varthabharthi

ನಿಮ್ಮ ಅಂಕಣ

ಕೊರೋನ: ಆಪತ್ತಿನಲ್ಲೂ ಸಂಪತ್ತು!

ವಾರ್ತಾ ಭಾರತಿ : 16 Mar, 2020
ಅಲೆಕ್ಸ್ ಮಿಲಿಯಮ್ಸ್ ಮತ್ತು ಜೋನಾ ಇಂಗಲ್ ಬ್ರೋಮ್‌ವಿಚ್

ಹೊಸ ಕೊರೋನ ವೈರಸ್‌ಗೆ ರಾಷ್ಟ್ರೀಯ ಗಡಿಗಳಾಗಲಿ ಸಾಮಾಜಿಕ ಲಕ್ಷ್ಮಣ ರೇಖೆಗಳಾಗಲಿ ಇಲ್ಲ. ಇದರ ಅರ್ಥ ಸಾಮಾಜಿಕ ಗಡಿಗಳು, ಗೋಡೆಗಳು ಇಲ್ಲವೆಂದಲ್ಲ.

ಕೊರೋನ ವೈರಸ್ ಜಾಗತಿಕವಾಗಿ ಹರಡುತ್ತಿರುವಂತೆಯೇ ವಿಶ್ವದ ಶ್ರೀಮಂತರು ಅದನ್ನೆದುರಿಸಲು ಜನಸಾಮಾನ್ಯರಿಗಿಂತ ಬೇರೆಯೇ ಆದ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಮೆರಿಕದ ಖ್ಯಾತ ಸರ್ಜನ್ ಜನರಲ್ ಜೆರೋಮ್ ಆ್ಯಡಮ್ ಇತ್ತೀಚೆಗೆ ಟ್ವಿಟರ್‌ನಲ್ಲಿ ಜನರಿಗೆ ಮಾಸ್ಕ್ ಸನ್ನಿಗೆ, ಮಾಸ್ಕ್ ಮೇನಿಯಾಗೆ ಶರಣಾಗಬೇಡಿ ಎಂದು ಅಂಗಲಾಚಿದರು. ಆದರೂ ಮಾಸ್ಕ್ ಉತ್ಪಾದಿಸುವ ಕಂಪೆನಿಗಳು ದುಬಾರಿ ಬೆಲೆಯ ಮಾಸ್ಕ್‌ಗಳನ್ನು ಮಾರಾಟ ಮಾಡಿ, ಜಾಹೀರಾತುಗಳ ಮೂಲಕ ಆಪತ್ತಿನಲ್ಲೂ ಸಂಪತ್ತನ್ನು ದೋಚಿಕೊಳ್ಳುತ್ತಿವೆ. ಉದಾಹರಣೆಗೆ ಐದು ಪದರಗಳ ಸೋಸುವಿಕೆಯಿರುವ ಮಾಸ್ಕ್ ತಯಾರಿಸುವ ಸ್ವೀಡನ್‌ನ ಒಂದು ಕಂಪೆನಿ ಏರಿನಮ್ ತನ್ನ ಏರಿನಮ್ ಮಾಸ್ಕನ್ನು 69ರಿಂದ 99 ಡಾಲರ್‌ಗಳ (ರೂ.5,100ರಿಂದ 7,400) ಬೆಲೆಗೆ ಮಾರಾಟ ಮಾಡುತ್ತಿದೆ. ಇಷ್ಟೊಂದು ದುಬಾರಿ ಮಾಸ್ಕ್‌ಗೆ ಕಾದಿರುವ ಶ್ರೀಮಂತರು ಇದನ್ನು ಕೊಳ್ಳಲು ಎಷ್ಟೊಂದು ಮುಗಿಬಿದ್ದರೆಂದರೆ ಎಪ್ರಿಲ್‌ವರೆಗೆ ತಾನು ಉತ್ಪಾದಿಸುವ ಎಲ್ಲ ಮಾಸ್ಕ್ ಗಳು ಈಗಾಗಲೇ ಸೋಲ್ಡ್‌ಔಟ್ ಎಂದು ಕಂಪೆನಿ ತನ್ನ ವೆಬ್‌ಸೈಟ್‌ನಲ್ಲಿ ಘೋಷಿಸಿಬಿಟ್ಟಿದೆ. ಹಾಗೆಯೇ ಎನ್ 95 ಎಂಬ ಇನ್ನೊಂದು ಮಾಸ್ಕ್‌ಗೆ 300 ಜನ ಈಗಾಗಲೇ ವೈಟಿಂಗ್ ಲಿಸ್ಟ್ ನಲ್ಲಿ ಕಾಯುತ್ತಿದ್ದಾರೆ. ಕೇಂಬ್ರಿಜ್ ಮಾಸ್ಕ್ ಕಂಪೆನಿ ಎಂಬ ಒಂದು ಬ್ರಿಟಿಷ್ ಕಂಪೆನಿ ತಲಾ 30 ಡಾಲರ್‌ಗೆ ಮಾರುವ ಮಾಸ್ಕ್‌ಗಳಿಗೆ 20ರಿಂದ 30 ಪಟ್ಟು ಬೇಡಿಕೆ ಹೆಚ್ಚಿದೆ.

