varthabharthi

ಸಂಪಾದಕೀಯ

ಕೊರೋನ: ಜಾಗೃತಿಯಷ್ಟೇ ಸಾಕು, ಭಯೋತ್ಪಾದನೆ ಯಾಕೆ?

ವಾರ್ತಾ ಭಾರತಿ : 12 Mar, 2020

ಹಾವು ಕಚ್ಚಿದಾಗ ಅದರ ವಿಷದಿಂದ ಸತ್ತವರಿಗಿಂತ, ಭಯ, ಆತಂಕಗಳಿಂದ ಸತ್ತವರ ಸಂಖ್ಯೆಯೇ ಅಧಿಕವಂತೆ. ಕೊರೋನ ವಿಷಯದಲ್ಲಿ ಇದು ನಿಜವಾಗುವಂತೆ ಕಾಣುತ್ತಿದೆ. ಸರಕಾರವೂ ಸೇರಿದಂತೆ ಬೇರೆ ಬೇರೆ ಶಕ್ತಿಗಳು ಕೊರೋನ ಕುರಿತಂತೆ ಜಾಗೃತಿಯ ನೆಪದಲ್ಲಿ ಆತಂಕಗಳನ್ನು ಬಿತ್ತುತ್ತಿವೆ. ಈ ಆತಂಕಗಳನ್ನು ಬಿತ್ತುವವರ ವರ್ತನೆ ನೋಡಿದರೆ, ಭಾರತ ಈವರೆಗೆ ಯಾವುದೇ ಮಾರಕ ಕಾಯಿಲೆಗಳನ್ನು ಎದುರಿಸಿಯೇ ಇಲ್ಲ ಎಂದು ಭಾವಿಸಬೇಕು. ಇಂದು ದೇಶವನ್ನು ಕೊರೋನ ವೈರಸ್‌ನಿಂದ ಕಾಪಾಡುವುದಕ್ಕಿಂತ, ಅದರ ಹೆಸರಿನಲ್ಲಿ ಬಿತ್ತಿದ ಆತಂಕವೆಂಬ ವೈರಸ್‌ಗಳಿಂದ ಕಾಪಾಡುವ ಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ ಕೊರೋನ ಬಾಧಿತರಲ್ಲದವರು ಇನ್ನಿತರ ಆತಂಕ, ಸಂಕಟಗಳಲ್ಲಿ ಬಳಲುವಂತಾಗಿದೆ. ಈಗಾಗಲೇ ನೋಟು ನಿಷೇಧದಿಂದ ತತ್ತರಿಸಿ ಕೂತಿರುವ ಆರ್ಥಿಕ ಚಟುವಟಿಕೆಗಳು, ಕೊರೋನದ ಹೆಸರಿನಲ್ಲಿ ಸೃಷ್ಟಿಯಾಗುತ್ತಿರುವ ಭಯೋತ್ಪಾದನೆಯಿಂದ ಇನ್ನಷ್ಟು ಜರ್ಜರಿತವಾಗುತ್ತಿದೆ. ವಿಪರ್ಯಾಸವೆಂದರೆ, ಸರಕಾರ, ಸರಕಾರಿ ಅಧಿಕಾರಿಗಳಿಗೇ ಕೊರೋನ ಕುರಿತಂತೆ ಪ್ರಾಥಮಿಕ ಮಾಹಿತಿಗಳ ಕೊರತೆಯಿದೆ. ಪರಿಣಾಮವಾಗಿ ಕೊರೋನ ಭಯೋತ್ಪಾದನೆಯ ನೇತೃತ್ವವನ್ನು ಪರೋಕ್ಷವಾಗಿ ಇವರೇ ವಹಿಸಿಕೊಂಡಿದ್ದಾರೆ.

