varthabharthi

ಸಂಪಾದಕೀಯ

ಕಚ್ಚಾ ತೈಲಕ್ಕೆ ಸುಂಕ ಏರಿಕೆ: ಜನರಿಗೆ ವಂಚಿಸಿದ ಸರಕಾರ

ವಾರ್ತಾ ಭಾರತಿ : 16 Mar, 2020

‘ದೇವರು ಕೊಟ್ಟರೂ ಪೂಜಾರಿ ಬಿಡ’ ಎನ್ನುವ ಒಂದು ಗಾದೆಯಿದೆ. ಭಾರತ ಇಂದು ಆರ್ಥಿಕವಾಗಿ ಜರ್ಜರಿತವಾಗಿ ಕೂತಿದೆ. ಬೆಲೆಯೇರಿಕೆ, ಹಣದುಬ್ಬರ, ನಿರುದ್ಯೋಗ ಇವೆಲ್ಲವುಗಳಿಂದ ಶ್ರೀಸಾಮಾನ್ಯ ತಲೆಯೆತ್ತಲಾಗದೆ ಮಕಾಡೆ ಮಲಗಿದ್ದಾನೆ. ಭವಿಷ್ಯದಲ್ಲಾದರೂ ಎಲ್ಲ ಸರಿಯಾಗುತ್ತದೆ ಎನ್ನುವ ಭರವಸೆ ಆತನಿಗಿಲ್ಲ. ಸರಕಾರ ಸಂಪೂರ್ಣ ಕೈ ಬಿಟ್ಟು ಜನರ ನಡುವೆ ಬೇರೆ ಬೇರೆ ಆತಂಕಗಳನ್ನು ಬಿತ್ತಿ ತನ್ನ ವೈಫಲ್ಯವನ್ನು ಮರೆ ಮಾಚಲು ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತದ ಪಾಲಿಗೆ ದೇವರೇ ಕಣ್ಣು ತೆರೆದಂತೆ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ, ಅಂದರೆ ಶೇ. 50ರಷ್ಟು ಇಳಿಕೆಯಾಯಿತು. ಇದು ಈ ದೇಶದ ಜನರ ಸಂಕಟಗಳನ್ನು ನೋಡಿ ದೇವರೇ ಕೊಟ್ಟ ವರವಾಗಿತ್ತು. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯ ಪೈಪೋಟಿ ಕಚ್ಚಾ ತೈಲ ದರ ಇಳಿಯಲು ಮುಖ್ಯ ಕಾರಣ. ಇದರ ಪರಿಣಾಮವಾಗಿ ದೇಶದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶೇ. 25ರಷ್ಟಾದರೂ ಇಳಿಕೆಯಾಗಬೇಕಾಗಿತ್ತು. ಆದರೆ ಸರಕಾರದ ಅತ್ಯಂತ ಆಘಾತಕಾರಿಯಾದ ನಡೆಯೊಂದರಿಂದಾಗಿ ಈ ತೈಲದ ಬೆಲೆ ಇಳಿಕೆಯ ಲಾಭ ಜನಸಾಮಾನ್ಯರಿಗೆ ತಲುಪದಂತಾಗಿದೆ. ಈ ಲಾಭವನ್ನು ಸರಕಾರವೇ ತನ್ನ ಕಿಸೆಗೆ ಇಳಿಸಲು ಮುಂದಾಗಿದೆ.

