varthabharthi

ವಿಶೇಷ-ವರದಿಗಳು

ನೈಟ್ ಪಾರ್ಟಿಗಳಂತಹ ಗೆಳೆಯರ ಕೂಟದ ಬಗ್ಗೆ ಇರಲಿ ಎಚ್ಚರ!

‘ಸಮಾಜ ಘಾತುಕ ಚಟುವಟಿಕೆಗೂ ಡ್ರಗ್ಸ್ ವ್ಯಸನಿಗಳ ಬಳಕೆ!’

ವಾರ್ತಾ ಭಾರತಿ : 16 Mar, 2020

ಡ್ರಗ್ಸ್ ಎಂಬ ಈ ಕಾರ್ಕೋಟಕ ವಿಷದ ಜಾಲಕ್ಕೆ ಸಿಕ್ಕಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುವ ಜತೆಗೆ ತಮ್ಮ ಆರೋಗ್ಯವನ್ನೂ ಹದಗೆಡಿಸಿಕೊಂಡು ಮಾನಸಿಕ ಸ್ಥಿಮಿತವನ್ನೂ ಕಳೆದುಕೊಂಡ ಅನೇಕರು ನಮ್ಮ ನಡುವೆಯೇ ಇದ್ದಾರೆ. ಒಮ್ಮೆ ಈ ವಿಷದ ಜಾಲಕ್ಕೆ ಸಿಲುಕಿಕೊಂಡವರು ಅದರಿಂದ ಹೊರಬರಲು ಪಡಬೇಕಾದ ಪಾಡು ಅಷ್ಟಿಷ್ಟಲ್ಲ. ಸಂತಸವನ್ನು ಪಡೆದುಕೊಳ್ಳುವ ನೆಪದಲ್ಲಿ ಆರಂಭಗೊಳ್ಳುವ ಈ ಡ್ರಗ್ಸ್ ಚಟ, ಮುಂದೊಂದು ದಿನ ಸಮಾಜ ಘಾತುಕ ಚಟುವಟಿಕೆಗಳಿಗೂ ಕಾರಣವಾಗಬಹುದು. ಡ್ರಗ್ಸ್ ವ್ಯಸನಿಗಳನ್ನು ಸಮಾಜ ಘಾತುಕರು ತಮ್ಮ ದುಷ್ಕೃತ್ಯಗಳಿಗೆ ಬಳಸಿಕೊಳ್ಳಬಹುದು. ಮನರಂಜನೆಗಾಗಿ ನಡೆಸುವ ರಾತ್ರಿ ಪಾರ್ಟಿಗಳು, ಗೆಳೆಯರ ಕೂಟಗಳಲ್ಲಿ ಡ್ರಗ್ಸ್‌ಗಳ ಬಳಕೆ ಅಪಾಯಕಾರಿ ಪರಿಸ್ಥಿತಿಯನ್ನು ತಂದಿಡಬಹುದು. ಈ ರೀತಿ ಮಾದಕ ದ್ರವ್ಯಗಳ ಅಪಾಯಕ್ಕೆ ಸಿಲುಕಿ ಮಾನಸಿಕವಾಗಿ ತೊಂದರೆಗೊಳಗಾದವರಿಗೆ ಚಿಕಿತ್ಸೆ ಒದಗಿಸುತ್ತಿರುವ ಮನೋವೈದ್ಯರಲ್ಲಿ ಡಾ. ಶ್ರೀನಿವಾಸ ಭಟ್ ಉಂಡಾರು ಕೂಡಾ ಒಬ್ಬರು. ಖ್ಯಾತ ಮನೋರೋಗ ತಜ್ಞರಾಗಿದ್ದುಕೊಂಡು ಮಂಗಳೂರಿನ ಮಿಲಾಗ್ರಿಸ್‌ನಲ್ಲಿ ಕ್ಲಿನಿಕ್ ಹೊಂದಿರುವ ಡಾ. ಶ್ರೀನಿವಾಸ ಭಟ್ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡಮಿ, ನಿಟ್ಟೆ ಯುನಿವರ್ಸಿಟಿಯ ಮನೋವೈದ್ಯ ಶಾಸ್ತ್ರ ಪ್ರಾಧ್ಯಾಪಕರು. ಇತರ ಮನೋರೋಗಗಳ ಜತೆಗೆ ಡ್ರಗ್ಸ್‌ನಿಂದ ಮಾನಸಿಕ ತೊಂದರೆಗೊಳಗಾದವರಿಗೂ ಕಳೆದ ಸುಮಾರು 12 ವರ್ಷಗಳಿಂದ ಚಿಕಿತ್ಸೆ ನೀಡುತ್ತಿರುವ ಇವರು ‘ವಾರ್ತಾಭಾರತಿ’ ಜತೆ ಡ್ರಗ್ಸ್‌ನ ಕರಾಳತೆಯನ್ನು ಹಂಚಿಕೊಂಡಿದ್ದಾರೆ. ಅವರದ್ದೇ ಮಾತುಗಳಲ್ಲಿ ಈ ಡ್ರಗ್ಸ್‌ನ ವಿಷಜಾಲದ ಅಪಾಯ, ವಿಧ, ಸಾಮಾಜಿಕ ಬದ್ಧತೆಯನ್ನು ಈ ಲೇಖನದ ಮೂಲಕ ತೆರೆದಿಡುವ ಪ್ರಯತ್ನ ಮಾಡಲಾಗಿದೆ.

ಜಗತ್ತಿನ ಎರಡನೇ ಅತೀ ದೊಡ್ಡ ಉದ್ಯಮ ಡ್ರಗ್ಸ್!

