varthabharthi


ವಿಶೇಷ-ವರದಿಗಳು

ಸಂಘಪರಿವಾರ ಗೋಳ್ವಾಲ್ಕರ್ ರನ್ನು ಯಾಕೆ ‘ಮರೆಯಲು’ ಬಯಸುತ್ತದೆ?

ವಾರ್ತಾ ಭಾರತಿ : 13 Mar, 2020
ಸುಭಾಷ್ ಘಟಾಡೆ

ಅವರೆಲ್ಲ ಆರೆಸ್ಸೆಸ್‌ಗೆ ಅತ್ಯಂತ ದೀರ್ಘಕಾಲ (1940-1973) ಸೇವೆ ಸಲ್ಲಿಸುವ ನಾಯಕನನ್ನು ಉದ್ದೇಶಪೂರ್ವಕವಲ್ಲದೆ ಮರೆತರೆಂದು ನಂಬುವುದು ಕಷ್ಟ.

ಆರೆಸ್ಸೆಸ್ ಅನ್ನು ಮುನ್ನಡೆಸಲು ಮತ್ತು ಅದರ ‘‘ಪ್ರಧಾನ ಶಿಲ್ಪಿ’’ಯಾಗಲು ಸಂಘಟನೆಯ ಸ್ಥಾಪಕ ಹಾಗೂ ಅದರ ಮಹಾನಾಯಕ ಡಾ. ಹೆಡ್ಗೆವಾರ್ ಅವರಿಂದ ವೈಯಕ್ತಿಕವಾಗಿ ಆಯ್ಕೆ ಮಾಡಲ್ಪಟ್ಟ ಒಬ್ಬ ವ್ಯಕ್ತಿಯನ್ನು ಅವರೆಲ್ಲ ದಿಢೀರನೆ ಮರೆಯುವುದಾದರೂ ಹೇಗೆ ಸಾಧ್ಯ?

ಮಾಧವ ಸದಾಶಿವ ಗೋಳ್ವಾಲ್ಕರ್ ಅವರ 117ನೇ ಜನ್ಮದಿನದ ವಾರ್ಷಿಕೋತ್ಸವ ಯಾರ ಗಮನಕ್ಕೂ ಬರದೆ ಕಳೆದುಹೋಯಿತು. ರಾಷ್ಟ್ರೀಯ ದೈನಿಕವೊಂದರಲ್ಲಿ ಕೇಸರಿ ಪಕ್ಷದ ಮಧ್ಯಮಸ್ತರದ ನಾಯಕರೊಬ್ಬರು ಬರೆದ ಲೇಖನವೊಂದನ್ನು ಹೊರತುಪಡಿಸಿ, ಮೇಲಿನ ಶ್ರೇಣಿಯ ಯಾವ ಒಬ್ಬ ನಾಯಕನಿಗೆ ಕೂಡ ಆರೆಸ್ಸೆಸ್‌ನ ದ್ವಿತೀಯ ಮುಖ್ಯಸ್ಥ (ಗೋಳ್ವಾಲ್ಕರ್)ರ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅವಶ್ಯಕ ಅನ್ನಿಸಲಿಲ್ಲ. ಆರೆಸ್ಸೆಸ್ ಸ್ಥಾಪಕ ಕೆ.ಬಿ. ಹೆಡ್ಗೆವಾರ್ ನಂತರ ಅದರ ಮುಖ್ಯಸ್ಥನ ಸ್ಥಾನ ಅಲಂಕರಿಸಿದವರು ಗೋಳ್ವಾಲ್ಕರ್.

ಕುತೂಹಲ ವಿಷಯವೆಂದರೆ ಟ್ವಿಟರ್-ನಿಪುಣ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಆ ದಿನದ ಟ್ವೀಟ್‌ನಲ್ಲಿ ಗೋಳ್ವಾಲ್ಕರ್ ಬಗ್ಗೆ ಒಂದೇ ಒಂದು ಸಾಲನ್ನು ಕೂಡ ಬರೆಯಲಿಲ್ಲ. ಇದು ಸ್ವಲ್ಪ ವಿಚಿತ್ರ ಅನ್ನಿಸಿತು. ಯಾಕೆಂದರೆ ‘‘ತಮ್ಮ ಮಾತೃಭೂಮಿಯನ್ನು ಬೆಳಗುವುದಕ್ಕಾಗಿ ತಮ್ಮ ಬದುಕನ್ನು ಸುಟ್ಟ ಅತ್ಯಂತ ಶ್ರೇಷ್ಠ ಸಮಾಜ ಸುಧಾರಕ’’ರ ಕುರಿತಾದ ‘ಜ್ಯೋತಿಪುಂಜ್’ ಎಂಬ ತನ್ನ ಪುಸ್ತಕದಲ್ಲಿ ಮೋದಿ ಗೋಳ್ವಾಲ್ಕರ್‌ರ ಬಗ್ಗೆ 40 ಪುಟಗಳಷ್ಟು ಬರೆದಿದ್ದರು. ‘‘ಗೋಳ್ವಾಲ್ಕರ್ ಗುರೂಜಿ ಅವರ ಜೀವನವು ತ್ಯಾಗ, ನಿಷ್ಠೆಗೆ ಒಂದು ಉತ್ತಮ ಉದಾಹರಣೆ.

