varthabharthi

ನಿಮ್ಮ ಅಂಕಣ

ರಾಷ್ಟ್ರೀಯ ಶಿಕ್ಷಣ ನೀತಿ 2019ರ ಒಳಗುಟ್ಟೇನು?

ವಾರ್ತಾ ಭಾರತಿ : 13 Mar, 2020
ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

ಜಾಗತೀಕರಣವು ಭಾರತದ ಆರ್ಥಿಕತೆ ಮತ್ತು ಜನಜೀವನದಲ್ಲಿ ತಂದ ಬದಲಾವಣೆಗಳು ಹಿಂದಿರುಗಿಸಲಾಗದ ಬದಲಾವಣೆಗಳೆಂದು ಆಗಿನ ಅರ್ಥಮಂತ್ರಿ-ಪ್ರಧಾನಿ ಮತ್ತೆ ಮತ್ತೆ ಹೇಳುತ್ತಿದ್ದುದು ಹಿಂದುತ್ವದ ರಾಜಕೀಯದ ಬಲದಿಂದ ಅಧಿಕಾರಕ್ಕೆ ಬಂದ, ತನ್ನದೇ ಆದ ಆರ್ಥಿಕ ನೀತಿಗಳಿಲ್ಲದ, ಸಂಘಪರಿವಾರ ಕೃಪಾಪೋಷಿತ ಸರಕಾರದ ಅನುಭವಕ್ಕೂ ಬಹುಬೇಗನೆ ಬಂದಿತ್ತು. ಇಂತಹ ಸನ್ನಿವೇಶದಲ್ಲಿ ತನ್ನ ಆದರ್ಶ ಸನಾತನ ಸಂಸ್ಕೃತಿಯ ಲೋಕದೃಷ್ಟಿಯನ್ನು ಭಾರತದ ಜನಜೀವನದಲ್ಲಿ ನೆಲೆಗೊಳಿಸಲು ಸಂಘಪರಿವಾರಕ್ಕಿದ್ದ ಒಂದೇ ದಾರಿಯೆಂದರೆ ಜಾಗತಿಕ ಹಣಕಾಸು ಬಂಡವಾಳದ ಜೊತೆ, ಅಂದರೆ ಭಾರತದಲ್ಲಿನ ಜಾಗತಿಕ ಕಾರ್ಪೊರೇಟ್ ಉದ್ಯಮಗಳೊಂದಿಗೆ ಕೈಜೋಡಿಸಿ ಅವುಗಳ ವಾಣಿಜ್ಯ ಕಾರ್ಯಸೂಚಿಯೊಂದಿಗೆ ತನ್ನ ಹಿಂದುತ್ವದ ಕಾರ್ಯಸೂಚಿಯನ್ನು ಬೆಸೆಯುವುದು. 2019ರ ರಾಷ್ಟ್ರೀಯ ಶಿಕ್ಷಣ ನೀತಿ ಇಂತಹ ಬೆಸೆಯುವಿಕೆಯನ್ನು ಸಾಧ್ಯಮಾಡುವ ಆಶಯವುಳ್ಳ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು.