 ನನ್ನ ಅನುಭವದಲ್ಲಿ ಕಂಡುಕೊಂಡಿರುವಂತೆ ಡ್ರಗ್ಸ್ ಎಂಬುದು ವಿಶ್ವದ ಎರಡನೇ ಅತೀ ದೊಡ್ಡ ಉದ್ಯಮವಾಗಿದೆ! ಇಂತಹ ವಿಶ್ವದ ಮೊದಲ ಉದ್ಯಮ ಶಸ್ತ್ರಾಸ್ತ್ರಗಳಾಗಿದ್ದರೆ, ಎರಡನೆಯದ್ದು ಡ್ರಗ್ಸ್. ಸಕ್ರಮ ಹಾಗೂ ಅಕ್ರಮವಾಗಿ ಈ ದಂಧೆ ಎಗ್ಗಿಲ್ಲದೆ, ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಬಹುಮುಖ್ಯವಾಗಿ ವ್ಯಸನಿಯನ್ನೇ ಪೂರೈಕೆದಾರರನ್ನಾಗಿ ಮಾಡುವ ಮೂಲಕ ಇದರ ಮೂಲ ಹೊರ ಜಗತ್ತಿಗೆ ಕಾಣದ ರೀತಿಯಲ್ಲಿ ಈ ದಂಧೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ದಂಧೆಯನ್ನು ವಿಸ್ತರಿಸಲು, ಮಾರ್ಕೆಟಿಂಗ್ ಸಲುವಾಗಿ ಇದರ ಕಿಂಗ್‌ಪಿನ್‌ಗಳು ಕಾಲೇಜುಗಳಲ್ಲಿ ತಮ್ಮವರನ್ನೇ ವಿದ್ಯಾರ್ಥಿಗಳಾಗಿ ದಾಖಲು ಮಾಡಿಸಿಕೊಂಡು ಜಾಲವನ್ನು ವಿಸ್ತರಿಸುವ ವ್ಯವಸ್ಥಿತ ಜಾಲ ಕೂಡಾ ಸಕ್ರಿಯವಾಗಿರುವುದು ನನ್ನ ಬಳಿಗೆ ಚಿಕಿತ್ಸೆಗೆ ಬಂದ ಪ್ರಕರಣಗಳಿಂದ ಬಯಲಾಗಿದೆ. ಹಾಗಾಗಿ ಈ ಜಾಲದ ಮೂಲವನ್ನು ಹುಡುಕುವುದು, ನಿಯಂತ್ರಿಸುವುದು ಪೊಲೀಸ್ ಇಲಾಖೆಗೂ ಸವಾಲಾಗಿದೆ. ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಡ್ರಗ್ಸ್ ವ್ಯಸನಕ್ಕೊಳ ಗಾದವರಿಗೆ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ಇದೆ. ಅಲ್ಲಿ ಹಾಗೂ ಕ್ಲಿನಿಕ್‌ನಲ್ಲಿ ಕಳೆದ ಸುಮಾರು 12 ವರ್ಷಗಳಲ್ಲಿ 500ಕ್ಕೂ ಅಧಿಕ ಡ್ರಗ್ಸ್‌ಗೆ ಸಂಬಂಧಿಸಿ ರೋಗಿಗಳಿಗೆ ಚಿಕಿತ್ಸೆಯನ್ನು ನಾನು ನೀಡಿದ್ದೇನೆ.

ಅನೈತಿಕ ಚಟುವಟಿಕೆ, ಕಾನೂನಾತ್ಮಕ ಸಂಘರ್ಷಕ್ಕೂ ಕಾರಣವಾಗುತ್ತೆ!

ಮುಖ್ಯವಾಗಿ ಇದರ ಬೆಲೆ ಮತ್ತು ಇದರ ಸೇವನೆಯಿಂದ ಜೀವನಕ್ಕೆ ಅಗತ್ಯವಾದ ಯಾವುದೇ ರೀತಿಯ ಉಪಯೋಗ ದೊರೆಯದಿರುವುದು. ಬದಲಿಗೆ ಸಂಕಷ್ಟ ನೋವು ಮಾತ್ರ ಸಿಗುವುದು. ದೇಹಕ್ಕೆ ಅಗತ್ಯವಾದ ಯಾವುದೇ ರೀತಿಯ ಪೋಷಕಾಂಶಗಳು, ವಿಟಮಿನ್‌ಗಳು ಈ ಡ್ರಗ್ಸ್ ಗಳ ಸೇವನೆಯಿಂದ ದೊರೆಯುವುದಿಲ್ಲ. ಆರಂಭದಲ್ಲಿ ಮೋಜು, ಮಸ್ತಿ ಅಥವಾ ನೋವು ಮರೆಯಲು ಆರಂಭವಾಗುವ ಈ ಚಟ, ಬರಬರುತ್ತಾ, ದುರಾಸೆಯನ್ನು ಹುಟ್ಟಿಸುತ್ತದೆ. ಆ ಹೊತ್ತಿಗೆ ತೆಗೆದುಕೊಳ್ಳದಿದ್ದಾಗ ಅದು ಬೇಕು ಎಂಬ ತುಡಿತ ಕಿರಿಕಿರಿಯನ್ನುಂಟು ಮಾಡುತ್ತದೆ. ಬಿಟ್ಟರೆ, ಚಡಪಡಿಸುವಿಕೆ, ನಿದ್ದೆ ಬಾರದಿರುವುದು, ಹೊಟ್ಟೆಯಲ್ಲಿ ಅದೇನೋ ಒಂದು ರೀತಿಯ ಅನುಭವವನ್ನು ವ್ಯಸನಿ ಹೊಂದುತ್ತಾನೆ. ಈ ವ್ಯಸನವನ್ನು ಬಿಡುವುದು ಕಷ್ಟವೇನಲ್ಲ. ಆದರೆ ಚಟವಾಗಿ ಬಿಟ್ಟಾಗ ವ್ಯಸನಿಗೆ ಅದರಿಂದ ಹೊರ ಬರಲು ಅಸಾಧ್ಯವಾಗುತ್ತದೆ. ತಡೆದುಕೊಳ್ಳಲು ಸಾಧ್ಯವಾಗದೆ ಅದನ್ನು ಮುಂದುವರಿಸುತ್ತಾನೆ. ಈ ರೀತಿ ಮುಂದುವರಿದರೆ ಅಂತಹ ವ್ಯಸನಿಗೆ ಡ್ರಗ್ಸ್ ಪ್ರಮಾಣವೂ ಹೆಚ್ಚಾಗಿ ಬೇಕಾಗುತ್ತದೆ. ಆರು ಗಂಟೆಗೊಮ್ಮೆ ಬೇಕು, ದಿನನಿತ್ಯ ಬೇಕು ಎಂಬಂತಹ ಮಾನಸಿಕ ಒತ್ತಡಕ್ಕೆ ಆತ ಸಿಲುಕುತ್ತಾನೆ. ಅದಕ್ಕಾಗಿ ಆತ ಹೆಚ್ಚು ಹಣವನ್ನೂ ವ್ಯಯಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಅನೈತಿಕ, ಚಟುವಟಿಕೆಗಳಿಗೆ ಅದು ಕಾರಣವಾಗುತ್ತದೆ. ಸುಳ್ಳು ಹೇಳುವುದು, ಕಳ್ಳತನ, ಸುಲಿಗೆಯಂತಹ ಕಾನೂನಾತ್ಮಕ ಸಂಘರ್ಷಗಳಿಗೆ ಆತ ಒಳಪಡುತ್ತಾನೆ.

