varthabharthi

ನಿಮ್ಮ ಅಂಕಣ

ಸಮಕಾಲೀನ ಶಿಕ್ಷಣ ನೀತಿ ಕತ್ತಲ ದಾರಿ ಬಲು ದೂರ

ವಾರ್ತಾ ಭಾರತಿ : 11 Mar, 2020
ಬಿ. ಶ್ರೀಪಾದ ಭಟ್

ಭಾಗ-2

ಶಿಕ್ಷಣ ಇಲಾಖೆಯನ್ನು ಸರಕಾರ ತನ್ನ ಒಂದು ಇಲಾಖೆಯಾಗಿ ಮಾತ್ರ ಪರಿಗಣಿಸಿದೆ. ಅಂದರೆ ಲೋಕೋಪಯೋಗಿ, ನೀರಾವರಿ ಇಲಾಖೆಯಂತೆ ಇದೂ ಒಂದು ಇಲಾಖೆ ಎಂದೆ ಭಾವಿಸಿದೆ. ಆದರೆ ಶಿಕ್ಷಣವು ಪಾಲ್ಗೊಳ್ಳುವಿಕೆಯ, ಬೆಸದುಕೊಳ್ಳುವಿಕೆಯ, ಹೆಣೆದುಕೊಳ್ಳುವಿಕೆಯ ಪ್ರಕ್ರಿಯೆ ಎನ್ನುವುದನ್ನು ಈ ಶಿಕ್ಷಣ ನೀತಿ ಕಡೆಗಣಿಸಿದೆ. ಶಿಕ್ಷಣ ನೀತಿ ರೂಪಿಸಲು ಕಸ್ತೂರಿರಂಗನ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಜ್ಞಾನ ಆಯೋಗವು 2016ರಲ್ಲಿ ನೀಡಿದ ಕರ್ನಾಟಕ ಶಿಕ್ಷಣ ನೀತಿಯ ಶಿಫಾರಸುಗಳನ್ನು ಸಹ ಪರಿಗಣಿಸಲಾಗುತ್ತದೆ. 114 ಪುಟಗಳ ಈ ಶಿಕ್ಷಣ ನೀತಿಯು ಎಲ್ಲಿಯೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸಬಲೀಕರಣದ ಕುರಿತಾಗಿ ಸಮಗ್ರವಾಗಿ ತನ್ನ ಅಭಿಪ್ರಾಯಗಳನ್ನು ಮಂಡಿಸಿಲ್ಲ. ನಿಖರವಾಗಿ ಸಾರ್ವಜನಿಕ ಶಿಕ್ಷಣ (ಪ್ರಾಥಮಿಕ, ಉನ್ನತ)ದ ರೂಪುರೇಶೆ ಯಾವ ಮಾದರಿಯಲ್ಲಿರಬೇಕು, ಅದರ ಒಟ್ಟಾರೆ ಗುಣಮಟ್ಟ ಹೇಗಿರಬೇಕು ಎಂದು ವಿವರಿಸಿಲ್ಲ. ಅನೇಕ ಕಡೆ ಬಿಡಿ ಬಿಡಿಯಾಗಿ ಶಿಕ್ಷಕರ, ಪ್ರಾಧ್ಯಾಪಕರ ಬೋಧನೆಯ ಗುಣಮಟ್ಟದ ಕುರಿತಾಗಿ ಹೇಳಿದೆಯಾದರೂ ಅದನ್ನು ಸಾಧಿಸುವ ಬಗೆಯನ್ನು ವಿವರಿಸಿಲ್ಲ. ಇನ್ನು ಈ ಜ್ಞಾನ ಆಯೋಗದಲ್ಲಿ ನವಉದಾರೀಕರಣದ, ಖಾಸಗೀಕರಣದ ಸಮರ್ಥಕರಾದವರು ಇದರ ಕಾರ್ಯಪಡೆಯ ಮುಖ್ಯ ಸದಸ್ಯರಾಗಿದ್ದಾರೆ. ಸಹಜವಾಗಿಯೇ ಇಲ್ಲಿ ಖಾಸಗೀಕರಣದ ಪರವಾದ ಹಿತಾಸಕ್ತಿಯ ಸಂಘರ್ಷ ಉಂಟಾಗುತ್ತದೆ. ಏಕೆಂದರೆ ಶಾಲಾ ಶಿಕ್ಷಣದ ಕುರಿತಾಗಿ ಈ ಶಿಕ್ಷಣ ನೀತಿಯಲ್ಲಿ ಒಂದು ಕಡೆ ‘‘ನಗರಗಳಲ್ಲಿನ ಖಾಸಗಿ ವಲಯದ ಶಿಕ್ಷಣ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು, ಅದರ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಇದಕ್ಕಾಗಿ ಈಗಿರುವ ಕಟ್ಟುನಿಟ್ಟಾದ ನಿಯಂತ್ರಣವನ್ನು