varthabharthi

ಸಂಪಾದಕೀಯ

ಮಧ್ಯಪ್ರದೇಶದ ಅನೈತಿಕ ರಾಜಕಾರಣ

ವಾರ್ತಾ ಭಾರತಿ : 10 Mar, 2020

ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವ ಪ್ರಜ್ಞಾವಂತರೆಲ್ಲ ನಾಚಿ ತಲೆ ತಗ್ಗಿಸಬೇಕಾದ ಸ್ಥಿತಿಗೆ ದೂಡಿದೆ. ನಮ್ಮ ಜನತಂತ್ರದ ಇಂತಹ ಪ್ರಹಸನಗಳನ್ನು ನೋಡಿ ಬೇರೆ ದೇಶಗಳ ಜನ ನಗುವಂತಾಗಿದೆ. ಇದು ಅದೊಂದೇ ರಾಜ್ಯದ ಕತೆಯಲ್ಲ, ಕರ್ನಾಟಕದಲ್ಲಿ ನಡೆದ ಆಪರೇಷನ್ ಕಮಲದಂತಹ ವಿದ್ಯಮಾನಗಳೂ ಒಂದು ಪ್ರಜಾತಂತ್ರ ವ್ಯವಸ್ಥೆಗೆ ಶೋಭೆ ತರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಈ ದುರವಸ್ಥೆಗೆ ತಂದು ನಿಲ್ಲಿಸುವಲ್ಲಿ ಕೇಂದ್ರದ ಬಿಜೆಪಿ ಸರಕಾರದ ಅದರಲ್ಲೂ ಮೋದಿ ಶಾ ಜೋಡಿ ಪಾತ್ರ ಮುಖ್ಯವಾಗಿದೆ.

ಕಾಂಗ್ರೆಸ್ ಮುಕ್ತ ಭಾರತ ಘೋಷಣೆ ಹಾಕುತ್ತ ಕೇಂದ್ರದ ಅಧಿಕಾರ ಸೂತ್ರ ಹಿಡಿದ ಈ ಜೋಡಿ ಬಿಜೆಪಿ ಹೊರತು ಪಡಿಸಿ ಇನ್ನೊಂದು ಪಕ್ಷ ಈ ದೇಶದಲ್ಲಿ ಅಸ್ತಿತ್ವದಲ್ಲೇ ಇರಬಾರದು, ಭಿನ್ನಮತ ಎಂಬುದು ಇರಲೇಬಾರದೆಂದು ಚುನಾಯಿತ ಸರಕಾರಗಳನ್ನು ಬುಡಮೇಲು ಮಾಡುವ ಷಡ್ಯಂತ್ರ ರೂಪಿಸುತ್ತಾ ಬಂತು. ಅಧಿಕಾರ ರಾಜಕಾರಣದಿಂದ ಹೊರಗೆ ತಮ್ಮ ಸರಕಾರದ ದುರಾಡಳಿತವನ್ನು ಪ್ರತಿರೋಧಿಸುವವರನ್ನೆಲ್ಲ ದೇಶದ್ರೋಹಿಗಳೆಂಬಂತೆ ಬಿಂಬಿಸಿ ತೇಜೋವಧೆ ಮಾಡುವ ಫ್ಯಾಶಿಸ್ಟ್ ನೀತಿಗೆ ಕೈ ಹಾಕಿತು.

