varthabharthi


ವಿಶೇಷ-ವರದಿಗಳು

ಇಂದು ವಿಶ್ವ ಕಿಡ್ನಿ ದಿನ

ನಿಮ್ಮ ಕಿಡ್ನಿ ಎಷ್ಟು ಸುರಕ್ಷಿತ?

ವಾರ್ತಾ ಭಾರತಿ : 12 Mar, 2020
ಡಾ. ಮುಹಮ್ಮದ್ ಸಲೀಂ, ಸೀನಿಯರ್ ಕನ್ಸಲ್ಟೆಂಟ್ ಯೂರಲಾಜಿಸ್ಟ್ ಆಪಿಸ್ ಕಿಡ್ನಿ ಫೌಂಡೇಶನ್

ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಕಿಡ್ನಿ ವೈಫಲ್ಯಕ್ಕೆ ಪ್ರಮುಖ ಕಾರಣಗಳು.

► ನಿಮ್ಮ ಮೂತ್ರಪಿಂಡಗಳು ಅದ್ಭುತವಾದವುಗಳು. ಇವುಗಳು ದಿನದಲ್ಲಿ 180ಲೀ.ನಷ್ಟು ರಕ್ತವನ್ನು ಶುದ್ಧಮಾಡುತ್ತವೆ.

► ವಿಶ್ವದಾದ್ಯಂತ ಜನಸಂಖ್ಯೆಯ ಶೇ. 10 ಜನರು ಕಿಡ್ನಿ ವೈಫಲ್ಯಕ್ಕೊಳಗಾಗಿದ್ದಾರೆ.

ಮುಂಜಾಗ್ರತಾ ಕ್ರಮಗಳು:

ಯಾವುದೇ ರೋಗ ಬಂದಾಗ, ಸ್ವಯಂ ವೈದ್ಯರಾಗದೇ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮಧುಮೇಹ, ರಕ್ತದೊತ್ತಡ ಹಾಗೂ ರಕ್ತದಲ್ಲಿರುವ ಕೊಬ್ಬಿನಂಶವನ್ನು ಸೂಕ್ತ ಚಿಕಿತ್ಸೆ ಪಡೆದು ಹತೋಟಿಯಲ್ಲಿಟ್ಟು ಕೊಳ್ಳಬೇಕು.

ನೋವು ನಿವಾರಕ ಹಾಗೂ ರೋಗನಿರೋಧಕ ಮಾತ್ರೆಗಳನ್ನು ಅನವಶ್ಯಕವಾಗಿ ಮತ್ತು ಅತಿಯಾಗಿ ಸೇವಿಸಬಾರದು. ಅನುವಂಶೀಯವಾಗಿ ಮೂತ್ರಪಿಂಡ ಕಾಯಿಲೆಗಳ ಇತಿಹಾಸವಿದ್ದರೆ, ಪರೀಕ್ಷಿಸಿಕೊಳ್ಳಬೇಕು.

----------------------------

ಕಿಡ್ನಿಯ ಸಾಮಾನ್ಯ ಕ್ರಿಯೆ ಏನು?

ರಕ್ತ ಶುದ್ಧೀಕರಣ ಮತ್ತು ವಿಷಕಾರಿ ತ್ಯಾಜ್ಯವನ್ನು ದೇಹದಿಂದ ಹೊರಹಾಕುವುದು. ಶರೀರದಲ್ಲಿ ನೀರು ಮತ್ತು ಖನಿಜಾಂಶಗಳ ಸಮತೋಲನವನ್ನು ಕಾಪಾಡುವುದು.

ಹಾರ್ಮೋನುಗಳ ಉತ್ಪಾದನೆ: ರೆನಿನ್- ರಕ್ತದೊತ್ತಡದ ನಿರ್ವಹಣೆ ಎರಿತ್ರೋಪೊಯೆಟಿನ್ - ಅಸ್ತಿಮಜ್ಜೆಯಲ್ಲಿ ಉತ್ಪತ್ತಿಯಾಗುವ ಕೆಂಪು ರಕ್ತಕಣಗಳ ನಿರ್ವಹಣೆಯು ವಿಟಮಿನ್ ಡಿ ಯನ್ನು ಸಕ್ರಿಯಗೊಳಿಸಿ ಆರೋಗ್ಯಕರ ಮೂಳೆ ಮತ್ತು ಮಾಂಸಖಂಡಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

-------------------------

ಕಿಡ್ನಿ ವೈಫಲ್ಯ ಎಂದರೇನು?