ತನ್ನ ಗುರಿ ಸಾಧನೆಗಾಗಿ ಬದುಕುವ ಒಬ್ಬ ವ್ಯಕ್ತಿಯಲ್ಲಿ ನಾವು ನಿರೀಕ್ಷಿಸುವ ಎಲ್ಲ ಗುಣಗಳೂ ಅವರಲ್ಲಿದ್ದವು- ತಾಳ್ಮೆ, ದೃಢ ನಿರ್ಧಾರ, ಗುರಿ ಸಾಧಿಸುವ ಛಲ.

ಮೋದಿಯವರ ಅಥವಾ ಹಿರಿಯ ನಾಯಕರ ಮರೆವು ಉದ್ದೇಶರಹಿತವೇ ಅಥವಾ ಉದ್ದೇಶ ಪೂರ್ವಕವೇ?

ಅವರೆಲ್ಲ ಆರೆಸ್ಸೆಸ್‌ಗೆ ಅತ್ಯಂತ ದೀರ್ಘಕಾಲ (1940-1973) ಸೇವೆ ಸಲ್ಲಿಸುವ ನಾಯಕನನ್ನು ಉದ್ದೇಶಪೂರ್ವಕವಲ್ಲದೆ ಮರೆತರೆಂದು ನಂಬುವುದು ಕಷ್ಟ.

ಆರೆಸ್ಸೆಸ್ ಅನ್ನು ಮುನ್ನಡೆಸಲು ಮತ್ತು ಅದರ ‘‘ಪ್ರಧಾನ ಶಿಲ್ಪಿ’’ಯಾಗಲು ಸಂಘಟನೆಯ ಸ್ಥಾಪಕ ಹಾಗೂ ಅದರ ಮಹಾನಾಯಕ ಡಾ. ಹೆಡ್ಗೆವಾರ್ ಅವರಿಂದ ವೈಯಕ್ತಿಕವಾಗಿ ಆಯ್ಕೆ ಮಾಡಲ್ಪಟ್ಟ ಒಬ್ಬ ವ್ಯಕ್ತಿಯನ್ನು ಅವರೆಲ್ಲ ದಿಢೀರನೆ ಮರೆಯುವುದಾದರೂ ಹೇಗೆ ಸಾಧ್ಯ?

ಕೇವಲ ಒಂದೂವರೆ ದಶಕದ ಹಿಂದೆ, ಸಂಘಪರಿವಾರ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಸಂಘಟನೆಗಳು ‘‘ಸಾಮಾಜಿಕ ಸಾಮರಸ್ಯ’’ಕ್ಕೆ ಒತ್ತು ನೀಡಿ ಗೋಳ್ವಾಲ್ಕರ್‌ಅವರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದ್ದವು. ಆಗ ಒಂದು ಬೃಹತ್ತಾದ ಅಭಿಯಾನವನ್ನು ನಡೆಸಲಾಗಿತ್ತು. ದೇಶದಾದ್ಯಂತ ಬ್ಲಾಕ್ ಮಟ್ಟಗಳಲ್ಲಿ ‘ಹಿಂದೂ ರ್ಯಾಲಿ’ಗಳನ್ನು ಸಂಘಟಿಸಲಾಗಿತ್ತು. ‘‘ಶ್ರೀ ಗುರೂಜಿಯವರ ವಿಚಾರಗಳು ಹಾಗೂ ದರ್ಶನವನ್ನು ಪ್ರಸಾರ ಮಾಡಲು’’ ಸೆಮಿನಾರ್‌ಗಳನ್ನು, ಗೋಷ್ಠಿಗಳನ್ನು ಹಾಗೂ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು.

