varthabharthi


ವಿಶೇಷ-ವರದಿಗಳು

► ಮುಗ್ಧ ಕಾರ್ಮಿಕರೇ ಇವರ ಟಾರ್ಗೆಟ್ ► ಸಿನಿಮೀಯ ರೀತಿಯ ವಂಚನೆ

ದುಬಾರಿ ಮೊಬೈಲ್ ಕಡಿಮೆ ಬೆಲೆಗೆ: ಸದ್ದಿಲ್ಲದೆ ನಡೆಯುತ್ತಿದೆ ಮಹಾಮೋಸ!

ವಾರ್ತಾ ಭಾರತಿ : 16 Mar, 2020
ಇಬ್ರಾಹೀಂ ಬಾತಿಶ್ ಗೋಳ್ತಮಜಲು

ಮಂಗಳೂರು, ಮಾ.15: ‘ದುಬಾರಿ ಮೊಬೈಲ್ ಫೋನ್’ ಗಳನ್ನು ಕಡಿಮೆ ಬೆಲೆಗೆ ನೀಡುವ ಆಸೆ ಹುಟ್ಟಿಸಿ ಮುಗ್ಧ ಕಾರ್ಮಿಕರಿಗೆ ಸಾವಿರಾರು ರೂ. ವಂಚನೆಗೈಯುತ್ತಿರುವ ಬೃಹತ್ ಜಾಲವೊಂದು ನಮ್ಮ ನಡುವೆ ಸದ್ದಿಲ್ಲದೆ ಕಾರ್ಯಾಚರಿಸುತ್ತಿದೆ. ನೂರರಲ್ಲಿ ಒಂದು ಘಟನೆಯಾಗಿ ನಾವು ಸಾಧಾರಣವಾಗಿ ಕಾಣಬಹುದಾದ ರೀತಿಯಲ್ಲಿ ಕೃತ್ಯವೆಸಗುವ ಈ ಜಾಲ ಲೀಲಾಜಾಲವಾಗಿ ಸಾವಿರಾರು ರೂ.ಗಳನ್ನು ಜೇಬಿಗಿಳಿಸುತ್ತಿದೆ. ಮಂಗಳೂರು, ಕಾಟಿಪಳ್ಳ, ಕೃಷ್ಣಾಪುರ ಹೀಗೆ ವಲಸೆ ಕಾರ್ಮಿಕರೇ ಹೆಚ್ಚಾಗಿರುವ ಪ್ರದೇಶಗಳಲ್ಲೇ ಈ ತಂಡ ವಂಚನೆ ನಡೆಸುತ್ತಿದೆ. ಕರಾವಳಿ ಮಾತ್ರವಲ್ಲದೆ ಕೊಪ್ಪಳ, ಹಾವೇರಿ ಸೇರಿ ರಾಜ್ಯದ ಹಲವೆಡೆ ಇಂತಹ ತಂಡಗಳು ಸಕ್ರಿಯವಾಗಿರುವ ಬಗ್ಗೆಯೂ ಮಾಹಿತಿ ಇದೆ. ಮಂಗಳೂರಿನ ವಿಷಯಕ್ಕೆ ಬರುವುದಾದರೆ ಪ್ರತಿ ಮೊಬೈಲ್ ಅಂಗಡಿಗಳಲ್ಲಿ ಕನಿಷ್ಠ ಇಂತಹ 5 ಪ್ರಕರಣಗಳು ವರದಿಯಾಗಿವೆ.

