varthabharthi

ನಿಮ್ಮ ಅಂಕಣ

ಸಮಕಾಲೀನ ಶಿಕ್ಷಣ ನೀತಿ ಕತ್ತಲ ದಾರಿ ಬಲು ದೂರ

ವಾರ್ತಾ ಭಾರತಿ : 10 Mar, 2020
ಬಿ. ಶ್ರೀಪಾದ ಭಟ್

ಭಾಗ-1

ಇಂದು ಶಿಕ್ಷಣದ ವ್ಯಾಪಾರೀಕರಣವನ್ನು ಗೌಣಗೊಳಿಸಿ ಸಾರ್ವಜನಿಕ ಶಿಕ್ಷಣ ನೀತಿಯನ್ನು ಬಲಗೊಳಿಸಲು, ನೆರೆಹೊರೆ ಶಾಲಾ ಪದ್ಧತಿಯನ್ನು ಜಾರಿಗೊಳಿಸಲು ಮತ್ತು ಮುಖ್ಯವಾಗಿ ಸಾಮಾಜಿಕ ನ್ಯಾಯದ ತಕ್ಕಡಿಯನ್ನು ಸಮತೂಗಿಸಲು ಸೂಕ್ತವಾದ ಶಿಕ್ಷಣ ನೀತಿಯನ್ನು ರೂಪಿಸಬೇಕಾದ ಸರಕಾರಗಳು ಇದರ ಕುರಿತು ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ. ಕೇಂದ್ರದ ಮೋದಿ ಸರಕಾರವು ಕಸ್ತೂರಿರಂಗನ್ ನೇತೃತ್ವದ 486 ಪುಟಗಳ ರಾಷ್ಟ್ರೀಯ ಶಿಕ್ಷಣ ನೀತಿ 2019ನ್ನು ಒಪ್ಪಿಕೊಂಡು ಅದನ್ನು ಸಂಗ್ರಹರೂಪದಲ್ಲಿ 55 ಪುಟಗಳ ಎನ್‌ಇಪಿ 2020 ಕರಡನ್ನು ಪ್ರಕಟಿಸಿದೆ. ಈ ಶಿಕ್ಷಣ ನೀತಿಯು ಶಿಕ್ಷಣವನ್ನು ಕೇಂದ್ರೀಕರಣಗೊಳಿಸುತ್ತದೆ ಮತ್ತು ವ್ಯಾಪಾರೀಕರಣಗೊಳಿಸುತ್ತದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ, ವೈದಿಕಶಾಹಿ ಶಿಕ್ಷಣ ವ್ಯವಸ್ಥೆಯನ್ನು ಪುರಸ್ಕರಿಸುತ್ತದೆ.


ಒಂದು ಪೀಠಿಕೆ

ಶಿಕ್ಷಣ ತಜ್ಞನಾಗಿದ್ದ ಆಸ್ಟ್ರಿಯಾ ದೇಶದ ಇವಾನ್ ಇಲ್ಯಿಚ್ ಆಧುನಿಕತೆ ಮತ್ತು ಸಂಸ್ಥೆಗಳ ಭ್ರಷ್ಟ ನೀತಿಗಳ ಕುರಿತು ಚಿಂತಿಸಿದ. ಇಲ್ಯಿಚ್ 70ರ ದಶಕದಲ್ಲಿ ಬರೆದ ಶಿಕ್ಷಣದ ವ್ಯವಸ್ಥೆ ಕುರಿತಾದ "Deschooling Society’, ತಂತ್ರಜ್ಞಾನದ ಅಭಿವೃದ್ಧಿ ಕುರಿತಾದ ‘ಸಂಭ್ರಮ ಹತಾರಗಳು’, ‘ಮೆಡಿಕಲ್ ನೆಮಿಸಿಸ್’ ಪುಸ್ತಕಗಳು ಇಂದಿಗೂ ಮಹತ್ವದ ವ್ಯಾಸಂಗಕ್ರಮಗಳಾಗಿವೆ (pedagogy) ಮತ್ತು ಪ್ರಸ್ತುತವಾಗಿವೆ. ಈ ಕೃತಿಗಳು ಶಿಕ್ಷಣದ ಕುರಿತಾದ ರೂಢಿಗತ, ಸಾಂಪ್ರದಾಯಿಕ ದೃಷ್ಟಿಕೋನವನ್ನೇ ಬದಲಿಸಿದವು. ವಿಯೆನ್ನಾದಲ್ಲಿ ಜನಿಸಿದ ಇಲ್ಯಿಚ್ ಪಿಎಚ್‌ಡಿ ಮುಗಿಸಿದ ನಂತರ ಚರ್ಚ್‌ನಲ್ಲಿ ಪಾದ್ರಿಯಾಗಿ ಕೆಲಸ ಮಾಡುತ್ತಾನೆ. ನಂತರ ಉಪ ರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಾನೆ. ಆದರೆ ಚರ್ಚ್ ಜೊತೆಗಿನ ಭಿನ್ನಾಭಿಪ್ರಾಯಗಳ ಕಾರಣದಿಂದ ಆ ವೃತ್ತಿಯನ್ನು ತ್ಯಜಿಸುತ್ತಾನೆ. ಸಂಪೂರ್ಣವಾಗಿ ಶಿಕ್ಷಣದ ಕಡೆಗೆ ತನ್ನ ಬದುಕು ಸಮರ್ಪಿಸಿಕೊಳ್ಳುತ್ತಾನೆ. ಇದು ಒಂದು ವಿಸ್ಮಯ