ಸಾಂಪ್ರದಾಯಿಕ ಅರ್ಥದಲ್ಲಿ ಶಿಕ್ಷಣಕ್ಕೆ ಎರಡು ಉದ್ದೇಶಗಳಿವೆ. ಮೊದಲನೆಯದು: ಹಿಂದಿನ ತಲೆಮಾರಿನ ಹಿರಿಯರ ಅನುಭವ, ತಿಳುವಳಿಕೆ, ಜ್ಞಾನ, ಕೌಶಲ ಮತ್ತು ಮಾಹಿತಿಗಳನ್ನು ಸಾಮಾಜಿಕವಾಗಿ ಸೂಕ್ತವಾದ ವಿಧಾನಗಳಲ್ಲಿ ಕಿರಿಯರಿಗೆ ದಾಟಿಸುವುದು. ಎರಡು: ಆಳುವ ವರ್ಗದ ಹಿತಾಸಕ್ತಿಗಳು, ನ್ಯಾಯ-ನೆಮ್ಮದಿಗಳ ಲೋಕದೃಷ್ಟಿಗೆ ಜನರು ಕಿರಿಯ ವಯಸ್ಸಿನಿಂದಲೇ ಹೊಂದಿಕೊಳ್ಳುವಂತೆ ಮಾಡುವುದು. ಸ್ವಾತಂತ್ರ್ಯಾನಂತರದ ಮೊದಲ ನಾಲ್ಕು ದಶಕಗಳವರೆಗೂ ಶಿಕ್ಷಣವನ್ನು ಒದಗಿಸುವುದು ಸರಕಾರದ ಜವಾಬ್ದಾರಿಯಾಗಿತ್ತು. ಉಚಿತವಾಗಿ ಅಥವಾ ನಿಗದಿತ ದರದಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು ಒದಗಿಸುವ ಸರಕಾರಿ ಶಾಲಾ-ಕಾಲೇಜುಗಳ ಜೊತೆಗೆ ಖಾಸಗಿ ಅನುದಾನಿತ ವಿದ್ಯಾಸಂಸ್ಥೆಗಳು ಸಾಮಾಜಿಕ ಸೇವೆಯ ಹೆಸರಿನಲ್ಲಿ ತಮ್ಮದೇ ಆದ ಶುಲ್ಕಗಳನ್ನು ಪಡೆದು ಶಿಕ್ಷಣವನ್ನು ಒದಗಿಸುತ್ತಿದ್ದವು. ಸ್ವಾಯತ್ತತೆಯನ್ನು ಹೊಂದಿದ ವಿಶ್ವವಿದ್ಯಾನಿಲಯಗಳು ಸರಕಾರಿ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಮಾನ್ಯತೆಯನ್ನು ಕೊಡುವ ಅಧಿಕಾರವನ್ನು ಹೊಂದಿದ್ದವು. ಶಿಕ್ಷಣ ಆಗ ವಾಣಿಜ್ಯದಿಂದ ಹೊರತಾದ, ಅಂದರೆ ಲಾಭಕ್ಕಾಗಿ ಮಾಡಬಾರದ ಸೇವೆಯಾಗಿತ್ತು.

ಜಾಗತೀಕರಣಕ್ಕೊಳಪಟ್ಟ ಭಾರತವು 1995ರಲ್ಲಿ ‘ಗ್ಯಾಟ್ಸ್ ಒಪ್ಪಂದ’ಕ್ಕೆ ಸಹಿ ಹಾಕಿದಮೇಲೆ ಸರಕುಗಳ ಸಂಬಂಧದ ‘ಗ್ಯಾಟ್ಸ್‌ಒಪ್ಪಂದ’ದಂತೆ ಉನ್ನತ ಶಿಕ್ಷಣವೂ ಸಹ ಲಾಭಮಾಡಿಕೊಳ್ಳಬಹುದಾದ ವಾಣಿಜ್ಯಸೇವೆಯಾಯಿತು. ‘ಟ್ರಿಲಿಯನ್ ಡಾಲರ್ ಉದ್ಯಮ’ ಎಂಬ ಹೆಗ್ಗಳಿಕೆಯ ವಿದ್ಯೋದ್ಯಮವಾಯಿತು. ಸೆಮಿಸ್ಟರ್ ಪದ್ಧತಿ, ಪಠ್ಯಕ್ರಮದಲ್ಲಿ ಕಂಪ್ಯೂಟರ್ ಶಿಕ್ಷಣದ ಪ್ರವೇಶ, ಶಿಕ್ಷಕರ ಸ್ವಯಂ ಮೌಲ್ಯಾಂಕನ, ಶಿಕ್ಷಣ ಸಂಸ್ಥೆಗಳ ಗುಣಮಟ್ಟದ ನ್ಯಾಕ್ ಮೌಲ್ಯಾಂಕನಗಳು ವಿದ್ಯೋದ್ಯಮಕ್ಕೆ ಹೈಟೆಕ್ ಸ್ಪರ್ಶವನ್ನು ಕೊಟ್ಟವು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವು ಗ್ರಾಮೀಣ ಪ್ರದೇಶಗಳಲ್ಲಿ ಸರಕಾರದ ನಿಯಂತ್ರಣದಲ್ಲೇ ಉಳಿದಿದ್ದರೂ ನಗರ ಪ್ರದೇಶಗಳಲ್ಲಿ ವಿದ್ಯೋದ್ಯಮದ ಪ್ರಭಾವದಲ್ಲಿ ಸಾಕಷ್ಟು ವಾಣಿಜ್ಯೀಕರಣಗೊಂಡು ಅದರ ಒಂದು ಭಾಗವು ಅನಧಿಕೃತವಾಗಿ ಹಣಮಾಡಲೆಂದೇ ಹುಟ್ಟಿಕೊಂಡ ಖಾಸಗಿ ಸಂಸ್ಥೆಗಳ ಅಧೀನಕ್ಕೊಳಪಟ್ಟಿತು. ಶಿಕ್ಷಣಸಂಸ್ಥೆಗಳು ಖಾಸಗಿ ಶಾಲೆ ಮತ್ತು ಸರಕಾರಿ ಶಾಲೆಗಳೆಂಬ ವಿಭಜನೆಗೊಳಪಟ್ಟು ಎರಡರ ನಡುವೆ ಅಸಮಾನ ಸ್ಪರ್ಧೆ ಏರ್ಪಟ್ಟಿತು. ಸರಕಾರಿ ಶಾಲೆ ಬಡವರ ಶಾಲೆಯೆಂದೂ, ಖಾಸಗಿ ಶಾಲೆಯು ಉಳ್ಳವರ ಶಾಲೆಯೆಂದೂ ವರ್ಗದ ಪರಿಭಾಷೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಗುರುತಿಸುವಂತಾಯಿತು.

