varthabharthi

ನಿಮ್ಮ ಅಂಕಣ

‘ಕೊರೋನ’ವೆಂಬ ಸಮೂಹ ಸನ್ನಿ!

ವಾರ್ತಾ ಭಾರತಿ : 13 Mar, 2020
-ಅನಿಲ್ ಪೂಜಾರಿ, ಸಂಜಯ ನಗರ, ಬೆಂಗಳೂರು

ಮಾನ್ಯರೇ,

ಕೊರೋನ ವೈರಸ್‌ನಿಂದ ಕಲಬುರಗಿಯಲ್ಲಿ ಕೇವಲ ಒಬ್ಬ ವ್ಯಕ್ತಿ ತೀರಿಹೋಗಿದ್ದರೆ ಅದೇ ಸಮಯದಲ್ಲಿ ಇತರ ರೋಗಗಳಿಂದ ಅದೇ ಕಲಬುರಗಿಯಲ್ಲಿ ಎಷ್ಟು ಜನ ಮರಣಹೊಂದಿದ್ದಾರೆ ಎಂಬುದನ್ನೂ ಅಲ್ಲಿಯ ಜಿಲ್ಲಾಧಿಕಾರಿಗಳು ಬಹಿರಂಗ ಪಡಿಸಲಿ! ಕೋವಿಡ್‌ಗಿಂತ ಹೆಚ್ಚು ಮಾರಕ ರೋಗಗಳು ಹಿಂದುಳಿದ ಕಲಬುರಗಿ ಜಿಲ್ಲೆಯನ್ನು ಬಾಧಿಸುತ್ತಿದ್ದರೂ ಕೋವಿಡ್ ಹೆಸರಲ್ಲಿ ಇಷ್ಟೊಂದು ‘‘ಭಯೋತ್ಪಾದನೆ’’ ಬೇಕೇ? ಕರ್ನಾಟಕದಲ್ಲಿ ದಿನಕ್ಕೆ ಕನಿಷ್ಠ ಮೂರು ಸಾವಿರ ಜನರಾದರೂ ಸಾಯುತ್ತಾರೆ. ಇವರೆಲ್ಲರ ರೋಗಗಳ ಹಿಸ್ಟರಿ ಹಿಡಿದುಕೊಂಡು ಆರೋಗ್ಯ ಸಚಿವರು ವಿಧಾನಸಭೆಯಲ್ಲಿ ಚರ್ಚಿಸಲಿ! ಅತ್ಯಂತ ನಾಚಿಕೆಗೇಡಿನ ವಿಷಯವೆಂದರೆ ಈ 3,000 ಮರಣದಲ್ಲಿ ಕನಿಷ್ಠ 10 ಮಕ್ಕಳಾದರೂ ಕುಪೋಷಣೆ ಅರ್ಥಾತ್ ಅಪೌಷ್ಟಿಕತೆಯಿಂದ ಸತ್ತಿರುವುದು ಗ್ಯಾರಂಟಿ. ಕೊರೋನಕ್ಕಿಂತ ಕುಪೋಷಣೆ ಭಾರತಕ್ಕೆ ಹೆಚ್ಚು ಅಪಾಯಕಾರಿ ಮತ್ತು ಹೆಚ್ಚು ನಾಚಿಕೆಗೇಡಿನ ವಿಷಯ.

ಬೆಂಗಳೂರಲ್ಲಿ ಕೊರೋನಗೆ ಪ್ರತ್ಯೇಕ ಆಸ್ಪತ್ರೆ ನಿರ್ಮಿಸಲಾಗುತ್ತದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಆದರೆ ಡೆಂಗ್, ಹಕ್ಕಿಜ್ವರ, ಹಂದಿಜ್ವರ, ನಿಫಾ ಇವುಗಳು ಕೊರೋನಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಕಂಡು ಬಂದಿದೆ. ನಿನ್ನೆಯೇ ಬೆಂಗಳೂರಲ್ಲಿ ಡೆಂಗ್‌ನಿಂದ ಇಬ್ಬರು, ಹಕ್ಕಿಜ್ವರದಿಂದ ಒಬ್ಬ ತೀರಿಹೋಗಿದ್ದಾರೆ. ಹಾಗಾದರೆ ಕೊರೋನಕ್ಕಿಂತ ಬಹಳ ಹೆಚ್ಚು ಅಪಾಯಕಾರಿಯಾದ ಈ ಸಾಂಕ್ರಾಮಿಕ ರೋಗಗಳಿಗೂ ಪ್ರತ್ಯೇಕ ಆಸ್ಪತ್ರೆ ಬೇಡವೇ? ಕೊರೋನದ ಹೆಸರಲ್ಲಿ ಮುಂಜಾಗ್ರತೆಗಿಂತ ಭಯೋತ್ಪಾದನೆಯೇ ಹೆಚ್ಚಾಗಿದೆ. ಕೊರೋನದ ಕಲ್ಪಿತ ಭೀತಿ ಕೇವಲ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಸಮೂಹ ಸನ್ನಿಯಾಗಿ ಬದಲಾಗಿದೆ. ಇದರ ಹಿಂದೆ ಯಾವ ಅಂತರ್‌ರಾಷ್ಟ್ರೀಯ ವಾಣಿಜ್ಯ ಲಾಬಿಯ ಕೈವಾಡವಿದೆ ಎಂಬುದು ಇನ್ನಷ್ಟೇ ಬಯಲಾಗಬೇಕಿದೆ! ಚೀನಾದ ವಾಣಿಜ್ಯೋದ್ಯಮದ ಕಬಂಧಬಾಹು ವಿಶ್ವದೆಲ್ಲಡೆ ಚಾಚಿ ಅದು ಪಾಶ್ಚಾತ್ಯ ರಾಷ್ಟ್ರ ಮತ್ತು ಅಮೆರಿಕದಲ್ಲಿಯೂ ಸ್ಥಳೀಯ ಉದ್ಯಮಗಳ ಉಸಿರು ಕಟ್ಟಿಸುತ್ತಿದೆ. ಚೀನಾದ ಈ ವಾಣಿಜ್ಯೋದ್ಯಮದ ಕಬಂಧ ಬಾಹುಗಳನ್ನು ಕತ್ತರಿಸಲು ಪಾಶ್ಚಾತ್ಯ ದೇಶಗಳ ಹುನ್ನಾರದ ಭಾಗವೇ ಈ ಕೊರೋನ ಸಮೂಹ ಸನ್ನಿ ಮತ್ತು ಸುದ್ದಿ-ಭಯೋತ್ಪಾದನೆ ಆಗಿರಬಹುದೇ? 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)