ತಂಡದ ವಂಚನಾ ಶೈಲಿ: ಬೇರೆ ಬೇರೆ ಕಡೆಗಳಲ್ಲಿ ವಂಚನೆಗೊಳಗಾದವರು ಮತ್ತು ವಂಚನೆಗೊಳಗಾದವರ ಸ್ನೇಹಿತರು ನೀಡುವ ಮಾಹಿತಿಯನ್ನು ಗಮನಿಸುವುದಾದರೆ ಎಲ್ಲಾ ಕೃತ್ಯಗಳಲ್ಲೂ ಈ ಜಾಲದಲ್ಲಿರುವವರು ಒಂದೇ ರೀತಿಯ ಶೈಲಿಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗುತ್ತದೆ. ಮೊದಲಿಗೆ ವಂಚಕರು ವಲಸೆ ಕಾರ್ಮಿಕರು ಅಂದರೆ ಉತ್ತರ ಭಾರತೀಯರು ಮತ್ತು ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು ನೆಲೆಸಿರುವ ಪ್ರದೇಶಗಳು, ಬೀದಿಗಳು, ಕೇರಿಗಳಿಗೆ ತೆರಳುತ್ತಾರೆ. ಅಲ್ಲಿ ಸಿಗುವ ಕಾರ್ಮಿಕರ ಜೊತೆ ಮಾತಿಗಿಳಿಯುತ್ತಾರೆ. ‘ನಾನು ಸಂಕಷ್ಟದಲ್ಲಿದ್ದೇನೆ, ತಾಯಿ ಆಸ್ಪತ್ರೆಯಲ್ಲಿದ್ದಾರೆ, ಚಿಕಿತ್ಸೆಗೆ ತುರ್ತು ಹಣ ಬೇಕಾಗಿದೆ, ಕೂಡಲೇ ಊರಿಗೆ ಹೋಗಬೇಕಾಗಿದೆ...’ ಹೀಗೆ ವಿವಿಧ ಗಂಭೀರ ಕಾರಣಗಳನ್ನು ಹೇಳುತ್ತಾ ಮೊಬೈಲ್ ಫೋನ್ ಮಾರಾಟಕ್ಕಿಳಿಯುತ್ತಾರೆ. ತುರ್ತಾಗಿ ಹಣದ ಅವಶ್ಯಕತೆ ಇರುವುದರಿಂದ ಮೊಬೈಲ್ ಮಾರಾಟ ಮಾಡದೆ ಬೇರೆ ವಿಧಿಯಿಲ್ಲ ಎಂದು ಮುಗ್ಧ ಕಾರ್ಮಿಕರನ್ನು ನಂಬಿಸುತ್ತಾರೆ. ನಂತರ ಮೊಬೈಲ್‌ನ ನಕಲಿ ಬಿಲ್ ನೀಡುತ್ತಾರೆ. ಈ ಬಿಲ್‌ಗಳಲ್ಲಿರುವ ವಿಳಾಸ ಮುಂಬೈ, ದಿಲ್ಲಿ ಹೀಗೆ ಬೇರೆ ಬೇರೆ ಕಡೆಗಳದ್ದಾಗಿರುತ್ತದೆ.

 ‘ಮೊಬೈಲ್‌ಗೆ 20 ಸಾವಿರ ರೂ. ಕೊಟ್ಟಿದ್ದೇನೆ. ಈಗ ಹಣದ ಅವಶ್ಯಕತೆ ಇರುವುದರಿಂದ 15 ಸಾವಿರ ರೂ. ನಿಮಗೆ ಮಾರುತ್ತೇನೆ’ ಎಂದು ಹೇಳಿದರೆ ಕಾರ್ಮಿಕರು ಕನಿಷ್ಠ 10 ಸಾವಿರ ರೂ.ಗಾದರೂ ಮಾರಾಟವಾದೀತು ಎನ್ನುವ ಸ್ಪಷ್ಟ ಯೋಜನೆ ಇವರದ್ದಾಗಿರುತ್ತದೆ. ಕಾರ್ಮಿಕರು ಕೂಡ ನೋಡಲು ಆಕರ್ಷಕವಾಗಿರುವ, ಪ್ರತಿಷ್ಠಿತ ಕಂಪೆನಿಗಳ ಲೋಗೊ ಇರುವ ಮೊಬೈಲ್‌ಗಳನ್ನು ನೋಡಿ ಖರೀದಿಸುವ ಮನಸ್ಸು ಮಾಡುತ್ತಾರೆ. ಹೀಗೆ ಮಾತಿನಲ್ಲೇ ಮರುಳು ಮಾಡುವ ದಂಧೆಕೋರರು ನಕಲಿ ಮೊಬೈಲ್ ಫೋನ್‌ನ್ನು ಕಾರ್ಮಿಕರ ಕೈಗಿರಿಸಿ ಹಣ ಜೇಬಿಗಿಳಿಸುತ್ತಾರೆ.