ಸರಕಾರ ಏಕಾಏಕಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 3 ರೂಪಾಯಿಯಷ್ಟು ಹೆಚ್ಚಿಸಿದೆ. ಅಷ್ಟೇ ಅಲ್ಲ, ರಸ್ತೆ ಉಪ ತೆರಿಗೆಯನ್ನು ಒಂದು ರೂಪಾಯಿಯಷ್ಟು ಹೆಚ್ಚಿಸಿದೆ. ಜನಸಾಮಾನ್ಯರ ಕೈಯಲ್ಲಿದ್ದುದನ್ನೆಲ್ಲ ಕಿತ್ತುಕೊಂಡು ಅವರನ್ನು ಬೀದಿಯಲ್ಲಿ ನಿಲ್ಲಿಸಿರುವ ಸರಕಾರ, ಇದೀಗ ಅವರಿಗೆ ಅದೃಷ್ಟದ ಮೂಲಕ ದೊರಕಿದ ಲಾಭವನ್ನೂ ತಾನೇ ಕಿತ್ತು ಕಿಸೆಗೆ ಇಳಿಸಿಕೊಂಡಿದೆ. 2015ರಲ್ಲಿ, ನರೇಂದ್ರ ಮೋದಿ ‘ಅಚ್ಛೇ ದಿನ್ ಆನೆ ವಾಲಾ ಹೇ’ ಎಂದು ಘೋಷಿಸಿದ ಸಮಯ. ಮೋದಿಯವರ ಅದೃಷ್ಟಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ದೊಡ್ಡ ಮಟ್ಟದಲ್ಲಿ ಇಳಿಯ ತೊಡಗಿತು. ಪೂರಕವಾಗಿ ಅಲ್ಪಪ್ರಮಾಣದಲ್ಲಿ ಪೆಟ್ರೋಲ್ ಬೆಲೆಯೂ ಇಳಿಕೆಯಾಯಿತು. ‘ಮೋದಿ ಅಧಿಕಾರಕ್ಕೇರಿದ್ದೇ ತೈಲ ಬೆಲೆಯನ್ನು ಇಳಿಸಿದರು’ ಎಂದು ಅವರ ಭಕ್ತರು ಸಂಭ್ರಮಿಸತೊಡಗಿದರು. ಆಗ ವಿರೋಧ ಪಕ್ಷ ‘‘ಇದರಲ್ಲಿ ಮೋದಿಯ ಕೈವಾಡವೇನೂ ಇಲ್ಲ. ಅಂತರ್‌ಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯೇ ಕಾರಣ’’ ಎಂದು ಸ್ಪಷ್ಟೀಕರಣ ನೀಡತೊಡಗಿದರು. ಆಗ ನರೇಂದ್ರ ಮೋದಿ ಭಾಷಣವೊಂದರಲ್ಲಿ ‘‘ನೋಡಿ, ನಾನು ಅಧಿಕಾರಕ್ಕೆ ಬಂದದ್ದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಇಳಿಯಿತು. ಇದರಲ್ಲಿ ನನ್ನ ಪ್ರಯತ್ನವಿಲ್ಲ, ಅದೃಷ್ಟವೇ ಕಾರಣ ಎಂದು ವಿರೋಧ ಪಕ್ಷೀಯರು ಟೀಕಿಸುತ್ತಿದ್ದಾರೆ. ನನ್ನ ಆಕ್ಷೇಪವಿಲ್ಲ. ಈಗ ನೀವೇ ಹೇಳಿ, ನಿಮಗೆ ಅದೃಷ್ಟವಂತ ಪ್ರಧಾನಿ ಬೇಕೇ, ಅಥವಾ ಯುಪಿಎ ಸರಕಾರದ ದುರದೃಷ್ಟರು ಬೇಕೆ...’’ ಎಂದು ಕೇಳಿದ್ದರು.