ಸಡಿಲಿಸಬೇಕು, ಹೊಂದಿಕೊಳ್ಳುವ ವಾತಾವರಣ ನಿರ್ಮಿಸಬೇಕು’’ ಎನ್ನುವ ಪ್ರಸ್ತಾಪ ಬರುತ್ತದೆ. ಇದು ನೇರವಾಗಿಯೇ ಖಾಸಗೀಕರಣದ ಪರವಾಗಿ ಮಾತನಾಡುತ್ತದೆ. ಪಠ್ಯಗಳ ಕುರಿತಾಗಿ, ಪಠ್ಯಪುಸ್ತಕಗಳ ರಚನೆ ಕುರಿತಾಗಿ ಸಾಂಸ್ಕೃತಿಕವಾಗಿ, ವೈಜ್ಞಾನಿಕವಾಗಿ ಯಾವುದೇ ಬಗೆಯ ಸ್ಪಷ್ಟತೆ ಮತ್ತು ಅಧ್ಯಯನಗಳನ್ನು ಮಾಡದ ಈ ಸಮಿತಿಯು ನೇರವಾಗಿ ಈಗಿರುವ ಎಲ್ಲಾ ಪಠ್ಯಕ್ರಮಗಳನ್ನು ಹಿಂಪಡೆದು ಏಕರೂಪಿಯಾಗಿ ಸಿಬಿಎಸ್‌ಸಿ ಪಠ್ಯಕ್ರಮವನ್ನು ಜಾರಿಗೊಳಿಸಬೇಕು ಎನ್ನುವ ಶಿಫಾರಸು ಮಾಡುತ್ತದೆ. ಇದು ನೇರವಾಗಿಯೆ ಬಹುಸಂಸ್ಕೃತಿ, ಬಹುತ್ವದ ಕಲಿಕೆಯನ್ನು ತಿರಸ್ಕರಿಸುತ್ತದೆ. ವಿಶ್ವವಿದ್ಯಾನಿಲಯಗಳಲ್ಲಿ ಈಗಿನ ಸಿಂಡಿಕೇಟ್, ಸೆನೆಟ್, ಅಕಡಮಿಕ್ ಪರಿಷತ್, ಅಧ್ಯಯನಗಳ ಮಂಡಳಿಗಳನ್ನು ತೆಗೆದು ಹಾಕಿ ಅದರ ಬದಲಿಗೆ ಹೊಸ ರಚನೆಯನ್ನು ಮಾಡಬೇಕು ಎಂದು ಹೇಳುತ್ತದೆ. ಆದರೆ ಇದು ಪರೋಕ್ಷವಾಗಿ ಈಗಿರುವ ಸಾಮಾಜಿಕ ನ್ಯಾಯದ ವ್ಯವಸ್ಥೆಯನ್ನು ಬದಲಿಸಲೂ ಸೂಚಿಸುತ್ತದೆ. ಆಡಳಿತ ಮಂಡಳಿಗಳಿಗೆ ಚುನಾವಣೆಗಳನ್ನು ರದ್ದುಪಡಿಸಬೇಕೆಂದು ಹೇಳುತ್ತದೆ. ಹಾಗಿದ್ದರೆ ನೇಮಕಾತಿ ಯಾವ ಸ್ವರೂಪದ್ದಾಗಿರಬೇಕೆಂದು ಪ್ರಸ್ತಾಪಿಸುವುದಿಲ್ಲ. ಇದು ನೇರವಾಗಿ ಪಕ್ಷ ರಾಜಕಾರಣಕ್ಕೆ, ಜಾತಿ ರಾಜಕಾರಣಕ್ಕೆ, ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೇ?. ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ಹೊರರಾಜ್ಯ, ದೇಶಗಳ ವಿದ್ಯಾರ್ಥಿಗಳಿಗೆ ಶೇ. 50 ಪ್ರಮಾಣದಲ್ಲಿ ಮೀಸಲಿಡಬೇಕೆಂದು ಹೇಳುತ್ತದೆ. ಇದು ನೇರವಾಗಿ ಸ್ಥಳೀಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಡೆತ ಬೀಳುತ್ತದೆ. ಕ್ರೀಡೆ, ಕೌಶಲ್ಯ, ಕನ್ನಡ ಹೀಗೆ single-discipline ವಿವಿಗಳನ್ನು ಹಂತ ಹಂತವಾಗಿ ಮುಚ್ಚಬೇಕೆಂದು ಶಿಫಾರಸು ಮಾಡುತ್ತದೆ. ಆದರೆ ಇದಕ್ಕೆ ಸೂಕ್ತವಾದ ಸಮರ್ಥನೆಯನ್ನು ಮಂಡಿಸುವುದಿಲ್ಲ. ಹಾಗಿದ್ದಲ್ಲಿ ಕನ್ನಡ ಸಂಶೋಧನೆಗಾಗಿಯೇ ಇರುವ ಹಂಪಿ ಕನ್ನಡ ವಿವಿಯನ್ನು ಮುಚ್ಚುತ್ತಾರೆಯೇ??