ಆತನ deschooling ಮತ್ತು delearning ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ. ಬಡತನದ ಹಿನ್ನೆಲೆಯಿಂದ ಬಂದ, ತಳ ಸಮುದಾಯದ ಮಕ್ಕಳಿಗೆ ಶಿಕ್ಷಣವು ಸದಾ ಮರೀಚಿಕೆಯಾಗಿರುತ್ತದೆ. ನಿಜಾರ್ಥದಲ್ಲಿ ಶಾಲೆಗೆ ಹೋಗುವುದಕ್ಕೂ ಮತ್ತು ಶಿಕ್ಷಣ ಪಡೆಯುವುದಕ್ಕೂ ತುಂಬಾ ವ್ಯತ್ಯಾಸವಿದೆ. ಬಡವರು ಸದಾ ಅಧಿಕಾರವಂಚಿತರಾಗಿರುತ್ತಾರೆ ಎನ್ನುವ ಇಲ್ಯಿಚ್ ಸಾಂಪ್ರದಾಯಿಕ ಶಾಲೆಗಳು, ಸಂಸ್ಥೆಗಳು ಈ ಮಕ್ಕಳನ್ನು ವಿಷಯ ಮತ್ತು ಕಲಿಕೆಗೆ ಸಂಬಂಧಿಸಿದಂತೆ ಗೊಂದಲಗೊಳಿಸುವ ಕಲಿಕೆಯರಿಮೆಯನ್ನು ಬೋಧಿಸುತ್ತವೆ. ಗೊಂದಲಗೊಳಿಸುವುದನ್ನು ಹಂತಹಂತವಾಗಿ ವರ್ದಿಸುತ್ತಾ ಹೋಗುವ ಈ ಶಾಲೆಗಳು ಅದನ್ನು ಯಶಸ್ಸಿನ ಪಾಠಗಳು, ವ್ಯಾಸಂಗಕ್ರಮ ಎಂದು ಸೂತ್ರೀಕರಿಸುತ್ತವೆ, ಬಡಕುಟುಂಬದ ಮಕ್ಕಳು ಸಂಸ್ಥೆಗಳ ಪೋಷಣೆಯ ಮೇಲೆ ಅವಲಂಬಿತವಾಗುವುದು ಅವರ ಅಸಹಾಯಕತೆಯ ಆಯಾಮಗಳನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾನೆ. ಇಲ್ಲಿ schooled ಎನ್ನುವುದನ್ನು ನಿರ್ದಿಷ್ಟ ಶಿಸ್ತಿಗೆ ಒಳಪಡಿಸುವುದು ಎಂದು ಕರೆಯುತ್ತಾನೆ. ಅಂದರೆ ಈ ‘ನಿರ್ದಿಷ್ಟ ಶಿಸ್ತಿನ ವ್ಯಾಸಂಗಕ್ರಮ’ದ ಮೂಲಕ ಮೌಲ್ಯದ ಜಾಗದಲ್ಲಿ ಸೇವೆಯನ್ನು ಮುಖ್ಯವಾಗಿ ಪರಿಗಣಿಸಿ ಬೋಧಿಸಲಾಗುತ್ತದೆ. ಇದನ್ನು ವಿವರಿಸುವ ಇಲ್ಯಿಚ್ ‘‘ಆರೋಗ್ಯ ಪೋಷಣೆಯೆಂದರೆ ಅದು ವೈದ್ಯಕೀಯ ಚಿಕಿತ್ಸೆ ಎಂದು ತಪ್ಪಾಗಿ ತಿಳುವಳಿಕೆ ಹೊಂದಿರುತ್ತಾರೆ, ಸಮುದಾಯದ ಬದುಕಿನ ಸಬಲೀಕರಣವೆಂದರೆ ಅದು ಶಾಲೆ ಸಂಬಂಧಿತ ಕೆಲಸವೆಂತಲೂ ಸುರಕ್ಷತೆಯೆಂದರೆ ಅದು ಪೊಲೀಸ್ ರಕ್ಷಣೆ ಎಂತಲೂ, ರಾಷ್ಟ್ರೀಯ ಸುರಕ್ಷತೆಯೆಂದರೆ ಅದು ಸೇನಾ ಉಪಸ್ಥಿತಿ ಎಂತಲೂ, ಉತ್ಪಾದಕತೆಯೆಂದರೆ ಅದು ಕೊನೆ ಮೊದಲಿಲ್ಲದ ಪೈಪೋಟಿ ಎಂತಲೂ ತಪ್ಪಾಗಿ ಅರ್ಥೈಸುತ್ತಾರೆ. ಆರೋಗ್ಯ, ಕಲಿಕೆ, ಘನತೆ, ಸ್ವಾತಂತ್ರ್ಯ ಮತ್ತು ರಚನಾತ್ಮಕ ಶ್ರಮಗಳೆಂದರೆ ಇವುಗಳ ಹಕ್ಕುಸ್ವಾಮ್ಯವನ್ನು ಬಯಸುವ ಸಂಸ್ಥೆಗಳ ಕಾರ್ಯನಿರ್ವಹಣೆ ಎಂತಲೂ ತಪ್ಪಾಗಿ ಗ್ರಹಿಸಲಾಗಿದೆ ಮತ್ತು ಈ ಆಸ್ಪತ್ರೆಗಳು, ಶಾಲೆಗಳು ಮತ್ತು ಏಜೆನ್ಸಿಗಳ ಆಡಳಿತ ಮಂಡಳಿಗೆ ಮತ್ತಷ್ಟು ಸಂಪನ್ಮೂಲ ಒದಗಿಸುವುದರ ಮೇಲೆ ಅವುಗಳ ಉತ್ತಮಗೊಳಿಸುವಿಕೆ ಅವಲಂಬಿತವಾಗಿದೆ’’ ಎಂದು ತನ್ನ Deschooling Society ಬರಹದಲ್ಲಿ ಹೇಳುತ್ತಾನೆ. ಅಮಾನವೀಯ ವ್ಯವಸ್ಥೆಗೆ ಕಾರಣವಾಗುವ ಸಂಸ್ಥೆಗಳು ಮತ್ತು ವೃತ್ತಿಪರರನ್ನು ವಿಮರ್ಶಿಸುವ ಇಲ್ಯಿಚ್, ‘‘ಇವರು ತಮ್ಮ ಹಿತಾಸಕ್ತಿಗಳಿಗೆ ಅವಶ್ಯಕವಾದ ಅಗತ್ಯಗಳನ್ನು ಸೃಷ್ಟಿಸುತ್ತಾರೆ ಮತ್ತು ಮನುಷ್ಯರನ್ನು ಮತ್ತು ಅವರ ಕ್ರಿಯಾಶೀಲತೆಯನ್ನು ವಸ್ತುಗಳಾಗಿ ಬದಲಾಯಿಸುತ್ತಾರೆ’’ ಎಂದು ಟೀಕಿಸುತ್ತಾನೆ.