 ಕುಡಿಯುವ ನೀರು, ಸಿದ್ಧ ಆಹಾರ, ವೈದ್ಯ-ಔಷಧೋಪಚಾರ, ಆತಿಥ್ಯ ಮತ್ತು ಶಿಕ್ಷಣಗಳನ್ನು ಮಾರಬಾರದ, ವಿಕ್ರಯಿಸಲಾಗದ ವಸ್ತು ಮತ್ತು ಸೇವೆಗಳೆಂಬ ನೈತಿಕ ಕಟ್ಟುಪಾಡಿನ ಸನಾತನ ಹಿಂದೂ ಸಂಸ್ಕೃತಿಯನ್ನು ಭಾರತಕ್ಕೆ ಲಗತ್ತಾದ ರಾಷ್ಟ್ರೀಯ ಸಂಸ್ಕೃತಿಯೆಂದು ಪ್ರತಿಪಾದಿಸುವ ಸಂಘಪರಿವಾರವು ಅಧಿಕಾರಕ್ಕೆ ಬರುವ ಹೊತ್ತಿಗಾಗಲೇ ಉನ್ನತ ಶಿಕ್ಷಣವು ಜಾಗತಿಕ ಹಣಕಾಸು ಬಂಡವಾಳದ ಕೈಯಲ್ಲಿನ ಕಾರ್ಪೊರೇಟ್ ಉದ್ಯಮವಾಗಿ ಗಟ್ಟಿಗೊಂಡಿತ್ತು. ಕುಡಿಯುವ ನೀರು, ಸಿದ್ಧ ಆಹಾರ, ವೈದ್ಯ-ಔಷಧೋಪಚಾರ, ಆತಿಥ್ಯ ಮತ್ತು ಶಿಕ್ಷಣಗಳು ಅತ್ಯಧಿಕ ಲಾಭವನ್ನು ತಂದುಕೊಡುವ ವಾಣಿಜ್ಯವಸ್ತು-ಸೇವೆಗಳ ಉದ್ಯಮಗಳಾಗಿ ಭಾರತದ ಉದ್ದಗಲಗಳಲ್ಲಿ ನೆಲೆಗೊಂಡಿದ್ದವು. ಜಾಗತೀಕರಣವು ಭಾರತದ ಆರ್ಥಿಕತೆ ಮತ್ತು ಜನಜೀವನದಲ್ಲಿ ತಂದ ಬದಲಾವಣೆಗಳು ಹಿಂದಿರುಗಿಸಲಾಗದ ಬದಲಾವಣೆಗಳೆಂದು ಆಗಿನ ಅರ್ಥಮಂತ್ರಿ-ಪ್ರಧಾನಿ ಮತ್ತೆ ಮತ್ತೆ ಹೇಳುತ್ತಿದ್ದುದು ಹಿಂದುತ್ವದ ರಾಜಕೀಯದ ಬಲದಿಂದ ಅಧಿಕಾರಕ್ಕೆ ಬಂದ, ತನ್ನದೇ ಆದ ಆರ್ಥಿಕ ನೀತಿಗಳಿಲ್ಲದ, ಸಂಘಪರಿವಾರ ಕೃಪಾಪೋಷಿತ ಸರಕಾರದ ಅನುಭವಕ್ಕೂ ಬಹುಬೇಗನೆ ಬಂದಿತ್ತು. ಇಂತಹ ಸನ್ನಿವೇಶದಲ್ಲಿ ತನ್ನ ಆದರ್ಶ ಸನಾತನ ಸಂಸ್ಕೃತಿಯ ಲೋಕದೃಷ್ಟಿಯನ್ನು ಭಾರತದ ಜನಜೀವನದಲ್ಲಿ ನೆಲೆಗೊಳಿಸಲು ಸಂಘಪರಿವಾರಕ್ಕಿದ್ದ ಒಂದೇ ದಾರಿಯೆಂದರೆ ಜಾಗತಿಕ ಹಣಕಾಸು ಬಂಡವಾಳದ ಜೊತೆ, ಅಂದರೆ ಭಾರತದಲ್ಲಿನ ಜಾಗತಿಕ ಕಾರ್ಪೊರೇಟ್ ಉದ್ಯಮಗಳೊಂದಿಗೆ ಕೈಜೋಡಿಸಿ ಅವುಗಳ ವಾಣಿಜ್ಯ ಕಾರ್ಯಸೂಚಿಯೊಂದಿಗೆ ತನ್ನ ಹಿಂದುತ್ವದ ಕಾರ್ಯಸೂಚಿಯನ್ನು ಬೆಸೆಯುವುದು. 2019ರ ರಾಷ್ಟ್ರೀಯ ಶಿಕ್ಷಣ ನೀತಿ ಇಂತಹ ಬೆಸೆಯುವಿಕೆಯನ್ನು ಸಾಧ್ಯಮಾಡುವ ಆಶಯವುಳ್ಳ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು.