ಹುಚ್ಚುತನ ಕಾಡಲಾರಂಭಿಸುತ್ತೆ!

ಡ್ರಗ್ಸ್ ಸೇವನೆ ಆರ್ಥಿಕವಾಗಿ ಸಮಸ್ಯೆಗೆ ಗುರಿಪಡಿಸುವ ಜತೆಗೆ ಆತ ಮಾನಸಿಕವಾಗಿಯೂ ತೊಂದರೆ ಅನುಭವಿಸಬೇಕಾಗುತ್ತದೆ. ಇದನ್ನು ಒಂದು ರೀತಿಯ ಹುಚ್ಚುತನ (ಸ್ಕಿಜೋಫ್ರೇನಿಯಾ ಅಥವಾ ಸೈಕೋಸಿಸ್)ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ 100ಕ್ಕೆ ಒಬ್ಬನಿಗೆ ಇಂತಹ ರೋಗ ಅನುವಂಶಿಕವಾಗಿ ಅಥವಾ ಇತರ ಬೇರೆ ಬೇರೆ ಕಾರಣಗಳಿಗೆ ಬರುತ್ತದೆ. ಆದರೆ, ಕೆನಬಿಸ್ ಬಳಕೆ ಮಾಡುವವರಲ್ಲಿ ಶೇ. 10ರಷ್ಟು ಮಂದಿಗೆ ಬರುತ್ತದೆ. ಬಂದ ಕಾಯಿಲೆ ಆ ವ್ಯಕ್ತಿಯನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಆತ ಇಹಲೋಕದಲ್ಲಿ ಇಲ್ಲದಂತೆ ವರ್ತಿಸುತ್ತಾನೆ. ಕಿವಿಯಲ್ಲಿ ಮಾತು ಕೇಳುತ್ತಿರುವುದು. ಉತ್ಸಾಹ ಇಲ್ಲದಿರುವುದು, ಏನೂ ಇಲ್ಲದೆ ಸುಮ್ಮನೆ ಬಿದ್ದುಕೊಂಡಿರುವುದು. ಈ ಸೈಕೋಸಿಸ್ ಎಂಬ ಕಾಯಿಲೆ ಅನುವಂಶಿಕವಾಗಿ ಇದ್ದಲ್ಲಿ ವ್ಯಸನಿಯನ್ನು ಬಹಳಷ್ಟು ಕಾಡಿಸುತ್ತದೆ. ವ್ಯಸನಿಗೆ ತನ್ನ ಭವಿಷ್ಯದ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. ಮನೆಯವರಿಗೆ ಭಾರವಾಗಿಬಿಡುತ್ತಾನೆ. ಒಂದು ಹಂತದಲ್ಲಿ ನಿಲ್ಲಿಸಲೂ ಆಗದೆ ತೆಗೆದುಕೊಳ್ಳಲೂ ಆಗದೆ ಕಾಯಿಲೆಗೆ ಒಳಪಡುತ್ತಾನೆ.

ಕುಟುಂಬದವರ ನೆಮ್ಮದಿಯೂ ಹಾಳು!

ಡ್ರಗ್ಸ್ ವ್ಯಸನಿಗಳು ತಮ್ಮ ದೇಹದ ಪರಿವೆಯನ್ನೇ ಕಳೆದುಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ನನ್ನಲ್ಲಿ ಒಬ್ಬ ಸಣ್ಣ ವಯಸ್ಸಿನ ಯುವಕನನ್ನು ಕರೆತರಲಾಗಿತ್ತು.ಈ ಹುಡುಗನ ಸಮಸ್ಯೆ ವಿಚಿತ್ರ ಹಾಗೂ ಗಂಭೀರ. ಈತ ತನ್ನ ಬೈಕ್ ತೆಗೆದುಕೊಂಡು ಮನೆಯೊಂದಕ್ಕೆ ನುಗ್ಗಿ ಅಲ್ಲಿ ಮಹಿಳೆಯ ಬಟ್ಟೆಯನ್ನು ಹಾಕಿಕೊಂಡಿದ್ದ. ಊರವರ ಎದುರಿನಲ್ಲೇ ಈ ಘಟನೆ ನಡೆದಿದೆ. ಆತನಿಗೆ ಹೊಡಿದು ಬಡಿದು ಮಾಡಿದ್ದಾರೆ. ಈ ರೀತಿ ಮೂರ್ನಾಲ್ಕು ಬಾರಿ ವರ್ತಿಸಿದ್ದಾನೆ. ಆ ಯುವಕನನ್ನು ಕೂಲಂಕಷವಾಗಿ ಪರಿಶೀಲಿಸಿ, ವೈದ್ಯಕೀಯ ಚಿಕಿತ್ಸೆಗೊಳಪಡಿಸಲಾಯಿತು. ಆತನಿಗೆ ಯಾವುದೇ ಕಾಯಿಲೆ ಇರಲಿಲ್ಲ. ಆದರೆ, ಆತ ಡ್ರಗ್ಸ್ ತೆಗೆದುಕೊಂಡು ಅಮಲಿನಲ್ಲಿ ಆ ರೀತಿ ಮಾಡಿರುವಂತದ್ದು. ಆತನಿಗೆ ತಾನು ಏನು ಮಾಡಿದ್ದೇನೆಂಬ ಗೊಡವೆಯೇ ಇಲ್ಲ. ಆದರೆ ವರ್ತಮಾನ ಕಾಲದಲ್ಲಿ ಈ ಯುವಕನ ಈ ವಾಸ್ತವವನ್ನು ಅರಿಯುವವರು ಯಾರಿದ್ದಾರೆ. ಡ್ರಗ್ಸ್ ಅಮಲಿನಲ್ಲಿ ಮಾಡಿದ್ದು ಎಂದರೆ ಯಾರಾದರೂ ನಂಬುತ್ತಾರೆಯೇ? ಆತ ತನ್ನ ತಪ್ಪಿಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗುವುದೇ?