ಶಿಕ್ಷಣದ ಕುರಿತಾದ ತನ್ನ ಅಧ್ಯಯನ ಮತ್ತು ವಿಮರ್ಶೆಯನ್ನು ಮಂಡಿಸುತ್ತಾ ಸಾಂಸ್ಥೀಕರಣ ಪ್ರಕ್ರಿಯೆ, ಪರಿಣಿತರು ಮತ್ತು ನೈಪುಣ್ಯತೆ, ಶಿಕ್ಷಣವನ್ನು ಒಂದು ಸರಕಾಗಿಸುವುದು ಮತ್ತು ಉತ್ಪಾದಕತೆ ವಿರೋಧಿ ನೀತಿಗಳು ಈ ನಾಲ್ಕನ್ನು ಆಧುನಿಕ, ವೈಜ್ಞಾನಿಕ, ಮಾನವೀಯ ಶಿಕ್ಷಣದ ಶತ್ರುಗಳು ಎಂದು ಕರೆಯುತ್ತಾನೆ. ಸಾಂಸ್ಥೀಕರಣ ಪ್ರಕ್ರಿಯೆ: ಆಧುನಿಕ ಸಮಾಜವು ಅತಿ ಹೆಚ್ಚು ಸಂಸ್ಥೆಗಳನ್ನು ಸೃಷ್ಟಿಸಿದೆ, ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಜೀವಿಸುತ್ತಿರುವ ನಮ್ಮ ಬದುಕನ್ನೇಸಾಂಸ್ಥೀಕರಣಗೊಳಿಸಲಾಗಿದೆ. ಈ ಪ್ರಕ್ರಿಯೆಯು ಮನುಷ್ಯರ ಘನತೆಯನ್ನು, ಆತ್ಮಸ್ಥೈರ್ಯವನ್ನು ನಾಶ ಮಾಡುತ್ತದೆ, ಬಿಕ್ಕಟ್ಟಿನ ಸನ್ನಿವೇಶಗಳನ್ನು ಎದುರಿಸುವ ಗುಣಗಳನ್ನು ಧ್ವಂಸ ಮಾಡುತ್ತದೆ, ಸಂಭ್ರಮದ ಸಂಬಂಧಗಳನ್ನು ಕೊಲ್ಲುತ್ತದೆ ಮತ್ತು ಕಡೆಯದಾಗಿ ಬದುಕನ್ನು ಪರಾವಲಂಬಿಯಾಗಿಸುತ್ತದೆ.
ಪರಿಣಿತರು ಮತ್ತು ನೈಪುಣ್ಯತೆ: ಈ ಪರಿಣಿತರು ಮತ್ತು ನೈಪುಣ್ಯತೆಯ ಸಂಸ್ಕೃತಿಯು ಮತ್ತಷ್ಟು ಪರಿಣಿತರನ್ನು ಬೇಡುತ್ತದೆ. ಈ ಪರಿಣಿತರು ಅನೇಕ ಸಾಂಸ್ಥಿಕ ತಡೆಗೋಡೆಗಳನ್ನು ನಿರ್ಮಿಸುತ್ತಾರೆ ಮತ್ತು ತಮ್ಮನ್ನು ಅದರ ಕಾವಲುಗಾರರು ಎಂದು ಬಿಂಬಿಸಿಕೊಳ್ಳುತ್ತಾರೆ. ಕಡೆಗೆ ಜ್ಞಾನದ ಉತ್ಪಾದನೆಯನ್ನು ನಿಯಂತ್ರಿಸುತ್ತಾರೆ, ಯಾವುದು ಊರ್ಜಿತ ಮತ್ತು ನ್ಯಾಯಬದ್ಧ ಎಂದು ಸ್ವತಃ ಅವರೇ ನಿರ್ಧರಿಸುತ್ತಾರೆ.