ಮೂತ್ರಕೋಶಗಳು ರಕ್ತವನ್ನು ಸೋಸಿ ವಿಷಕಾರಿ ಅಂಶವನ್ನು ಮೂತ್ರದ ಮೂಲಕ ಹೊರಹಾಕುತ್ತವೆ. ಯಾವಾಗ ಇವು ತಮ್ಮ ಶುದ್ಧೀಕರಣ ಕಾರ್ಯವನ್ನು ನಿಲ್ಲಿಸುತ್ತವೆಯೋ ಆಗ ಮೂತ್ರಪಿಂಡ ವೈಫಲ್ಯ ಉಂಟಾಗುತ್ತದೆ. ಇದರಿಂದ ಜೀವ ರಾಸಾಯನಿಕ ಕ್ರಿಯೆಗಳಲ್ಲಿ ವ್ಯತ್ಯಾಸ ಆಗಿ ಮಾರಣಾಂತಿಕ ರೋಗವಾಗಿ ಪರಿಣಮಿಸುತ್ತದೆ.

---------------------------

ನಿಮಗಿದು ಗೊತ್ತೆ ?

► ಸಮೀಕ್ಷೆ ಪ್ರಕಾರ 10 ಮಂದಿ ಭಾರತೀಯರಲ್ಲಿ ಒಬ್ಬರಿಗೆ ಕಿಡ್ನಿ ಕಾಯಿಲೆ ಇರುತ್ತದೆ.

► ಮಾರಣಾಂತಿಕ ರೋಗಗಳ ಪೈಕಿ ಕಿಡ್ನಿ ವೈಫಲ್ಯವು ಮೂರನೇ ಸ್ಥಾನದಲ್ಲಿದೆ.

► ಶೇ. 90 ಕಿಡ್ನಿ ವೈಫಲ್ಯವಾಗುವ ತನಕ ಯಾವುದೇ ರೋಗ ಲಕ್ಷಣಗಳು ವ್ಯಕ್ತಿಯಲ್ಲಿ ಕಾಣದೇ ಇರಬಹುದು.

►ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಕಿಡ್ನಿ ವೈಫಲ್ಯಕ್ಕೆ ಪ್ರಮುಖ ಕಾರಣಗಳು.

► ಕಿಡ್ನಿ ವೈಫಲ್ಯವಾಗಿರುವವರ ಪೈಕಿ ಕೇವಲ ಶೇ. 25 ರೋಗಿಗಳು ಮಾತ್ರ ದಾನಿಗಳಿಂದ ಕಿಡ್ನಿ ಕಸಿ ಮಾಡಿಸಿಕೊಳ್ಳುತ್ತಾರೆ.

► ಕಿಡ್ನಿ ವೈಫಲ್ಯವಾಗಿರುವ ಶೇ. 75 ಜನರು ಆರ್ಥಿಕ ಕಾರಣಗಳಿಂದಾಗಿ ಯಾವುದೇ ಚಿಕಿತ್ಸೆಯನ್ನು ಪಡೆಯುತ್ತಿಲ್ಲ.

------------------------

ವೈಫಲ್ಯದ ಪ್ರಕಾರಗಳು: ಪ್ರಮಾಣದ ಆಧಾರದ ಮೇಲೆ ಅಲ್ಪಮಧ್ಯಮ ಮತ್ತು ಸಂಪೂರ್ಣ ವೈಫಲ್ಯ ಎಂದು ವಿಭಾಗಿಸಲಾಗುತ್ತದೆ.

► ಕಾಲದ ಆಧಾರದ ಮೇಲೆ ತೀವ್ರತರ ಅಥವಾ ಆಶುಕಾಲೀನ (Acute Renal Failure) ಅಂದರೆ ಕೆಲವೇ ದಿನಗಳಿಂದ ಇರಬಹುದಾದ ಮೂತ್ರಪಿಂಡ ವೈಫಲ್ಯ.