ಅದೇ ಪ್ರಕಾರ ಆ ಯುವಕನ ಮೇಲೂ ಅತ್ಯಾಚಾರ ಆರೋಪವಿದೆ. ತಾನು ಏನು ಮಾಡುತ್ತಿದ್ದೇನೆಂದು ಅರಿವಿಲ್ಲದೆ, ಅದು ಸರಿಯೋ ತಪ್ಪೋ ಎಂದು ತಿಳಿಯದೆ, ಈ ವ್ಯಸನದಿಂದ ಸಾಕಷ್ಟು ತೊಂದರೆಗಳನ್ನು ವ್ಯಸನಿಯ ಜತೆಗೆ ಆತನ ಕುಟುಂಬದವರೂ ಎದುರಿಸಬೇಕಾಗುತ್ತದೆ. ಅದೇ ಯುವಕನ ಜತೆ ಸಮಾಲೋಚನೆಯ ಸಂದರ್ಭ, ಕೆಲವೊಂದು ಸಲ ತನಗೇನೂ ತೋಚುತ್ತಿರಲಿಲ್ಲ. ಯಾರನ್ನಾದರೂ ಕೊಲೆ ಮಾಡಬೇಕೆಂದೂ ಅನಿಸುತ್ತಿತ್ತು. ನನ್ನ ಕೈಯಲ್ಲಿ ಚೂರಿ ಏನಾದರೂ ಇದ್ದಿದ್ದರೆ ಹಾಗೇ ಮಾಡುತ್ತಿದ್ದೆನೇನೋ ಎಂದು ಹೇಳಿದ್ದ. ಇದು ಆತ ಪಶ್ಚಾತಾಪದಲ್ಲಿ ಈ ವ್ಯಸನದಿಂದ ಹೊರ ಬಂದ ಬಳಿಕ ಹೇಳುವಂತಹ ಮಾತುಗಳು. ಆದರೆ ಅದೇ ಗುಂಗಿನಲ್ಲಿ ಈತ ಆ ರೀತಿ ಮಾಡಿದರೆ ಆತನಿಗೆ ನ್ಯಾಯ ಕೊಡಿಸಲು ಸಾಧ್ಯವೇ? ಡ್ರಗ್ಸ್‌ನ ಅಮಲಿನಲ್ಲಿ ವ್ಯಸನಿಯೊಬ್ಬ ಕೊಲೆ ಅಥವಾ ಅತ್ಯಾಚಾರ ಮಾಡಿದ್ದಾನೆಂದರೆ ಆತನಿಗೆ ಶಿಕ್ಷೆ ಕೊಡದಿರಲು ಸಾಧ್ಯವಾಗುತ್ತದೆಯೇ? ಇದನ್ನು ಅರಿತುಕೊಳ್ಳುವುದು ಅತ್ಯಗತ್ಯ. ಆ ಯುವಕನ ಪ್ರಕರಣದಲ್ಲಿ ಆತನ ತಂಗಿಗೆ ಮದುವೆ ನಿಶ್ಚಿತಾರ್ಥವಾಗಿತ್ತು. ಆದರೆ ಈ ಘಟನೆ ನಡೆದ ಮೇಲೆ ಯುವಕನ ತಂಗಿಯ ಮದುವೆ ನಿಂತು ಹೋಯಿತು.

ಅತ್ಯಾಚಾರಕ್ಕೂ ಕಾರಣವಾಗಬಹುದು!

ಈ ಚಟಕ್ಕೆ ಬಿದ್ದವರಿಗೆ ತಮ್ಮ ದೇಹ, ಮನಸ್ಸಿನ ಮೇಲೆ ನಿಯಂತ್ರಣವೇ ಇರುವುದಿಲ್ಲ. ಅವರು ಯಾವುದೇ ರೀತಿಯ ಕೃತ್ಯದಲ್ಲಿ ತೊಡಗಬಹುದು. ಡ್ರಗ್ಸ್ ಸೇವನೆ ಗುಂಪಿನಲ್ಲಿಯೂ ನಡೆಯುತ್ತದೆ. ಗೆಳೆಯರ ಪಾರ್ಟಿ ಎಂಬ ಹೆಸರಿನಲ್ಲಿಯೂ ಡ್ರಗ್ಸ್ ಬಳಕೆಯಾಗುತ್ತದೆ. ತಮಗೆ ಅರಿವಿಲ್ಲದೆಯೂ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸುವ ಅನಿವಾರ್ಯತೆ ಬರಬಹುದು. ಈ ಪರಿಸ್ಥಿತಿಯ ದುರ್ಲಾಭವನ್ನು ಪಡೆಯುವವರೂ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಅತ್ಯಾಚಾರದಂತಹ ಕೃತ್ಯಗಳೂ ನಡೆಯುತ್ತವೆ. ಅಸ್ವಾಭಾವಿಕ, ಅಸುರಕ್ಷಿತ ಲೈಂಗಿಕ ಚಟುವಟಿಕೆಗಳು ಮಾರಕ ರೋಗಗಳಿಗೂ ಕಾರಣವಾಗುತ್ತದೆ. ಇವೆಲ್ಲಾ ಮತ್ತೆ ಜೀವನದಲ್ಲಿ ಹಿಂದಿರುಗಿ ಬರಲಾಗದ ಸ್ಥಿತಿಗಳು.