ಒಟ್ಟಿನಲ್ಲಿ, ವಿಶ್ವದ ಶ್ರೀಮಂತರು ಕೊರೋನ ವೈರಸ್‌ನಿಂದ ದೂರ ಉಳಿಯಲು ಎಷ್ಟೇ ದೊಡ್ಡ ಮೊತ್ತವನ್ನಾದರೂ ಸುರಿಯಲು ಸಿದ್ಧರಾಗಿದ್ದಾರೆ. ಇಷ್ಟರವರೆಗೆ ವಿಮಾನಗಳಲ್ಲಿ ಮೊದಲ ದರ್ಜೆಯ ಟಿಕೆಟ್‌ನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮಂತ ಉದ್ಯಮಿಗಳು ಅಂತಹ ವಿಮಾನಕ್ಕೆ ಗುಡ್‌ಬೈ ಹೇಳಿ ತಾವೇ ಸ್ವತಃ ಪ್ರತ್ಯೇಕ ಖಾಸಗಿ ವಿಮಾನವನ್ನು ಬಾಡಿಗೆಗೆ ಪಡೆದು ಪ್ರಯಾಣಿಸುತ್ತಿದ್ದಾರೆ.

ಶ್ರೀಮಂತ ಗಿರಾಕಿಗಳು ದುಬಾರಿ ಶುಲ್ಕ ವಸೂಲಿ ಮಾಡುವ ಖಾಸಗಿ ವೈದ್ಯರ ಹಾಗೂ ಇತರ ವಿಐಪಿ ಆರೋಗ್ಯ ಸೇವೆಗಳ ನೆರವು ಪಡೆಯುತ್ತಿದ್ದಾರೆ. ಕ್ಯೂನಲ್ಲಿ ನಿಂತಾಗ ನಿಮ್ಮ ಹಿಂದೆ ಸಾಲಿನಲ್ಲಿ ನಿಂತಿರುವ ಮೂರನೆಯ ವ್ಯಕ್ತಿ ಕೆಮ್ಮಿದ ಧ್ವನಿ ನಿಮ್ಮನ್ನು ಕಂಗಾಲಾಗಿಸಬಹುದು. ಆದ್ದರಿಂದ ಇಂತಹ ರಿಸ್ಕ್ ತೆಗೆದುಕೊಳ್ಳುವ ಉಸಾಬರಿಯೇ ಬೇಡ ಎನ್ನುವ ಶ್ರೀಮಂತರು ವಿಮಾನ ನಿಲ್ದಾಣಗಳಲ್ಲಿ ಕ್ಯೂನಲ್ಲಿ ನಿಲ್ಲುವ ಬದಲು ಖಾಸಗಿ ವಿಮಾನದಲ್ಲಿ ದೂರದ ಸುರಕ್ಷಿತ ತಾಣಗಳಿಗೆ ಹಾರುತ್ತಿದ್ದಾರೆ. ತಮ್ಮ ಅದ್ದೂರಿಯಾದ ಬಂಗಲೆಗಳಲ್ಲಿ ವಾಸಿಸುತ್ತಿರುವ ಕೆಲವರು, ಪರಿಸ್ಥಿತಿ ಇನ್ನಷ್ಟು ಹದಗೆಟ್ಟಲ್ಲಿ, ಜೆಟ್ ವಿಮಾನಗಳಲ್ಲಿ ಹಾರಿ ದೂರದ ತಾಣಗಳಿಗೆ ತಲುಪಲು ಜೆಟ್‌ಗಳನ್ನು ಬುಕ್ ಮಾಡಿ ಇಟ್ಟುಕೊಂಡಿದ್ದಾರೆ.