 ಸಮಸ್ಯೆ ಕಾಣಿಸಿಕೊಂಡಾಗಲೇ ಸತ್ಯ ಬೆಳಕಿಗೆ: ಮೊಬೈಲ್ ಖರೀದಿಸಿದ ದಿನ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಕಡಿಮೆ ಬೆಲೆಗೆ ದುಬಾರಿ ಮೊಬೈಲ್ ಖರೀದಿಸಿದ ಖುಷಿಯಲ್ಲಿ ಕಾರ್ಮಿಕರು ಇರಬೇಕಾದರೆ 2-3 ದಿನಗಳಲ್ಲಿ ಮೊಬೈಲ್‌ಗಳಲ್ಲಿ ನೆಟ್‌ವರ್ಕ್ ಸಮಸ್ಯೆ, ಟಚ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ನಂತರ ಕಾರ್ಮಿಕರು ಮೊಬೈಲ್ ಅಂಗಡಿಗಳಿಗೆ ಹೋದಾಗಲೇ ಸತ್ಯದ ಅರಿವಾಗುತ್ತದೆ. ಇಲ್ಲಿ ಕೆಲಸ ಮಾಡಲು ಬರುವ ಉತ್ತರ ಪ್ರದೇಶದ ಕಾರ್ಮಿಕರನ್ನೇ ಅವರು ಟಾರ್ಗೆಟ್ ಮಾಡುತ್ತಾರೆ. ಮೋಸಕ್ಕೊಳಗಾದವರ ಮೊಬೈಲ್ ಫೋನ್‌ಗಳ ಫಂಕ್ಷನ್‌ಗಳನ್ನು ನೋಡುವಾಗಲೇ ಅದು ನಕಲಿ ಎಂದು ನಮಗೆ ಮನದಟ್ಟಾಗುತ್ತದೆ. ನೋಡಲು ಒಪ್ಪೊ, ವಿವೋ, ಸ್ಯಾಮ್ಸಂಗ್, ಐಫೋನ್‌ಗಳಂತೆಯೇ ವಂಚಕರು ಮಾರುವ ಮೊಬೈಲ್‌ಗಳು ಇರುತ್ತವೆ ಎಂದು ಮೊಬೈಲ್ ಅಂಗಡಿಯ ಮಾಲಕರೊಬ್ಬರು ಹೇಳುತ್ತಾರೆ.

ಲಾಭಕ್ಕಾಗಿ ಮೋಸ ಹೋಗುವ ಕಾರ್ಮಿಕರು: ದುಬಾರಿ ಮೊಬೈಲ್ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಕಾರ್ಮಿಕರು ಖರೀದಿಸುತ್ತಾರೆ. 20 ಸಾವಿರ ರೂ. ಮೌಲ್ಯದ ಮೊಬೈಲ್ 10 ಸಾವಿರ ರೂ.ಗೆ ಸಿಕ್ಕರೂ 10 ಸಾವಿರ ರೂ. ಲಾಭ ಎಂದು ಕಾರ್ಮಿಕರು ಭಾವಿಸುತ್ತಾರೆ. ಆದರೆ ವಾಸ್ತವ ಏನೆಂದರೆ ಈ ಮೋಸಗಾರರು ಮಾರುವ ನಕಲಿ ಮೊಬೈಲ್‌ಗಳ ಬೆಲೆ ಬರೀ 1 ಸಾವಿರದಿಂದ 1,500 ರೂ. ಮಾತ್ರ.

 ವಲಸೆ ಕಾರ್ಮಿಕರೇ ಟಾರ್ಗೆಟ್ ಯಾಕೆ?: ಸ್ಥಳೀಯವಾಗಿ ಯಾರ ಪರಿಚಯವೂ ಇಲ್ಲದ, ತಮ್ಮ ಕೆಲಸವಾಯಿತು, ಬಾಡಿಗೆ ಕೋಣೆಯಾಯಿತು ಎಂದು ಇರುವ ಕಾರ್ಮಿಕರೇ ಈ ವಂಚಕರಿಗೆ ಸುಲಭದ ತುತ್ತು. ಮೋಸ ಹೋದದ್ದು ಅರಿವಾದರೂ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಲು ಈ ಕಾರ್ಮಿಕರಿಗೆ ಸಹಾಯ ಮಾಡಲು ಇಲ್ಲಿ ಯಾರೂ ಇಲ್ಲ. ಕೆಲಸ ಅರಸಿ ಬಂದ ಕಾರ್ಮಿಕರು ತಮ್ಮ ಕುಟುಂಬದ ಹೊಟ್ಟೆ ತುಂಬಿಸಲು ದುಡಿದು ಬೆಂಡಾಗುತ್ತಾರೆ. ಈ ನಡುವೆ ಮೋಸ ಹೋದರೂ ಪೊಲೀಸ್ ಠಾಣೆಗೆ ಅಲೆದಾಡಿದರೆ ಅವರಿಗೆ ದಿನದ ಸಂಬಳ ನೀಡುವವರು ಯಾರು, ಒಂದು ವೇಳೆ ದೂರು ನೀಡಿದರೂ ಅದು ಯಾರ ವಿರುದ್ಧ?... ಹೀಗೆ ಹಲವು ಪ್ರಶ್ನೆಗಳು ವಲಸೆ ಕಾರ್ಮಿಕರನ್ನು ತಡೆಯುತ್ತದೆ. ಇದನ್ನು ಸಂಪೂರ್ಣವಾಗಿ ಅರಿತಿರುವ ವಂಚಕರು ವಲಸೆ ಕಾರ್ಮಿಕರನ್ನೇ ಗುರಿ ಮಾಡುತ್ತಾರೆ.

