varthabharthi

ಕ್ರೀಡೆ

ಕೊರೋನ ಪರಿಣಾಮ: ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟ ಯುರೋ ಚಾಂಪಿಯನ್‌ಶಿಪ್

ವಾರ್ತಾ ಭಾರತಿ : 17 Mar, 2020

ಲಾಸಾನ್, ಮಾ.17: ವಿಶ್ವವ್ಯಾಪಿ ಕ್ರೀಡಾ ಸ್ಪರ್ಧೆಗಳು ರದ್ದಾಗಲು ಕಾರಣವಾಗಿರುವ ಕೊರೋನ ವೈರಸ್ ಬಿಕ್ಕಟ್ಟು ಯುರೋ ಚಾಂಪಿಯನ್‌ಶಿಪ್ 2020ರ ಮೇಲೂ ಪರಿಣಾಮಬೀರಿದ್ದು, ಈ ಟೂರ್ನಿಯು 2021ಕ್ಕೆ ಮುಂದೂಡಿಕೆಯಾಗಿದೆ.

ಯುರೋ ಚಾಂಪಿಯನ್‌ಶಿಪ್ 2021ರ ಜೂನ್ 11ರಿಂದ ಜುಲೈ 11ರ ತನಕ ನಡೆಯಲಿದೆ ಎಂದು ನಾರ್ವೆ ಹಾಗೂ ಸ್ವೀಡನ್ ಫುಟ್ಬಾಲ್ ಸಂಸ್ಥೆಗಳು ಮಂಗಳವಾರ ಘೋಷಿಸಿವೆೆ. ಈ ನಿರ್ಧಾರಕ್ಕೆ ಯುಇಎಫ್‌ಎ ಅಂಕಿತ ಹಾಕಲಿದೆ ಎಂದು ಬಿಬಿಸಿ ವರದಿ ಮಾಡಿದೆ. ಆದರೆ, ಯುಇಎಫ್‌ಎ ಈ ನಿರ್ಧಾರವನ್ನು ಇನ್ನಷ್ಟೇ ದೃಢಪಡಿಸಬೇಕಾಗಿದೆ. ರದ್ದುಗೊಂಡಿರುವ ದೇಶೀಯ ಲೀಗ್‌ಗಳನ್ನು ಪೂರ್ಣಗೊಳಿಸಲು ಸಮಯ ನೀಡಬೇಕೆಂಬ ಒತ್ತಡ ಎದುರಿಸುತ್ತಿರುವ ಯುಇಎಫ್‌ಎ ಯುರೋ ಟೂರ್ನಿ ಮುಂದೂಡಬೇಕೆಂಬ ಒತ್ತಡವನ್ನು ಎದುರಿಸುತ್ತಿತ್ತು.

ಯುರೋ 2020 ಈ ವರ್ಷದ ಜೂನ್ 12ರಿಂದ ಜುಲೈ 12ರ ತನಕ ಯುರೋಪ್‌ನ 12 ತಾಣಗಳಲ್ಲಿ ನಿಗದಿಯಾಗಿತ್ತು. ಸದಸ್ಯರುಗಳ ಸಭೆಯ ಬಳಿಕ ಯುಇಎಫ್‌ಎ ಕಾರ್ಯಕಾರಿ ಸಮಿತಿಯು ಶೀಘ್ರವೇ ಪ್ರತ್ಯೇಕ ಸಮಾಲೋಚನೆಯ ಕುರಿತು ಅಧಿಕೃತ ನಿರ್ಧಾರಕ್ಕೆ ಬಂದಿದೆ.

ಯುರೋಪ್‌ನ ಫುಟ್ಬಾಲ್ ಆಡಳಿತ ಮಂಡಳಿಯು ತನ್ನ ಎಲ್ಲ ಮಾನ್ಯತೆ ಇರುವ 55 ರಾಷ್ಟ್ರೀಯ ಫೆಡರೇಶನ್‌ಗಳು, ಕ್ಲಬ್‌ಗಳು, ಲೀಗ್‌ಗಳು ಹಾಗೂ ಆಟಗಾರರ ಪ್ರತಿನಿಧಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದೆ.

ಇದೇ ಮೊದಲ ಬಾರಿ ಸ್ಪರ್ಧೆಯ ಇತಿಹಾಸದಲ್ಲಿ ಫೈನಲ್ ಹಂತಗಳು ಮುಂದೂಡಿಕೆಯಾಗಿವೆೆ. ಕೊರೋನ ವೈರಸ್‌ನಿಂದಾಗಿ ಹಲವು ಟೂರ್ನಿಗಳು ಸ್ತಬ್ಧ್ದವಾಗಿದ್ದು, ಈ ಕಾರಣದಿಂದ 24 ತಂಡಗಳು ಭಾಗವಹಿಸುವ ಯುರೋ ಟೂರ್ನಿಯನ್ನು ಮುಂದೂಡಲಾಗಿದೆ.