ಉನ್ನತ ಶಿಕ್ಷಣದಲ್ಲಿ ಹಣಕಾಸಿನ ನಿರ್ವಹಣೆಗೆ ಅಂತರ್‌ರಾಷ್ಟ್ರೀಯ ದನಸಹಾಯ ಏಜೆನ್ಸಿಗಳಿಂದ, ಖಾಸಗಿ ಉದ್ಯಮಗಳಿಂದ ಆರ್ಥಿಕ ನೆರವು ಪಡೆಯಬೇಕೆಂದು ನೇರವಾಗಿಯೇ ಶಿಫಾರಸು ಮಾಡುತ್ತದೆ. ಈ ಮೂಲಕ ಶಿಕ್ಷಣದಲ್ಲಿ ಸರಕಾರವನ್ನು ಹಣಕಾಸಿನ ಜವಾಬ್ದಾರಿಯಿಂದ ಮುಕ್ತಗೊಳಿಸುತ್ತದೆ. ಇದು ನೇರವಾಗಿಯೆ ಖಾಸಗೀಕರಣಕ್ಕೆ ಬಾಗಿಲನ್ನು ತೆರೆಯುತ್ತದೆ. ಶುಲ್ಕ ಪಾವತಿಸಲು ವಿದ್ಯಾರ್ಥಿಗಳಿಗೆ ಸಾಲ ಬಂಡವಾಳವು ದೊರಕುವಂತೆ ಸರಕಾರ ಯೋಜನೆಯನ್ನು ರೂಪಿಸಬೇಕೆಂದು ಹೇಳುತ್ತದೆ. ಸ್ಕಾಲರ್‌ಶಿಪ್ ಅನ್ನು ಪ್ರತಿಭಾವಂತರಿಗೆ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಮಾತ್ರ ಕೊಡಬೇಕೆಂದು ಹೇಳುತ್ತದೆ. ಇದು ಸಹ ನೇರವಾಗಿ ಸಾಮಾಜಿಕ ನ್ಯಾಯದ ಆಶಯವನ್ನೇ ನಾಶ ಮಾಡುತ್ತದೆ. ಅಲ್ಲದೆ ಉನ್ನತ ಶಿಕ್ಷಣದಲ್ಲಿ ಪ್ರಾಧ್ಯಾಪಕರ ನೇಮಕಾತಿಗೆ ಮೀಸಲಾತಿಯು ವಿಭಾಗವಾರು ಮಟ್ಟದಲ್ಲಿರಬೇಕೇ ಅಥವಾ ವಿಶ್ವವಿದ್ಯಾನಿಲಯವನ್ನು ಏಕವಾಗಿ ಪರಿಗಣಿಸಬೇಕೆ ಎನ್ನುವ ಪ್ರಶ್ನೆಗೆ ಈ ಶಿಕ್ಷಣ ನೀತಿಯಲ್ಲಿ ಎಲ್ಲಿಯೂ ಉತ್ತರವಿಲ್ಲ. ಒಟ್ಟಿನಲ್ಲಿ ಮೀಸಲಾತಿ ಕುರಿತಾಗಿ ನಿಗೂಢ ಮೌನವನ್ನು ತಾಳುತ್ತದೆ.

