varthabharthi

ನಿಮ್ಮ ಅಂಕಣ

ಕನ್ನಡದ ದಿಟ್ಟ ಧ್ವನಿ ಪಾಟೀಲ ಪುಟ್ಟಪ್ಪ

ವಾರ್ತಾ ಭಾರತಿ : 17 Mar, 2020
ಬಸವರಾಜ ಸಿದ್ದಣ್ಣವರ

ಪಾಪುರವರ ಬರಹದ ಒಂದು ಸಾಲನ್ನು ಉಲ್ಲೇಖಿಸಿ ಆಗಿನ ವಿಧಾನ ಸಭಾಧ್ಯಕ್ಷರಾಗಿದ್ದ ಬಿ.ಜಿ. ಬಣಕಾರರು ಶಾಸನಸಭೆಯ ಹಕ್ಕುಬಾಧ್ಯತೆಯನ್ನು ಮುಂದಿಟ್ಟುಕೊಂಡು ‘‘ಯಾಕೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಾರದು?’’ ಎಂದು ಕೇಳಿದ್ದರು ಅದಕ್ಕೆ ಪಾಪುರವರ ಉತ್ತರ ಹೀಗಿತ್ತು.

 ‘‘ನೀವು ಸ್ಪೀಕರ್ ಎಂದು ನಿಮ್ಮ ಸ್ಥಾನ ದೊಡ್ಡದು. ಅದು ನಿಸ್ಸಂದೇಹ. ಸದನ ಸಭೆಯಲ್ಲಿ ನಿಮಗಿಂತ ದೊಡ್ಡವರು ಯಾರು ಇಲ್ಲ. ಆದರೆ ಸಭೆಯ ಒಳಗೆ ಮತ್ತು ಹೊರಗೆ ನೀವು ಕೂಡಾ ಒಬ್ಬ ಕನ್ನಡಿಗರು. ಕನ್ನಡಕ್ಕಿಂತ ನೀವು ದೊಡ್ಡವರೇನಲ್ಲ. ರಾಜ್ಯದ ಗವರ್ನರ್ ಇರಲಿ, ಮುಖ್ಯಮಂತ್ರಿ ಇರಲಿ, ಸ್ಪೀಕರ್ ಇರಲಿ, ಯಾರೇ ಇದ್ದರೂ ಅವರು ಕನ್ನಡಕ್ಕೆ ದೀನರೇ ಹೊರತು ಮೇಲಿನವರಲ್ಲ.

ಕನ್ನಡವನ್ನು ಉಪಯೋಗಿಸಬೇಕು ಎಂದು ಹೇಳುವುದನ್ನೇ ಒಂದು ಅಪರಾಧವೆಂದು ನಮ್ಮ ಶಾಸನ ಸಭೆ ಖಂಡಿತವಾಗಿಯೂ ತೀರ್ಮಾನಿಸ ಲಾರದು. ಪದೇಪದೇ ಹಕ್ಕು ಬಾಧ್ಯತೆಯ ಉಲ್ಲಂಘನೆಯಾಯಿತು ಎಂದು ಬೆದರಿಕೆ ಹಾಕಬೇಕಾದ ಅವಶ್ಯಕತೆಯಿಲ್ಲ. ಸಾರ್ವಜನಿಕ ಪ್ರಶ್ನೆಗಳ ಪ್ರತಿಪಾದನೆ ಮಾಡುವಾಗ ನಾನು ಯಾರ ಹೆದರಿಕೆ, ಬೆದರಿಕೆಗಳಿಗೂ ಮಣಿಯುವುದಿಲ್ಲ. ಹೆದರಿಕೆಯೆನ್ನುವ ಮಾತು ನನ್ನ ಶಬ್ದಕೋಶದಲ್ಲಿ ಇಲ್ಲವೇ ಇಲ್ಲ.’’

