varthabharthi


ಸಿನಿಮಾ

ಕಂಬಳದ ಉಸೇನ್ ಬೋಲ್ಟ್ ಬೆಳ್ಳಿ ತೆರೆಗೆ

ವಾರ್ತಾ ಭಾರತಿ : 8 Mar, 2020

ರಾತ್ರಿ ಬೆಳಗಾಗುವುದರಲ್ಲಿ ಸಂಚಲನ ಮೂಡಿಸಿದ ‘ಭಾರತದ ಉಸೇನ್ ಬೋಲ್ಟ್’ ಶ್ರೀನಿವಾಸ್ ಗೌಡ ಅವರ ಯಶೋಗಾಥೆ ಶೀಘ್ರದಲ್ಲಿ ಬೆಳ್ಳಿ ತೆರೆಯ ಮೇಲೆ ಮೂಡಿ ಬರಲಿದೆ. ಈ ಚಿತ್ರವನ್ನು ನಿಖಿಲ್ ಮಂಜು ನಿರ್ದೇಶಿಸಲಿದ್ದಾರೆ. ಲೋಕೇಶ್ ಶೆಟ್ಟಿ ಮಂಚೂರು ಕಲ್ಕುಡೆ ನಿರ್ಮಾಣ ಮಾಡಲಿದ್ದಾರೆ. ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ತುಮುಲ್ ಬಲ್ಯಾನ್ ಹಾಗೂ ಸೌಮ್ಯಾ ಮೆಂಡನ್ ಅಭಿನಯಿಸಲಿದ್ದಾರೆ. ನೈಜ ಘಟನೆಗಳನ್ನು ಆಧರಿಸಿರುವ ಈ ಚಿತ್ರಕ್ಕೆ ‘ಕಂಬಳ’ ಎಂದು ಹೆಸರು ಇರಿಸಲಾಗಿದೆ. ಈ ಚಿತ್ರ ಲೆಮನ್ ಗ್ರಾಸ್ ಸ್ಟುಡಿಯೊ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಲಿದೆ. ಈ ಚಿತ್ರದಲ್ಲಿ ಸ್ಥಳೀಯ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ಅನಾವರಣಗೊಳ್ಳಲಿದೆ. ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ಏಕಕಾಲದಲ್ಲಿ ಕನ್ನಡ ಹಾಗೂ ತುಳು ಭಾಷೆಯಲ್ಲಿ ನಿರ್ಮಾಣ ಮಾಡಲಿದೆ. ಹಿಂದಿಯಲ್ಲಿ ಕೂಡ ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಈ ಚಿತ್ರದಲ್ಲಿ ಶ್ರೀನಿವಾಸ್ ಗೌಡ ಅವರೊಂದಿಗೆ ಕಂಬಳ ಓಟಗಾರರಾದ ನಿಶಾಂತ್ ಶೆಟ್ಟಿ, ಸುರೇಶ್ ಶೆಟ್ಟಿ ಹಕ್ಕೇರಿ, ಆನಂದ್ ಇರ್ವತ್ತೂರು, ಅಳದಂಗಡಿ ರವಿ ಕುಮಾರ್ ಹಾಗೂ ಪ್ರವೀಣ್ ಪನಪಲ್ಲಿ ಕೂಡ ನಟಿಸಲಿದ್ದಾರೆ. ‘ಗಿರ್ಗಿಟ್’ ಖ್ಯಾತಿಯ ರೂಪೇಶ್ ಶೆಟ್ಟಿ ಕೂಡ ಈ ಪ್ರೊಜೆಕ್ಟ್‌ನ ಭಾಗವಾಗಲಿದ್ದಾರೆ. ಬಾಲಿವುಡ್ ನಟ ತುಮುಲ್ ಬಲ್ಯಾನ್ ಮೊದಲ ಬಾರಿಗೆ ಕನ್ನಡ ಹಾಗೂ ತುಳುವಿನಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಗೌರವ ನಟರಾಗಿ ಕಾಣಿಸಿಕೊಳ್ಳಲು ಬಾಲಿವುಡ್ ಕಲಾವಿದರಾದ ಶಿಲ್ಪಾ ಶೆಟ್ಟಿ ಹಾಗೂ ಸುನೀಲ್ ಶೆಟ್ಟಿ ಅವರನ್ನು ನಿರ್ಮಾಪಕ ಲೋಕೇಶ್ ಅವರು ಸಂಪರ್ಕಿಸುತ್ತಿದ್ದಾರೆ. ಭಾರೀ ತಾರಾಗಣದ ಈ ಚಿತ್ರದಲ್ಲಿ 40 ಜೋಡಿ ಕೋಣಗಳು ಹಾಗೂ ಅವುಗಳ ಯಜಮಾನರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಮಂಗಳೂರು ಹಾಗೂ ಗೋವಾದಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಎ.ಟಿ. ರವೀಶ್ ಸಂಗೀತ ನೀಡಲಿದ್ದಾರೆ ಹಾಗೂ ಪಿವಿಆರ್ ಸ್ವಾಮಿ ಛಾಯಾಗ್ರಹಣ ಮಾಡಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)