ಆ ಹಂತದಲ್ಲಿ ‘ಗೋಳ್ವಾಲ್ಕರ್ ಅವರ ವೈಭವೀಕರಣ’ ಎಷ್ಟರಮಟ್ಟಿಗೆ ನಡೆಯಿತೆಂದರೆ ಅವರ ಹೆಸರಿಗೆ ‘‘ಶ್ರೀ’’ಯನ್ನು ಸೇರಿಸಿ ಅವರನ್ನು ‘‘ಶ್ರೀ ಗುರೂಜಿ’’ಯಾಗಿ ಮಾಡಲಾಯಿತು.

ಆದರೆ 2018ರಲ್ಲಿ ದಿಲ್ಲಿಯಲ್ಲಿ ನಡೆದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ರ ‘ಭಾರತದ ಭವಿಷ್ಯ’ ಎಂಬ ಶೀರ್ಷಿಕೆಯ ಮೂರು ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ‘ಹಲವು ವಿಷಯಗಳ’ ಕುರಿತಾದ ಸಂಘಪರಿವಾರದ ನಿಲುವನ್ನು ಸ್ಪಷ್ಟಪಡಿಸಿ ಅದರ ಸಿದ್ಧಾಂತ ಹಾಗೂ ಕಾರ್ಯ ವಿಧಾನದ ಬಗ್ಗೆ ಇರುವ ತಪ್ಪು ತಿಳಿವಳಿಕೆಯನ್ನು ಸರಿಪಡಿಸುವ ಪ್ರಯತ್ನ ನಡೆಯಿತು. ಆ ಉಪನ್ಯಾಸ ಮಾಲಿಕೆಯಲ್ಲಿ ಇಂಗ್ಲಿಷ್ ದೈನಿಕವೊಂದರ ಬಾತ್ಮೀದಾರನೊಬ್ಬ, ಭಾಗವತ್‌ರವರು ಮೊದಲ ಎರಡು ದಿನಗಳಲ್ಲಿ 45 ಬಾರಿ ಹೆಡ್ಗೆವಾರ್‌ರಹೆಸರನ್ನು ಉಲ್ಲೇಖಿಸಿ, ಗೋಳ್ವಾಲ್ಕರ್‌ರ ಹೆಸರನ್ನು ಕೇವಲ ಒಂದು ಬಾರಿ ಉಲ್ಲೇಖಿಸಿದರೆಂದು ವರದಿ ಮಾಡಿದ್ದ. ಭಾಗವತ್ ತನ್ನ ಉಪನ್ಯಾಸದಲ್ಲಿ ಮೊದಲ ಎರಡು ದಿನಗಳಲ್ಲಿ 32 ಮಂದಿ ಬೇರೆ ಬೇರೆ ನಾಯಕರ ಹೆಸರುಗಳನ್ನು ಉಲ್ಲೇಖಿಸಿ ಸಂಘವು ಹೇಗೆ ವಿಭಿನ್ನ ಮೂಲಗಳಿಂದ ಅತ್ಯುತ್ತಮವಾದುದನ್ನು ಆಯ್ದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು. ಅವರು ‘‘ಮಹಾತ್ಮಾ ಗಾಂಧಿ, ಬಿ. ಆರ್. ಅಂಬೇಡ್ಕರ್, ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ರವೀಂದ್ರನಾಥ್ ಟಾಗೋರ್, ಸುಭಾಶ್ಚಂದ್ರ ಬೋಸ್, ಸಾವರ್ಕರ್, ಎಂ.ಎನ್.ರಾವ್, ಎಎಮ್‌ಯುನ ಸ್ಥಾಪಕ ಸರ್ ಸೈಯದ್ ಅಹ್ಮದ್ ಖಾನ್ ಮತ್ತು ಬುದ್ಧ, ಝರತೂಷ್ಟ್ರ, ರಾಮಕೃಷ್ಣ ಪರಮಹಂಸ, ದಯಾನಂದ ಸರಸ್ವತಿ, ವಿವೇಕಾನಂದ, ಗುರುನಾನಕ್ ಮತ್ತು ಶಿವಾಜಿಯ ಹೆಸರನ್ನು ಉಲ್ಲೇಖಿಸಿದರು. ಆದರೂ ಅವರ ಭಾಷಣಗಳಲ್ಲಿ ಗೋಳ್ವಾಲ್ಕರ್ ಹೆಸರು ಗೈರು ಹಾಜರಾಗಿತ್ತು. ಗೋಳ್ವಾಲ್ಕರ್ ಹೆಸರನ್ನು ಸಾರ್ವಜನಿಕವಾಗಿ ಉಲ್ಲೇಖಿಸಿದ ಬಗ್ಗೆ ಭಾಗವತ್‌ರಿಗಷ್ಟೇ ಅಲ್ಲ, ಸಂಘಪರಿವಾರದ ಇತರ ಎಲ್ಲ ನಾಯಕರಿಗೂ ‘ಸೆಕೆಂಡ್ ಥಾಟ್ಸ್’ಗಳಿದ್ದವು ಎನ್ನುವುದು ಇದರಿಂದ ಸ್ಪಷ್ಟವಾಯಿತು. ಮೂರನೆಯ ದಿನದ ಕಾರ್ಯಕ್ರಮದಲ್ಲಿ ಇದು ಅಂತಿಮ ರೂಪ ಪಡೆಯಿತು; ಪ್ರಶ್ನೋತ್ತರ ಗೋಷ್ಠಿಯಲ್ಲಿ ಆರೆಸ್ಸೆಸ್, ಗೋಳ್ವಾಲ್ಕರ್‌ರವರ ವಿವಾದಾಸ್ಪದ ಪುಸ್ತಕವಾಗಿರುವ ‘ಬಂಚ್ ಆಫ್ ಥಾಟ್ಸ್’ನ ಶುಚೀಕೃತ ಆವೃತ್ತಿಯನ್ನು ಜನರ ಮುಂದಿಡಲು ಬಯಸುತ್ತದೆ ಎಂಬುದನ್ನು ಹೇಳಲಾಯಿತು. ಯಾಕೆಂದರೆ ಈ ಪುಸ್ತಕವು ಮುಸ್ಲಿಮರನ್ನು, ಕ್ರಿಶ್ಚಿಯನ್ನರನ್ನು ಹಾಗೂ ಕಮ್ಯುನಿಸ್ಟರನ್ನು ‘‘ಆಂತರಿಕ ಬೆದರಿಕೆಗಳು’’ ಎಂದು ಕರೆಯುತ್ತದೆ. ಅದೇ ರೀತಿಯಾಗಿ ಪುಸ್ತಕವು ಭಾರತೀಯ ಸಂವಿಧಾನ ಹಾಗೂ ಸ್ವಾತಂತ್ರ ಹೋರಾಟ ಮತ್ತು ಅದರಲ್ಲಿ ಭಾಗವಹಿಸಿ ಮುಖ್ಯ ಪಾತ್ರ ವಹಿಸಿದವರ ಬಗ್ಗೆ ಕೂಡ ವಿವಾದಾಸ್ಪದವಾದ ಹೇಳಿಕೆಗಳನ್ನೊಳಗೊಂಡಿದೆ. ಒಂದು ‘ನ್ಯೂ-ಲುಕ್’ ಆರೆಸ್ಸೆಸ್‌ಗೆ ಗೋಳ್ವಾಲ್ಕರ್ ನೀಡಿರುವ ಮಾನವವಿರೋಧಿ ಪರಿಹಾರಗಳು, ಅದು ದುಬಾರಿ ಬೆಲೆ ತೆರಬೇಕಾಗುವಂತೆ ಮಾಡಬಹುದೆಂದು ಭಾಗವತ್‌ರವರಿಗೆ ಚೆನ್ನಾಗಿ ಗೊತ್ತಿತ್ತು.