ಸಂಘಪರಿವಾರದ ಕಾರ್ಯಸೂಚಿಯನ್ನು ನಿರಾವಲಂಬವಾಗಿ ಶಿಕ್ಷಣದಲ್ಲಿ ನೆಲೆಗೊಳಿಸಲು 2016ರ ಟಿ.ಎಸ್.ಆರ್. ಸುಬ್ರಮಣ್ಯನ್ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನ ಮೂಲಕ ಪ್ರಯತ್ನಿಸಲಾಗಿತ್ತು. ಆದರೆ ಬಹುಶಃ ಅದು ಕಾರ್ಯಸಾಧು ಅಲ್ಲವೆಂದು ಕಂಡುಬಂದದ್ದರಿಂದ ಜಾರಿಮಾಡದೆ, ಆ 2016 ರ ಕರಡನ್ನೂ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವರದಿಯನ್ನು 2019ರ ಕಸ್ತೂರಿರಂಗನ್ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಸೇರಿಸಿ ಸಾರ್ವಜನಿಕ ಚರ್ಚೆಗಾಗಿ ಮಂಡಿಸಲಾಯಿತು. ಅದಕ್ಕೆ 2 ಲಕ್ಷಕ್ಕೂ ಹೆಚ್ಚಿನ ಸಲಹೆಗಳು ಬಂದವೆಂದು ಕಸ್ತೂರಿ ರಂಗನ್ ಹೇಳುತ್ತಾರೆ. ಅವುಗಳಲ್ಲಿ ಶೇ.80 ಭಾಗ ಸಲಹೆಗಳು ಕರಡನ್ನು ಅನುಮೋದಿಸುತ್ತವೆ ಎಂದೂ, ಅವರು ಹೆಮ್ಮೆಪಡುತ್ತಾರೆ.

ಕೆಲವು ಪೂರಕ ಅಂಕಿ ಅಂಶಗಳು:
ಭಾರತದಲ್ಲಿ 2017ರಲ್ಲಿ ಸ್ಮಾರ್ಟ್‌ಫೋನ್ ಬಳಸುತ್ತಿದ್ದವರ ಸಂಖ್ಯೆ 401 ಮಿಲಿಯನ್. ಇದು 2022ರ ಹೊತ್ತಿಗೆ 829 ಮಿಲಿಯನ್ ಆಗುವ ಸಾಧ್ಯತೆ ಇದೆ ಎಂದು ಒಂದು ಅಂದಾಜು.