    2014ಕ್ಕೂ ಹಿಂದೆ ಕಚ್ಚಾತೈಲ ಬೆಲೆ ಅದೆಷ್ಟೇ ಏರಿಕೆಯಾದರೂ, ಜನಸಾಮಾನ್ಯರ ಹಿತಾಸಕ್ತಿಯನ್ನು ಗಮನಿಸಿ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಯದ್ವಾತದ್ವಾ ಏರಿಸಲು ಅವಕಾಶ ನೀಡುತ್ತಿರಲಿಲ್ಲ. ಯಾಕೆಂದರೆ ಪೆಟ್ರೋಲ್ ಬೆಲೆ ದೇಶದ ಆರ್ಥಿಕ ಗತಿಯನ್ನು, ಜನಸಾಮಾನ್ಯರ ದೈನಂದಿನ ಬದುಕನ್ನು ನಿಯಂತ್ರಿಸುತ್ತದೆ. ಪೆಟ್ರೋಲ್ ಬೆಲೆಯೇರಿಕೆಯಾದಾಕ್ಷಣ ಪ್ರಯಾಣದ ದರ, ಸಾಗಾಟದರಗಳೆಲ್ಲ ಅಧಿಕಗೊಳ್ಳುತ್ತವೆ. ಅದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಬೆಲೆಯೇರಿಕೆಯಾಗಿ ಜನಸಾಮಾನ್ಯರ ದೈನಂದಿನ ಬದುಕು ನರಕವಾಗುತ್ತದೆ. ಜನರ ಹಿತಾಸಕ್ತಿಯನ್ನು ಕಾಪಾಡುವುದು ಸರಕಾರದ ಉದ್ದೇಶವಾಗಿರುವುದರಿಂದ, ಅಂತರ್‌ರಾಷ್ಟ್ರೀಯ ಕಚ್ಚಾತೈಲ ಬೆಲೆ ಏರಿಕೆಯನ್ನು ಮುಂದಿಟ್ಟುಕೊಂಡು ಕೈ ಚೆಲ್ಲಿ ಕುಳಿತುಕೊಳ್ಳುವುದಕ್ಕಾಗುವುದಿಲ್ಲ. ಈ ಹಿಂದೆಲ್ಲ ಪೆಟ್ರೋಲ್ ಬೆಲೆ 50 ಪೈಸೆ ಏರಿಸುವುದಿದ್ದರೂ ಸರಕಾರ ಹಿಂದು ಮುಂದು ನೋಡಬೇಕಾಗಿತ್ತು. ಯಾಕೆಂದರೆ ಜನರು ಬೀದಿಗಿಳಿದು ಸರಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರು. ಆದರೆ 2014ರ ಬಳಿಕ ಎಲ್ಲವೂ ಬದಲಾಯಿತು. ಮುಖ್ಯವಾಗಿ ಬೆಲೆಯ ಏರಿಳಿತದಲ್ಲಿ ಮಧ್ಯ ಪ್ರವೇಶಿಸುವುದರಿಂದ ಸರಕಾರ ಹಿಂದಕ್ಕೆ ಸರಿಯಿತು. ಅಂದರೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಪೆಟ್ರೋಲ್ ಬೆಲೆ ನಿಗದಿಯಾಗಬೇಕು ಎಂಬ ನಿರ್ಧಾರಕ್ಕೆ ಬಂತು.

ಕಚ್ಚಾ ತೈಲದ ಬೆಲೆ ಏರಿಕೆಯಾದರೂ, ಇಳಿಕೆಯಾದರೂ ಅದರ ನೇರ ಲಾಭವನ್ನು, ನಷ್ಟವನ್ನು ಗ್ರಾಹಕರೇ ತನ್ನದಾಗಿಸಿಕೊಳ್ಳಬೇಕು ಎನ್ನುವ ನೀತಿಯ ಮೂಲಕ, ಬೆಲೆಯೇರಿಕೆಯ ಆರೋಪಗಳಿಂದ ಸರಕಾರ ಪಾರಾಯಿತು. 2016ರಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಲೆಯಿಳಿಕೆಯಾದರೂ, ಅದರ ನಿರೀಕ್ಷಿತ ಲಾಭ ಈ ದೇಶದ ಜನರಿಗೆ ಸಿಗಲಿಲ್ಲ. ಕಚ್ಚಾತೈಲದ ವೆಚ್ಚ ಮತ್ತು ಇಳಿಕೆಯಾದ ಬೆಲೆಗೆ ಅಜಗಜಾಂತರವಿತ್ತು. ಸಂಸ್ಥೆ ಬೆಲೆಯೇರಿಕೆ ಮಾಡಿದಾಗೆಲ್ಲ ಸರಕಾರ, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯ ಕಡೆಗೆ ಕೈ ತೋರಿಸಿ ಅಸಹಾಯಕ ವ್ಯಕ್ತಪಡಿಸುತ್ತಿತ್ತು. ಆದರೆ ಜನರ ಅದೃಷ್ಟಕ್ಕೆ ಸೌದಿ ಅರೇಬಿಯ-ರಶ್ಯ ನಡುವಿನ ಬೆಲೆ ಸಮರದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇ. 31ರಷ್ಟು ಕುಸಿಯಿತು. 1991ರಲ್ಲಿ ಕೊಲ್ಲಿ ಸಮರದ ಬಳಿಕದ ಅತ್ಯಂತ ದೊಡ್ಡ ಕುಸಿತ ಇದಾಗಿದೆ. ಭಾರತ ತನ್ನ ಶೇ. 84ಕ್ಕೂ ಅಧಿಕ ಕಚ್ಚಾ ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಆದುದರಿಂದ ಭಾರತದ ತೈಲ ಕಂಪೆನಿಗಳಿಗೆ ಸಂಕಷ್ಟವನ್ನುಂಟು ಮಾಡಿದರೂ, ಗ್ರಾಹಕರಿಗೆ ಮಾತ್ರ ಭಾರೀ ಲಾಭವನ್ನು ತಂದುಕೊಡುವ ಕುಸಿತ ಇದಾಗಿತ್ತು. ಈ ಹಿಂದೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯೇರಿಕೆಯಾಗಿದ್ದಾಗ ಅಧಿಕ ದುಡ್ಡು ಪಾವತಿಸಿದ್ದ ಭಾರತೀಯರಿಗೆ ಈ ಕುಸಿತದ ಲಾಭ ಪಡೆಯುವ ಸರ್ವ ಅಧಿಕಾರವೂ ಇತ್ತು.

