varthabharthiಆರೋಗ್ಯ

ಕೆಫೀನ್‌ನ ಒಳಿತು-ಕೆಡುಕುಗಳು

ವಾರ್ತಾ ಭಾರತಿ : 9 Mar, 2020
-ಎನ್.ಕೆ.

ದಿನವಿಡೀ ತಾಜಾ ಆಗಿರಲು ಹೆಚ್ಚಿನವರಿಗೆ ಬೆಳಗ್ಗೆ ಚಹಾ ಅಥವಾ ಕಾಫಿಯನ್ನು ಸೇವಿಸಲೇಬೇಕು. ಇನ್ನು ಕೆಲವರು ಚೈತನ್ಯವನ್ನು ಪಡೆಯಲು ಆಗಾಗ ಎನರ್ಜಿ ಡ್ರಿಂಕ್‌ಗಳನ್ನು ಸೇವಿಸುತ್ತಿರುತ್ತಾರೆ. ಈ ಎಲ್ಲ ಪಾನೀಯಗಳಲ್ಲಿ ಸಾಮಾನ್ಯವಾಗಿರುವುದು ಎಂದರೆ ಕೆಫೀನ್. ಇದು ನೈಸರ್ಗಿಕ ಉತ್ತೇಜಕವಾಗಿದ್ದು, ವ್ಯಕ್ತಿ ದಿನಕ್ಕೆ 400 ಎಂ.ಜಿ.ಗಳಷ್ಟು ಕೆಫೀನ್ ಸೇವಿಸಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ. ಕೆಫೀನ್‌ಗೆ ನಿಮ್ಮ ಸಹಿಷ್ಣುತೆಯನ್ನು ಅವಲಂಬಿಸಿ ಅದು ನಿಮ್ಮ ಶರೀರದ ಮೇಲೆ ಬೀರುವ ಪರಿಣಾಮಗಳು ನಿಮಗೆ ಗೊತ್ತಾಗದಿರಬಹುದು. ಕೆಫೀನ್‌ನ ಒಳಿತು-ಕೆಡುಕುಗಳ ಬಗ್ಗೆ ವಿವರಗಳಿಲ್ಲಿವೆ.....

ಯಕೃತ್ತಿನರೋಗದ ವಿರುದ್ಧ ರಕ್ಷಣೆ ನೀಡುತ್ತೆ

ಚಹಾ ಮತ್ತು ಕಾಫಿ ಸೇವಿಸುವವರಲ್ಲಿ ಯಕೃತ್ತಿನ ದೀರ್ಘಕಾಲಿಕ ರೋಗಗಳಿಗೆ ಗುರಿಯಾಗುವ ಅಪಾಯ ಕಡಿಮೆಯಿರುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಕಾಫಿಯು ಹಲವಾರು ಯಕೃತ್ತು ಕಿಣ್ವಗಳನ್ನೂ ಕಡಿಮೆ ಮಾಡುತ್ತದೆ ಮತ್ತು ಫೈಬ್ರೋಸಿಸ್‌ನ್ನು ನಿವಾರಿಸಲು ನೆರವಾಗುತ್ತದೆ.

ಕೇಂದ್ರ ನರಮಂಡಳದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ

ಕೆಫೀನ್ ಕೇಂದ್ರ ನರಮಂಡಳ ಉತ್ತೇಜಕವಾಗಿದ್ದು, ನರಮಂಡಳ ದಲ್ಲಿನ ಅಡೆನೊಸೈನ್ ಗ್ರಾಹಕಗಳೊಂದಿಗೆ ಸೇರಿಕೊಳ್ಳುತ್ತದೆ. ನಮ್ಮ ನಿದ್ರೆಯ ಸಮಯವಾದಾಗ ತೂಕಡಿಕೆಯುಂಟಾಗಲು ಈ ಅಡೆನೊ ಸೈನ್ ನೆರವಾಗುತ್ತದೆ. ಕೆಫೀನ್ ಅಡನೊಸೈನ್‌ನಂತಹ ಮೆದುಳಿನ ಗ್ರಾಹಕಗಳನ್ನು ಸೇರಿಕೊಂಡು ಹಾರ್ಮೋನ್‌ಗೆ ತಡೆಯನ್ನುಂಟು ಮಾಡುತ್ತದೆ ಮತ್ತು ನಾವು ಎಚ್ಚರದಿಂದ ಇರುವಂತೆ ಮಾಡುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದಲ್ಲ