ಕರಾವಳಿ ಮಾತ್ರವಲ್ಲ, ರಾಜ್ಯದ ಹಲವೆಡೆ ಇದೆ ಈ ದಂಧೆ: ನಕಲಿ ಮೊಬೈಲ್ ಮಾರಾಟ ದಂಧೆ ಕೇವಲ ಕರಾವಳಿಗಷ್ಟೇ ಸೀಮಿತವಾಗಿಲ್ಲ. ಇದು ರಾಜ್ಯದ ಹಲವೆಡೆಗಳಿಗೆ ವ್ಯಾಪಿಸಿದೆ. ಹಾವೇರಿ, ಕೊಪ್ಪಳಗಳಲ್ಲೂ ಇಂತಹ ಕೃತ್ಯಗಳು ನಡೆದಿರುವ ಬಗ್ಗೆ ವರದಿಗಳಿವೆ.

ಕೊಪ್ಪಳದಲ್ಲಿ ನನ್ನ ಸ್ನೇಹಿತನಿಗೆ ಇದೇ ರೀತಿಯ ವಂಚನೆಯಾಗಿತ್ತು. ಒಬ್ಬ ಗಂಡಸು ಮತ್ತೊಬ್ಬ ಹೆಂಗಸು ನಮ್ಮ ಬಳಿ ಬಂದು ‘ಊರಿಗೆ ಹೊರಟಿದ್ದೇವೆ, ಕೈಯಲ್ಲಿ ಹಣವಿಲ್ಲ, ಮೊಬೈಲ್ ಫೋನ್ ಮಾರುತ್ತೇವೆ’ ಎಂದು ಹೇಳಿದ್ದರು. 18 ಸಾವಿರ ರೂ. ಬೆಲೆ ಹೇಳಿದರು. ನಾವು ಮೊಬೈಲ್ ಖರೀದಿಸಿದೆವು. ಆನಂತರ ಮೊಬೈಲ್‌ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಅಂಗಡಿಗೆ ಒಯ್ದೆಗ ಇದು ನಕಲಿ ಮೊಬೈಲ್ ಎಂದು ತಿಳಿದುಬಂತು. ಇಂತಹ 3-4 ಘಟನೆಗಳು ನಡೆದ ಬಗ್ಗೆ ಸ್ನೇಹಿತರು ನನಗೆ ತಿಳಿಸಿದ್ದಾರೆ.

 ಕಾಟಿಪಳ್ಳದಲ್ಲಿರುವ ಕೊಪ್ಪಳದ ಕಾರ್ಮಿಕ

ಅಣ್ಣ ಅನಾರೋಗ್ಯದಿಂದಿದ್ದಾರೆ. ಊರಿಗೆ ಹೋಗಬೇಕಾಗಿದೆ ಎಂದು ಹೇಳಿ ಅಪರಿಚಿತರಿಬ್ಬರು ನನಗೆ ಮೊಬೈಲ್ ಫೋನ್ ಮಾರಿದ್ದರು. ಕಂಪೆನಿ ಮೊಬೈಲ್ ಎಂದು ನಾನು ಖರೀದಿಸಿದ್ದೆ. ಅಂಗಡಿಗೆ ಕೊಟ್ಟಾಗಲೇ ಅದು ನಕಲಿ ಎಂದು ತಿಳಿದುಬಂತು. ಬೈಕ್‌ನಲ್ಲಿ ಬಂದಿದ್ದ ಒಬ್ಬ ಪುರುಷ ಮತ್ತು ಮಹಿಳೆ ವಂಚನೆ ಮಾಡಿದ್ದಾರೆ.

 ಜಗದೀಶ, ಮೋಸ ಹೋದ ವ್ಯಕ್ತಿ

  ಕಾರ್ಮಿಕರಿಗೆ 10 ಸಾವಿರ ರೂ.ಗೆ ಮಾರುವ ಈ ಮೊಬೈಲ್ ಫೋನ್‌ಗಳ ನೈಜ ಮುಖಬೆಲೆ ಕೇವಲ 1,000-2,000 ಸಾವಿರ ರೂ. ಇಂತಹ ವಂಚನೆಯ 5-6 ಪ್ರಕರಣಗಳು ನನ್ನ ಗಮನಕ್ಕೆ ಬಂದಿದೆ. ಮೋಸ ಹೋದವರಲ್ಲಿ ಹೆಚ್ಚಿನವರು ಉತ್ತರ ಭಾರತ, ಉತ್ತರ ಕರ್ನಾಟಕದ ಕಾರ್ಮಿಕರು. ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. 

ಝಿಯಾದ್, ಮೊಬೈಲ್ ಅಂಗಡಿ ಮಾಲಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)