ಕಳೆದ ಬಜೆಟ್‌ನಲ್ಲಿ ಶೇ. 100ರಷ್ಟು ನೇರ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಭಾರತದ ಶಿಕ್ಷಣ ವಲಯದಲ್ಲಿ 2018ರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೂಡಿದ ಅಂದಾಜು ಹಣ 91.7 ಬಿಲಿಯನ್ ಡಾಲರ್ ಆಗಿದ್ದು ಅದು 2019ರಲ್ಲಿ 101. 1 ಬಿಲಿಯನ್ ಡಾಲರ್ ಆಗಿರುವ ಅಂದಾಜಿದೆ.
ಎಪ್ರಿಲ್ 2000ದಿಂದ ಮಾರ್ಚ್ 2019ರ ವರೆಗೆ ಭಾರತದ ಶಿಕ್ಷಣ ವಲಯಕ್ಕೆ ಹರಿದು ಬಂದ ಒಟ್ಟು ವಿದೇಶಿ ಬಂಡವಾಳ 2.47 ಬಿಲಿಯನ್ ಡಾಲರ್ ಆಗಿದೆ.
ಭಾರತದ ಶಿಕ್ಷಣದ ಮಾರುಕಟ್ಟೆಯಲ್ಲಿ ಯಾವ ಯಾವ ಅಂಶಗಳ ಪಾಲು ಎಷ್ಟೆಷ್ಟೆಂಬುದು ಟೆಕ್‌ನೋಪ್ಯಾಕ್ ವಿಸಿಸರ್ಕಲ್ ವಿಶ್ಲೇಷಣೆ ಜಾಲತಾಣದಲ್ಲಿ ಪ್ರಕಟಿಸಿರುವ ಶೇಕಡಾವಾರು ಹಂಚಿಕೆಯಲ್ಲಿ ಹೀಗಿದೆ:

ಸ್ಕೂಲ್ ಹಂತದ ಮಾರುಕಟ್ಟೆ ಶೇ. 52, ಪಠ್ಯಪುಸ್ತಕ, ಇ-ಕಲಿಕೆ ಮತ್ತು ಸಂಬಂಧಿತ ಸೇವೆಗಳ ಮಾರುಕಟ್ಟೆ ಶೇ. 28, ಉನ್ನತ ಶಿಕ್ಷಣದ ಮಾರುಕಟ್ಟೆ ಶೇ. 15 ಮತ್ತು ತಯಾರಿಕೆ ಮತ್ತು ಸೇವಾಕ್ಷೇತ್ರದಲ್ಲಿನ ವೃತ್ತಿಪರ ಶಿಕ್ಷಣದ ಮಾರುಕಟ್ಟೆ ಶೇ. 5. ಭಾರತದಲ್ಲಿ ಶಿಕ್ಷಣ ಅಗ್ಗದ ಬೆಲೆಯಲ್ಲಿ ಸಿಗುವುದರಿಂದ ವಿದೇಶಿ ಹೂಡಿಕೆದಾರರು ಶಿಕ್ಷಣ ಉದ್ಯಮದಲ್ಲಿ ಹಣ ಹೂಡಲು ಮುಂದಾಗುತ್ತಾರೆ.