ಚೀನಾದಿಂದ ಹೊರಗೆ ಹೋಗಲು ಹಲವು ಕೋಟ್ಯಧೀಶ ಎಕ್ಸಿಕ್ಯೂಟಿವ್‌ಗಳು ಜನರನ್ನು ದೇಶದಿಂದ ಹೊರಗೆ ಸಾಗಿಸುವ ‘‘ಇವ್ಯಾಕ್ಯುವೇಶನ್ ವಿಮಾನಗಳಿಗಾಗಿ’’ ಭಾರೀ ಮೊತ್ತದ ಬಾಡಿಗೆ ನೀಡಿದ್ದಾರೆ ಎಂದು ‘ದಿ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ. ಕೆಲವು ಖಾಸಗಿ ಜೆಟ್ ವಿಮಾನ ಕಂಪೆನಿಗಳಿಗೆ ಭಯ ಎನ್ನುವುದು ಹಣ ಮಾಡುವ ಅವಕಾಶಕ್ಕೆ ಸಮಾನವಾಗಿದೆ. ಫ್ಲೋರಿಡಾದ ಒಂದು ಚಾರ್ಟರ್ ಜೆಟ್ (ವಿಮಾನ) ಕಂಪೆನಿ ವ್ಯಾಪಾರ ಹೇಗೆ, ಎಷ್ಟು ಕುದುರತ್ತದೆಂದು ಪರೀಕ್ಷಿಸಲಿಕ್ಕಾಗಿ ‘‘ಖಾಸಗಿ ವಿಮಾನದಲ್ಲಿ ಪ್ರಯಾಣಿಸಿ ಕೊರೋನ ವೈರಸ್‌ನಿಂದ ದೂರ ಉಳಿಯಿರಿ... ಇವತ್ತೇ ವಿಮಾನಕ್ಕಾಗಿ ವಿನಂತಿ ಕಳುಹಿಸಿ’’ ಎನ್ನುವ ಒಂದು ಮಾರ್ಕೆಟಿಂಗ್ ಇ-ಮೈಲ್ ಕಳುಹಿಸಿತು.

ಕಂಪೆನಿಗೆ ವಿನಂತಿಗಳ ಸರಮಾಲೆಯೇ ಬಂತು. ಫ್ಲೋರಿಡಾದಿಂದ ನ್ಯೂಯಾರ್ಕ್‌ಗೆ ಮಧ್ಯಮ ಗಾತ್ರದ ಒಂದು ಜೆಟ್ ವಿಮಾನಕ್ಕೆ 20,000 ಡಾಲರ್ (15ಲಕ್ಷ ರೂ.) ಬಾಡಿಗೆ ನೀಡಲು ಹತ್ತಾರು ಶ್ರೀಮಂತ ಕುಳಗಳು ಸಿದ್ಧರಿದ್ದರು.