ಪುಸ್ತಕದ ಹೊಸ ಆವೃತ್ತಿಯೊಂದನ್ನು ಯಾಕೆ ತರಬೇಕಾಗಿದೆ ಎಂಬುದಕ್ಕೆ ಭಾಗವತ್ ನೀಡಿರುವ ವಿವರಣೆ ಸಾಕಷ್ಟು ಒಪ್ಪಿಗೆಯಾಗುವಂತಿಲ್ಲ; ಬಂಚ್ ಆಫ್ ಥಾಟ್ಸ್‌ನ ಮಟ್ಟಿಗೆ ಹೇಳುವುದಾದರೆ, ಅಲ್ಲಿರುವ ಪ್ರತಿಯೊಂದು ಹೇಳಿಕೆಯೂ ಕಾಲ ಮತ್ತು ಸನ್ನಿವೇಶಗಳ ಒಂದು ಸಂದರ್ಭವನ್ನು ಹೊಂದಿದೆ. ಈಗ ಬಹುಕಾಲ ಉಳಿಯುವ ಅವರ ಚಿಂತನೆಗಳು ಒಂದು ಜನಪ್ರಿಯ ಆವೃತ್ತಿಯಲ್ಲಿ ಪ್ರಕಟವಾಗಿವೆ. ಈ ಆವೃತ್ತಿಯಲ್ಲಿ ಒಂದು ತಾತ್ಕಾಲಿಕ ಸಂದರ್ಭವನ್ನು ಹೊಂದಿರುವ ಎಲ್ಲ ಹೇಳಿಕೆಗಳನ್ನು ನಾವು ಕಿತ್ತು ಹಾಕಿದ್ದೇವೆ ಮತ್ತು ಶಾಶ್ವತವಾಗಿ ಉಳಿಯುವಂತಹ ಚಿಂತನೆಗಳನ್ನು, ವಿಚಾರಗಳನ್ನು ಉಳಿಸಿಕೊಂಡಿದ್ದೇವೆ. ಇಲ್ಲಿ (‘ಮುಸ್ಲಿಮ್ ಓರ್ವ ಶತ್ರು’) ಎಂಬ ಹೇಳಿಕೆ ನಿಮಗೆ ಕಾಣಿಸುವುದಿಲ್ಲ.