ಕಳೆದ ವರ್ಷ ಕರಾವಳಿ ಡೆಂಗ್ ರೋಗದಿಂದ ನರಳಿತ್ತು ಮಾತ್ರವಲ್ಲ, ಅದು ಕೊರೋನಕ್ಕಿಂತಲೂ ತೀವ್ರವಾದ ಪರಿಣಾಮಗಳನ್ನು ಬೀರಿತ್ತು. ಹಲವರು ಡೆಂಗ್‌ನಿಂದ ಮೃತಪಟ್ಟಿದ್ದರು. ಈಗಲೂ ಡೆಂಗ್ ನಮ್ಮ ನಡುವೆ ಅಸ್ತಿತ್ವದಲ್ಲಿದೆ ಎನ್ನುವ ಅಂಶವನ್ನು ನಾವು ಗಮನಿಸಬೇಕು. ಈ ದೇಶದಲ್ಲಿ ಅಪೌಷ್ಟಿಕತೆಯ ಪ್ರಮಾಣ ಅದೆಷ್ಟು ಭೀಕರವಾಗಿದೆಯೆಂದರೆ, ಆ ಕಾರಣದಿಂದಲೇ ಕ್ಷಯ ರೋಗ ಅಂಟಿಸಿಕೊಂಡು ರೋಗದಿಂದ ಸತ್ತವರ, ಸಾಯುತ್ತಿರುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಸಮಾಜ ಕೊರೋನ ಕುರಿತಂತೆ ವಹಿಸುತ್ತಿರುವ ಕಾಳಜಿಯ ಅರ್ಧದಷ್ಟು ವಹಿಸಿದರೂ ಕ್ಷಯದಿಂದ ಲಕ್ಷಾಂತರ ಜನರ ಪ್ರಾಣವನ್ನು ಉಳಿಸಬಹುದಾಗಿದೆ. ಭಾರತದಲ್ಲಿ ರೋಗದಿಂದ ಸಾಯುವವರ ಸಂಖ್ಯೆಗಿಂತ ಹಸಿವಿನಿಂದ ಸಾಯುವವರ ಸಂಖ್ಯೆಯೇ ಅಧಿಕ ಎನ್ನುವುದನ್ನು ನಾವು ಗಮನಿಸಬೇಕು. ಕೊರೋನ ಹೆಸರಿನಲ್ಲಿ ಮುಖಕವಚಗಳ ದಂಧೆಗೆ ಸುಲಭವಾಗಿ ಬಲಿಯಾಗುತ್ತಿರುವ ಈ ಜನರು, ಪ್ರತಿದಿನ ಈ ದೇಶದಲ್ಲಿ ಅಪಘಾತಗಳಿಂದ ಸಾಯುವವರ ಸಂಖ್ಯೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. 2019ರಲ್ಲಿ ಜನವರಿಯಿಂದ ಸೆಪ್ಟಂಬರ್‌ವರೆಗೆ ಅಪಘಾತದಿಂದ ಮೃತಪಟ್ಟವರ ಸಂಖ್ಯೆ 1,13,000. ಮೂರು ಲಕ್ಷಕ್ಕೂ ಅಧಿಕಮಂದಿ ಗಾಯಗೊಂಡಿದ್ದಾರೆ. ಇಂದು ಕೊರೋನ ಬಗ್ಗೆ ಆತಂಕಕ್ಕೊಳಗಾಗಿ ಮುಖಕವಚದೊಂದಿಗೆ ಓಡಾಡುತ್ತಿರುವವರು ಹೆಲ್ಮೆಟ್‌ನ ಬಗ್ಗೆ ಯಾವತ್ತೂ ಕಾಳಜಿ ವಹಿಸಿದ್ದಿಲ್ಲ. ಈ ದೇಶದಲ್ಲಿ ಕೆಮ್ಮು, ಕಫ, ಅಸ್ತಮಾಗಳೇನು ಹೊಸತಲ್ಲ. ಇವುಗಳಿಂದ ಬಾಧಿತರಾಗಿ ಮೃತಪಟ್ಟವರ ಸಂಖ್ಯೆಗಳು ಕಮ್ಮಿಯೇನೂ ಇಲ್ಲ. ದಿಲ್ಲಿಯಂತೂ ಪರಿಸರ ಮಾಲಿನ್ಯದಿಂದ ಸಂಪೂರ್ಣ ರೋಗಗ್ರಸ್ತವಾಗಿದೆ. ಅದರ ಇಂದಿನ ಸ್ಥಿತಿಗೂ ಕೊರೋನ ಕಾರಣವಲ್ಲ. ಹೀಗಿರುವಾಗ ಕೊರೋನ ಕುರಿತಂತೆ ಸರಕಾರಗಳ ಅತಿ ನಾಟಕೀಯ ನಡೆಗಳು ರೋಗದ ಕುರಿತಂತೆ ಜನರಲ್ಲಿ ಜಾಗೃತಿ ಬಿತ್ತುವುದರ ಬದಲು ಭಯೋತ್ಪಾದನೆಯನ್ನು ಹರಡುತ್ತಿವೆ.

