varthabharthi

ನಿಮ್ಮ ಅಂಕಣ

ಬೆಂಗಳೂರು ವಿವಿ ಕುಲಪತಿಯವರು ಸಣ್ಣತನ ಬಿಟು್ಟ ಪ್ರಬುದ್ಧತೆ ಪ್ರ ದರ್ಶಿಸಲಿ

ವಾರ್ತಾ ಭಾರತಿ : 15 Mar, 2020
- ಯಶಸ್ ಬಿ.ಎನ್., ಜ್ಜಾನ ಗಂಗಾನಗರ

ಮಾನ್ಯರೇ,
 ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ಬೆಂಕಿ ಬಿದ್ದಿರುವ ಸುದ್ದಿ ಕೇಳಿ ಆಘಾತವಾಯಿತು. ಪ್ರತೀವರ್ಷ ಇಂತಹ ಅವಘಡಗಳು ಸಂಭವಿಸುತ್ತಿರುವುದು ಆತಂಕಕಾರಿ. ಕಳೆದ ವಾರ ಬೆಳಗ್ಗೆ ಎಂದಿನಂತೆ ವಿವಿ ಆವರಣದ ಗ್ರಂಥಾಲಯ ಪಕ್ಕದಲ್ಲಿ ವಾಕ್ ಮಾಡಲು ತೆರಳಿದ್ದಾಗ ಭದ್ರತಾ ಪೊಲೀಸರು, ಇಲ್ಲಿ ವಾಕಿಂಗ್ ಮಾಡಬಾರದು, ಈ ಆವರಣದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚುವ ಆತಂಕವಿದೆ. ಹೀಗಾಗಿ ಯಾರಿಗೂ ವಾಕಿಂಗ್ ಮಾಡಲು ಅವಕಾಶ ನೀಡಬಾರದು ಎಂದು ಕುಲಪತಿಗಳು ಫರ್ಮಾನು ಹೊರಡಿಸಿದ್ದಾರೆ ಎಂದು ನನ್ನನ್ನು ಒಳಗೊಂಡಂತೆ ಎಲ್ಲರನ್ನು ತಡೆಯುತ್ತಿದ್ದರು. ನನ್ನ ಅನುಭವದ ಪ್ರಕಾರ ಇಲ್ಲಿ ವಾಕಿಂಗ್‌ಗೆ ಬರುವವರೆಲ್ಲರೂ ಸಭ್ಯಸ್ಥರು.ಇಲ್ಲಿನ ವಾತಾವರಣ ಇನ್ನಷ್ಟು ಉತ್ತಮವಾಗಿ ಹಸಿರು, ಗಿಡಮರಗಳು ಹೆಚ್ಚಾಗಬೇಕು. ಪ್ರಾಣಿ ಪಕ್ಷಿಗಳ ಸಂತತಿ ವೃದ್ಧಿಸಬೇಕೆಂಬ ತುಡಿತ ಹೊಂದಿದವರಾಗಿದ್ದಾರೆ.

ವಾಸ್ತವವಾಗಿ ವಿವಿ ಆವರಣವನ್ನು ಬಯಲು ಶೌಚಾಲಯ ಮಾಡಿಕೊಂಡಿರುವವರಿಂದ ಇಂತಹ ಸಮಸ್ಯೆ ಸೃಷ್ಟಿಯಾಗುತ್ತಿದೆ.ಇಂತಹವರು ಬೀಡಿ, ಸಿಗರೇಟು ಸೇದುತ್ತಾ ಪೊದೆಗಳಲ್ಲಿ ಶೌಚಾಲಯಕ್ಕೆ ಕುಳಿತುಕೊಳ್ಳುತ್ತಾರೆ. ಇಂತಹವರಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಗಳಿವೆ. ವಿಚಿತ್ರ ಎಂದರೆ ಜ್ಞಾನ ಭಾರತಿ ಪೊಲೀಸ್ ಠಾಣೆ ಹಿಂಭಾಗ ವಿಶ್ವವಿದ್ಯಾನಿಲಯದ ಗೋಡೆ ಒಡೆದಿದ್ದು, ಇಲ್ಲಿಂದ ನೂರಾರು ಮಂದಿ ಪ್ರತಿನಿತ್ಯ ಶೌಚಾಲಯಕ್ಕೆ ತೆರಳುತ್ತಾರೆ. ಸ್ವಚ್ಛತೆಯ ಬಗ್ಗೆ ಪಾಠ ಕಲಿಯಬೇಕಾದ ಪಕ್ಕದ ಪಿವಿಪಿ ಶಾಲೆ ಮತ್ತು ಚೈತನ್ಯ ಟೆಕ್ನೋ ಸ್ಕೂಲ್‌ನ ಮಕ್ಕಳು ಜನ ಬಯಲು ಶೌಚಾಲಯಕ್ಕೆ ತೆರಳುವುದನ್ನು ಕಸಿವಿಸಿಯಿಂದ ನೋಡುವುದು ಸಾಮಾನ್ಯವಾಗಿದೆ.ಗೋಡೆ ಒಡೆದು ಭದ್ರತೆ ಇಲ್ಲದ ಕಾರಣ ಶ್ರೀಗಂಧ ಸೇರಿದಂತೆ ಅಮೂಲ್ಯ ಮರಗಳನ್ನು ವಿವಿ ಆವರಣದಿಂದ ಕಡಿದು ಇದೇ ಕಳ್ಳ ದಾರಿಯಲ್ಲಿ ಸಾಗಿಸುತ್ತಿರುವ ಆರೋಪಗಳು ಸಹ ಇವೆ. ವಿವಿ ಗೋಡೆ ದುರಸ್ತಿಪಡಿಸಬೇಕೆಂದು ಕಳೆದ ಐದು ವರ್ಷಗಳ ಅವಧಿಯಲ್ಲಿ ಎರಡು ಬಾರಿ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ಗೋಡೆ ದುರಸ್ತಿಗೆ ಭರವಸೆ ದೊರೆತಿದೆಯೇ ಹೊರತು ಈಡೇರಿಲ್ಲ. ಇರಲಿ ಬಾಹ್ಯ ವ್ಯಕ್ತಿಗಳು ಕಳ್ಳ ಮಾರ್ಗಗಳಿಂದ ವಿವಿ ಆವರಣ ಪ್ರವೇಶಿಸುವುದನ್ನು ಕುಲಪತಿಯವರು ಮೊದಲು ತಡೆಯಲು ಕ್ರಮ ಕೈಗೊಳ್ಳಬೇಕು. ಇಷ್ಟೊಂದು ಪದವಿ, ಗೌರವ ಡಾಕ್ಟರೇಟ್‌ಗಳನ್ನು ಪಡೆದಿರುವ ಕುಲಪತಿ ಅವರು ವಾಕಿಂಗ್‌ಗೆ ಬರುವವರ ಮೇಲೆ ಸಂದೇಹ ಪಡುವ ಸಣ್ಣತನ ಪ್ರದರ್ಶಿಸುವುದನ್ನು ಬಿಟ್ಟು ಸಮಸ್ಯೆಯ ಮೂಲಗಳನ್ನು ಪತ್ತೆ ಮಾಡಿ ದುರಂತಗಳನ್ನು ತಪ್ಪಿಸುವ ಪ್ರಬುದ್ಧತೆ ಮೆರೆಯುವುದು ಒಳ್ಳೆಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)