► ಚಿರಕಾಲೀನ (Chronic Renal Failure) ಬಹುದಿನಗಳಿಂದ ಇರುವ ಹಾಗೂ ಜೀವನ ಪರ್ಯಂತ ಇರುವ ಮೂತ್ರಪಿಂಡ ವೈಫಲ್ಯ

------------------------

ಕಿಡ್ನಿ ವೈಫಲ್ಯದ ಲಕ್ಷಣಗಳು: ಕಿಡ್ನಿ ವೈಫಲ್ಯದ ಪ್ರಾರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಕ್ರಮೇಣವಾಗಿ ಕಾಣಿಸಿಕೊಳ್ಳುವ ಲಕ್ಷಣಗಳೆಂದರೆ:

► ಕಾಲು ಮತ್ತು ಮುಖದಲ್ಲಿ, ವಿಶೇಷವಾಗಿ ಕಣ್ಣಿನ ಸುತ್ತ ಬಾಹು ಕಾಣಿಸಿಕೊಳ್ಳುವುದು.

► ಹಸಿವು ಕಡಿಮೆಯಾಗುವುದು.

► ವಾಂತಿ ಮತ್ತು ವಾಕರಿಕೆಯ ಭಾಸವಾಗುವುದು.

► ಮೂತ್ರ ಪ್ರಮಾಣ ದಲ್ಲಿ ಕಡಿಮೆಯಾಗುವುದು.

► ರಕ್ತದಲ್ಲಿ ಹಿಮೊಗ್ಲೋಬಿನ್ ಕಡಿಮೆಯಾಗುವುದು.

► ಮೂತ್ರದಲ್ಲಿ ಅತ್ಯಧಿಕ ಪ್ರೊಟೀನ್ ಕಂಡು ಬರುವುದು.

► ಶ್ವಾಸೋಚ್ವಾಸ ಕ್ರಿಯೆಯಲ್ಲಿ ತೊಂದರೆ ಕಾಣಿಸಿಕೊಳ್ಳುವುದು.

--------------------

ಕಿಡ್ನಿ ವೈಫಲ್ಯಕ್ಕೆ ಕಾರಣಗಳು:

► ಅನುವಂಶೀಯತೆ, ಹತೋಟಿಯಲ್ಲಿರದ ರಕ್ತದೊತ್ತಡ, ಮಧುಮೇಹ, ಮೂತ್ರದಲ್ಲಿರುವ ಸೋಂಕು, ಮೂತ್ರಕೋಶದಲ್ಲಿರುವ ಹರಳುಗಳು, ಜೊತೆಗೆ ಶರೀರದ ಯಾವುದೇ ಭಾಗದಲ್ಲಿ ಹರಡಿದ ಸೋಂಕಿಗೆ ಸೂಕ್ತ ಚಿಕಿತ್ಸೆ ಪಡೆಯದಿರುವುದರಿಂದಲೂ ಮೂತ್ರಪಿಂಡಗಳ ಕಾರ್ಯಕ್ಕೆ ಧಕ್ಕೆಯುಂಟಾಗುತ್ತದೆ.

► ಆಹಾರದಲ್ಲಿ ಅತೀ ಉಪ್ಪು, ಸಕ್ಕರೆ ಬಳಕೆ, ತಂಬಾಕು ಮಾರಕ ಪದಾರ್ಥಗಳು ಹಾಗೂ ಅತಿಯಾದ ಮದ್ಯಸೇವನೆ, ಸ್ವಯಂ ವೈದ್ಯಪದ್ಧತಿ, ನೋವು ಹಾಗೂ ರೋಗನಿವಾರಕ ಮಾತ್ರೆಗಳನ್ನು ಅನಿಯಮಿತವಾಗಿ ಉಪಯೋಗಿಸುವುದರಿಂದ ಮೂತ್ರಪಿಂಡದ ವೈಫಲ್ಯಕ್ಕೆ ದಾರಿ ಮಾಡಿಕೊಡಬಹುದು.

-----------------------

ಕಿಡ್ನಿ ವೈಫಲ್ಯವನ್ನು ಪತ್ತೆಹಚ್ಚುವುದು ಹೇಗೆ:

ರಕ್ತಪರೀಕ್ಷೆಯ ಮೂಲಕ ರಕ್ತದಲ್ಲಿ Serum Creatinine ಮತ್ತು Blood Urea ಅಂಶ ಹೆಚ್ಚಾಗಿದೆಯೇ ಎಂಬುದನ್ನು ತಿಳಿಯಿರಿ.

ಮೂತ್ರ ಪರೀಕ್ಷೆಯ ಮೂಲಕ ಪ್ರೊಟೀನ್ ಅಂಶ ಅಡಕವಾಗಿದೆಯೇ ಎಂದು ತಿಳಿಯಿರಿ.

ಇವೆರಡರ ಅಸಮತೋಲನವು ಕಿಡ್ನಿ ವೈಫಲ್ಯದ ಮುನ್ಸೂಚನೆ ಗಳಾಗಿವೆ. ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ.

ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಇರುವವರು ತಮ್ಮ ಕಿಡ್ನಿ ಸುರಕ್ಷಿತವಾಗಿದೆಯೇ ಎಂದು ತಿಳಿಯಲು ಮೂರು ತಿಂಗಳಿಗೊಮ್ಮೆ ಮೂತ್ರ ಪರೀಕ್ಷೆ ಮತ್ತು ವರ್ಷಕ್ಕೊಮ್ಮೆ ರಕ್ತ ಪರೀಕ್ಷೆ ಮಾಡಬೇಕು.

-------------------

ಕಿಡ್ನಿ ವೈಫಲ್ಯವನ್ನು ತಡೆಗಟ್ಟಲು ಇರುವ ಪ್ರಮುಖ 8 ಅಂಶಗಳು:

► ದೇಹವನ್ನು ಆರೋಗ್ಯಕರವಾಗಿ ಮತ್ತು ಉಲ್ಲಾಸಭರಿತ ವಾಗಿಟ್ಟುಕೊಳ್ಳಬೇಕು.

► ಮಧುಮೇಹವನ್ನು ಹತೋಟಿಯಲ್ಲಿಡಬೇಕು.

► ರಕ್ತದೊತ್ತಡವನ್ನು ಹತೋಟಿಯಲ್ಲಿಡಬೇಕು.

► ಹೆಚ್ಚು ಸ್ವಚ್ಛ ನೀರನ್ನು ಕುಡಿಯಬೇಕು.

► ಧೂಮಪಾನ, ಮದ್ಯಪಾನ ಮಾಡಬಾರದು.

► ನೋವು ನಿವಾರಕ ಮಾತ್ರೆಗಳನ್ನು ಅತಿಯಾಗಿ ಸೇವಿಸಬಾರದು.

► ಸಮತೋಲನ ಆಹಾರ ಸೇವನೆ ಮತ್ತು ದೇಹದ ತೂಕವನ್ನು ಹತೋಟಿಯಲ್ಲಿಡಬೇಕು.

► ವರ್ಷಕ್ಕೊಮ್ಮೆಯಾದರೂ ಕಿಡ್ನಿಯ ಪರೀಕ್ಷೆ ಮಾಡಬೇಕು.

-------------------

ಪರಿಹಾರಗಳು:

ಮೂತ್ರಪಿಂಡ ವೈಫಲ್ಯ ಪ್ರಾರಂಭಿಕ ಹಂತದಲ್ಲಿದ್ದರೆ ಔಷಧ ಹಾಗೂ ಪಥ್ಯ ಆಹಾರ ಸೇವನೆಯಿಂದ ಹತೋಟಿಯಲ್ಲಿಡಬಹುದು.

ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾದ ರೋಗಗಳಿಗೆ ಸರಿಯಾದ ಚಿಕಿತ್ಸೆ ನೀಡುವುದು ಅತ್ಯವಶ್ಯಕ.

ಒಂದು ವೇಳೆ ಔಷಧೋಪಚಾರ ದಿಂದ ನಿಯಂತ್ರಣಕ್ಕೆ ಬಾರದಿದ್ದ ಸಂದರ್ಭದಲ್ಲಿ ಅನಿವಾರ್ಯವಾಗಿ ರಕ್ತವನ್ನು ಕೃತಕವಾಗಿ ಪರಿಶುದ್ಧ ಮಾಡಬೇಕಾಗುತ್ತದೆ. (Dialysis)

ಮೂತ್ರಪಿಂಡವನ್ನು ತಮ್ಮ ಹತ್ತಿರದ ಸಂಬಂಧಿಗಳಿಂದ ಕಾನೂನಿನ ಪ್ರಕಾರ ಪಡೆದುಕೊಂಡು ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಬೇಕಾಗುತ್ತದೆ.

ಮೂತ್ರಪಿಂಡ ಕಸಿ ಮತ್ತು ಚಿಕಿತ್ಸೆ ಪಡೆಯುತ್ತಿರುವವರು ಸಾಮಾನ್ಯರಂತೆ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಬಹುದು. ಆದರೆ ಶೀತದಂತಹ ಕಾಯಿಲೆಗಳು ಹತ್ತಿರ ಸುಳಿದಾಗ ಶೀಘ್ರ ಚಿಕಿತ್ಸೆ ಪಡೆದು ಕೊಳ್ಳಬೇಕಾಗುತ್ತದೆ.