ಕೆಫೀನ್ ರಕ್ತದೊತ್ತಡ ಮತ್ತು ಹೃದಯ ಬಡಿತ ದರವನ್ನು ಹೆಚ್ಚಿಸುವು ದರಿಂದ ಅದು ಗರ್ಭಿಣಿಯರಿಗೆ ಒಳ್ಳೆಯದಲ್ಲ. ಗರ್ಭಿಣಿ ಕೆಫೀನ್‌ಗೆ ಹೆಚ್ಚಿನ ಸಹಿಷ್ಣುತೆ ಹೊಂದಿದ್ದರೂ ಗರ್ಭದಲ್ಲಿರುವ ಶಿಶುವಿಗೆ ಆ ಸಹಿಷ್ಣುತೆ ಇರುವುದಿಲ್ಲ. ಅದರ ಚಯಾಪಚಯ ವ್ಯವಸ್ಥೆ ಇನ್ನೂ ರೂಪುಗೊಳ್ಳುತ್ತಿರುತ್ತದೆ ಮತ್ತು ಇದು ಗರ್ಭಾವಸ್ಥೆಯ ನಂತರದ ಹಂತಗಳಲ್ಲಿ ಶಿಶುವಿನ ನಿದ್ದೆ ಅಥವಾ ಚಲನವಲನ ಸ್ವರೂಪದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ.

ಕ್ಯಾಲ್ಸಿಯಂ ಹೀರುವಿಕೆಯನ್ನು ವ್ಯತ್ಯಯಗೊಳಿಸುತ್ತದೆ

ಕೆಫೀನ್ ಶರೀರದ ಕ್ಯಾಲ್ಸಿಯಂ ಹೀರುವಿಕೆಯನ್ನು ವ್ಯತ್ಯಯ ಗೊಳಿಸುತ್ತದೆ ಎನ್ನುವುದನ್ನು ಅಧ್ಯಯನವು ತೋರಿಸಿದೆ, ಹೀಗಾಗಿ ಎಷ್ಟು ಕೆಫೀನ್ ನಮ್ಮ ಶರೀರವನ್ನು ಸೇರುತ್ತದೆ ಎಂಬ ಬಗ್ಗೆ ಗಮನವಿರುವುದು ಅಗತ್ಯವಾಗಿದೆ. ಕೆಫೀನ್ ಇರುವ ಪಾನಿಯಗಳ ಅತಿಯಾದ ಸೇವನೆಯು ಕಡಿಮೆ ಹಾಲಿನ ಸೇವನೆಗೆ ಕಾರಣವಾಗುತ್ತದೆ. ಇದು ಅಸ್ಥಿಮಜ್ಜೆಯ ಮಟ್ಟವನ್ನು ಕಡಿಮೆ ಮಾಡಬಹುದು ಮತ್ತು ಮೂಳೆ ಮುರಿತಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸಬಹುದು.

ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ

ಕಾಫಿಯು ಜ್ಞಾಪಕ ಶಕ್ತಿಯ ನಷ್ಟದ ವಿರುದ್ಧ ಹೋರಾಡಲು ನೆರವಾಗುತ್ತದೆ. ಕೆಫೀನ್ ಮೆದುಳಿನ ಕಾರ್ಯ ನಿರ್ವಹಣೆಯನ್ನು ಉತ್ತೇಜಿಸುತ್ತದೆ ಹಾಗೂ ಅಲ್ಝಿಮರ್ಸ್ ಮತ್ತು ಪಾರ್ಕಿನ್ಸನ್ಸ್ ರೋಗಗಳ ಅಪಾಯವನ್ನು ಕಡಿಮೆಗೊಳಿಸಬಹುದು ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಮಾನಸಿಕ ಎಚ್ಚರವನ್ನು ಮತ್ತು ಅಲ್ಪಾವಧಿಯ ನೆನಪನ್ನು ಹೆಚ್ಚಿಸುವ ಗುಣಗಳು ಕೆಫೀನ್‌ನಲ್ಲಿವೆ.