ಕೊರೋನದ ಹೆಸರಿನಲ್ಲಿ ಸರಕಾರದ ನೇತೃತ್ವದಲ್ಲೇ ಜನರಿಗೆ ಮಾನಸಿಕ ಹಿಂಸೆ ನೀಡುವ ಘಟನೆಗಳು ಬೆಳವಣಿಗೆಗೆ ಬಂದಿವೆ. ಕೊರೋನ ರೋಗವನ್ನು ಅನಗತ್ಯವಾಗಿ ಮಾಂಸಾಹಾರದ ಜೊತೆಗೆ ತಳಕು ಹಾಕುವ ಪ್ರಯತ್ನ ನಡೆದಿದೆ. ಈ ನಿಟ್ಟಿನಲ್ಲಿ ಮಾಂಸ ಮಾರಾಟಕ್ಕೆ ಸರಕಾರಿ ಅಧಿಕಾರಿಗಳೇ ತಡೆಯೊಡ್ಡುತ್ತಿರುವ ವರದಿಗಳು ಬಂದಿವೆ. ಬೆಂಗಳೂರಿನಲ್ಲಿ ಕಸಾಯಿ ಖಾನೆ, ಮಾಂಸ ಮಾರಾಟ ಅಂಗಡಿಗಳನ್ನು ಮುಚ್ಚಿಸುವ ಕೆಲಸ ನಡೆಯುತ್ತಿದೆ. ಕೋಳಿ ಮಾಂಸದ ದರ ಪಾತಾಳಕ್ಕಿಳಿದಿದೆ. ವದಂತಿಗಳಿಂದಾಗಿ ಕೋಳಿ ಮಾಂಸವನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಕೊರೋನ ವೈರಸ್ ಅಷ್ಟು ಸುಲಭದಲ್ಲಿ ಮನುಷ್ಯನ ದೇಹದೊಳಗೆ ಇಳಿಯುವುದಿಲ್ಲ. ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುವವರನ್ನಷ್ಟೇ ಅದು ಆಶ್ರಯಿಸುತ್ತದೆ. ಅದಕ್ಕಾಗಿ ಪೌಷ್ಟಿಕ ಆಹಾರ ಸೇವಿಸುವುದು ಅತ್ಯಗತ್ಯ. ಮಾಂಸಾಹಾರ ತ್ಯಜಿಸುವುದರಿಂದ ಪೌಷ್ಟಿಕ ಆಹಾರ ಸೇವಿಸಬೇಕಾದವರು ಇನ್ನಷ್ಟು ದುರ್ಬಲರಾಗುತ್ತಾರೆಯೇ ಹೊರತು, ಅದರಿಂದ ಕೊರೋನಗೆ ಯಾವ ಸಮಸ್ಯೆಯೂ ಇಲ್ಲ. ಕೊರೋನ ಸೋಂಕಿತರನ್ನು ಸೂಕ್ತ ವೈದ್ಯಕೀಯ ಚಿಕಿತ್ಸೆಯಿಂದ ಗುಣ ಪಡಿಸುವುದಕ್ಕೆ ಸಾಧ್ಯವಿದೆ. ನಮ್ಮ ದೇಶದಲ್ಲಿ ಈವರೆಗೆ ಬರೀ 61 ಮಂದಿ ಕೊರೋನ ರೋಗ ಸೋಂಕಿತರಾಗಿದ್ದಾರೆ. ಈವರೆಗೆ ಯಾರೂ ಕೊರೋನದಿಂದಲೇ ಮೃತಪಟ್ಟಿರುವುದು ಬೆಳಕಿಗೆ ಬಂದಿಲ್ಲ. ಕೊರೋನ ಸೋಂಕಿತರ ಕುರಿತಂತೆ ಅದೆಷ್ಟು ಆತಂಕಗಳನ್ನು ಬಿತ್ತಲಾಗುತ್ತಿದೆ ಎಂದರೆ, ಶೀತ, ಕೆಮ್ಮು, ಜ್ವರದಿಂದ ಆಸ್ಪತ್ರೆಗೆ ದಾಖಲಾಗುವುದಕ್ಕೂ ಜನರು ಹಿಂದೇಟು ಹಾಕುತ್ತಿದ್ದಾರೆ. ವೆನ್ಲಾಕ್‌ನಲ್ಲಿ ಹೀಗೆ ದಾಖಲಾದ ಒಬ್ಬ ರೋಗಿಯನ್ನು ಅಲ್ಲಿನ ವೈದ್ಯರು, ಸಿಬ್ಬಂದಿ ನಡೆಸಿಕೊಂಡ ರೀತಿಯಿಂದ ಆತ ಬೆದರಿ ಕಂಗಾಲಾಗಿ ಆಸ್ಪತ್ರೆಯಿಂದಲೇ ನಾಪತ್ತೆಯಾದ ಪ್ರಕರಣವೊಂದು ನಡೆಯಿತು.

