varthabharthi

ನಿಮ್ಮ ಅಂಕಣ

ಕೊರೋನಕ್ಕಿಂತ ಯಾವುದು ಅಪಾಯಕಾರಿ?

ವಾರ್ತಾ ಭಾರತಿ : 12 Mar, 2020
-ಪ್ರವೀಣ್ ಎಸ್ ಶೆಟ್ಟಿ, ಬೋಳೂರು, ಮಂಗಳೂರು

ಮಾನ್ಯರೇ,

ಜಗತ್ತಿನಲ್ಲಿ ಕೊರೋನ ವೈರಸ್‌ಗಿಂತ ಹೆಚ್ಚಿನ ಬೇರೆ ಮಾರಣಾಂತಿಕ ರೋಗ ಇಲ್ಲವೇ? ಭಾರತದಲ್ಲಿ ಅತ್ಯಂತ ನಾಚಿಕೆಗೇಡಿನ ವಿಷಯವೆಂದರೆ ಬೇರೆ ಯಾವುದೇ ರೋಗಕ್ಕಿಂತ ಅಪೌಷ್ಟಿಕತೆ ಮತ್ತು ಹಸಿವೆಯಿಂದ ಮಕ್ಕಳು ಸಾಯುತ್ತಿರುವುದು. ಭಾರತದಲ್ಲಿ ಕಳೆದ ಎರಡು ತಿಂಗಳುಗಳಿಂದ ಯಾರೂ ಕೊರೋನ ವೈರಸ್‌ನಿಂದ ಮರಣಹೊಂದಿಲ್ಲ. ಆದರೆ ಅಪೌಷ್ಟಿಕತೆ ಮತ್ತು ಹಸಿವೆಯಿಂದ ಸತ್ತಿರುವ ಮಕ್ಕಳ ಸಂಖ್ಯೆ 100ಕ್ಕೂ ಹೆಚ್ಚು! ಕಳೆದ ವಾರವೇ ಜಾರ್ಖಂಡ್‌ನಲ್ಲಿ ಒಂದು ಕುಟುಂಬಕ್ಕೆ ರೇಷನ್ ಆಹಾರ ಧಾನ್ಯ ಸಿಗದ್ದರಿಂದ ಆ ಕುಟುಂಬದವರು ಹಸಿವೆಯಿಂದ ಬಳಲಿ ಒಬ್ಬ ಮೃತ ಪಟ್ಟ ಬಗ್ಗೆ ಪತ್ರಿಕೆಗಳಲ್ಲಿ ಸಣ್ಣ ಸುದ್ದಿಯೊಂದು ಪ್ರಕಟವಾಯಿತು. ಆದರೆ ಅದೇ ಜಾರ್ಖಂಡ್‌ನಲ್ಲಿ ಕೇವಲ ಐದು ಜನಕ್ಕೆ ಕೊರೋನ ಸೋಂಕು ಪತ್ತೆಯಾಗಿರುವುದು ಅಲ್ಲಿಯ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ದೊಡ್ಡದಾಗಿ ಪ್ರಕಟವಾಯಿತು. ಜಾರ್ಖಂಡ್‌ನಲ್ಲಿ ಕೊರೋನದಿಂದ ಯಾರೂ ಸತ್ತಿಲ್ಲ, ಆದರೆ ಹಸಿವೆಯಿಂದ ಮರಣಹೊಂದಿದ್ದಾರೆ ಎಂಬುದನ್ನು ಗಮನಿಸಿ. ಭಾರತದಲ್ಲಿ ಈ ವರೆಗೆ ಕೇವಲ 70ರಷ್ಟು ಕೊರೋನ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆದರೆ ಇದುವರೆಗೆ ಯಾರೂ ಕೊರೋನದಿಂದಾಗಿ ಮರಣಹೊಂದಿಲ್ಲ. ಹೆಚ್ಚಿನವರೆಲ್ಲಾ ಗುಣಮುಖರಾಗಿದ್ದಾರೆ. ಆದರೆ ಇದೇ ಎರಡು ತಿಂಗಳ ಅವಧಿಯಲ್ಲಿ ಕ್ಯಾನ್ಸರ್, ಮಲೇರಿಯಾ, ಡೆಂಗ್, ಎಚ್1ಎನ್1, ಏಡ್ಸ್, ನಿಮೋನಿಯಾ, ವೈರಲ್ ಫಿವರ್ ಮುಂತಾದವುಗಳಿಂದ ಕನಿಷ್ಠ ಹತ್ತು ಸಾವಿರ ಜನ ಸತ್ತಿರಬಹುದು. ಇದರ ಬಗ್ಗೆ ಯಾವುದೇ ತುಲನಾತ್ಮಕ ಡೇಟಾ ಸರಕಾರದ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿಲ್ಲ ಯಾಕೆ? ಪ್ರಧಾನ ಮಂತ್ರಿ ಮೋದಿ ಸಹಿತ ಎಲ್ಲರೂ ಕೇವಲ ಕೊರೋನ ವೈರಸ್ ಬಗ್ಗೆ ಮಾತ್ರ ಬೊಬ್ಬೆ ಹಾಕುತ್ತಿದ್ದಾರೆ. ಇದರ ಹಿಂದೆ ಯಾರ ವಾಣಿಜ್ಯ ಅಥವಾ ರಾಜಕೀಯ ಸ್ಥಾಪಿತ ಹಿತಾಸಕ್ತಿ ಅಡಗಿದೆ?