ಚಾಂಪಿಯನ್ಸ್ ಲೀಗ್, ಯುರೋಪಾ ಲೀಗ್ ಹಾಗೂ ವರ್ಲ್ಡ್ ಕಪ್ ಕ್ವಾಲಿಫೈಯರ್ ಸಹಿತ ಇಂಗ್ಲೆಂಡ್, ಸ್ಪೇನ್, ಇಟಲಿ, ಫ್ರಾನ್ಸ್ ಹಾಗೂ ಜರ್ಮನಿಯಲ್ಲಿರುವ ಯುರೋಪ್‌ನ ಅಗ್ರ ಐದು ದೇಶೀಯ ಲೀಗ್‌ಗಳನ್ನು ರದ್ದುಗೊಳಿಸಲಾಗಿದೆ.

  ದೇಶೀಯ ಸ್ಪರ್ಧೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕೆಂದು ಲೀಗ್‌ಗಳು ಯುಇಎಫ್‌ಎಗೆ ಮನವಿ ಮಾಡಿದ್ದವು. ಋತುವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೂ ಆಟಗಾರರಿಗೆ ಸಂಭಾವನೆ ಪಾವತಿಸುವ ಜೊತೆಗೆ ಟಿಕೆಟ್ ಹಾಗೂ ಪಂದ್ಯ ದಿನದ ಆದಾಯವನ್ನು ಕಳೆದುಕೊಳ್ಳುವ ಬಗ್ಗೆ ಕ್ಲಬ್‌ಗಳು ಚಿಂತಿತವಾಗಿವೆ. ಲೀಗ್ ರದ್ದುಪಡಿಸಿದರೆ ಟಿವಿ ಪ್ರಸಾರ ಸಂಸ್ಥೆಗಳಿಗೆ ಪರಿಹಾರವನ್ನು ನೀಡಬೇಕಾಗುತ್ತದೆ. ಯುರೋಪಿಯನ್ ಚಾಂಪಿಯನ್‌ಶಿಪ್ ಸಾಮಾನ್ಯವಾಗಿ ಒಂದು ಅಥವಾ ಎರಡು ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯುತ್ತದೆ. ಆದರೆ ಈ ಬಾರಿಯ ಯುರೋ 2020ರ ಟೂರ್ನಿಯು ಐರ್ಲೆಂಡ್‌ನಿಂದ ಅಝರ್‌ಬೈಜಾನ್ ಹಾಗೂ ರಶ್ಯದಿಂದ ಇಟಲಿ ಸಹಿತ 12 ವಿಭಿನ್ನ ದೇಶಗಳಲ್ಲಿ ನಿಗದಿಯಾಗಿದೆ. ಆ್ಯಮ್‌ಸ್ಟರ್‌ಡಮ್, ಬಾಕು, ಬಿಲ್ಬಾವೊ, ಬುಚರೆಸ್ಟ್, ಬುಡಾಪೆಸ್ಟ್, ಕೋಪನ್‌ಹೇಗನ್, ಡಬ್ಲಿನ್, ಗ್ಲಾಸ್ಗೊ, ಲಂಡನ್, ಮ್ಯೂನಿಚ್, ರೋಮ್ ಹಾಗೂ ಪೀಟರ್‌ಬರ್ಗ್ ನಗರಗಳು ಆತಿಥ್ಯ ವಹಿಸಿದ್ದವು.

ಚಾಂಪಿಯನ್ಸ್ ಲೀಗ್ ಫೈನಲ್ ಮೇ 30ರಂದು ಇಸ್ತಾಂಬುಲ್‌ನಲ್ಲಿ ನಿಗದಿಯಾಗಿದೆ. ಟರ್ಕಿ ನಗರಕ್ಕೆ ಸೆಮಿ ಫೈನಲ್ ಪಂದ್ಯದ ಆತಿಥ್ಯವಹಿಸಲು ಕೇಳಿಕೊಳ್ಳಲಾಗಿದೆ.

 ಮಾರ್ಚ್ 26ರಿಂದ 31ರ ತನಕ ನಿಗದಿಯಾಗಿದ್ದ ಯುರೋ 2020ರ ಪ್ಲೇ ಆಫ್‌ನಲ್ಲಿ ಯುಇಎಫ್‌ಎನ 16 ಸದಸ್ಯರುಗಳು ಭಾಗಿಯಾಗಲಿದ್ದಾರೆ. 24 ರಾಷ್ಟ್ರಗಳ ಟೂರ್ನಮೆಂಟ್‌ನಲ್ಲಿ ಯಾರು ಅಂತಿಮ ನಾಲ್ಕು ಪ್ರವೇಶ ಪಡೆಯಲಿದ್ದಾರೆ ಎಂದು 16 ಸದಸ್ಯರುಗಳು ನಿರ್ಧರಿಸಲಿದ್ದಾರೆ.

2020ರ ಖತರ್ ವಿಶ್ವಕಪ್‌ನ ಅರ್ಹತಾ ಪಂದ್ಯಗಳು 2021ರ ಜೂನ್‌ನಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ನಡೆಯಲಿದೆ. ಈ ಎಲ್ಲ ಪಂದ್ಯಗಳ ಮರು ನಿಗದಿಗೆ ಕ್ಯಾಲೆಂಡರ್‌ನಲ್ಲಿ ಅವಕಾಶವಿಲ್ಲ. ಅರ್ಹತಾ ಪಂದ್ಯವನ್ನು ರದ್ದುಪಡಿಸುವ ಸಾಧ್ಯತೆಯೇ ಅಧಿಕವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)