ಈಗ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲದ ಅಸಹ್ಯ ರಾಜಕಾರಣಕ್ಕೆ ಈ ಜೋಡಿ ಕೈ ಹಾಕಿದೆ. ಕರ್ನಾಟಕದಲ್ಲಿ ಕೆಲ ತಿಂಗಳ ಹಿಂದೆ ಮಾಡಿದಂತೆ ಮಧ್ಯಪ್ರದೇಶದ ಕಾಂಗ್ರೆಸ್‌ನ ಹದಿನೇಳು ಮಂದಿ ಚುನಾಯಿತ ಶಾಸಕರನ್ನು ವಿಶೇಷ ವಿಮಾನದಲ್ಲಿ ಅಲ್ಲಿಂದ ಎತ್ತಿಕೊಂಡು ಬಂದು ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಇರಿಸಲಾಗಿದೆ. ಅಲ್ಲಿ ಆಪರೇಷನ್ ಕಮಲಕ್ಕೆ ಒಳಗಾದವರೆಲ್ಲ ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರ ಆಪ್ತ ವಲಯಕ್ಕೆ ಸೇರಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲಿಗರೆಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದ ನಂತರ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ಸಿಂಧಿಯಾ ಬಯಸಿದ್ದರು. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕೃಪಾಕಟಾಕ್ಷಕ್ಕೆ ಒಳಗಾದ ಭಾರೀ ರೊಕ್ಕದ ಕುಳ ಕಮಲನಾಥ್ ಏನೇನೋ ಕರಾಮತ್ತು ಮಾಡಿ ಮುಖ್ಯಮಂತ್ರಿಯಾದರು. ಆಗಿನಿಂದ ಜ್ಯೋತಿರಾದಿತ್ಯ ಸಿಂಧಿಯಾ ಒಳಗೊಳಗೆ ಕೊತ ಕೊತ ಕುದಿಯುತ್ತಲೇ ಇದ್ದರು. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸಿಂಧಿಯಾಗೆ ಅದೂ ದಕ್ಕುವುದಿಲ್ಲ ಎಂದು ಗೊತ್ತಾದಾಗ ಹತಾಶರಾದರು. ಇದನ್ನೇ ಕಾಯುತ್ತಾ ಕೂತಿದ್ದ ಅಮಿತ್ ಶಾ ಕೊನೆಗೂ ಸಿಂಧಿಯಾರನ್ನು ತಮ್ಮ ಬಲೆಗೆ ಕೆಡವಿಕೊಂಡರು. ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಸಿಂಧಿಯಾ ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ. ಅವರಿಗೆ ರಾಜ್ಯಸಭೆಯ ಸದಸ್ಯತ್ವ ನೀಡುವ ಭರವಸೆ ನೀಡಲಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಕೊನೆಯ ಗಳಿಗೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷತೆ ಹಾಗೂ ರಾಜ್ಯಸಭಾ ಸದಸ್ಯತ್ವ ನೀಡುವ ಭರವಸೆ ನೀಡಿತಾದರೂ ಕಾಲ ಮಿಂಚಿ ಹೋಗಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿಯ ದ್ವಿಸದಸ್ಯ ಹೈಕಮಾಂಡ್ ಈ ಸಿಂಧಿಯಾಗೆ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಆಮಿಷ ಒಡ್ಡಿ ಬಲೆಗೆ ಬೀಳಿಸಿಕೊಂಡಿದೆ. ಇದಾದ ನಂತರ ಆಪರೇಷನ್ ಕಮಲದ ಪ್ರಯೋಗ ನಡೆಸಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಉರುಳಿಸುವ ಕಾರ್ಯಾಚರಣೆಯೂ ನಡೆಸಿದೆ.

ಹಾಗೆ ನೋಡಿದರೆ ಜ್ಯೋತಿರಾದಿತ್ಯ ಸಿಂಧಿಯಾಗೆ ಬಿಜೆಪಿ ಹೊಸ ಪಕ್ಷವೇನಲ್ಲ.ಸಿಂಧಿಯಾರ ಇಡೀ ಕುಟುಂಬ ಸಂಘಪರಿವಾರದ ಒಡನಾಟದಲ್ಲೇ ಬೆಳೆದು ಬಂದ ಕುಟುಂಬ. ಇವರ ಅಜ್ಜಿ ಗ್ವಾಲಿಯಾರ್‌ನ ರಾಜಮಾತಾ ವಿಜಯರಾಜೇ ಸಿಂಧಿಯಾ ತಮ್ಮ ಜೀವನದ ಕೊನೆಯ ಗಳಿಗೆಯವರೆಗೆ ಜನಸಂಘದಲ್ಲೇ ಇದ್ದರು. ಆಗ ಯಾವುದೋ ಕಾರಣಕ್ಕಾಗಿ ತಾಯಿಯೊಂದಿಗೆ ಜಗಳವಾಡಿ ಕಾಂಗ್ರೆಸ್ ಸೇರಿಕೊಂಡ ಮಾಧವರಾವ್‌ಸಿಂಧಿಯಾ (ಜ್ಯೋತಿರಾದಿತ್ಯ ಸಿಂಧಿಯಾರ ತಂದೆ) ಕುಟುಂಬದಿಂದ ಹೊರಗೆ ಬಂದರೂ ಅವರ ಸೋದರಿಯರು ಬಿಜೆಪಿಯಲ್ಲೇ ಉಳಿದರು. ಈಗ ಜ್ಯೋತಿರಾದಿತ್ಯ ಸಿಂಧಿಯಾ ಕೂಡಾ ಬಿಜೆಪಿ ಸೇರಿದ್ದಾರೆ.