ನಾಡು, ನುಡಿ, ಭಾಷೆಯ ವಿಷಯದಲ್ಲಿ ಅವರೊಬ್ಬ ನಿಷ್ಠುರವಾದಿ. ಕನ್ನಡವನ್ನು ಹೀಗೆಳೆಯುವವರು ಎಂತಹವರೇ ಆಗಿರಲಿ ನೇರವಾಗಿ ಖಾರವಾದ ಮಾತಿನಲ್ಲಿ ತಿವಿಯುವ ಅಪ್ಪಟ ನಾಡಪ್ರೇಮಿ. ಎಷ್ಟೇ ದೊಡ್ಡ ವ್ಯಕ್ತಿತ್ವದವರಾಗಲಿ, ವ್ಯಕ್ತಿಯಾಗಲಿ ಕನ್ನಡವನ್ನು ನಿರ್ಲಕ್ಷಿಸುವವರನ್ನು ಪಾಪು ಕ್ಷಮಿಸುತ್ತಿರಲಿಲ್ಲ. ನಾಡಿಗಾಗಿ ಬದ್ಧ್ದತೆಯಿಂದ ಶ್ರಮಿಸಿದ ಅಪ್ರತಿಮ ಪತ್ರಕರ್ತ ಪಾಟೀಲ್ ಪುಟ್ಟಪ್ಪನವರು. ‘‘ಯಾರೇ ಆಗಿರಲಿ ಅವರು ಕನ್ನಡಕ್ಕಿಂತ ದೊಡ್ಡವರಲ್ಲ’’ ಎಂಬ ಅವರ ಮಾತು ಅವರ ಕನ್ನಡ ಪ್ರೇಮಕ್ಕೆ ಕೈಗನ್ನಡಿಯಾಗಿದೆ. ಕನ್ನಡ ಮತ್ತು ಕರ್ನಾಟಕದ ಪ್ರಶ್ನೆ ಬಂದಾಗ ಪಾಪು ಎಂದಿಗೂ ಮೌನವಾಗಿದ್ದವರಲ್ಲ. ಅನೇಕ ಬಾರಿ ನಿಷ್ಠುರವಾದ ಮಾತುಗಳಿಂದಾಗಿ ತಮ್ಮ ಆಪ್ತಸ್ನೇಹಿತರನ್ನೆ ಎದುರು ಹಾಕಿಕೊಂಡವರು. ಆಸ್ತಿ, ಅಂತಸ್ತುಗಳ ಹಿಂದೆ ಬೀಳದೆ ಯಾರನ್ನೂ ಬೇಡದೆ, ಯಾರೊಬ್ಬರ ಹಿಂದೆಯೂ ದುಂಬಾಲು ಬೀಳದೆ ನಿಸ್ವಾರ್ಥ ಮನೋಭಾವದಿಂದ 101ನೇ ವಯಸ್ಸಿನಲ್ಲೂ ಬಿಡುವಿಲ್ಲದೆ ಕನ್ನಡದ ಕಾರ್ಯಕ್ರಮಗಳನ್ನು ಯೋಜಿಸಿ ರಾಜ್ಯ, ಅಂತರ್‌ರಾಜ್ಯಗಳನ್ನು ಸುತ್ತಿ ಯಶಸ್ವಿ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಇತ್ತೀಚಿನವರೆಗೂ ನಿರಂತರವಾಗಿ ಕನ್ನಡ ಸೇವೆಯಲ್ಲಿ ತೊಡಗಿದ್ದರು.

ವಯಸ್ಸು, ಆರೋಗ್ಯ, ಯಾವುದೂ ಅವರಿಗೆ ಲೆಕ್ಕಕ್ಕಿರಲಿಲ್ಲ. ಒಮ್ಮೆ ನಿರ್ಧರಿಸಿದರೆಂದರೆ ಯಾರೇ ಬಂದರೂ ಅವರ ನಿರ್ಧಾರವನ್ನು ಬದಲಿಸಿದವರಲ್ಲ ಹಾಗೂ ಬದಲಿಸಿದ ಉದಾಹರಣೆಗಳೂ ಇಲ್ಲ. ತಾಯ್ನೆಲಕ್ಕಾಗಿ ಆಂಗ್ಲ ಪತ್ರಿಕೋದ್ಯಮದಲ್ಲಿ ತಮಗಿದ್ದ ಅವಕಾಶಗಳನ್ನು ಬಿಟ್ಟು ಕರ್ನಾಟಕದಲ್ಲೇ ಇದ್ದುಕೊಂಡು ಕನ್ನಡ ಪತ್ರಿಕಾ ರಂಗದ ಬೆಳವಣಿಗೆಗೆ ಅಮೂಲ್ಯವಾದ ಕೊಡುಗೆಯನ್ನು ಪಾಪು ನೀಡಿದ್ದರು.
1947-48ರ ಸಂದರ್ಭದಲ್ಲಿ ದಿನಪತ್ರಿಕೆಯೊಂದರ ಸಂಪಾದಕರಾಗುವು ದೆಂದರೆ ರಾತ್ರಿಕಂಡ ಬಾವಿಗೆ ಹಗಲೇ ಬಿದ್ದಂತೆ. ಚಂದಾ ಹಣದಿಂದಲೇ ಸಕಲವನ್ನು ನಿರ್ವಹಿಸಬೇಕು. ಕೆಲವೊಮ್ಮೆ ಪಾಪುರವರ ಸಂಬಳಕ್ಕೂ ಬಿಡಿಗಾಸು ಉಳಿಯದೆ ಮುದ್ರಣ ಖರ್ಚು, ಕೆಲಸಗಾರರ ಸಂಬಳ, ಸಾಗಾಟ ವೆಚ್ಚಕ್ಕಾಗಿ ಬಂದ ಹಣವೆಲ್ಲ ಖಾಲಿಯಾಗಿಬಿಡುತ್ತಿತ್ತು, ಇಷ್ಟೆಲ್ಲ ಕಷ್ಟವನ್ನು ಸಹಿಸಿಕೊಂಡು ಆಂಗ್ಲ ಪತ್ರಿಕೆಗಳಲ್ಲಿದ್ದ ಅವಕಾಶಗಳನ್ನು ತಿರಸ್ಕರಿಸಿ ನಾಡು ನುಡಿಯನ್ನು ಕಟ್ಟಬೇಕೆಂಬ ಮಹದಾಸೆಯಿಂದ ಸಾಗರದ ಅಲೆಯ ವಿರುದ್ಧ ಈಜಿ ಜಯಿಸಿದವರು ಪಾಪು.

