೆ ನೀಡಿದ್ದರಾದರೂ, ಪ್ರೇಕ್ಷಕರು ಅದನ್ನು ಹರಸಿ, ಗೆಲ್ಲಿಸಿದ್ದಾರೆ. ಆ್ಯಕ್ಷನ್ ಪಾತ್ರಗಳಿಂದಲೇ ಚಿತ್ರಪ್ರೇಮಿಗಳ ಮನಗೆದ್ದಿರುವ ಅಜಯ್ದೇವ್ಗನ್ ಕಳೆದ ವರ್ಷದ ತಮಿಳು ಸೂಪರ್ಹಿಟ್ ಚಿತ್ರ ಕೈದಿಯ ಬಾಲಿವುಡ್ ರಿಮೇಕ್ನಲ್ಲಿ ನಟಿಸಲಿದ್ದಾರೆ. ಹಾಗಂತೆ ಸ್ವತಃ ಅಜಯ್ದೇವಗನ್ ಅವರೇ ಟ್ವಿಟರ್ನಲ್ಲಿ ಇದನ್ನು ಪ್ರಕಟಿಸಿದ್ದಾರೆ. ಚಿತ್ರವು ಮುಂದಿನ ವರ್ಷದ ಫೆಬ್ರವರಿ 12ರಂದು ಬಿಡುಗಡೆಗೊಳ್ಳುವುದಾಗಿಯೂ ಅವರು ಟ್ವೀಟಿಸಿದ್ದಾರೆ. ಇದಕ್ಕೂ ಮುನ್ನ ತಮಿಳು ಕೈದಿಯ ಬಾಲಿವುಡ್ ರಿಮೇಕ್ಗೆ ಹೃತಿಕ್ ರೋಶನ್ ನಾಯಕನೆಂಬ ವದಂತಿಗಳು ಕೇಳಿಬಂದಿದ್ದವು. ಇದೀಗ ಆ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಅಜಯ್ ಆ ಚಿತ್ರದಲ್ಲಿ ನಟಿಸುವುದು ಖಚಿತವಾಗಿದೆ.
Next Story