ಶಿಕ್ಷಣವನ್ನು ಒಂದು ಸರಕಾಗಿಸುವುದು: ಜ್ಞಾನವನ್ನು ಒಂದು ಆರೋಗ್ಯಪೂರ್ಣವಾದ, ಪವಿತ್ರವಾದ, ಗೌರವಯುತವಾದದ್ದು ಎಂದು ಜನತೆಯನ್ನು ಜಾಲದಲ್ಲಿ ಬೀಳಿಸುತ್ತಾರೆ. ಕಲಿಕೆ ಎನ್ನುವುದು ಒಂದು ವಸ್ತು ಅದು ಚಟುವಟಿಕೆಯಲ್ಲ ಮತ್ತು ಅದು ಒಂದು ಸರಕು. ಎಲ್ಲಾ ಪದಾರ್ಥಗಳಂತೆ ಕಲಿಕೆ ಎನ್ನುವ ಸರಕು ಸಹ ಅಗತ್ಯಕ್ಕೆ ತಕ್ಕಂತೆ ದುರ್ಲಭವಾಗುತ್ತದೆ.

ಉತ್ಪಾದಕತೆ ವಿರೋಧಿ ನೀತಿಗಳು:             

ಇಲ್ಲಿ ಮೂಲಭೂತವಾಗಿ ಜನಪರವಾಗಿರುವ, ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಸದುಪಯೋಗವಾಗಿರುವ ಸಕಾರಾತ್ಮಕ ಯೋಜನೆಗಳನ್ನು ನಕಾರಾತ್ಮಕಗೊಳಿಸುವುದು. ನಗಣ್ಯಗೊಳಿಸು ವುದು. ಉದಾಹರಣೆಗೆ ರಾಜ್ಯ ಬಜೆಟ್‌ನ ಗಾತ್ರದಲ್ಲಿ ಶಿಕ್ಷಣಕ್ಕೆ ಅನುದಾನವು ಶೇ. 20-24 ಪ್ರಮಾಣದಲ್ಲಿರಬೇಕು ಆದರೆ ಅದು ಶೇ. 12 ಪ್ರಮಾಣದಲ್ಲಿದೆ. ಕೇಂದ್ರ ಬಜೆಟ್‌ನ ಗಾತ್ರದಲ್ಲಿ ಶಿಕ್ಷಣಕ್ಕೆ ಅನುದಾನವು ಶೇ. 10 ಪ್ರಮಾಣದಲ್ಲಿರಬೇಕು ಆದರೆ ಅದು ಶೇ. 3 ಪ್ರಮಾಣದಲ್ಲಿದೆ. ಬಜೆಟ್‌ನಲ್ಲಿ ಜಿಡಿಪಿಯ ಶೇ. 6 ಪ್ರಮಾಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು, ಆದರೆ ಕೇವಲ ಶೇ.1-1.5 ಮೀಸಲಿಡುತ್ತಾರೆ. ಇತ್ತೀಚೆಗೆ ಶಿಕ್ಷಣ ಮಂತ್ರಿಗಳು ಪ್ರಾಥಮಿಕ ಶಾಲಾ ಮಕ್ಕಳಿಗೆ ವರ್ಷಕ್ಕೆ ಎರಡು ಜೊತೆ ಉಚಿತ ಸಮವಸ್ತ್ರ ಕೊಡುವ ಪದ್ಧತಿಯನ್ನು ಬದಲಿಸಿ ಒಂದು ಜೊತೆ ಕೊಡುವುದಾಗಿ ತೀರ್ಮಾನಿಸಿದ್ದಾರೆ (ನಂತರ ಇದನ್ನು ಹಿಂಪಡೆದಿದ್ದಾರೆ). ಮಧ್ಯಾಹ್ನದ ಬಿಸಿಯೂಟಕ್ಕೆ ಆಧಾರ್ ಕಾರ್ಡ್, ಗುರುತು ಚೀಟಿ ಕಡ್ಡಾಯಗೊಳಿಸುವ ಚಿಂತನೆ. 