ಕೊರೋನ ವೈರಸ್‌ನ ಮಾರಣಾಂತಿಕತೆಗೆ ಅನಗತ್ಯವಾಗಿ ಪ್ರಚಾರವನ್ನು ನೀಡಲಾಗುತ್ತಿದೆ. 140 ಕೋಟಿ ಜನಸಂಖ್ಯೆ ಇರುವ ಚೀನಾದಲ್ಲಿ ಕೇವಲ ಎಂಬತ್ತೊಂದು ಸಾವಿರ ಜನರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು ಅದರಲ್ಲಿ ಕೇವಲ 3,169 ಜನರು ಮಾತ್ರ ತೀರಿಹೋಗಿದ್ದಾರೆ. ಚೀನಾ ಹೊರತು ಪಡಿಸಿ ಜಗತ್ತಿನಾದ್ಯಂತ ಕೆಲವೇ ಸಾವಿರ ಜನರಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು ಅದರಲ್ಲಿ ಸುಮಾರು ಒಂದು ಸಾವಿರ ಜನರಷ್ಟೇ ಮರಣಹೊಂದಿರಬಹುದು. ಆದರೆ ಅದೇ ಎರಡು ತಿಂಗಳ ಅವಧಿಯಲ್ಲಿ ಕ್ಯಾನ್ಸರ್, ಮಲೇರಿಯಾ, ಡೆಂಗ್, ಚಿಕುನ್‌ಗುನ್ಯಾ, ಟೈಫಾಯಿಡ್, ಎಚ್1ಎನ್1, ನಿಮೋನಿಯಾ, ನಿಫಾ, ಬರ್ಡ್ ಫ್ಲೂ ಇತರ ಸಾಂಕ್ರಾಮಿಕ ರೋಗಗಳಿಂದಾಗಿ ಲಕ್ಷಾಂತರ ಜನರು ಜಗತ್ತಿನಾದ್ಯಂತ ಸಾವನ್ನಪ್ಪಿರಬಹುದು. ಹಿಂದಿನ ಎರಡು ತಿಂಗಳಲ್ಲಿ ಕೇವಲ ಎಚ್1ಎನ್1 ಒಂದರಿಂದಲೇ ಆಫ್ರಿಕನ್ ದೇಶಗಳಲ್ಲಿ ಸಾವಿರಾರು ಜನ ಸತ್ತಿದ್ದಾರೆ, ಆದರೆ ಅದೇ ಬಡ ಆಫ್ರಿಕನ್ ದೇಶಗಳಲ್ಲಿ ಕೊರೋನ ಬಾಧೆಯಿಂದ ಒಬ್ಬರೂ ಸತ್ತಿಲ್ಲ! ಯಾಕೆಂದರೆ ದಿನದ ತಾಪಮಾನ 26 ಡಿಗ್ರಿಗಿಂತ ಹೆಚ್ಚು ಇರುವಲ್ಲಿ ಕೊರೋನ ರೋಗಾಣು ಹರಡುವುದಿಲ್ಲವಂತೆ. ಹಾಗಾಗಿ ಆಫ್ರಿಕಾದ ಬಿಸಿಲು ನಾಡಿನಲ್ಲಿ ಕೊರೋನ ಬಾಧೆ ಅತಿ ಕಡಿಮೆ. ಕರ್ನಾಟಕದಲ್ಲೂ ಬೇಸಿಗೆ ಆರಂಭವಾಗಿರುವುದರಿಂದ ಕೊರೋನ ಬಾಧೆ ಕಡಿಮೆಯಾಗುತ್ತಿದೆ.

