varthabharthi

ಕ್ರೀಡೆ

ನ್ಯೂ ಸೌತ್ ವೇಲ್ಸ್‌ ಶೀಫೀಲ್ಡ್ ಶೀಲ್ಡ್ ಪ್ರಶಸ್ತಿ: ಕೊರೋನ ಕಾರಣದಿಂದಾಗಿ ಫೈನಲ್ ಪಂದ್ಯ ರದ್ದು

ವಾರ್ತಾ ಭಾರತಿ : 17 Mar, 2020

 ಮೆಲ್ಬೋರ್ನ್, ಮಾ.17: ಕೊರೋನ ವೈರಸ್ ಸೋಂಕು ಹರಡುತ್ತಿರುವ ಕಾರಣದಿಂದಾಗಿ ಶೀಫೀಲ್ಡ್ ಶೀಲ್ಡ್ ಫೈನಲ್ ಪಂದ್ಯ ರದ್ದಾಗಿದ್ದು, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ನ್ಯೂ ಸೌತ್ ವೇಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕ್ರಿಕೆಟ್ ಆಸ್ತ್ರೇಲಿಯವು ನ್ಯೂ ಸೌತ್ ವೇಲ್ಸ್‌ನ್ನು ಚಾಂಪಿಯನ್ ತಂಡವೆಂದು ಘೋಷಿಸಿದೆ.

ನ್ಯೂ ಸೌತ್ ವೇಲ್ಸ್ ತಂಡ 9 ಪಂದ್ಯಗಳಲ್ಲಿ 6ರಲ್ಲಿ ಜಯ ಗಳಿಸಿ 51 ಅಂಕಗಳೊಂದಿಗೆ ಫೈನಲ್‌ಗೆ ತೇರ್ಗಡೆಯಾಗಿತ್ತು. ಮಾ.27ರಂದು ಫೈನಲ್ ನಡೆಯಬೇಕಿತ್ತು. ಆದರೆ ಪಂದ್ಯ ರದ್ದಾಗಿರುವ ಹಿನ್ನೆಲೆಯಲ್ಲಿ ನ್ಯೂ ಸೌತ್ ವೇಲ್ಸ್ ಸುಲಭವಾಗಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ನ್ಯೂ ಸೌತ್ ವೇಲ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರೆ, ವಿಕ್ಟೋರಿಯಾ 3 ಜಯ, 3 ಸೋಲು ಮತ್ತು 3 ಪಂದ್ಯಗಳಲ್ಲಿ ಡ್ರಾ ಸಾಧಿಸಿ 38 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ಆಟಗಾರರ, ಅಭಿಮಾನಿಗಳ, ಸಿಬ್ಬಂದಿ , ಸ್ವಯಂಸೇವಕರು ಮತ್ತು ಅಧಿಕಾರಿಗಳ ಹಿತದೃಷ್ಟಿಯಿಂದ ಫೈನಲ್ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆವಿನ್ ರಾಬರ್ಟ್ ತಿಳಿಸಿದ್ದಾರೆ.

ಜಾಗತಿಕವಾಗಿ ಹಲವು ಟೂರ್ನಮೆಂಟ್‌ಗಳು ಈಗಾಗಲೇ ರದ್ದಾಗಿವೆೆ. ಆಸ್ಟ್ರೇಲಿಯ -ನ್ಯೂಝಿಲ್ಯಾಂಡ್ , ಭಾರತ-ದಕ್ಷಿಣ ಆಫ್ರಿಕಾ ಸರಣಿಗಳು ರದ್ದುಗೊಂಡಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)