1-5ನೇ ಹಂತದವರೆಗೂ ತರಗತಿಗೊಬ್ಬರು ಶಿಕ್ಷಕರು, 5-10ನೇ ತರಗತಿವರೆಗೆ ವಿಷಯಕ್ಕೊಬ್ಬರು ಶಿಕ್ಷಕರಿರಬೇಕು. ಆದರೆ ನಲಿ-ಕಲಿ ಯೋಜನೆಯಲ್ಲಿ 1-3ನೇ ತರಗತಿಯ ವಿಭಿನ್ನ ವಯೋಮಾನದ ಮಕ್ಕಳನ್ನು ಒಂದುಗೂಡಿಸಿ ಒಬ್ಬ ಶಿಕ್ಷಕರಿಗೆ ಅವರ ಜವಾಬ್ದಾರಿ ವಹಿಸುತ್ತಾರೆ. ಆರ್‌ಟಿಐ ಕಾಯ್ದೆ ಅಡಿಯಲ್ಲಿ ಶಿಕ್ಷಕ ಮಕ್ಕಳ ಅನುಪಾತವನ್ನು 1:30 ಎಂದು ಅವೈಜ್ಞಾನಿಕವಾಗಿ ನಿರ್ಧರಿಸುತ್ತಾರೆ. ಆದಿವಾಸಿ ಸಮುದಾಯವನ್ನು ಮುಖ್ಯವಾಹಿನಿಗೆ ಕರೆತರಲು ಆರಂಭದ ಶಿಕ್ಷಣದಲ್ಲಿ ಅವರ ಸಂಸ್ಕೃತಿ, ವೈವಿಧ್ಯತೆಯನ್ನು ಒಳಗೊಂಡ ವ್ಯಾಸಂಗಕ್ರಮ ರೂಪಿಸಬೇಕು, ಆದರೆ ಆದಿವಾಸಿ ಮಕ್ಕಳು ಅವರಿಗೆ ಅಪರಿಚಿತವಾದ, ಕಬ್ಬಿಣದ ಕಡಲೆಯಾದ ಈಗಾಗಲೇ ಚಾಲ್ತಿಯಲ್ಲಿರುವ ಪಠ್ಯಕ್ರಮಗಳನ್ನು ನೇರವಾಗಿ ಕಲಿಯುವ ಅನಿವಾರ್ಯತೆ ಸೃಷ್ಟಿಸುತ್ತಾರೆ. ಇದು ಅವರ ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸುತ್ತದೆ. ಪಾಲೋ ಫ್ರೇರಿ, ‘‘ಶಿಕ್ಷಕನಿಗೆ ತಾನು ಯಾರಿಗಾಗಿ ಯಾವ ಉದ್ದೇಶಕ್ಕೆ ಬೋಧಿಸುತ್ತಿದ್ದೇನೆ ಎಂಬುದರ ಅರಿವಿರಬೇಕು. ನಾವು ಜನರ ಸಾಮಾನ್ಯಜ್ಞಾನದ ಆಚೆಗೆ ಮುನ್ನಡಿ ಇಡಬೇಕು, ಜನತೆಯ ಜೊತೆಗೆ ಪಯಣಿಸಬೇಕು ಆಗ ಮಾತ್ರ ಸಮಾಜ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ’’ ಎಂದು ಹೇಳುತ್ತಾನೆ. ಇದು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇನ್ನೂ ನೂರಾರು ಉದಾಹರಣೆಗಳನ್ನು ಕೊಡಬಹುದು ಸಮಕಾಲೀನ ಶಿಕ್ಷಣದ ಬಿಕ್ಕಟ್ಟುಗಳು