ಇತರ ಶ್ರೀಮಂತ ಪ್ರವಾಸಿಗರು ಇಟಲಿಯಂತಹ ಕೊರೋನ ವೈರಸ್ ಪೀಡಿತ ಪ್ರದೇಶಗಳಿಂದ ತುಂಬ ದೂರದಲ್ಲಿರುವ ಮೆಡಿಟರೇನಿಯನ್ ಪ್ರದೇಶದ ಬಿಸಿಲ ತಾಣಗಳಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಕೋಣೆಗಳ ಸಹವಾಸ ಬೇಡ ಎನ್ನುವ, 24 ಗಂಟೆಗಳ ಕಾಲವೂ ವೈದ್ಯರ ಸೇವೆ ದೊರಕಬೇಕೆಂದು ಬಯಸುವ ಕೆಲವರು ‘ಸದಸ್ಯರಿಗೆ ಮಾತ್ರ’ ಎನ್ನುವ ದುಬಾರಿ ಆಸ್ಪತ್ರೆಗಳ ಉಪಯೋಗ ಪಡೆಯುತ್ತಿದ್ದಾರೆ. ‘ಸೊಲ್ಲಿಸ್ ಹೆಲ್ತ್’ ಎಂಬ ನ್ಯೂಯಾರ್ಕ್‌ನ ಒಂದು ಆರೋಗ್ಯ ಸೇವಾ ಸಂಸ್ಥೆ ವರ್ಷ ಒಂದರ 8,000 ಡಾಲರ್‌ಗೆ ಕುಟುಂಬ ಸದಸ್ಯತ್ವ ನೀಡುತ್ತದೆ. (ಇದು ಸದಸ್ಯತ್ವ ಶುಲ್ಕ ಮಾತ್ರ. ಹಾಗಾದರೆ ಇನ್ನು ಇತರ ವೈದ್ಯಕೀಯ ವೆಚ್ಚಗಳು ಎಷ್ಟಾಗಬಹುದೆಂದು ಊಹಿಸಿಕೊಳ್ಳಿ)

ಕೊರೋನ ವೈರಸ್ ಅಮೆರಿಕದಲ್ಲಿ ಕಾಲಿಟ್ಟ ಬಳಿಕ ಸದಸ್ಯರಾಗ ಬಯಸುವವರ ದೂರವಾಣಿ ಕರೆಗಳು ವಿಪರೀತ ಹೆಚ್ಚಾಗಿವೆೆ. ಈಗಾಗಲೇ ಸದಸ್ಯರಾಗಿರುವವರ ಆತಂಕ ಎಷ್ಟೊಂದು ತೀವ್ರವಾಗಿದೆ ಎಂದರೆ ಕೆಲವರು ವೈರಾಣು ವಿರೋಧಿ/ತಡೆ ಔಷಧಿಗಳನ್ನು ಕೊಂಡುಕೊಂಡು ಸಂಗ್ರಹಿಸಿ ಇಟ್ಟಿದ್ದಾರೆ. ಅಲ್ಲದೆ ಆಸ್ಪತ್ರೆಗೆ ಕರೆಮಾಡಿ ಅಲ್ಲಿ ಜನರ ನೂಕು ನುಗ್ಗಲು ಉಂಟಾದೀತೇ ಮತ್ತು ಮಾಸ್ಕ್‌ಗಳು ಸಿಗದೆ ಇರುವ ಸ್ಥಿತಿ ಬರಬಹುದೇ ಎಂದು ಆತಂಕದಿಂದ ವಿಚಾರಿಸುತ್ತಿದ್ದಾರೆ. ಸೊಲ್ಲಿಸ್ ಹೆಲ್ತ್‌ನ ವೈದ್ಯಕೀಯ ನಿರ್ದೇಶಕ ಡಾಕ್ಟರ್ ಬೆನ್‌ಸ್ಟೀನ್ ಹೇಳುವಂತೆ ನಟಿಯೊಬ್ಬಳು ಜಪಾನ್‌ನಲ್ಲಿ ನಡೆಯುವ ಶೂಟಿಂಗ್‌ನಲ್ಲಿರುವ ಚುಂಬಿಸುವ ದೃಶ್ಯವೊಂದರ ಬಗ್ಗೆ ತನ್ನ ಆತಂಕ ತೋಡಿಕೊಂಡಿದ್ದಾಳೆ. ತಾನೇನಾದರೂ ಜ್ವರದಂತಹ ರೋಗ ಲಕ್ಷಣಗಳನ್ನು ಹೊಂದಿ ಮರಳಿ ಬಂದಲ್ಲಿ ತನಗೆ ರೋಗಿಗಳಿಂದ ತುಂಬಿರುವ ಕೋಣೆ ನೀಡದೆ, ಪ್ರತ್ಯೇಕ ಕೋಣೆಯ ವ್ಯವಸ್ಥೆಯಾಗುವಂತೆ ಖಾತರಿಪಡಿಸಿಕೊಂಡಿದ್ದಾಳೆ.

ಕೃಪೆ: nytimes.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)