ಡ್ರಗ್ಸ್ ವಿಧ ಹಲವು- ಅಮಲು ವಿಭಿನ್ನ!

ಗಾಂಜಾ ಎಂಬುದು ಗೇಟ್ ಕೀಪರ್ ಡ್ರಗ್ಸ್ ಎಂಬುದಾಗಿ ನಾವು ಕರೆಯುತ್ತೇವೆ. ಎಂದರೆ ಅತ್ಯಂತ ಅಪಾಯಕಾರಿ ಅಮಲು ಪದಾರ್ಥಗಳ ಹೆಬ್ಬಾಗಿಲು ಪ್ರವೇಶದಂತೆ. ಇದರ ಚಟ ಆರಂಭಿಸಿದವರು ಮತ್ತೆ ಇದಕ್ಕಿಂತಲೂ ಹೆಚ್ಚಿನ ಅಮಲನ್ನು ಬಯಸುತ್ತಾರೆ. ಒಪಿಎಂಗಳು ಮುಂದಿನ ಹಂತ- ಇದರಲ್ಲಿ ಬ್ರೌನ್ ಶುಗರ್ ಪ್ರಮುಖ. ಇದರ ಬೆಲೆ ಹೆಚ್ಚು. ಇದರ ಅನುಭವ ಗಾಂಜಾಕ್ಕಿಂತ ಭಿನ್ನ ಹಾಗೂ ತೀವ್ರ. ಬಳಿಕ ಕೊಕೇನ್ ಎಂಬ ಅಮಲು ಪದಾರ್ಥವನ್ನು ಒಂದು ಬಾರಿ ತೆಗೆದುಕೊಂಡರೂ ಅದರ ದಾಸನಾಗಿಬಿಡುತ್ತಾನೆ. ಅದರಿಂದ ಹೊರಬರಲಾಗುವುದಿಲ್ಲ. ಇದನ್ನು ಮೂಗಿಗೆ ನೇರವಾಗಿ ಅಥವಾ ರಕ್ತನಾಳಕ್ಕೆ ನೇರವಾಗಿ ಇಂಜೆಕ್ಟ್ ಮಾಡುವಂತದ್ದು. ಇದರಲ್ಲಿನ ಅಪಾಯ ತೆಗೆದುಕೊಳ್ಳವುದರಲ್ಲೇ ಇರುತ್ತದೆ. ರಕ್ತನಾಳಕ್ಕೆ ಹಾಗೂ ಮೆದುಳಿಗೆ ಹೋಗಿ ಸ್ಟ್ರೋಕ್‌ನಂತಹ ಕಾಯಿಲೆಗೆ ಕಾರಣವಾಗಬಹುದು. ಇದನ್ನು ಇಂಜೆಕ್ಟ್ ಮಾಡುವುದರಿಂದ ಸಿರಿಂಜ್ ಒಬ್ಬರಿಂದ ಮತ್ತೊಬ್ಬರು ಬಳಸಿದಾಗ ಏಡ್ಸ್‌ನಂತಹ ರೋಗಕ್ಕೂ ಕಾರಣವಾಗಬಹುದು.

ಸಮಾಜ ವಿರೋಧಿ ಚಟುವಟಿಕೆಗಳಿಗೆ ಡ್ರಗ್ಸ್ ಹೇಗೆ ಕಾರಣ?

ಕೊಕೇನ್ ವ್ಯಸನ ಆರಂಭಿಸಿದ ಮೇಲೆ ದಿನಕ್ಕೆ ಸಾವಿರಾರು ರೂಪಾಯಿ ವ್ಯಯಿಸಬೇಕಾಗುತ್ತದೆ. ಅದನ್ನು ಬಿಡಲು ಸಾಧ್ಯವಾಗದ ಮಾನಸಿಕ ಸ್ಥಿತಿಯನ್ನು ವ್ಯಸನಿ ತಲುಪಿರುತ್ತಾನೆ. ಕೊಕೇನ್ ಪಡೆಯಲು ಆತ ಯಾವ ಕೆಲಸಕ್ಕೂ ಹೇಸಲಾರ. ಸಮಾಜ ಘಾತುಕರು ಇಂತಹ ವ್ಯಸನಿಗಳನ್ನು ಬಳಸಿಕೊಂಡು ಯಾವುದೇ ರೀತಿಯ ಕೃತ್ಯಗಳನ್ನು ಮಾಡಿಸಬಹುದು. ಕೊಕೇನ್, ಮಾರ್ಫಿನ್‌ನಂತಹ ವ್ಯಸನ ಎಂತಹ ಶ್ರೀಮಂತನನ್ನೂ ಬಡವನನ್ನಾಗಿಸುತ್ತದೆ. ಕುಟುಂಬವನ್ನು ಬೀದಿಗೆ ತಳ್ಳುತ್ತದೆ. ಒಂದೆರಡು ವರ್ಷಗಳ ಹಿಂದೆ ಗಡಿ ಪ್ರದೇಶದಲ್ಲಿ ಸಣ್ಣ ಮಕ್ಕಳು ತಿನ್ನುವ ಚಾಕಲೇಟ್ ರೂಪದ ದ್ರವ ಪದಾರ್ಥ (ಐಸ್ ರೂಪದಲ್ಲಿ) ಬಹಳಷ್ಟು ಸುದ್ದಿ ಮಾಡಿತ್ತು. ವ್ಯಾಪಾರವೂ ಜೋರಾಗಿತ್ತು. ಇದನ್ನು ತಿಂದ ಮಕ್ಕಳು ವಿಚಿತ್ರವಾಗಿ ವರ್ತಿಸುವುದೂ ಕಂಡು ಬಂದಿತ್ತು. ಈ ಬಗ್ಗೆ ಒಂದೆರಡು ಪ್ರಕರಣಗಳು ನನ್ನ ಬಳಿಯೂ ಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಆ ಚಾಕಲೇಟ್‌ಗಳಲ್ಲಿ ಅಮಲಿನ ಪದಾರ್ಥ ಹಾಕಿರುವುದು ದೃಢಪಟ್ಟಿತ್ತು. ಈ ಬಗ್ಗೆ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಅದು ಬಹುತೇಕವಾಗಿ ನಿಂತಿತ್ತು. ಚಾಕಲೇಟ್ ರೂಪದಲ್ಲೂ ಇದು ಇತ್ತು.