ಭಾರತದ ಕಾರ್ಪೊರೇಟ್ ಸಂಸ್ಥೆಗಳು 10 ವರ್ಷಗಳಷ್ಟು ಹಿಂದಿನಿಂದಲೇ ಶಿಕ್ಷಣದಲ್ಲಿ ಹಣ ಹೂಡುತ್ತಿದ್ದಾರೆ. ಟಾಟಾ ಇಂಟರಾಕ್ಟೀವ್ ಸಿಸ್ಟಮ್ಸ್, ಯಶ್ ಬಿರ್ಲಾ ಗ್ರೂಪ್, ಝೀ, ಎಚ್‌ಡಿಎಫ್‌ಸಿ, ಎಡುಕಾಂಪ್, ಎವರಾನ್, ಕೋರ್ ಪ್ರಾಜೆಕ್ಟ್ಸ್ ಆ್ಯಂಡ್ ಟೆಕ್ನಾಲಜೀಸ್ ಮುಂತಾದ ವಾಣಿಜ್ಯ ಸಂಸ್ಥೆಗಳಲ್ಲದೆ, ಪ್ರಧಾನಿಯ ತವರು ಪ್ರಾಂತ ಗುಜರಾತ್‌ನಲ್ಲಿ ಅದಾನಿ ಗ್ರೂಪ್ (ಪೋರ್ಟ್‌ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್), ನಿರ್ಮಾ (ಎನ್‌ಐಟಿ, ಎನ್‌ಐಎಮ್, ಎನ್‌ಐಡಿಎಸ್, ಡಿಪ್ಲೊಮೊ ಸ್ಟಡೀಸ್,) ಧೀರೂಭಾಯಿ ಅಂಬಾನಿ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಶನ್ ಆ್ಯಂಡ್ ಕಮ್ಯುನಿಕೇಶನ್, ರಮಾಭಾಯಿ ಪಟೇಲ್ ಫೌಂಡೇಶನ್ ಮೊದಲಾದವರನ್ನು ಇಲ್ಲಿ ಹೆಸರಿಸಬಹುದು. ದೇಶದ ಟಾಪ್‌ಟೆನ್ ಪಟ್ಟಿಯಲ್ಲಿರುವ 5-6 ಉದ್ಯಮಗಳು ಬೆಂಗಳೂರು ಒಂದರಲ್ಲೇ ಇವೆ.

ಸಂಘಪರಿವಾರವು ಭಾರತಾದ್ಯಂತ ವಿದ್ಯಾಭಾರತಿ ಹೆಸರಿನಲ್ಲಿ ಈಗಾಗಲೇ ಒಟ್ಟು 12,754 ಶಾಲಾ-ಕಾಲೇಜುಗಳನ್ನು ನಡೆಸುತ್ತಿದೆ. ಅವುಗಳಲ್ಲಿ ಒಟ್ಟು 32,92,896 ಮಂದಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ, ಕ್ಲೌಡ್ ತಂತ್ರಜ್ಞಾನ, ಪಠ್ಯ ಮತ್ತು ಸಲಕರಣೆಗಳ ಡಿಜಿಟಲೀಕರಣ, ಇ ಲರ್ನಿಂಗ್, ಎಮ್ ಲರ್ನಿಂಗ್ ಆನ್‌ಲೈನ್ ಲರ್ನಿಂಗ್ ಮುಂತಾದ ಪರಿಕಲ್ಪನೆಗಳ ಹಿಂದಿರುವ ತಾಂತ್ರಿಕತೆ ಮತ್ತು ವ್ಯಾಪಾರ ದಿಂದ ಕೋಟಿಗಟ್ಟಲೆ ಹಣ ಕಾರ್ಪೊರೇಟ್ ಸಂಸ್ಥೆಗಳಿಗೆ ಸಿಗುತ್ತದೆ.
 ಪಠ್ಯಪುಸ್ತಕ ರಚನೆಯ ನೀತಿ ನಿರೂಪಣೆ, ಭಾಷಾ ಬೋಧನೆ, ಸಂಸ್ಕೃತಿ, ನೈತಿಕ ಶಿಕ್ಷಣ, ಯೋಗ ಮುಂತಾದ ವಿಷಯಗಳ ನಿರ್ವಹಣೆಯಲ್ಲಿ ಶಿಕ್ಷಣವನ್ನು ಕೇಸರೀಕರಣಗೊಳಿಸಲು ಸಂಘಪರಿವಾರಕ್ಕೆ ಅಗಾಧ ಅವಕಾಶಗಳು ಸೃಷ್ಟಿಯಾಗುತ್ತವೆ.