ಇದರಿಂದ ಅರ್ಥವಾಗುವುದೇನೆಂದರೆ- ಇತರ ರೋಗಗಳಿಗೆ ಹೋಲಿಸಿದರೆ ಕೊರೋನ ವೈರಸ್ ಅಂತಹ ದೊಡ್ಡ ಮಾರಣಾಂತಿಕ ರೋಗ ಅಲ್ಲವೇ ಅಲ್ಲ. ಅಷ್ಟು ಘಾತಕವಲ್ಲದ ಈ ರೋಗ ಇಟಲಿಯಲ್ಲಿ ಹಿಂದಿನ 60 ವರ್ಷಗಳಿಂದಲೂ ಇದೆ. ಮಾಧ್ಯಮಗಳ ಅತಿಶಯೋಕ್ತಿ ಮತ್ತು ಸ್ಥಾಪಿತ ಹಿತಾಸಕ್ತಿಗಳ ಬೊಬ್ಬೆಯಿಂದ ಜನರು ವಿನಾಕಾರಣ ಬೆಚ್ಚಿ ಬಿದ್ದಿದ್ದಾರೆ ಅಷ್ಟೇ. ಮುನ್ನೆಚ್ಚರಿಕೆ ವಹಿಸುವುದರಲ್ಲಿ ತಪ್ಪಿಲ್ಲ, ಆದರೆ ನಾವು ಯಾರಿಗಾದರೂ ಒಂದು ಅರ್ಜೆಂಟ್ ಫೋನ್ ಕಾಲ್ ಮಾಡಬೇಕಾದರೂ ಮೊದಲು ಮೂರು ನಿಮಿಷ ಕೊರೋನ ಬಗ್ಗೆ ಸರಕಾರದ ಆ ರೆಕಾರ್ಡೆಡ್ ಉಪದೇಶ ಕೇಳುವ ಮಾನಸಿಕ ಹಿಂಸೆಗೆ ನಮ್ಮನ್ನು ಗುರಿ ಮಾಡುತ್ತಿರುವುದು ನಿಜಕ್ಕೂ ತಪ್ಪು. ಭಾರತದಲ್ಲಿ ಪ್ರತಿ ವರ್ಷ ಲಕ್ಷಗಟ್ಟಲೆ ಜನರು ವಿವಿಧ ಕಾರಣಗಳಿಂದ ಸಾಯುತ್ತಾರೆ. ಭಾರತದಲ್ಲಿ ಕೊರೋನ ವೈರಸ್‌ಗಾಗಿ ರಾಷ್ಟ್ರದಾದ್ಯಂತ ಜನರು ಭಯಭೀತರಾಗುವುದು ಮತ್ತು ವಿಕಾರ ಬೊಬ್ಬೆ ಹಾಕುವುದು ಸರಿಯಲ್ಲ. ಪ್ರಧಾನ ಮಂತ್ರಿ ಮೋದಿ ವಿದೇಶ ಪ್ರವಾಸವನ್ನು ಮುಂದೂಡುವುದು ಅಥವಾ ಹೋಳಿ ಹಬ್ಬವನ್ನು ರದ್ದುಗೊಳಿಸುವುದು ಮತ್ತು ಅದಕ್ಕೆ ಮಾಧ್ಯಮದಲ್ಲಿ ಭಯಂಕರ ಪ್ರಚಾರವನ್ನು ನೀಡುವುದು ಅಗತ್ಯವೇ ಇರಲಿಲ್ಲ. ಸಾಮಾಜಿಕ ಜಾಲತಾಣವೂ ಅತಿ ದೊಡ್ಡ ವಿಲನ್ ಅನ್ನದೇ ವಿಧಿಯಿಲ್ಲ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)