varthabharthi

ನಿಮ್ಮ ಅಂಕಣ

ಜನಗಣತಿ ಜಾತಿ-ಧರ್ಮದ ಆಧಾರದಲ್ಲಿ ವಿಭಜಿಸುವುದಾಗಿದ್ದರೆ ಸಹಕರಿಸದಿರೋಣ

ವಾರ್ತಾ ಭಾರತಿ : 13 Mar, 2020
ಶಮೀರ ಜಹಾನ್, ಸದಸ್ಯರು ಸದ್ಭಾವನಾ ವೇದಿಕೆ, ಮಂಗಳೂರು

ಮಾನ್ಯರೇ,

ರಾಜ್ಯದಲ್ಲಿ ಎ.15ರಿಂದ 29ರವರೆಗೆ ಜನಗಣತಿಯು ನಡೆಯಲಿದ್ದು ಜನಗಣತಿಯಲ್ಲಿ ಜನಸಾಮಾನ್ಯರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಎಂದು ವರದಿಯಾಗಿದೆ. ಈ ಬಾರಿಯ ಜನಗಣತಿ  ಭಿನ್ನವಾಗಿದ್ದು 34  ಪ್ರಶ್ನೆಗಳನ್ನು ಒಳಗೊಂಡಿದೆ ಎಂದೂ ಹೇಳಲಾಗಿದೆ. ಈ ಪ್ರಶ್ನೆಗಳು ಜನಸಾಮಾನ್ಯರ ಹಿತದೃಷ್ಟಿಯಿಂದಾಗಿದ್ದರೆ ಖಂಡಿತವಾಗಿಯೂ ಅಧಿಕಾರಿಗಳಿಗೆ ಸಹಕರಿಸಬೇಕು. ಒಂದು ವೇಳೆ ಜನರನ್ನು ಜಾತಿ ಧರ್ಮದ ಆಧಾರದಲ್ಲಿ ವಿಭಜಿಸುವ ಪ್ರಕ್ರಿಯೆ ಎಂದಾಗಿದ್ದರೆ ಖಂಡಿತವಾಗಿಯೂ ಯಾರೂ ಸಹಕರಿಸಬಾರದು. ಜನಗಣತಿಯಲ್ಲಿ ಕೇಳಲಾಗುವ 34 ಪ್ರಶ್ನೆಗಳು ದೇಶದ, ದೇಶದ ಜನಸಾಮಾನ್ಯರ ಆರ್ಥಿಕತೆಯ ಮಟ್ಟವನ್ನು ಏರಿಸಲಿದೆಯೇ? ಹಕ್ಕು ವಂಚಿತರಿಗೆ ಅವರ ಹಕ್ಕುಗಳು ಲಭಿಸಲಿವೆಯೇ? ಒಂದು ವೇಳೆ ಇಲ್ಲ ಎಂದಾದರೆ ಈ ಜನಗಣತಿಯು  ದೇಶದ ಅಧಃಪತನದ ಸಂಕೇತವಾಗಿದೆ. ಇದರಲ್ಲಿ ಎಲ್ಲರೂ ಬಲಿಪಶುಗಳು.

 ಮಾನ್ಯ ಪ್ರಧಾನ ಮಂತ್ರಿಯವರಿಗೆ ಸಂವಿಧಾನದ ಮೇಲೆ ಗೌರವ ಇದೆಯೆಂದಾದರೆ, ದೇಶಪ್ರೇಮವಿದ್ದರೆ ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವ ಸಿಎಎ ಕಾಯ್ದೆಯನ್ನು ಮೊದಲು ರದ್ದುಗೊಳಿಸಬೇಕು. ಅಧಿಕಾರಕ್ಕೆ ಬಂದು ವಿರೋಧ ಪಕ್ಷಗಳ ಮೇಲೆ ಸೇಡು ತೀರಿಸಬೇಕು ಎಂದಲ್ಲದೆ ಬೇರೆ ಯಾವ ಉದ್ದೇಶವೂ ಇದರಲ್ಲಿ ಕಂಡುಬರುವುದಿಲ್ಲ. ಪ್ರತೀಕಾರದ ಹಿತದೃಷ್ಟಿಯಿಂದ ಜಾರಿಗೊಳಿಸಲಾಗುವ ಕಾನೂನು, ಕಾಯ್ದೆಗಳು ದೇಶದ ಜನಸಾಮಾನ್ಯರ, ಬಡವರ್ಗಗಳ, ದುರ್ಬಲರ, ಅಸಹಾಯಕರ,  ಆದಿವಾಸಿಗಳ ಅದರಲ್ಲೂ ವಿಶೇಷವಾಗಿ ಮಹಿಳೆಯರ, ಮಕ್ಕಳ ಶಾಪಕ್ಕೆ ಗುರಿಯಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಇಂತಹ ಕಾನೂನುಗಳನ್ನು ಕೇಂದ್ರ ಸರಕಾರ ರದ್ದುಗೊಳಿಸಬೇಕು. ದೇಶದ, ದೇಶದ ಜನಸಾಮಾನ್ಯರ, ದುರ್ಬಲ ವರ್ಗಗಳ ಆರ್ಥಿಕ ಪ್ರಗತಿಯ ಹಿತದೃಷ್ಟಿಯಿಂದ ಜನಗಣತಿ ನಡೆಯಲಿ. ಹಲವಾರು ರೀತಿಯ ಸಂಶಯಕ್ಕೆ ಕಾರಣವಾಗುತ್ತಿರುವ ಎನ್.ಪಿ.ಆರ್ ನ್ನು ನಿರಾಕರಿಸುವಂತೆ ರಾಜ್ಯಾದ್ಯಂತ ಸಾಮಾಜಿಕ ಕಳಕಳಿಯ ವಿವಿಧ ಧರ್ಮೀಯ ನೇತಾರರ ಉಪವಾಸ ಸತ್ಯಾಗ್ರಹವು ಫಲಪ್ರದವಾಗಲಿ ಎಂದು ಹಾರೈಸುತ್ತೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)