ವಿಪರ್ಯಾಸವೆಂದರೆ, ಈವರೆಗೆ ಬೆಲೆ ನಿಗದಿಯಲ್ಲಿ ಯಾವುದೇ ಪಾತ್ರವಹಿಸದ ಸರಕಾರ ಈಗ, ಕುಸಿತದ ಲಾಭವನ್ನು ತನ್ನದಾಗಿಸಲು ಹೊರಟಿದೆ. ಏಕಾಏಕಿ ಭಾರಿ ಅಬಕಾರಿ ಸುಂಕವನ್ನು ಹಾಕುವ ಮೂಲಕ, ಜನರಿಗೆ ಹೋಗಬೇಕಾದ ಹಣವನ್ನು ತೆರಿಗೆ ರೂಪದಲ್ಲಿ ತನ್ನ ಕಿಸೆಗೆ ಇಳಿಸಲು ನೋಡುತ್ತಿದೆ. ಅಂತರ್‌ರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆ-ಇಳಿಕೆಯ ಆಧಾರದಲ್ಲೇ ಪೆಟ್ರೋಲ್ ಬೆಲೆ ನಿಗದಿಯಾಗುತ್ತದೆ ಎಂದು ಜನರಿಗೆ ಹೇಳಿ, ಈ ವರೆಗೆ ಅವರ ನೆರವಿಗೆ ಯಾವ ರೀತಿಯಲ್ಲೂ ಮುಂದಾಗದ ಸರಕಾರ ಇದೀಗ ಕಚ್ಚಾ ತೈಲ ಬೆಲೆ ಕುಸಿತದ ಲಾಭವನ್ನು ಗ್ರಾಹಕರಿಂದ ಕಸಿದು ತನ್ನ ಖಜಾನೆ ತುಂಬಿಕೊಳ್ಳುವುದು ಎಷ್ಟು ಸರಿ? ಇಂದು ದೇಶದ ಆರ್ಥಿಕತೆ ಕುಸಿದಿರುವುದು ಸರಕಾರದ ತಪ್ಪು ನಿರ್ಧಾರಗಳಿಂದಾಗಿ. ಅದಕ್ಕಾಗಿ ಜನಸಾಮಾನ್ಯರು ಯಾಕೆ ದಂಡವನ್ನು ತೆರಬೇಕು? ಸರಕಾರದ ಈ ಲಜ್ಜೆಗೇಡಿತನದ ನಿರ್ಧಾರವನ್ನು ಜನರು ಪ್ರಶ್ನಿಸಲೇ ಬೇಕಾಗಿದೆ. ಬೆಲೆ ಕುಸಿತದ ಲಾಭವನ್ನು ತನ್ನದಾಗಿಸಿಕೊಳ್ಲುತ್ತಿರುವ ಸರಕಾರ, ನಾಳೆ ಕಚ್ಚಾ ತೈಲ ಬೆಲೆ ಏರಿಕೆಯಾದರೆ, ಅದರ ಹೊರೆಯನ್ನು ಹೊರಲು ಸಿದ್ಧವಿದೆಯೇ ಎಂದು ಗಟ್ಟಿ ಧ್ವನಿಯಲ್ಲಿ ಸರಕಾರವನ್ನು ಪ್ರಶ್ನಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)