--------------------------

ಅಂಗದಾನ ನಮ್ಮ ಸಾಮಾಜಿಕ ಹೊಣೆ

ಮೂತ್ರಪಿಂಡ ವೈಫಲ್ಯ ಅನುಭವಿಸುವ ರೋಗಿಗಳ ಜೀವನಮಟ್ಟ ಸುಧಾರಿಸಲು ಇರುವ ಉತ್ತಮ ಮಾರ್ಗವೆಂದರೆ ಮೂತ್ರಪಿಂಡ ಕಸಿ. ಆದರೆ ಎಲ್ಲರಿಗೂ ಜೀವಂತ ದಾನಿಗಳು ದೊರೆಯುವ ಸಾಧ್ಯತೆ ಬಹಳ ಕಡಿಮೆ. ಈ ಸಮಸ್ಯೆಗೆ ಪರಿಹಾರೋಪಾಯವೆಂದರೆ ಮೃತದಾನಿಗಳಿಂದ ಅಂಗಗಳನ್ನು ಪಡೆಯುವುದು. ಭಾರತದಲ್ಲಿ ಮೃತವ್ಯಕ್ತಿಗಳಿಂದ ಪಡೆದ ಅಂಗಗಳ ಮೂತ್ರಪಿಂಡ, ಪಿತ್ತಜನಕಾಂಗ ಕಣ್ಣು, ಚರ್ಮ ಕಸಿ ಮಾಡಲಾಗುತ್ತಿದೆ. ಇದರಿಂದ ಎಷ್ಟೋ ಮಂದಿ ನತದೃಷ್ಟರ ಬಾಳು ಬೆಳಗುವುದು ಎಂಬ ಊಹೆಯೂ ಅನೇಕರಿಗಿಲ್ಲ. ಅಪಘಾತಕ್ಕೀಡಾದ ಯುವಕರಿಗೆ ಯಾವ ರೋಗಗಳಿರುವುದಿಲ್ಲ. ಅವರ ಮೆದುಳಿಗೆ ರಕ್ತ ಪೂರೈಕೆಯಾಗದೆ ಅದು ನಿಷ್ಕ್ರಿಯವಾಗುತ್ತದೆ. ಇದನ್ನು ‘ಬ್ರೈನ್‌ಡೆತ್’ ಎಂದು ಕರೆಯುತ್ತಾರೆ. ಕೃತಕ ಉಸಿರಾಟ ಯಂತ್ರದ ಸಹಾಯದಿಂದ ಜೀವಿಸಿರುತ್ತಾರೆ. ಈ ಯಂತ್ರವನ್ನು ತೆಗೆದಲ್ಲಿ ಅವರ ಉಸಿರಾಟ ನಿಂತುಹೋಗುತ್ತದೆ. ಅವರ ಮೆದುಳು ಚೇತರಿಸಿಕೊಳ್ಳುವ ಸಾಧ್ಯತೆಗಳಿರುವುದಿಲ್ಲ. ಅಂತಹವರ ಬೇರೆ ಅಂಗಗಳು ಸಂಪೂರ್ಣ ಆರೋಗ್ಯದಿಂದಿದ್ದು ಕಸಿ ಮಾಡಲು ಅತೀ ಸೂಕ್ತವಾಗಿರುತ್ತದೆ. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಜನನಾಯಕರೂ ಮೊದಲ ಹೆಜ್ಜೆ ಇರಿಸಬೇಕು. ಅನೇಕ ರೋಗಿಗಳ ಜೀವನ ದೀಪವಾಗಬಹುದಾದ ಈ ಅಮೂಲ್ಯ ಅಂಗಗಳು ಮಣ್ಣು ಪಾಲಾಗುತ್ತಿವೆ. ವ್ಯಕ್ತಿಗಳೂ ಜೀವಂತವಾಗಿದ್ದಾಗಲೇ ಅಂಗದಾನದ ಬಗ್ಗೆ ತಮ್ಮ ಒಪ್ಪಿಗೆಯ ಪತ್ರ ಅಥವಾ ಸ್ವಯಂ ಸೇವಾ ಸಂಸ್ಥೆಗಳಿಗೆ ಮುಚ್ಚಳಿಕೆ ಬರೆದುಕೊಡಬೇಕು. ಶಿಬಿ, ದಧೀಚಿ, ಜೀಮೂತವಾಹನರ ತ್ಯಾಗ ಪರಂಪರೆಯ ಉದಾಹರಣೆ ನಮ್ಮಲ್ಲೇ ಇರುವಾಗ, ನಾವು ಸತ್ತ ಬಳಿಕ ನಮ್ಮ ಅಂಗಗಳನ್ನು ದಾನ ನೀಡುವುದು ಹೆಚ್ಚುಗಾರಿಕೆಯೇನಲ್ಲ. ಅದು ನಮ್ಮ ಹೊಣೆ.