ಸಮಾಜ ಎಚ್ಚೆತ್ತರೆ ಮಾತ್ರವೇ ನಿಯಂತ್ರಣ ಸಾಧ್ಯ!

ಮಾದಕ ದ್ರವ್ಯಗಳ ಪತ್ತೆ ಅಥವಾ ಆರೋಪಿಗಳ ಸೆರೆಗೆ ಸಂಬಂಧಿಸಿ ಪೊಲೀಸರ ಕಾರ್ಯಾಚರಣೆ ವೇಳೆ ಪತ್ತೆಯಾಗುವುದು ಕೇವಲ ಒಂದಂಶ ಮಾತ್ರ ಎಂದೇ ಹೇಳಬಹುದು. ಡ್ರಗ್ಸ್ ಮಾಫಿಯಾ ವ್ಯಾಪಿಸಿರುವ ಜಾಲಕ್ಕೆ ಹೋಲಿಸಿದರೆ ಪತ್ತೆಯಾಗುವ ಪ್ರಕರಣಗಳು ಅತೀ ಅಲ್ಪ. ಹಾಗಾಗಿ ಜನರೇ ಈ ಬಗ್ಗೆ ಜಾಗೃತರಾಗಬೇಕು. ಪೋಷಕರ ಜತೆ ಮಕ್ಕಳಿಗೂ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಶಿಕ್ಷಣದ ಜತೆಯಲ್ಲೇ ಆಗಬೇಕು. ಪ್ರಾಥಮಿಕ ಶಾಲಾ ಹಂತದಲ್ಲೇ ಈ ಡ್ರಗ್ಸ್‌ಗಳಿಂದಾಗುವ ತೊಂದರೆಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವ ಕೆಲಸ ಆಗಬೇಕು. ಮಕ್ಕಳ ಮಾನಸಿಕ ಬೆಳವಣಿಗೆಗೆ ತಕ್ಕಂತೆ ಹಂತಹಂತವಾಗಿ ಈ ಜಾಗೃತಿಯನ್ನು ಹೆಚ್ಚಿಸುವ ಕೆಲಸ ಆಗಬೇಕು. ಈ ಡ್ರಗ್ಸ್‌ಗಳ ಆರಂಭವೇ ಬೀಡಿ ಸಿಗರೇಟ್‌ನಂತಹ ತಂಬಾಕು ಪದಾರ್ಥಗಳು.‘ಸೇ ನೋ ಟು ಡ್ರಗ್ಸ್’ ಎಂಬ ಜ್ಞಾನ, ಅರಿವನ್ನು ಮಕ್ಕಳ ಮನಸ್ಸಿನಲ್ಲಿ ಎಳವೆಯಲ್ಲೇ ಬಿತ್ತಬೇಕಾಗಿದೆ. ಜೀವನ ಕಲೆ, ಕಷ್ಟವನ್ನು ಎದುರಿಸುವ ಕಲೆಯನ್ನೂ ಮಕ್ಕಳಲ್ಲಿ ಬೆಳೆಸಬೇಕು. ಇದು ಶಿಕ್ಷಣ ವಿಧಾನದಲ್ಲಿ ಆಗಬೇಕಾಗಿರುವ ಬದಲಾವಣೆ.

ಡ್ರಗ್ಸ್‌ನ ವ್ಯಸನಿಯಾಗುವುದು ಯಾಕೆ?

ಡ್ರಗ್ಸ್ ತೆಗೆದುಕೊಳ್ಳುವವರು ಹೆಚ್ಚಾಗಿ ಹೇಳುವ ಮಾತು, ಇದು ಒಂದು ರೀತಿಯ ಖುಷಿ ಕೊಡುತ್ತದೆ. ಅಮಲು ನೀಡುತ್ತದೆ, ಸುಮಾರು ಏಳೆಂಟು ಗಂಟೆಗಳ ಕಾಲ ಅಮಲಿನ ಗುಂಗಿನಲ್ಲಿ ಇರಬಹುದು. ಆ ಸಮಯದಲ್ಲಿ ಇಹಲೋಕದ ನೋವು, ಕಷ್ಟ ಒತ್ತಡಗಳಿರದೆ ಎಂಜಾಯ್ ಮಾಡಬಹುದು ಎಂಬುದಾಗಿದೆ. ಈ ಡ್ರಗ್ಸ್ ವ್ಯಸನಕ್ಕೆ ತುತ್ತಾಗುವ ಕಲಾವಿದರು ಹೇಳುವ ಪ್ರಕಾರ ಒಂದು ರೀತಿಯಲ್ಲಿ ತಮ್ಮಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ, ಒಳಗಿನ ಕಲೆಯ ಉತ್ತಮ ಅಭಿವ್ಯಕ್ತಿಗೆ ಸಹಕಾರಿ ಎನ್ನುತ್ತಾರೆ. ಸಾಮಾನ್ಯ ಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ ಎಂಬುದು ಅವರ ಸಮರ್ಥನೆಯ ಮಾತು.

ಯುವಕರೇ ಟಾರ್ಗೆಟ್!