ಹೀಗೆ, ಸಂಘವು ಸಾರ್ವಜನಿಕವಾಗಿ ಯಾಕೆ ಗೋಳ್ವಾಲ್ಕರ್ ಅವರಿಂದ ದೂರ ಉಳಿಯಬಯಸಿತು ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ.

ಅವರ ಬದುಕಿನ ಪಥದ ಮೇಲೆ ಕಣ್ಣು ಹಾಯಿಸಿದರೆ ಇದು ಸ್ಪಷ್ಟವಾಗುತ್ತದೆ.

ಹಲವು ರೀತಿಗಳಲ್ಲಿ ವಿಶಿಷ್ಟವಾದ ಜಾಗತಿಕ ಇತಿಹಾಸದ ಒಂದು ಯುಗದಲ್ಲಿ ಗೋಳ್ವಾಲ್ಕರ್ ಅವರ ಜೀವನಪಥ ಸಾಗಿ ಬಂದಿತ್ತು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅದು ನಾಝಿವಾದ ಮತ್ತು ಫ್ಯಾಶಿಸಂ ಪಶ್ಚಿಮ ಯೂರೋಪನ್ನು ಆವರಿಸಲು ಸಿದ್ಧವಾಗಿದ್ದ, ತೃತೀಯ ಜಗತ್ತಿನ ಹಲವು ದೇಶಗಳಲ್ಲಿ ರಾಷ್ಟ್ರೀಯ ವಿಮುಕ್ತಿ ಹೋರಾಟಗಳು ಅಂತಿಮ ಘಟ್ಟವನ್ನು ತಲುಪುತ್ತಿದ್ದ ಅವಧಿ. ಅಲ್ಲದೆ ಅದು ಊಳಿಗಮಾನ್ಯ ವ್ಯವಸ್ಥೆಯ ಹಳೆಯ ಜಗತ್ತು ಮತ್ತು ವಸಾಹತುಶಾಹಿ ಪ್ರಭುತ್ವಗಳು ಕುಸಿಯುತ್ತಿದ್ದ ಹಾಗೂ ಒಂದು ಹೊಸ ಜಗತ್ತು ಮೂಡಿ ಬರುತ್ತಿದ್ದ ಕಾಲ. ಆ ಕಾಲದಲ್ಲಿ ಗೋಳ್ವಾಲ್ಕರ್ ‘ಹಿಂದೂ ಧರ್ಮದ ವೈಭವಯುತವಾದ ಪರಂಪರೆಗಳನ್ನು’ ಆಧರಿಸಿದ ಒಂದು ಹಿಂದೂ ರಾಷ್ಟ್ರ ನಿರ್ಮಿಸಲು ಹಾತೊರೆದರು. ಅದು ಬ್ರಿಟಿಷ್ ವಸಾಹತುಶಾಹಿಗಿಂತ ಮುಸ್ಲಿಮರೇ ಹೆಚ್ಚು ದೊಡ್ಡ ಎದುರಾಳಿ ಎಂದು ಪರಿಗಣಿಸುವ ಹಿಂದೂ ರಾಷ್ಟ್ರವಾಗಿತ್ತು. ಅಲ್ಲದೆ ಅದು ನಾಝಿವಾದ ಹಾಗೂ ಫ್ಯಾಶಿಸಂ ‘ಸಾಮಾಜಿಕ ಇಂಜಿನಿಯರಿಂಗ್’ನಲ್ಲಿ ನಡೆಸಿದ ಪ್ರಯೋಗಗಳಿಂದ ಸ್ಫೂರ್ತಿ ಪಡೆಯಲು ಪ್ರಯತ್ನಿಸಿತು. ಆದರೆ ಅವರು ಇತಿಹಾಸದ ನಡಿಗೆಯೊಂದಿಗೆ ಹೆಜ್ಜೆ ಹಾಕಲು ಸಂಪೂರ್ಣವಾಗಿ ವಿಫಲರಾದರು. ‘ವಿ ಆರ್ ಅವರ್ ನೇಷನ್‌ವುಡ್ ಡಿಫೈಂಡ್’ (1938) ಎಂಬ ಒಂದು ಪುಸ್ತಿಕೆಯಲ್ಲಿ ಹಿಂದುತ್ವದ ಬಗ್ಗೆ ಗೋಳ್ವಾಲ್ಕರ್‌ರ ಮೊದಲ ಸೈದ್ಧಾಂತಿಕ ವಿಚಾರಗಳು ಪ್ರಕಟವಾದವು. ಅದು ಹಿಟ್ಲರ್ ಮಾಡಿದ ಯಹೂದಿಗಳ ‘ಜನಾಂಗೀಯ ಶುಚಿಗೊಳಿಸುವಿಕೆ’(ಯತ್ನಿಕ್ ಕ್ಲೆನ್ಸಿಂಗ್)ಯನ್ನು ಎಷ್ಟೊಂದು ನೇರವಾಗಿ ಸಮರ್ಥಿಸುತ್ತಿತ್ತೆಂದರೆ ಆ ಬಳಿಕ ಬಂದ ಆರೆಸ್ಸೆಸ್ ನಾಯಕರು ಆ ಪುಸ್ತಿಕೆಯನ್ನು ಗೋಳ್ವಾಲ್ಕರ್ ಬರೆಯಲೇ ಇಲ್ಲ ಎಂಬ ಭಾವನೆಯನ್ನು ಸೃಷ್ಟಿಸಲು ಶತಾಯ ಗತಾಯ ಪ್ರಯತ್ನಿಸಿದರು. ಅದು ಸಾವರ್ಕರ್ ಮಾಡಿದ ‘ರಾಷ್ಟ್ರ ಮೀಮಾಂಸಾ’ದ ಕೇವಲ ಒಂದು ಅನುವಾದ ಎಂದು ಬಿಂಬಿಸಲು ಅವರು ಬಹಳ ಪ್ರಯತ್ನ ಪಟ್ಟರು.