ಕೊರೋನ ಹೆಸರಿನಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳ ಪರೀಕ್ಷೆಗಳನ್ನೆಲ್ಲ ಅವಸರವಸರವಾಗಿ ಮುಗಿಸುವುದಕ್ಕೆ ಆದೇಶ ನೀಡಲಾಗಿದೆ. ಒಂದೇ ದಿನ ಎರಡೆರಡು ಪರೀಕ್ಷೆಗಳನ್ನು ಎದುರಿಸುವ ಸ್ಥಿತಿ ವಿದ್ಯಾರ್ಥಿಗಳದ್ದು. ಸರಕಾರದ ಆದೇಶದಿಂದ ಅವರು ಅನುಭವಿಸುವ ಮಾನಸಿಕ ಒತ್ತಡ, ಕೊರೋನ ವೈರಸ್‌ಗಿಂತಲೂ ಅಪಾಯಕಾರಿಯಾದುದು. ಪ್ರಯಾಣಗಳ ಬಗ್ಗೆಯೂ ಅನಗತ್ಯವಾದ ಹೇಳಿಕೆಗಳಿಂದಾಗಿ ಪ್ರವಾಸೋದ್ಯಮವೂ ಸಂಪೂರ್ಣ ನಷ್ಟ ಅನುಭವಿಸುತ್ತಿದೆ. ಇದು ದೇಶದ ಆರ್ಥಿಕತೆಯ ಮೇಲೆ ಇನ್ನಷ್ಟು ದುಷ್ಪರಿಣಾಮಗಳನ್ನು ಬೀರತೊಡಗಿದೆ. ರಸ್ತೆಗಳು ಬಣಗುಟ್ಟ ತೊಡಗಿವೆ. ಬಡ ಬೀದಿ ವ್ಯಾಪಾರಿಗಳ ಸ್ಥಿತಿಯಂತೂ ಚಿಂತಾಜನಕವಾಗಿವೆ. ಇವೆಲ್ಲದರ ಜೊತೆಗೆ ಕೊರೋನಗೆ ಮದ್ದು ನೀಡುವ ಹೊಸ ನಕಲಿ ವೈದ್ಯರು ಹುಟ್ಟತೊಡಗಿದ್ದಾರೆ. ಸಚಿವರೊಬ್ಬರು ‘‘ಗೋಮೂತ್ರದಿಂದ ಕೊರೋನ ವಾಸಿಯಾಗುತ್ತದೆ’’ ಎಂಬ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಾರೆ. ಬಾಬಾಗಳು, ಸನ್ಯಾಸಿಗಳು ತಮಗೆ ತೋಚಿದ್ದನ್ನು ಹೇಳುತ್ತಾ ಜನರನ್ನು ಗೊಂದಲದಲ್ಲಿ ಕೆಡಹುತ್ತಿದ್ದಾರೆ. ಇದರ ಅರ್ಥ ಕೊರೋನ ಕುರಿತಂತೆ ಜಾಗೃತಿ ಬೇಡವೆಂದಲ್ಲ. ಕೊರೋನ ಮಾತ್ರವಲ್ಲ ಎಲ್ಲ ರೋಗಗಳ ಕುರಿತಂತೆಯೂ ನಾವು ಜಾಗೃತಿ ಹೊಂದಿರಬೇಕು. ಶುಚಿತ್ವವನ್ನು ಕಾಪಾಡಿಕೊಳ್ಳುವುದು, ರೋಗ ಸೋಂಕಿತರು ಎಂದು ಅಧಿಕೃತವಾಗಿ ಗುರುತಿಸಲ್ಪಟ್ಟವರ ಜೊತೆಗೆ ವ್ಯವಹರಿಸುವಾಗಷ್ಟೇ ಮುಖ ಕವಚ ಧರಿಸಿಕೊಳ್ಳುವುದು, ಶೀತ, ತಲೆನೋವು, ಜ್ವರ ಇತ್ಯಾದಿ ಕಾಣಿಸಿಕೊಂಡಾಗ ಯಾವ ಅಂಜಿಕೆಯೂ ಇಲ್ಲದೆ ಕೊರೋನ ತಪಾಸಣೆ ಮಾಡಿಕೊಳ್ಳುವುದು ಇವಿಷ್ಟರಿಂದ ಸಾಂಕ್ರಾಮಿಕ ರೋಗದಿಂದ ದೂರವಿರಬಹುದು. ಬದಲಿಗೆ ಕೊರೋನದ ನೆಪದಲ್ಲಿ ನಾವು ‘ಅಸ್ಪಶ್ಯತೆ’ ಎನ್ನುವ ಇನ್ನೊಂದು ಮಾರಕ ವೈರಸನ್ನು ಆಹ್ವಾನಿಸಿಕೊಂಡರೆ ಸಮಾಜದ ಸ್ಥಿತಿ ಗುಣಪಡಿಸಲಾಗದ ಹಂತಕ್ಕೆ ತಲುಪಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)