varthabharthi

ನಿಮ್ಮ ಅಂಕಣ

ಕ್ರಿಪ್ಟೋಕರೆನ್ಸಿ ನಿರ್ಬಂಧ ರದ್ದು ದುರದೃಷ್ಟಕರ

ವಾರ್ತಾ ಭಾರತಿ : 10 Mar, 2020
-ವಿಜಯ್‌ಕುಮಾರ್ ಎಚ್. ಕೆ. ಶಕ್ತಿನಗರ, ರಾಯಚೂರು

ಮಾನ್ಯರೇ,

ಭಾರತದಲ್ಲಿ ಕ್ರಿಪ್ಟೋಕರೆನ್ಸಿಯ ವಹಿವಾಟಿನ ಮೇಲಿನ ನಿರ್ಬಂಧವನ್ನು ಭಾರತದ ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದು ದುರದೃಷ್ಟಕರ. ಸುಪ್ರೀಂ ಕೋರ್ಟ್ ಕ್ರಿಪ್ಟೋಕರೆನ್ಸಿಗಳ ಮೇಲಿನ ನಿಷೇಧವನ್ನು ತೆಗೆದುಹಾಕಿ ಮತ್ತು ವರ್ಚುವಲ್ ಕರೆನ್ಸಿಗಳ ವಹಿವಾಟನ್ನು ಕಾನೂನುಬದ್ಧಗೊಳಿಸಿರುವುದು ಜೂಜಾಟಕ್ಕೆ ನೇರವಾಗಿ ಪ್ರೋತ್ಸಾಹ ಕೊಟ್ಟಂತಾಗಿದೆ. ಇದರರ್ಥ ಕ್ರಿಪ್ಟೋಕರೆನ್ಸಿಗಳಾದ ಬಿಟ್‌ಕಾಯಿನ್, ಲಿಟ್‌ಕಾಯಿನ್, ನೇಮ್‌ಕಾಯಿನ್ ಇತ್ಯಾದಿಗಳನ್ನು ಹೆಚ್ಚು ಮುಕ್ತವಾಗಿ ವ್ಯಾಪಾರ ಮತ್ತು ಜೂಜುಕೋರರಿಗೆ ದುರುಪಯೋಗ ಪಡಿಸಿಕೊಳ್ಳಲು ಅನುವುಮಾಡಿಕೊಟ್ಟಂತಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ಎಪ್ರಿಲ್ 6, 2018ರಂದು ಹೊರಡಿಸಿದ ಸುತ್ತೋಲೆಯೊಂದಿಗೆ ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳ ಬಳಕೆ ಮತ್ತು ವ್ಯಾಪಾರವನ್ನು ಪ್ರಾಯೋಗಿಕವಾಗಿ ನಿಷೇಧಿಸಿತ್ತು. ಆರ್‌ಬಿಐ ತನ್ನ ಸುತ್ತೋಲೆಯ ಮೂಲಕ, ಅದರ ಅಡಿಯಲ್ಲಿ ಬರುವ ಎಲ್ಲಾ ಘಟಕಗಳಿಗೆ ಅವರು ವರ್ಚುವಲ್ ಕರೆನ್ಸಿಗಳಲ್ಲಿ ವ್ಯವಹರಿಸಬಾರದು ಅಥವಾ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳೊಂದಿಗೆ ವ್ಯವಹರಿಸುವಾಗ ಯಾವುದೇ ವ್ಯಕ್ತಿಗೆ ಅನನುಕೂಲವಾಗುವಂತೆ ತಮ್ಮ ಸೇವೆಗಳನ್ನು ಒದಗಿಸಬಾರದು ಎಂದು ನಿರ್ದೇಶಿಸಿತ್ತು. ಸುತ್ತೋಲೆ ಹೊರಡಿಸುವ ಮೊದಲು ಸೇವೆಗಳನ್ನು ಒದಗಿಸುತ್ತಿದ್ದ ಘಟಕಗಳು ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸಲು ಮತ್ತು ನಿರ್ಗಮಿಸಲು 3 ತಿಂಗಳ ಸಮಯವನ್ನು ಹೊಂದಿದ್ದವು. ಆರ್‌ಬಿಐ ಸುತ್ತೋಲೆಯಲ್ಲಿ ಬಳಕೆದಾರರು, ವ್ಯಾಪಾರಿಗಳು ಮತ್ತು ವರ್ಚುವಲ್/ ಕ್ರಿಪ್ಟೋ ಕರೆನ್ಸಿಗಳನ್ನು ಹೊಂದಿರುವವರಿಗೆ ಅವುಗಳಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿತು. ಆದರೆ ಅದೇ ಸುತ್ತೋಲೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಹಲವಾರು ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳನ್ನು ಪ್ರತಿನಿಧಿಸುತ್ತಾ, ಇಂಟರ್‌ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಎಂಎಐ) ಕ್ರಿಪ್ಟೋಕರೆನ್ಸಿಗಳನ್ನು ಯಾವುದೇ ಕಾನೂನುಗಳಲ್ಲಿ ನಿಷೇಧಿಸದಿದ್ದಾಗ ಅದನ್ನು ವ್ಯಾಪಾರ ಮಾಡುವುದು ಭಾರತೀಯ ಸಂವಿಧಾನದ ಅಡಿಯಲ್ಲಿ ‘‘ಕಾನೂನುಬದ್ಧ’’ ವ್ಯವಹಾರ ಚಟುವಟಿಕೆಯಾಗಿದೆ ಎಂದು ವಾದಿಸಿದೆ. ವ್ಯಾಪಾರ ಚಟುವಟಿಕೆಗಳನ್ನು ನಡೆಸಲು ಬ್ಯಾಂಕಿಂಗ್ ಚಾನೆಲ್‌ಗಳಲ್ಲಿ ಪ್ರವೇಶವನ್ನು ನಿರಾಕರಿಸಲು ಆರ್‌ಬಿಐಗೆ ಯಾವುದೇ ಹಕ್ಕಿಲ್ಲ ಎಂದು ಐಎಎಂಎಐ ಹೇಳಿರುವುದು ನ್ಯಾಯಯುತವಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ತನ್ನನ್ನು ತಾನು ಸಮರ್ಥಿಸಿಕೊಂಡ ಆರ್‌ಬಿಐ, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಸಮಗ್ರತೆಯನ್ನು ಕಾಪಾಡಲು 2018ರಲ್ಲಿ ಹೊರಡಿಸಿದ ಸುತ್ತೋಲೆ ಮತ್ತು ಇತರ ಯಾವುದೇ ಪಾವತಿ ವ್ಯವಸ್ಥೆಗಳಿಗೆ ಅವಕಾಶ ನೀಡುವುದನ್ನು ಇಂದಿಗೂ ನಿರಂತರವಾಗಿ ವಿರೋಧಿಸುತ್ತದೆ. ಆದರೆ ಆರ್‌ಬಿಐ ಕ್ರಿಪ್ಟೋಕರೆನ್ಸಿಗಳಲ್ಲಿ ವ್ಯವಹರಿಸುವ ಜನರಿಗೆ ನಿರಂತರವಾಗಿ ಎಚ್ಚರಿಕೆ ನೀಡಿದ್ದು ವಿಫಲವಾದಂತಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)