ಆದರೆ, 1939ರ ಮಾರ್ಚ್ 22ರಂದು ‘ವಿ ಆರ್ ಅವರ್ ನೇಷನ್‌ವುಡ್ ಡಿಫೈಂಡ್’ಗೆ ಬರೆದ ಪೀಠಿಕೆಯಲ್ಲಿ ಸ್ವತಃ ಗೋಳ್ವಾಲ್ಕರ್ ಅವರೇ ‘‘ರಾಷ್ಟ್ರೀಯ ಮೀಮಾಂಸಾ ನನಗೆ ಸ್ಫೂರ್ತಿ ಮತ್ತು ನೆರವು ನೀಡಿದ ಮುಖ್ಯ ಮೂಲಗಳಲ್ಲಿ ಒಂದು’’ ಎಂದು ವಿವರಿಸಿದ್ದಾರೆ. 1950ರ ದಶಕದಲ್ಲಿ ಆರೆಸ್ಸೆಸ್ ಕುರಿತು ಆಳವಾದ ಅಧ್ಯಯನ ನಡೆಸಿದ್ದ ಅಮೆರಿಕನ್ ವಿದ್ವಾಂಸ ಜೀನ್ ಎ ಕುರನ್ ಗೋಳ್ವಾಲ್ಕರ್ ಅವರು 77 ಪುಟಗಳ ಈ ಪುಸ್ತಿಕೆಯನ್ನು 1938ರಲ್ಲಿ, ಅವರನ್ನು ಹೆಡ್ಗೆವಾರ್ ಆರೆಸ್ಸೆಸ್‌ನ ಮಹಾ ಕಾರ್ಯದರ್ಶಿಯಾಗಿ ನೇಮಿಸಿದಾಗ ಬರೆದಿದ್ದರು ಮತ್ತು ಅದನ್ನು ಆರೆಸ್ಸೆಸ್‌ನ ‘ಬೈಬಲ್’ ಎಂದು ಕರೆದರು ಎನ್ನುವುದಾಗಿ ದೃಢೀಕರಿಸಿದ್ದಾರೆ.