 ವಿಶ್ವ ಬ್ಯಾಂಕ್-ಯೂನಿಸೆಫ್ ಸಹಾಯದಿಂದ ನಡೆಯುತ್ತಿರುವ ಅಂಗನವಾಡಿಗಳ ಕಾರ್ಯಕ್ಷೇತ್ರದಲ್ಲಿ ಮೂಗು ತೂರಿಸಿ ಶಿಶು ಶಿಕ್ಷಣ ನೀತಿಯ ಪರಿಷ್ಕರಣೆಯ ಹೆಸರಿನಲ್ಲಿ ಸರಕಾರಿ ಸಂಸ್ಥೆಗಳಿಗೂ ಕೇಸರೀಕರಣವನ್ನು ಚಾಚುವ ಹುನ್ನಾರ ಈಗಾಗಲೇ ಕಾರ್ಯಗತವಾಗುತ್ತಿದೆ. ಪಿಪಿಪಿ ತಂತ್ರವನ್ನು ಬಳಸಿ ಖಾಸಗೀಕರಣಕ್ಕೆ ಒಳಪಡಿಸಿ 2030ರ ಹೊತ್ತಿಗೆ ಸರಕಾರಿ ಶಿಶುವಿಹಾರ ಮತ್ತು ಪ್ರಾಥಮಿಕ ಶಿಕ್ಷಣವನ್ನು ಸ್ಥಗಿತಗೊಳಿಸುವ ಇಲ್ಲವೆ ವಿದ್ಯಾಭಾರತಿಯ ನಿಯಂತ್ರಣಕ್ಕೆ ಒಳಪಡಿಸುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

 ಹೇಳಿದಷ್ಟೂ ಉಂಟು ಎನ್ನುವಷ್ಟು ಮಾಹಿತಿಗಳು ‘ರಾಷ್ಟ್ರೀಯ ಶಿಕ್ಷಣ ನೀತಿ’ ಯಲ್ಲಿರುವ ಸುಳಿಗಳ ಬಗ್ಗೆ ಜಾಲತಾಣದಲ್ಲಿ ಸಿಗುತ್ತವೆ. ಆದ್ದರಿಂದ ಈ ಲೇಖನವನ್ನು ಒಂದು ಸಣ್ಣ ಕತೆಯೊಂದಿಗೆ ಮುಗಿಸಬಹುದು. ಒಂದು ಕಾಡಿನಲ್ಲಿ ಒಂದು ಹುಲಿಗೆ ಒಬ್ಬ ಗರ್ಭಿಣಿ ಸಿಗುತ್ತಾಳೆ, ಹುಲಿ ಅವಳನ್ನು ಕೊಲ್ಲದೆ ಗುಹೆಗೆ ಕರೆತಂದು ಆರೈಕೆ ಮಾಡಿ ಮಗು ಹುಟ್ಟುವವರೆಗೆ ಸಲಹುತ್ತದೆ. ಅವಳ ಮಗುವಿಗೆ ತೊಟ್ಟಿಲು ಕಟ್ಟಿ ತೂಗಲು ತನ್ನ ಮರಿಯನ್ನೇ ನೇಮಿಸುತ್ತದೆ. ಹೆಂಗಸಿಗೆ ಹುಲಿ ಮತ್ತು ಹುಲಿ ಮರಿಯ ‘ಮಾನವೀಯತೆಯ’ ಬಗ್ಗೆ ಆಶ್ಚರ್ಯ, ಕೃತಜ್ಞತೆ ಎರಡೂ. ಒಂದು ದಿನ ಹುಲಿ ಹೊರಗೆ ಹೋಗಿದ್ದಾಗ ಹೆಂಗಸು ವಿಶ್ರಮಿಸುತ್ತಿರುತ್ತಾಳೆ. ತೊಟ್ಟಿಲಲ್ಲಿದ್ದ ಮಗು ಅಳುತ್ತದೆ. ಹುಲಿಮರಿಯು ತೊಟ್ಟಿಲನ್ನು ತೂಗುತ್ತಾ ‘ಅಳಬೇಡ ಮಗು ಅಳಬೇಡ, ನೀನು ಇನ್ನೂ ಸ್ವಲ್ಪದೊಡ್ಡವನಾದಮೇಲೆ ನಮ್ಮಮ್ಮ ನಿಮ್ಮಮ್ಮನನ್ನು ತಿನ್ನುತ್ತಾಳೆ, ನಾನು ನಿನ್ನನ್ನು ತಿನ್ನುತ್ತೇನೆ, ಈಗ ಮಲಗು ಮಗು ಮಲಗು’ ಎಂದದ್ದು ತಾಯಿಗೆ ಕೇಳಿಸುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)