‘ಕರ್ನಾಟಕ ಶಿಕ್ಷಣ ನೀತಿ’ಗಾಗಿ ಬಿಜೆಪಿ ಸರಕಾರ ನೇಮಿಸಿರುವ ಸಮಿತಿಯು ಮೇಲಿನ ಜ್ಞಾನ ಆಯೋಗದ ಶಿಫಾರಸುಗಳನ್ನು ಮಾನದಂಡವಾಗಿ ಬಳಸಿಕೊಳ್ಳು ತ್ತದೆ. ಇದು ಅಪಾಯಕಾರಿ. ಒಟ್ಟಾರೆಯಾಗಿ ಅನೇಕ ವಿರೋಧಾಭಾಸಗಳು, ಖಾಸಗೀಕರಣದ ಪರವಾಗಿರುವ ಜ್ಞಾನ ಆಯೋಗದ ಈ ಶಿಫಾರಸುಗಳನ್ನು ಈಗಲೇ ಜಾರಿಗೊಳಿಸುವುದನ್ನು ತಡೆಹಿಡಿಯಬೇಕು. ಮೊದಲು ಸರಕಾರವು ಸಾರ್ವಜನಿಕವಾಗಿ, ಶೈಕ್ಷಣಿಕ ವಲಯದಲ್ಲಿ, ವಿವಿ ಮಟ್ಟದಲ್ಲಿ ಚರ್ಚೆ ನಡೆಸಬೇಕು, ಅಧ್ಯಯನ ನಡೆಯಬೇಕು. ಸೂಕ್ತ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು. ಒಮ್ಮತದ ಅಭಿಪ್ರಾಯ ಬಂದನಂತರವಷ್ಟೇ ಇದನ್ನು ಜಾರಿಗೊಳಿಸುವ ಕುರಿತಾಗಿ ನಿಲುವನ್ನು ಪ್ರಕಟಿಸಬೇಕು.

ಶಿಕ್ಷಣದ ಖಾಸಗೀಕರಣದ ವಿವಿಧ ಮಗ್ಗಲುಗಳು
31.1.2018ರಂದು ಶಿಕ್ಷಣ ಇಲಾಖೆಯ ಆಗಿನ ಕಾರ್ಯದರ್ಶಿ ಶಾಲಿನಿ ರಜನೀಶ್, ಆಗ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಆಗಿನ ಆಯುಕ್ತ ಜಾಫರ್, ನಿರ್ದೇಶಕ ಬಸವರಾಜು ಅವರು ಒಂದು ಸಭೆ ನಡೆಸಿ ಕಾರ್ಪೊರೇಟ್ ಕಂಪೆನಿಗಳ ಸಹಯೋಗದಲ್ಲಿ ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ಸುಮಾರು 140 ಎನ್‌ಜಿಒ ಗಳ ಜೊತೆ ಒಡಬಂಡಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದರು. ಆದರೆ ಸರಕಾರಗಳು ಬದಲಾದ ನಂತರ ಈ ಪ್ರಸ್ತಾವನೆ ಮತ್ತೆ ಚರ್ಚೆಗೆ ಬಂದಂತಿಲ್ಲ. ಆದರೆ ಇದು ಯಾವ ಕ್ಷಣದಲ್ಲಾದರೂ ಸಹ ಜಾರಿಗೊಳ್ಳಬಹುದು.