ಗೋಳ್ವಾಲ್ಕರ್ ತನ್ನ ಕಾಲಕ್ಕಿಂತ ಬಹಳ ಹಿಂದೆ ಇದ್ದರು ಎನ್ನುವುದನ್ನು ಸಾಬೀತುಪಡಿಸುವ ಮೂರನೆಯ ಒಂದು ರಂಗವೆಂದರೆ ಅವರಿಗೆ ಮನುಸ್ಮತಿಯ ಕಾನೂನುಗಳ ಬಗ್ಗೆ ಇದ್ದ ಪ್ರೀತಿ. ಹೊಸದಾಗಿ ಸ್ವತಂತ್ರವಾದ ಭಾರತದ ನಾಯಕರು, ವೈಯಕ್ತಿಕ ಹಕ್ಕುಗಳು ಹಾಗೂ ಮಾನವ ಹಕ್ಕುಗಳನ್ನು ಧರ್ಮಶಾಸ್ತ್ರಗಳ ನೆಲೆಯಲ್ಲಿ ನಿರಾಕರಿಸಲಾಗಿದ್ದ ಮಿಲಿಯಗಟ್ಟಲೆ ಜನರಿಗೆ ಸಮಾನತೆಯನ್ನು ನೀಡುವ ಸಂವಿಧಾನ ಒಂದಕ್ಕಾಗಿ ಹೋರಾಡುತ್ತಿದ್ದಾಗ ಗೋಳ್ವಾಲ್ಕರ್ ಮನುಸ್ಮತಿ ಸ್ವತಂತ್ರ ಭಾರತದ ಸಂವಿಧಾನವೆಂದು ಪ್ರತಿಪಾದಿಸಿದ್ದರು. 1949ರ ನವೆಂಬರ್ 30ರ ಸಂಚಿಕೆಯಲ್ಲಿ ಆರೆಸ್ಸೆಸ್‌ನ ಮುಖವಾಣಿ ಪತ್ರಿಕೆ ‘ಆರ್ಗನೈಸರ್’ ಮನುಸ್ಮತಿಯನ್ನು ಹೊಗಳಿ ಬರೆಯುತ್ತಾ, ‘‘ಆದರೆ ನಮ್ಮ ಸಾಂವಿಧಾನಿಕ ಪಂಡಿತರಿಗೆ ಇದೆಲ್ಲ ಏನೂ ಅಲ್ಲ’’ ಎಂದು ಟೀಕಿಸಿತು.

1940ರ ದಶಕದ ಕೊನೆಯಲ್ಲಿ ಅಂಬೇಡ್ಕರ್ ಮತ್ತು ನೆಹರೂ ಅವರ ನೇತೃತ್ವದಲ್ಲಿ ಹಿಂದೂ ಮಹಿಳೆಯರಿಗೆ ಹಿಂದೂ ಕೋಡ್ ಬಿಲ್ ಮೂಲಕ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿ ಹಕ್ಕುಗಳನ್ನು ನೀಡುವ ಪ್ರಯತ್ನಗಳು ನಡೆದವು. ಆಗ ಗೋಳ್ವಾಲ್ಕರ್ ಮತ್ತು ಅವರ ಸಹವರ್ತಿಗಳು ಹಿಂದೂ ಮಹಿಳೆಯರ ಈ ಐತಿಹಾಸಿಕ ಸಬಲೀಕರಣವನ್ನು ವಿರೋಧಿಸಿ ಒಂದು ಚಳವಳಿ ಆರಂಭಿಸಿದ್ದರು. ಯಾಕೆಂದರೆ ಅವರ ಪ್ರಕಾರ ಇಂತಹ ಒಂದು ಕೋಡ್ ಬಿಲ್ ಹಿಂದೂ ಸಂಪ್ರದಾಯಗಳಿಗೆ ಹಾಗೂ ಸಂಸ್ಕೃತಿಗೆ ವಿರೋಧವಾಗಿದೆ.