ರಕ್ತದೊತ್ತಡವನ್ನು ಹೆಚ್ಚಿಸುತ್ತದೆ

ನರಮಂಡಳವನ್ನು ಉತ್ತೇಜಿಸುವ ತನ್ನ ಗುಣದಿಂದಾಗಿ ಕೆಫೀನ್ ತಾತ್ಕಾಲಿವಾಗಿ ರಕ್ತದೊತ್ತಡವನ್ನು ಹೆಚ್ಚಿಸಬಹುದು. ಅಲ್ಪ ಪ್ರಮಾಣ ಗಳಲ್ಲಿ ಕೆಫೀನ್ ಸೇವನೆ ಹಾನಿಕರವಲ್ಲವಾದರೂ ಆ ಬಗ್ಗೆ ಎಚ್ಚರಿಕೆ ಅಗತ್ಯ.

ಶ್ರಮಸಹಿಷ್ಣುತೆಯನ್ನು ಹೆಚ್ಚಿಸುತ್ತದೆ

ಕೆಫೀನ್ ಅಥ್ಲೀಟ್‌ಗಳ ಶ್ರಮಸಹಿಷ್ಣುತೆಯನ್ನು ಹೆಚ್ಚಿಸುತ್ತದೆ ಎನ್ನುವು ದನ್ನು ಅಧ್ಯಯನಗಳು ತೋರಿಸಿವೆ. ಕಾರ್ಬೊಹೈಡ್ರೇಟ್‌ಗಳನ್ನು ತಮ್ಮ ಶಕ್ತಿಯ ಮೂಲವಾಗಿ ಹೊಂದಿರುವ ಅಥ್ಲೀಟ್‌ಗಳಿಗೆ ಹೋಲಿಸಿದರೆ ಕೆಫೀನ್ ಸೇವಿಸುವ ಅಥ್ಲೀಟ್‌ಗಳು ಉತ್ತಮ ಸಾಧನೆಯನ್ನು ಪ್ರದರ್ಶಿಸುತ್ತಾರೆ ಎನ್ನುವುದನ್ನು ಅಧ್ಯಯನವೊಂದು ತೋರಿಸಿದೆ. ಬಳಲಿಕೆಯನ್ನು ಕಡಿಮೆ ಮಾಡುವಲ್ಲಿ ಕೆಫೀನ್ ಪರಿಣಾಮಕಾರಿ ಪಾತ್ರವನ್ನು ಹೊಂದಿದೆ.

ತಲೆನೋವನ್ನು ಶಮನಿಸುತ್ತದೆ

ಕೆಫೀನ್‌ನಲ್ಲಿಯ ಕೆಲವು ಗುಣಗಳು ಆತಂಕದ ತಲೆನೋವುಗಳಿಂದ ಉಪಶಮನ ನೀಡುತ್ತವೆ. ಆದರೆ ಪ್ರತಿದಿನ ಈ ರಾಸಾಯನಿಕಕ್ಕೆ ಒಡ್ಡಿಕೊಳ್ಳುವುದರಿಂದ ಮಿದುಳು ಅದರ ಬಗ್ಗೆ ಸಹಿಷ್ಣುತೆಯನ್ನು ಬೆಳೆಸಿಕೊಳ್ಳುತ್ತದೆ. ಇದು ಕೆಫೀನ್ ಮೇಲೆ ಅವಲಂಬನೆಗೆ ಕಾರಣವಾಗುತ್ತದೆ ಮತ್ತು ಈ ಅಗತ್ಯ ಪೂರೈಕೆಯಾಗದಿದ್ದಾಗ ತಲೆನೋವು ಕಾಣಿಸಿಕೊಳ್ಳುತ್ತದೆ. ಇಂತಹ ತಲೆನೋವು ನೀವು ಸಾಕಷ್ಟು ನೀರನ್ನು ಸೇವಿಸುವುದಿಲ್ಲ ಎನ್ನುವುದನ್ನು ಸೂಚಿಸುತ್ತವೆ.