 ‘ವಿಶಾಲ ಕರ್ನಾಟಕ’ ಪತ್ರಿಕೆಯ ಸಂಪಾದಕರಾಗಿದ್ದ ಸಂದರ್ಭದಲ್ಲಿ ಅವರು ನಿರ್ವಹಿಸುತ್ತಿದ್ದ ಜವಾಬ್ದಾರಿಗಳು ನಮ್ಮೆಲ್ಲರನ್ನು ಅಚ್ಚರಿಗೊಳಿಸುತ್ತವೆ. ಅವರೇ ಸಂಪಾದಕರು, ಅವರೆ ಫ್ರೂಪ್ ರೀಡರ್ ಎಲ್ಲವನ್ನು ತಾವೇ ನಿರ್ವಹಿಸುತ್ತಿದ್ದರು. ಕೆಲವೊಂದು ಸಂದರ್ಭದಲ್ಲಿ ಕಚೇರಿಯ ಕಸವನ್ನು ಕೂಡಾ ಅವರೇ ಗುಡಿಸುತ್ತಿದ್ದರು. ಬೆಳಗ್ಗೆ 10 ಗಂಟೆಗೆ ಕೆಲಸ ಆರಂಭಿಸಿದರೆ ಎಲ್ಲ ಕೆಲಸ ಮುಗಿಸುವಷ್ಟೊತ್ತಿಗೆ ಕೆಲವೊಮ್ಮೆ ಮರುದಿನ ಬೆಳಗ್ಗೆ 4 ಗಂಟೆಯಾಗುತ್ತಿತ್ತು. ನಿದ್ದೆಗೂ ಸಮಯವಿಲ್ಲದಂತೆ ಪಾಪು ಕೆಲಸ ಮಾಡುತ್ತಿದ್ದರು. ಬೇರೆ ಮನೆಯಿಲ್ಲದ್ದರಿಂದ ಕಚೇರಿಯ ಜಗಲಿಯ ಮೇಲೆ ಪತ್ರಿಕೆಗಳನ್ನು ಹಾಸಿಕೊಂಡು ‘‘ಯಾರಾದರು ಎಬ್ಬಿಸಿದರೆ ಎಚ್ಚರಿಕೆ’’ ಎಂಬ ಬರಹವುಳ್ಳ ಪತ್ರಿಕೆಯನ್ನು ಹೊದ್ದು ಮಲಗುತ್ತಿದ್ದರು. ಮೂರ್ನಾಲ್ಕು ಗಂಟೆಗಳ ನಿದ್ರೆಯ ನಂತರ ಸ್ನಾನ ತಿಂಡಿ ಮುಗಿಸಿ ಮತ್ತೆ ಕಚೇರಿಯ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದರು.

 ತಮ್ಮ 101ನೇ ವಯಸ್ಸಿನಲ್ಲೂ ಸದಾ ನಾಡಿಗಾಗಿ ಮಿಡಿಯುತ್ತಿದ್ದ, ಈಗ ನಮ್ಮಿಂದಿಗಿಲ್ಲದ ಪಾಪು ಅವರ ಸಮಗ್ರ ಗಾಥೆಯನ್ನು ಕೆಲವಷ್ಟೇ ಪದಗಳಲ್ಲಿ ತಿಳಿಯಪಡಿಸುವುದು ಕೂಡಾ ಒಂದು ದುಸ್ಸಾಹಸದ ಕೆಲಸ ಎನ್ನಬಹುದು ಯಾಕೆಂದರೆ ಅವರೊಂದು ಈ ನಾಡಿನ ದಂತಕಥೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)