ಡ್ರ ಗ್ಸ್ ವ್ಯಸನಿಗಳು ಬಹುತೇಕರು ಯುವಕರು. ಬಹು ಮುಖ್ಯವಾಗಿ ಶಾಲಾ ಕಾಲೇಜು ಮಕ್ಕಳು. ಇತ್ತೀಚೆಗೆ ಹೈಸ್ಕೂಲ್ ಮಕ್ಕಳು ಈ ಚಟಕ್ಕೆ ಗುರಿಯಾಗಿ ಚಿಕಿತ್ಸೆಗಾಗಿ ಬರುತ್ತಿರುತ್ತಾರೆ. ನಾನು ನೋಡಿದ ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ಡ್ರಗ್ಸ್ ವ್ಯಸನಿಗಳು ಆರಂಭದಲ್ಲಿ ಧೂಮಪಾನ, ಅಲ್ಕೋಹಾಲ್ ಅಭ್ಯಾಸದಿಂದ ಈ ಚಟವನ್ನು ಅಂಟಿಸಿಕೊಂಡವರು. ಡ್ರಗ್ಸ್ ಸೇವನೆ ಆರಂಭವಾಗುವುದು ಕೆನಬಿಸ್‌ನೊಂದಿಗೆ (ಗ್ರಾಸ್ ಅಥವಾ ಗಾಂಜಾ ಎನ್ನಬಹುದು). ಇದು ಗಾಂಜಾದ ಒಣ ಎಲೆಗಳನ್ನು ಬೀಡಿ ಅಥವಾ ಸಿಗರೇಟ್ ಒಳಗೆ ತುಂಬಿಸಿ ಸೇದುವಂತದ್ದು. ಮುಂದೆ ಅಮಲು ಹೆಚ್ಚು ಹೆಚ್ಚು ಬೇಕೆಂದಾಗ ಇದರ ಸಂಸ್ಕರಿಸಿದ ರೂಪದಲ್ಲಿ ಸಿಗುವ ಹಲವು ರೀತಿಯ ಮಾದಕ ದ್ರವ್ಯಗಳನ್ನು ವ್ಯಸನಿಗಳು ಬಳಸುತ್ತಾರೆ. ಇದರ ಒಂದು ರೂಪ ಕೆನಬಿನಲ್‌ಆಯಿಲ್. ಇದು ದ್ರವ ರೂಪದಲ್ಲಿದ್ದು, ಇಂಜೆಕ್ಷನ್ ರೀತಿಯಲ್ಲಿ ನೀಡಬಹುದು. ಈ ಮಾದಕ ವಸ್ತುಗಳು ಹೆಚ್ಚು ಸಂಸ್ಕರಣೆಗೊಂಡಂತೆ ಅದರ ದರವೂ ಹೆಚ್ಚುತ್ತಾ ಸಾಗುತ್ತದೆ.

ರಾತ್ರಿ ಪಾರ್ಟಿ, ಗೆಳೆಯರ ಪಾರ್ಟಿಯಲ್ಲೂ ಡ್ರಗ್ಸ್ ಬಳಕೆ!

ಕೆಲವರು ಪಾರ್ಟಿಗಳಲ್ಲೂ ಅಮಲು ಪದಾರ್ಥಗಳನ್ನು ಬಳಕೆ ಮಾಡುತ್ತಾರೆ. ಪಾರ್ಟಿಗಳಲ್ಲಿ ಬಳಕೆ ಮಾಡುವಂತಹ ಈ ಡ್ರಗ್ಸ್‌ಗಳು ಆರೇಳು ಗಂಟೆಗಳ ಅಮಲನ್ನು ಒದಗಿಸುತ್ತದೆ. ಮುಖ್ಯವಾಗಿ ಸ್ಟಿಮ್ಯುಲೆಂಟ್‌ಗಳು (ಉತ್ತೇಜಕ ವಸ್ತುಗಳು). ರ್ಯಾಂಫಿಟಮೆನ್, ಮೆಥಾಫೆಟಮಿನ್ ಮೊದಲಾದ ನಿದ್ರೆ ಮಾತ್ರೆಯ ರೂಪದ ಡ್ರಗ್ಸ್‌ಗಳನ್ನು (ಮಾತ್ರೆ ರೂಪದಲ್ಲಿರುತ್ತದೆ) ಬಳಸಲಾಗುತ್ತದೆ. ಅವುಗಳನ್ನು ಅಲ್ಕೋಹಾಲ್ ಜತೆ ಬೆರೆಸಿ ಸೇವಿಸಲಾಗುತ್ತದೆ. ಈ ರೀತಿ ಸೇವಿಸಿದಾಗ ಆರೆಂಟು ಗಂಟೆಗಳ ಕಾಲ ಅಮಲಿನ ಸ್ಥಿತಿಯಲ್ಲಿರುತ್ತಾನೆ. ಅದರಿಂದ ಹೊರ ಬಂದಾಗ ಅಮಲಿನ ಸ್ಥಿತಿಯಲ್ಲಿ ಏನು ನಡೆದಿದೆ ಎಂದೇ ತಿಳಿಯುವುದಿಲ್ಲ. ಇವುಗಳನ್ನು ಸಮಾಜ ಘಾತುಕ ಶಕ್ತಿಗಳು ಬಳಕೆ ಮಾಡುವ ಅಪಾಯ ಅಧಿಕ. ಜತೆಯಾಗಿ ಸ್ನೇಹಿತರು (ಹೆಣ್ಣು ಗಂಡು) ಪಾರ್ಟಿ ಹೆಸರಿನಲ್ಲಿ ದುರ್ಲಾಭ ಪಡೆಯುವ ಸಾಧ್ಯತೆ ಇದೆ. ನನ್ನಲ್ಲಿಗೆ ಇಂತಹ ಎರಡು ಪ್ರಕರಣಗಳು ಬಂದಿತ್ತು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ಪಾರ್ಟಿ ಹೆಸರಿನಲ್ಲಿ ಅಮಲು ಪದಾರ್ಥ ಕೊಡಿಸಿ ಆಕೆಯ ವೀಡಿಯೊ ಮಾಡಿ ಬ್ಲಾಕ್‌ಮೇಲ್ ಮಾಡಿರುವಂತಹ ಪ್ರಕರಣ ಕೂಡಾ ನಡೆದಿತ್ತು.