ಸಮಕಾಲೀನ ಭಾರತದ ಸಂದರ್ಭದಲಿನ ಶಿಕ್ಷಣವು ಸಂಪೂರ್ಣ ಉದಾರೀಕರಣ, ಖಾಸಗೀಕರಣ, ಜಾಗತೀಕರಣದ ಸುಳಿಯಲ್ಲಿ ಸಿಲುಕಿದೆ. ಇದರ ಜೊತೆಗೆ ವೈದಿಕಶಾಹಿಯ ಹಿಡಿತವು ಮತ್ತಷ್ಟು ಬಲಗೊಂಡಿದೆ. ಉನ್ನತ ಶಿಕ್ಷಣದಲ್ಲಿ ಈ ತಾರತಮ್ಯ ನೀತಿಯ ಕಾರಣಕ್ಕೆ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ವಿವರಿಸಲು ಪೀಠಿಕೆಯಾಗಿ ಇವಾನ್ ಇಲ್ಯಿಚ್‌ನ ಚಿಂತನೆಗಳು, ವಿಮರ್ಶೆಗಳನ್ನು ವಿವರಿಸಲಾಯಿತು. ಏಕೆಂದರೆ ಇವಾನ್ ಇಲ್ಯಿಚ್‌ನ ಚಿಂತನೆಗಳು, ವಿಮರ್ಶೆಗಳು, ಎಚ್ಚರಿಸಿದ ಮಾತುಗಳು ಇಂದಿನ ಭಾರತದ ಸಂದರ್ಭದಲ್ಲಿ ನಿಜವಾಗಿದೆ. ಇಲ್ಯಿಚ್ ಚಿಂತನೆಗಳ ಹಿನ್ನೆಲೆಯಲ್ಲಿ ಇದನ್ನು ಗ್ರಹಿಸಲು ಪ್ರಯತ್ನಿಸಬೇಕಾಗಿದೆ.