ಹಲ್ಲುಗಳಿಗೆ ಕಲೆ, ಹಾನಿ

 ನೀವು ಕಾಫಿ, ಚಹಾ ಅಥವಾ ಸೋಡಾದ ಮೂಲಕ ಅತಿಯಾದ ಪ್ರಮಾಣದಲ್ಲಿ ಕೆಫೀನ್ ಅನ್ನು ಸೇವಿಸುತ್ತಿದ್ದರೆ ಅದು ನಿಮ್ಮ ಬಾಯಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಕೆಫೀನ್ ಒಳಗೊಂಡಿರುವ ಪಾನೀಯಗಳು ಹಲ್ಲುಗಳ ಮೇಲೆ ಹಳದಿ ಅಥವಾ ಕಂದುಬಣ್ಣದ ಕಲೆಗಳಿಗೆ ಕಾರಣವಾಗಬಹುದು. ಹಲ್ಲುಗಳಿಗೆ ರಕ್ಷಣೆಯನ್ನು ನೀಡುವ ಎನಾಮಲ್‌ನಲ್ಲಿ ಕೆಫೀನ್ ಸೇರಿಕೊಂಡು ದಂತ ಸಂವೇದನೆಯ ಜೊತೆಗೆ ಹಲ್ಲುಗಳು ಬಣ್ಣಗೆಡಲು ಕಾರಣವಾಗುತ್ತದೆ.

ತೂಕ ಹೆಚ್ಚುವುದನ್ನು ತಡೆಯುತ್ತದೆ

ನೈಸರ್ಗಿಕ ಉತ್ತೇಜಕವಾಗಿರುವ ಕೆಫೀನ್ ಚಯಾಪಚಯವನ್ನು ಉತ್ತಮಗೊಳಿಸುತ್ತದೆ ಮತ್ತು ಹಸಿವೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ನಾವು ದಿನವಿಡೀ ಸೇವಿಸುವ ಕ್ಯಾಲರಿಗಳ ಪ್ರಮಾಣ ತಗ್ಗುತ್ತದೆ ಮತ್ತು ತೂಕ ಏರಿಕೆ ತಡೆಯಲ್ಪಡುತ್ತದೆ. ಕೆಫೀನ್ ಹಸಿವಿನ ಹಾರ್ಮೋನ್ ಆಗಿರುವ ್ರೆಲಿನ್ ಮಟ್ಟವನ್ನೂ ತಗ್ಗಿಸುತ್ತದೆ.

ಮೂತ್ರಪಿಂಡ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಕೆಫೀನ್ ಮೂತ್ರವರ್ಧಕವಾಗಿರುವುದರಿಂದ ಅದು ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವಂತಾಗಿಸುತ್ತದೆ. ಅದು ಮೂತ್ರದ ಮೂಲಕ ಕ್ಯಾಲ್ಸಿಯಂ ಹೊರತಳ್ಳುವಿಕೆಯನ್ನು ಹೆಚ್ಚಿಸಿ ಮೂತ್ರಪಿಂಡಗಳಲ್ಲಿ ಕ್ಯಾಲ್ಸಿಯಂ ಮತ್ತು ಇತರ ಕಲ್ಲುಗಳು ನಿರ್ಮಾಣಗೊಳ್ಳುವುದನ್ನು ತಡೆಯುತ್ತದೆ. ಆದರೆ ಅತಿಯಾದ ಕೆಫೀನ್ ಸೇವನೆ ಮೂತ್ರಪಿಂಡ ಕಲ್ಲುಗಳಿಗೆ ಕಾರಣವೂ ಆಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)