ಅತಿಮಾನುಷ ಶಕ್ತಿಯ ಸ್ಥಿತಿಗೂ ತಲುಪಿಸುತ್ತೆ ಈ ಡ್ರಗ್ಸ್ ಸೇವನೆ!

ನಗರದ ಹೊರ ವಲಯದ ಯುವಕನೊಬ್ಬನನ್ನು ನನ್ನಲ್ಲಿಗೆ ಚಿಕಿತ್ಸೆಗೆ ತರಲಾಗಿತ್ತು. ಆತನ ಎಡ ಕೈಯಲ್ಲಿ ಹಚ್ಚೆ ಹಾಕಲಾಗಿತ್ತು. ಆ ಹಚ್ಚೆ ಹಾಕಿಸಿಕೊಂಡಾಗಿನಿಂದ ಅದೊಂದು ರೀತಿಯ ಅತಿಮಾನುಷ ಶಕ್ತಿ ಆತನ ದೇಹಕ್ಕೆ ಹೊಕ್ಕಿತ್ತು ಎಂಬುದು ಆತನ ಜತೆಗೆ ಮನೆಯವರ ವಾದವಾಗಿತ್ತು. ದೇಹದ ಒಂದು ಭಾಗ ಮಾತ್ರ ಆತನ ವಶದಲ್ಲಿದ್ದು, ಇನ್ನೊಂದು ಭಾಗ ಅಂದರೆ ಎಡಭಾಗ ಅತಿಮಾನುಷ ಶಕ್ತಿ ಆವರಿಸಿಕೊಂಡಿತ್ತು ಎಂಬ ಭ್ರಮೆ ಅವರದ್ದಾಗಿತ್ತು. ಮನೆಯವರು ಈ ಬಗ್ಗೆ ಅದಕ್ಕೆ ಬೇಕಾದ ಧಾರ್ಮಿಕ ಕ್ರಿಯೆಗಳನ್ನೆಲ್ಲಾ ಮಾಡಿಸಿದ್ದರು. ಏನೇ ಆದರೂ ಕಡಿಮೆ ಆಗಿರಲಿಲ್ಲ. ಮೊದಲೆಲ್ಲಾ ಸ್ವಲ್ಪ ಮಟ್ಟಿಗೆ ಈ ಅತಿಮಾನುಷ ಶಕ್ತಿ ಬಗ್ಗೆ ಮಾತನಾಡುತ್ತಿದ್ದವ ದಿನವಿಡೀ ಅದೇ ಮಾತನಾಡಲಾರಂಭಿಸಿದ್ದ.ಆ ಅತಿಮಾನುಷ ಶಕ್ತಿಯಿಂದ ತಾನು ಹೊರಬರಬೇಕೆಂದರೂ ಬರಲಾಗದೆ ಕೊನೆಗೆ ಮಾನಸಿಕ ಚಿಕಿತ್ಸೆಗೆ ಆತನನ್ನು ಕರೆತರಲಾಗಿತ್ತು. ಈ ರೀತಿಯ ಭ್ರಮಾಲೋಕವನ್ನು ಸೃಷ್ಟಿ ಮಾಡಿಕೊಂಡಿದ್ದೇ ಗಾಂಜಾ ವ್ಯಸನದಿಂದಾಗಿ ಎಂಬುದು ಚಿಕಿತ್ಸೆಯ ಆರಂಭದಲ್ಲಿಯೇ ಅರಿವಾಯಿತು. ಆತನ ಗಾಂಜಾ ಸೇವನೆ ಬಗ್ಗೆ ಮನೆಯವರಿಗೆ ಅರಿವೇ ಇಲ್ಲ. ಮನೆಯವರಿಗೆ ತಿಳಿಸಿದಾಗ ಅವರು ನಂಬುವ ಸ್ಥಿತಿಯ ಲ್ಲಿಯೇ ಇರಲಿಲ್ಲ. ಬಳಿಕ ಆತನನ್ನು ಸುಮಾರು 20 ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಮಾನಸಿಕ ಚಿಕಿತ್ಸೆಗೆ ನೀಡುವ ಉಪಚಾರ ಮಾಡಿ ಗಾಂಜಾ ತೆಗೆದುಕೊಳ್ಳದಂತೆ ಎಚ್ಚರಿಕೆ ವಹಿಸಿದಾಗ ಆತ ಕೊನೆಗೂ ತನ್ನ ಮೈಯಲ್ಲಿದ್ದ ಅತಿಮಾನುಷ ಶಕ್ತಿ ಹೋಯಿತು ಅನ್ನುವಂತಾಯಿತು! ಇದು ನಾಲ್ಕೈದು ವರ್ಷಗಳ ಹಿಂದಿನ ಮಾತು. ಸುಮಾರು ಮೂರು ವರ್ಷಗಳ ಕಾಲ ಆತ ಸತತವಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದ, ಗುಣಮುಖನಾಗಿ ಕಳೆದ ಸುಮಾರು ಒಂದೂವರೆ ವರ್ಷಗಳಿಂದ ಆತ ಬರುತ್ತಿಲ್ಲ. ಡ್ರಗ್ಸ್‌ಚಟವು ಆತನನ್ನು ಒಂದು ರೀತಿಯಲ್ಲಿ ಭ್ರಮಾ ಲೋಕದಲ್ಲಿ ತೇಲಿಸಿದ್ದಲ್ಲದೆ, ಮನೆಯವರನ್ನೂ ಆ ಜಾಲದೊಳಗೆ ಸಿಲುಕಿಸಿತ್ತು. ಹಣ, ಸಮಯ ಹಾಗೂ ಆತ ತನ್ನ ವಿದ್ಯಾಭ್ಯಾಸವನ್ನೂ ಕಳೆದುಕೊಳ್ಳುವಂತಾಯಿತು. ಇಂತಹ ವಿಚಿತ್ರವಾದ ಸನ್ನಿವೇಶವನ್ನೂ ಸೃಷ್ಟಿ ಮಾಡುತ್ತೆ ಡ್ರಗ್ಸ್ ಚಟ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)