ಸದ್ಯಕ್ಕೆ ಅಝೀಮ್ ಪ್ರೇಮ್‌ಜಿ ಪ್ರತಿಷ್ಠಾನಕ್ಕೆ ಶಿಕ್ಷಕರಿಗೆ, ಅಧಿಕಾರಿಗಳಿಗೆ ತರಬೇತಿ, ಬಿಸಿಯೂಟದ ಗುಣಮಟ್ಟ ಕಾಪಾಡುವುದು ಅಕ್ಷರ ಮತ್ತು ಪ್ರಥಮ್ ಪ್ರತಿಷ್ಠಾನಕ್ಕೆ ಪ್ರಥಮ ಭಾಷೆ ಮತ್ತು ಗಣಿತ ವಿಷಯಗಳ ಕಲಿಕಾಮಟ್ಟ ಹೆಚ್ಚಿಸುವುದು, ಶಿಕ್ಷಣ ಪ್ರತಿಷ್ಠಾನಕ್ಕೆ ಮಕ್ಕಳ ಶಿಕ್ಷಣ ಕಲಿಕೆ, ಅಭ್ಯಾಸ ಪುಸ್ತಕಗಳ ಮೂಲಕ ಕಲಿಕಾ ಮಟ್ಟ ಹೆಚ್ಚಿಸುವುದು, ಹೀಗೆ ಅನೇಕ ವಿಷಯಗಳ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೇಲಿನ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಆಗ ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ 2020ರಲ್ಲಿ ಈಗಿನ ಬಿಜೆಪಿ ಸರಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲಕ ದೊರೆಸ್ವಾಮಿಯವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ. ಶಿಕ್ಷಣವನ್ನು ಉದ್ಯಮವಾಗಿಸಿಕೊಂಡ ಇಂತಹವರು ಯಾವ ರೀತಿ ಸಲಹೆ ಕೊಡಬಲ್ಲರು?

  ಆದರೆ ಇದು ಒಂದು ದುರಂತವೇ ಸರಿ. ಪ್ರಜಾಪ್ರಭುತ್ವವು ಉಸಿರಾಡಬೇಕೆಂದರೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸಬಲೀಕರಣಗೊಳ್ಳಬೇಕು, ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಬೇಕು, ಶಿಕ್ಷಣ ರಾಷ್ಟ್ರೀಕರಣಗೊಳ್ಳಬೇಕು ಎನ್ನುವ ಮೂಲ ತತ್ವಗಳು ಮತ್ತು ಇದನ್ನು ಪ್ರತಿಪಾದಿಸುವ ನಮ್ಮ ಸಂವಿಧಾನದ ನೀತಿಸಂಹಿತೆಗಳನ್ನು ಕಡೆಗಣಿಸಿ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ ಖಾಸಗಿ ಸಂಸ್ಥೆಗಳೊಂದಿಗೆ ಮೇಲಿನಂತೆ ಒಡಂಬಡಿಕೆ ಮಾಡಿಕೊಂಡಿದೆ. ಆದರೆ ಜನಸಾಮಾನ್ಯರ ಪ್ರಶ್ನೆಯೆಂದರೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಯಾತಕ್ಕೆ ಸಾಧ್ಯವಿಲ್ಲ? ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಸರಕಾರಿ ಶಾಲೆಗಳಲ್ಲಿ ‘ಮಿಷನ್ 95’ ಯೋಜನೆಯನ್ನು ರೂಪಿಸಲಾಗಿದೆ. ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಉತ್ತಮಪಡಿಸಲು ಎಸ್‌ಡಿಎಂಸಿ (ಶಾಲೆ ಅಭಿವೃದ್ಧಿ ಮೇಲ್ವಿಚಾರಣೆ ಸಮಿತಿ)ಯನ್ನು ರಚಿಸಲಾಗಿದೆ. ಅದಕ್ಕೆ ಆಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರು ನೇಮಕವಾಗಿರುತ್ತಾರೆ. ಎಸ್‌ಡಿಎಂಸಿ, ಸಮಾನ ಮನಸ್ಕರು, ಎನ್‌ಜಿಒಗಳನ್ನು ಒಳಗೊಂಡಂತಹ ಶಾಲಾ ಪೋಷಣೆ ಯೋಜನೆ ಇದೆ. ಸರ್ವ ಶಿಕ್ಷಣ ಆಭಿಯಾನ ಇದೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಇದೆ. ಕರ್ನಾಟಕ ಮುಕ್ತ ಶಿಕ್ಷಣ ಸಂಪನ್ಮೂಲ ಯೋಜನೆ ಇದೆ. ಸಬ್ಜೆಕ್ಟ್ ಶಿಕ್ಷಕರ ಫೋರಂ ಇದೆ. ಮಾದರಿ ಶಾಲೆ ಯೋಜನೆ ಇದೆ. ಆದರ್ಶ ವಿದ್ಯಾಲಯ ಯೋಜನೆ ಇದೆ. ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್‌ಕೆಜಿ, ಯುಕೆಜಿ)ಯನ್ನು ಪ್ರಾರಂಭಿಸಲು ಅವಕಾಶಗಳಿವೆ. ಇವುಗಳ ಕರ್ತವ್ಯವೇನು? ಇವುಗಳ ಜವಾಬ್ದಾರಿ ಏನು? ಇನ್ನು ಮುಂದೆ ಇವುಗಳನ್ನು ಮುಚ್ಚುತ್ತಾರೆಯೇ?