ಅದೇನಿದ್ದರೂ ಚುನಾಯಿತ ಸರಕಾರಗಳನ್ನು ಉರುಳಿಸುವ ಬಿಜೆಪಿಯ ಆಪರೇಷನ್ ಕಮಲ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಬಗೆಯುತ್ತಿರುವ ಘೋರ ಅಪಚಾರವಾಗಿದೆ.ಶಾಸಕರಿಗೆ ಹಲವು ಕೋಟಿ ರೂಪಾಯಿ ಚೆಲ್ಲಿ ಜೊತೆಗೆ ಮಂತ್ರಿ ಸ್ಥಾನದ ಆಸೆ ಹಚ್ಚಿ ಅರಾಜಕತೆಯ ವಾತಾವರಣ ಉಂಟು ಮಾಡುವುದು ಸರಿಯಲ್ಲ. ಇದರಿಂದ ಜನತಂತ್ರ ಕ್ರಮೇಣ ನಾಶವಾಗಿ ದೇಶದಲ್ಲಿ ಫ್ಯಾಶಿಸ್ಟ್ ಸರ್ವಾಧಿಕಾರ ತಲೆಯೆತ್ತಲು ಅವಕಾಶ ದೊರಕುತ್ತದೆ. ರಾಜಕೀಯ ಅಧಿಕಾರ ಕೈಯಲ್ಲಿದ್ದರೆ ತಮ್ಮ ಫ್ಯಾಶಿಸ್ಟ್ ಕಾರ್ಯಸೂಚಿಯನ್ನು ಸುಲಭವಾಗಿ ಜಾರಿಗೊಳಿಸಬಹುದೆಂದು ನಾಗಪುರದ ಅಗೋಚರ ಅಧಿಕಾರ ಕೇಂದ್ರ ಇಂತಹ ಆಪರೇಷನ್ ಕಮಲದ ರಾಜಕಾರಣಕ್ಕೆ ಗ್ರೀನ್ ಸಿಗ್ನಲ್ ನೀಡುತ್ತದೆ. ಸಂಘಪರಿವಾರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯ ಪಾವಿತ್ರ್ಯದ ಬಗ್ಗೆ ನಂಬಿಕೆಯಿಲ್ಲ. ಅದಕ್ಕಾಗಿ ಈ ವ್ಯವಸ್ಥೆಯನ್ನು ಧ್ವಂಸಗೊಳಿಸಲು ಇಂತಹ ಅನೈತಿಕ ರಾಜಕಾರಣಕ್ಕೆ ಅದು ಪ್ರೋತ್ಸಾಹ ನೀಡುತ್ತ ಬಂದಿದೆ.

ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆ ಕಾಂಗ್ರೆಸ್‌ಗೂ ಎಚ್ಚರಿಕೆಯ ಗಂಟೆಯಾಗಿದೆ. ಶತಮಾನದ ಇತಿಹಾಸವುಳ್ಳ, ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ಈ ಪಕ್ಷ ಕ್ರಮೇಣ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಹೈಕಮಾಂಡ್‌ನ ಸೋಮಾರಿತನ ಹಾಗೂ ಸೈದ್ಧಾಂತಿಕ ವಿಮುಖತೆ ಅದರ ಇಂದಿನ ಸ್ಥಿತಿಗೆ ಕಾರಣವಾಗಿದೆ. ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ತನ್ನ ಜೀವಸತ್ವವಾದ ಜಾತ್ಯತೀತ, ಪ್ರಗತಿಪರ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿದ ಕಾಂಗ್ರೆಸ್ ಇತ್ತೀಚೆಗೆ ಮೃದು ಹಿಂದುತ್ವ ನೀತಿಗೆ ಶರಣಾಗಿ ಅಧೋಗತಿಯ ಅಂಚಿಗೆ ಬಂದು ನಿಂತಿದೆ. ಎಲ್ಲದಕ್ಕೂ ಗಾಂಧಿ, ನೆಹರೂ ಪರಿವಾರವನ್ನು ಅವಲಂಬಿಸುವುದರಿಂದ ಪಕ್ಷದ ಪುನಶ್ಚೇತನ ಸಾಧ್ಯವಿಲ್ಲ.ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಗಾಂಧಿ, ನೆಹರೂ ಕಾಲದ ಆಶಯಗಳತ್ತ ಹೊರಳಬೇಕಾಗಿದೆ.

ಒಟ್ಟಾರೆ ಮಧ್ಯಪ್ರದೇಶದ ಸೋಮವಾರ ಮತ್ತು ಮಂಗಳವಾರದ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ, ಕೇಂದ್ರ ಸರಕಾರ ನೇರವಾಗಿ ಅನೈತಿಕ ರಾಜಕಾರಣಕ್ಕೆ ಕುಮ್ಮಕ್ಕು ನೀಡುವುದು ಸರಿಯಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)