ಆಧುನಿಕ ಭಾರತ ನಿರ್ಮಾಣಕ್ಕೆ ಒಂದು ತಡೆಯಾಗಿ ಕಾರ್ಯನಿರ್ವಹಿಸಿದ ಗೋಳ್ವಾಲ್ಕರ್‌ವಾದಿ ಪ್ರಾಜೆಕ್ಟ್ ನ ಸೈದ್ಧಾಂತಿಕ ಮಿತಿಗಳನ್ನು ಹೀಗೆ ವಿವರಿಸುತ್ತಲೇ ಹೋಗಬಹುದು. ಧರ್ಮದ ಆಧಾರದಲ್ಲಿ ಭಾರತೀಯರ ಒಗ್ಗಟ್ಟಿನಲ್ಲಿ ಒಂದು ಬಿರುಕು ಮೂಡಿಸಲು ಅವರು ಪ್ರಯತ್ನಿಸಿದ ರೀತಿ, ಪಶ್ಚಿಮ ಯುರೋಪಿನಲ್ಲಿ ನಡೆದ ಜನಾಂಗೀಯ ಸ್ವಚ್ಛಗೊಳಿಸುವಿಕೆಯ ಪ್ರಯತ್ನಗಳನ್ನು ಅವರು ಪ್ರಶಂಸಿಸಿದ ರೀತಿ ಮತ್ತು ತನ್ನ ಬದುಕಿನ ಕೊನೆಯವರೆಗೂ ಅವರು ಮನುಸ್ಮತಿಯನ್ನು ವೈಭವೀಕರಿಸಿದ ರೀತಿ ಅವರ ಪ್ರಾಜೆಕ್ಟ್, ಅವರ ಯೋಜನೆ ಸಾಮಾಜಿಕ ಸಾಮರಸ್ಯಕ್ಕೆ, ಮೂಲತಃ ವಿರೋಧಿಯಾಗಿತ್ತು ಎನ್ನುವುದನ್ನು ತೋರಿಸಿಕೊಡುತ್ತವೆ.

ಒಂದು ಮತೀಯವಾದಿ ಕಾರ್ಯಸೂಚಿಯನ್ನು ಪ್ರತಿಪಾದಿಸುತ್ತಿದ್ದರೂ, ಭಾರತವನ್ನು ಪುನರ್ ರೂಪಿಸುವ ಗೋಳ್ವಾಲ್ಕರ್‌ವಾದಿ ಯೋಜನೆ ನಿಧಾನವಾಗಿಯಾದರೂ ಮುಂದುವರಿಯುತ್ತಾ ಹೋಯಿತು ಎನ್ನುವುದು ಬೇರೆ ವಿಷಯ.

ಅವರ ದೂರದರ್ಶಿತ್ವದ ಬಗ್ಗೆ ಆರೆಸ್ಸೆಸ್ ಮರುಚಿಂತನೆ ಮಾಡಬೇಕಾಯಿತು. ಆದರೂ ಅವರು ಆ ದರ್ಶನದ ಬಗ್ಗೆ ತಮ್ಮ ನಿಷ್ಠೆಯನ್ನು 2002ರಲ್ಲಿ ಗುಜರಾತ್‌ನಲ್ಲಿ ಯಶಸ್ವಿ ಪ್ರಯೋಗ ನಡೆಸುವ ಮೂಲಕ ತೋರಿದ್ದಾರೆ ಅಥವಾ ಈಗ ಸಿಎಎ-ಎನ್‌ಪಿಆರ್-ಎನ್‌ಆರ್‌ಸಿ ತ್ರಿವಳಿಯ ಮೂಲಕ ಗೋಳ್ವಾಲ್ಕರ್ ಹಾಗೂ ಆರೆಸ್ಸೆಸ್ ವಿಜನ್ ಅನ್ನು ಅನುಷ್ಠಾನಿಸುವ ಮೂಲಕ ವ್ಯಕ್ತಪಡಿಸಿದ್ದಾರೆ. ಅವರಿಗಿರುವ ಏಕೈಕ ಸಮಸ್ಯೆಯೆಂದರೆ ಆ ವಿಜನ್ ಅನ್ನು ಹೇಗೆ ವ್ಯಕ್ತಪಡಿಸುವುದು? ಹೇಗೆ ವಿಶ್ವದ ಮುಂದೆ ಪ್ರಚುರಪಡಿಸುವುದು ಎನ್ನುವುದೇ ಆಗಿದೆ.

ಈ ಸಮಸ್ಯೆಗೆ ಅತ್ಯುತ್ತಮ ಪರಿಹಾರ, ಗೋಳ್ವಾಲ್ಕರ್ ಅವರ ಯೋಜನೆಯನ್ನು ಅನುಷ್ಠಾನಿಸಲು ಇರುವ ಅತ್ಯುತ್ತಮ ತಂತ್ರವೆಂದರೆ ಸಾರ್ವಜನಿಕವಾಗಿ ಅವರನ್ನು ನೆನಪಿನಿಂದ ಅಳಿಸುವುದು ಮತ್ತು ಪ್ರಾಯೋಗಿಕವಾಗಿ ಅವರ ಸಿದ್ಧಾಂತಗಳ ಸಾರವನ್ನು ಕಾರ್ಯಗತಗೊಳಿಸುವುದೇ ಇರಬಹುದು.

ಕೃಪೆ: countercurrents

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)