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಡಿಡಿಪಿಐ, ಬಿಇಒಗಳು, ವಲಯ ಸಂಪನ್ಮೂಲ ಸಂಯೋಜಕರು(ಬಿಆರ್‌ಸಿ), ಕಾರ್ಯನಿರ್ವಹಿಸುತ್ತಾರೆ. ಸರಕಾರಿ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ, ಬೋಧನೆಯ ಗುಣಮಟ್ಟ, ಮೂಲಭೂತ ಸೌಕರ್ಯಗಳ ಗುಣಮಟ್ಟವನ್ನು ಹೆಚ್ಚಿಸಲಿಕ್ಕಾಗಿ ಮತ್ತು ನಿರಂತರವಾಗಿ ಗುಣಮಟ್ಟವನ್ನು ಕಾಪಾಡಿಕೊಳ್ಳಲಿಕ್ಕಾಗಿಯೇ ಆರಂಭಿಸಿದ ಜಿಲ್ಲಾ ಮಟ್ಟದ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯೆಟ್), ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ(ಡಿಸರ್ಟ)ಯಂತಹ ಪ್ರಮುಖ ಶಿಕ್ಷಣ ತರಬೇತಿ, ಬೋಧನೆ, ಕಲಿಕಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.

ಹಾಗಿದ್ದಲ್ಲಿ ಈ ಸಂಸ್ಥೆಗಳ ಜವಾಬ್ದಾರಿ ಏನು? ಅಲ್ಲಿನ ಸರಕಾರಿ ಶಿಕ್ಷಕರು ಬೋಧನೆ ಮಾಡುತ್ತಿಲ್ಲವೇ? ಕಲಿಕೆ, ಬೋಧನೆ ಗುಣಮಟ್ಟ ಹೆಚ್ಚಿಸುತ್ತಿಲ್ಲವೇ? ಮೇಲಿನ ಸಂಸ್ಥೆಗಳಲ್ಲಿ ಸ್ವತಃ ಶಿಕ್ಷಣ ಇಲಾಖೆಯು ಸೂಕ್ತವಾದ ಪಠ್ಯಗಳನ್ನು ರೂಪಿಸುತ್ತಿಲ್ಲವೇ? ಹಾಗಿದ್ದರೆ ಇವರ ಬೋಧನೆಯ, ಕಾರ್ಯನಿರ್ವಹಣೆಯ ಮೌಲ್ಯಮಾಪನ ಆಗಿದೆಯೇ? ಅವುಗಳ ಗುಣಮಟ್ಟ ಕಳಪೆಯಾಗಿದೆಯೇ? ಹೌದಾದರೆ ಅದಕ್ಕೆ ಹೊಣೆಗಾರಾರು? ಇವುಗಳ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಗಮನ ಹರಿಸಬೇಕಾದ ಸಾರ್ವಜನಿಕ ಶಿಕ್ಷಣ ಇಲಾಖೆ ಇದನ್ನು ಕೈಬಿಟ್ಟು ಖಾಸಗಿ ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಸಾರ್ವಜನಿಕ ಶಿಕ್ಷಣವನ್ನು ಹಂತಹಂತವಾಗಿ ಖಾಸಗೀಕರಣಗೊಳಿಸಲು ಮುನ್ನುಡಿ ಬರೆದಂತಿದೆಯೇ?