ಇಂದು ಶಿಕ್ಷಣದ ವ್ಯಾಪಾರೀಕರಣವನ್ನು ಗೌಣಗೊಳಿಸಿ ಸಾರ್ವಜನಿಕ ಶಿಕ್ಷಣ ನೀತಿಯನ್ನು ಬಲಗೊಳಿಸಲು, ನೆರೆಹೊರೆ ಶಾಲಾ ಪದ್ಧತಿಯನ್ನು ಜಾರಿಗೊಳಿಸಲು ಮತ್ತು ಮುಖ್ಯವಾಗಿ ಸಾಮಾಜಿಕ ನ್ಯಾಯದ ತಕ್ಕಡಿಯನ್ನು ಸಮತೂಗಿಸಲು ಸೂಕ್ತವಾದ ಶಿಕ್ಷಣ ನೀತಿಯನ್ನು ರೂಪಿಸಬೇಕಾದ ಸರಕಾರಗಳು ಇದರ ಕುರಿತು ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ. ಕೇಂದ್ರದ ಮೋದಿ ಸರಕಾರವು ಕಸ್ತೂರಿರಂಗನ್ ನೇತೃತ್ವದ 486 ಪುಟಗಳ ರಾಷ್ಟ್ರೀಯ ಶಿಕ್ಷಣ ನೀತಿ 2019ನ್ನು ಒಪ್ಪಿಕೊಂಡು ಅದನ್ನು ಸಂಗ್ರಹರೂಪದಲ್ಲಿ 55 ಪುಟಗಳ ಎನ್‌ಇಪಿ 2020 ಕರಡನ್ನು ಪ್ರಕಟಿಸಿದೆ. ಈ ಶಿಕ್ಷಣ ನೀತಿಯು ಶಿಕ್ಷಣವನ್ನು ಕೇಂದ್ರೀಕರಣಗೊಳಿಸುತ್ತದೆ ಮತ್ತು ವ್ಯಾಪಾರೀಕರಣಗೊಳಿಸುತ್ತದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ, ವೈದಿಕಶಾಹಿ ಶಿಕ್ಷಣ ವ್ಯವಸ್ಥೆಯನ್ನು ಪುರಸ್ಕರಿಸುತ್ತದೆ. ಅತ್ಯಂತ ಮುಖ್ಯವಾದ ಶಿಕ್ಷಣ ನೀತಿಯನ್ನು ಅಧಿಕಾರಶಾಹಿ ನಿರ್ಧರಿಸುತ್ತದೆ ಮತ್ತು ಅದು ಖಾಸಗೀಕರಣಕ್ಕೆ ಪೂರಕವಾಗಿದೆ. ಇವಾನ್ ಇಲ್ಯಿಚ್‌ನ ಆತಂಕಗಳನ್ನು ನಿಜವಾಗಿಸಿದೆ. ಮೇಲಿನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಬಿಜೆಪಿ ನೇತೃತ್ವದ ಕರ್ನಾಟಕ ಸರಕಾರವು ಸಮಗ್ರ ರಾಜ್ಯ ಶಿಕ್ಷಣ ನೀತಿ ರೂಪಿಸಲು 28 ಸದಸ್ಯರ ಒಂದು ಸಮಿತಿ ನೇಮಿಸಿದೆ. ಇದರಲ್ಲಿ ಶಾಸಕಾಂಗದಿಂದ ಶಿಕ್ಷಣ ಮಂತ್ರಿಗಳು, ಕಾರ್ಯಾಂಗದಿಂದ 13 ಸದಸ್ಯರನ್ನು ಆರಿಸಲಾಗಿದೆ. ಅಂದರೆ ಅರ್ಧದಷ್ಟು ಸದಸ್ಯರು ಶಿಕ್ಷಣ ತಜ್ಞರಲ್ಲ. ಇದರರ್ಥ ಇಲ್ಯಿಚ್ ಹೇಳಿದಂತೆ ಸರಕಾರಕ್ಕೆ ಶಿಕ್ಷಣವು ಒಂದು ಸರಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)