ಮೂತ್ರಪಿಂಡ ದಾನ ಇನ್ನೊಬ್ಬ ವ್ಯಕ್ತಿಯ ಜೀವನವನ್ನು ಹಸನು ಮಾಡಲು ಸ್ವಯಂಪ್ರೇರಣೆಯಿಂದ ನೀಡುವ ಅಸಾಧಾರಣ ಉಡುಗೊರೆ. ಇಬ್ಬರ ಜೀವನದಲ್ಲೂ ಅದು ಬಹುಮುಖ್ಯ ಘಟನೆ.

ಕಿಡ್ನಿ ರೋಗಿಗಳ ಸಂಘ (ರಿ.)

ಕಿಡ್ನಿ ರೋಗಿಗಳ ಸಂಘವು ಸ್ವತಂತ್ರ ಮತ್ತು ಸರಕಾರೇತರ ಸಂಘಟನೆಯಾಗಿದ್ದು ನೂರಾರು ಕಿಡ್ನಿ ರೋಗಿಗಳನ್ನು ಒಳಗೊಂಡಿದೆ. ಕಿಡ್ನಿ ರೋಗಿಗಳಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸುವ, ಅವರು ಸಂಘಟಿತವಾಗುವ ಮೂಲಕ ಪರಸ್ಪರ ಆಶೋತ್ತರಗಳಿಗೆ ಸ್ಪಂದಿಸುವ, ಸಮಾಜದಲ್ಲಿ ಕಿಡ್ನಿ ವೈಫಲ್ಯ ತಡೆಯಲು ಜನಜಾಗೃತಿ ನಡೆಸುವ, ಕಿಡ್ನಿ ರೋಗಿಗಳ ಕುಟುಂಬಗಳಿಗೆ ನೆರವಾಗುವ ಹಾಗೂ ಸರಕಾರವು ಕಿಡ್ನಿ ರೋಗಿಗಳಿಗೆ ನೂತನ ಯೋಜನೆಗಳನ್ನು ರೂಪಿಸುವಂತೆ ಮತ್ತು ಕಿಡ್ನಿ ವೈಫಲ್ಯ ತಡೆಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಒತ್ತಡ ಹೇರುವ ನಿಟ್ಟಿನಲ್ಲಿ ಕಿಡ್ನಿ ರೋಗಿಗಳ ಸಂಘವನ್ನು ಸ್ಥಾಪಿಸಲಾಗಿದೆ.

ಕಿಡ್ನಿ ರೋಗಿಗಳೆಲ್ಲರೂ ಕಿಡ್ನಿ ರೋಗಿಗಳ ಸಂಘದ ಸದಸ್ಯರಾಗಿ ಸಂಘಕ್ಕೆ ಇನ್ನಷ್ಟು ಶಕ್ತಿಯನ್ನು ನೀಡಬೇಕಾಗಿದೆ. ಸಾಮಾಜಿಕ ಕಳಕಳಿಯ ಆಸಕ್ತ ಸಾರ್ವಜನಿಕರು ಸಂಘದ ಪೋಷಕ ಸದಸ್ಯರಾಗಿ/ದೇಣಿಗೆದಾರರಾಗಿ, ಕಿಡ್ನಿ ವೈಫಲ್ಯ ವನ್ನು ತಡೆಯುವ ಮತ್ತು ಕಿಡ್ನಿ ರೋಗಿಗಳಿಗೆ ನೆರವಾಗುವ ಈ ಪುಣ್ಯದಾಯಕ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿ ವಿನಂತಿಸುತ್ತೇವೆ.

ವಿಳಾಸ: ಕಿಡ್ನಿ ರೋಗಿಗಳ ಸಂಘ(ರಿ.)

ಸಿ-24, ಎರಡನೇ ಮಹಡಿ, ಅಲ್ ರಹಬಾ ಪ್ಲಾಝಾ

ನೆಲ್ಲಿಕಾಯಿ ರಸ್ತೆ, ಮಂಗಳೂರು-575001

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)