 ಇದು ಈ ಉದಾರೀಕರಣ, ಖಾಸಗೀಕರಣ, ಜಾಗತೀಕರಣದ ಮುಂದುವರಿದ ಭಾಗ. ಈ ರೀತಿ ಆರಂಭದಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟಕ್ಕಾಗಿ ಖಾಸಗಿಯವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತೇವೆ ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಾರೆ. ಇದರ ಸಮರ್ಥಕರು ಇಂದಿನ ಅಗತ್ಯಕ್ಕೆ ತಕ್ಕ ಹಾಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಅಗತ್ಯವಾದ ಶಿಕ್ಷಣವನ್ನು ಪೂರೈಸಲು ಅಸಮರ್ಥವಾಗಿದೆ. ಸಂವಿಧಾನದ ಎಲ್ಲಾ ನೀತಿಸಂಹಿತೆಗಳನ್ನು ಪಾಲಿಸಿಕೊಂಡು ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡುವಂತಹ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬೆಂಬಲಿಸಬೇಕು ಎಂದು ವಾದ ಮಾಡುತ್ತಾರೆ. ಕಳೆದ ಮೂವತ್ತು ವರ್ಷಗಳಲ್ಲಿ ಇಡೀ ಶಿಕ್ಷಣ ಕ್ಷೇತ್ರದಲ್ಲಿ ನಡೆದ ವಿದ್ಯಾಮಾನಗಳನ್ನು ಗಮನಿಸಿದಾಗ ಆರಂಭದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುತ್ತೇವೆ, ಕಲಿಕೆಯ ಗುಣಮಟ್ಟ ಹೆಚ್ಚಿಸುತ್ತೇವೆ ಎಂದೇ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪಾಲ್ಗೊಳ್ಳುವ ಖಾಸಗಿ ಸಂಸ್ಥೆಗಳು ಕ್ರಮೇಣ ಅದನ್ನು ಒಂದು ಲಾಭದಾಯಕ ಉದ್ಯಮನ್ನಾಗಿಯೇ ರೂಪಿಸುತ್ತವೆ ಮತ್ತು ಬಂಡವಾಳವಿಲ್ಲದೆ ನಾವು ನಿಮಗೆ ಶಿಕ್ಷಣವನ್ನು ಕೊಡುವುದಾದರೂ ಹೇಗೆ ಎನ್ನುವ ತರ್ಕವನ್ನು ಮುಂದಿಟ್ಟುಕೊಂಡು ಹಣ ಕೊಟ್ಟರೆ ಮಾತ್ರ ಶಿಕ್ಷಣ ಎನ್ನುವ ನೀತಿಯನ್ನು ಜಾರಿಗೊಳಿಸುತ್ತವೆ. ನಂತರ ಸರಕಾರಿ ಶಾಲೆಗಳು ಈ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಗೊಳ್ಳುತ್ತವೆ. ನಂತರ ಈ ಖಾಸಗಿ ಸಂಸ್ಥೆಗಳು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ರಚಿಸುತ್ತವೆ. ಅದರ ಗುಣಮಟ್ಟವನ್ನು ನಿರ್ಧರಿಸುವ, ಈ ಪಠ್ಯಪುಸ್ತಕಗಳ ಮೌಲ್ಯಮಾಪನ ಮಾಡುವ ಅಧಿಕಾರವನ್ನು ಸಹ ಶಿಕ್ಷಣ ಇಲಾಖೆ ಕಳೆದುಕೊಂಡಿರುತ್ತದೆ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕಾದ ಶಿಕ್ಷಣ ಇಲಾಖೆ ಈ ರೀತಿಯಲ್ಲಿ ತೀವ್ರವಾದ ಖಾಸಗೀಕರಣಕ್ಕೆ ಮುಂದಾಗಿರುವುದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಮರಣ ಮೃದಂಗದಂತಿದೆ. ಮುಂದೇನು ಸದ್ಯಕ್ಕೆ ಸರಕಾರವು ಎಸ್.ಜಿ.ಸಿದ್ದರಾಮಯ್ಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಲ್ಲಿಸಿದ ಸರಕಾರಿ ಶಾಲೆಗಳ ಸಬಲೀಕರಣ ವರದಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಕರ್ನಾಟಕ ಶಿಕ್ಷಣ ನೀತಿ ರೂಪಿಸಲು ಶಿಕ್ಷಣ ತಜ್ಞರನ್ನೊಳಗೊಂಡ, ಪಕ್ಷಾತೀತವಾಗಿ ಸದಸ್ಯರನ್ನು ನೇಮಿಸಿಕೊಳ್ಳಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲಕರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವುದನ್ನು ನಿಲ್ಲಿಸಬೇಕು ಮತ್ತು ಸಮಾನ ಶಿಕ್ಷಣ ವ್ಯವಸ್ಥೆಗೆ ಜನಾಂದೋಲನ ರೂಪುಗೊಳ್ಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)