varthabharthi

ನಿಮ್ಮ ಅಂಕಣ

ಭಯ ಹುಟ್ಟಿಸುವ ಮಾಧ್ಯಮಗಳನ್ನು ನಿರ್ಬಂಧಿಸಿ

ವಾರ್ತಾ ಭಾರತಿ : 18 Mar, 2020
-ನಿಝಾಂ ಉರುವಾಲು ಪದವು

ಮಾನ್ಯರೇ,

ಕೊರೋನ ಮಾರಕ ರೋಗಕ್ಕೆ ವಿಶ್ವವೇ ಬೆಚ್ಚಿಬಿದ್ದಿದೆ. ತನ್ನ ರಾಜ್ಯದ ಸುರಕ್ಷತೆಗಾಗಿ ಮತ್ತು ರೋಗ ಹರಡುವುದನ್ನು ತಡೆಗಟ್ಟಲು ಎಲ್ಲ ದೇಶ ಗಳು ಕಟ್ಟುನಿಟ್ಟಿನ ಮುನ್ನೆಚ್ಚರಿಕೆಯ ಕ್ರಮಗಳನ್ನು ಜಾರಿಗೆ ತಂದಿವೆ. ಅದೇ ರೀತಿ ನಮ್ಮ ಮಂಗಳೂರಿನಲ್ಲೂ ಜಿಲ್ಲಾಧಿಕಾರಿಯವರು ಆರೋಗ್ಯ ಸುರಕ್ಷಾ ನಿಯಮಗಳನ್ನು ಜಾರಿಗೆ ತಂದಿರುವುದು ಅಭಿನಂದನಾರ್ಹ. ಜಿಲ್ಲಾಧಿಕಾರಿಯವರಲ್ಲಿ ನನ್ನ ಮನವಿಯೇನೆಂದರೆ, ದಕ್ಷಿಣ ಕನ್ನಡದಲ್ಲಿ ಕೊರೋನಕ್ಕಿಂತಲೂ ದೊಡ್ಡ ಭೀತಿ ಎದುರಾಗಿರುವುದು ಮಾಧ್ಯಮಗಳ ತಪ್ಪುವರದಿಗಳಿಂದಾಗಿರುತ್ತದೆ. ತಪಾಸಣೆ ನಡೆಸುವಾಗಲೇ ಶಂಕಿತ ಎಂದು ಮುದ್ರೆಯೊತ್ತಿ ಬ್ರೇಕಿಂಗ್ ನ್ಯೂಸ್ ಹಾಕುವ ಟಿವಿ ಮಾಧ್ಯಮಗಳು ಜನರಲ್ಲಿ ಭೀತಿ ಹುಟ್ಟಿಸುತ್ತಿವೆ. ಎಲ್ಲೋ 300/500 ಕಿ.ಮೀ. ದೂರದಲ್ಲಿ ಕುಳಿತು ಬ್ರೇಕಿಂಗ್ ನ್ಯೂಸ್ ಬಿತ್ತರಿಸುವ ಮಾಧ್ಯಮಗಳ ಪ್ರವೇಶಕ್ಕೆ ಕಡಿವಾಣ ಹಾಕಬೇಕಾಗಿದೆ. ಉಪ್ಪಿನಂಗಡಿಯ ಕರಾಯ ಎಂಬಲ್ಲಿ ಮಕ್ಕಾಕ್ಕೆ ಹೋಗಿ ಉಮ್ರಾ ನಿರ್ವಹಿಸಿ ಬಂದ ವ್ಯಕ್ತಿಯನ್ನು ಒಂದು ವಾರ ಕಳೆದ ನಂತರ ತಪಾಸಣೆಗೆಂದು ಕರೆದುಕೊಂಡು ಹೋಗಿದ್ದರು. ಅವರು ಪಾಸಿಟಿವ್/ನೆಗೆಟಿವ್ ವರದಿ ಬರುವ ಮೊದಲೇ ಶಂಕಿತ ಕೊರೋನ ಸೋಂಕು ಭಾದಿತನೆಂದು ಬ್ರೇಕಿಂಗ್ ನ್ಯೂಸ್ ಪ್ರಸಾರವಾಗಿತ್ತು. ಊರಿಗೆ ಊರೇ ಸ್ತಬ್ಧಗೊಂಡಿತು. ಸೋಶಿಯಲ್ ಮೀಡಿಯಾಗಳಲ್ಲಿ ಎಚ್ಚರಿಕೆಯ ಬರಹಗಳು, ವಾಯ್ಸಿ ಮೆಸೇಜ್ ಕಾಡ್ಗಿಚ್ಚಿನಂತೆ ಹರಡಿಯಾಗಿತ್ತು. ಮನೆಯವರನ್ನು ಆರೋಪಿ ಸ್ಥಾನದಲ್ಲಿ ಜನರು ನೋಡತೊಡಗಿದರು. ಇದು ಕೊರೋನಕ್ಕಿಂತಲೂ ಅಪಾಯಕಾರಿ ಅಲ್ಲವೇ? ರೋಗಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕಾದ ಕುಟುಂಬವನ್ನು ಭಯದ ವಾತಾವರಣವನ್ನು ಹುಟ್ಟು ಹಾಕಿದ ಮಾಧ್ಯಮಗಳ ನಡೆ ಸರಿಯೇ? ಸೋಂಕು ಭಾದಿತರನ್ನು ಸೃಷ್ಟಿಸಲು ಹರಸಾಹಸ ಪಡುತ್ತಿರುವ ಮಾಧ್ಯಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಅರ್ಧದಷ್ಟು ರೋಗ ವಾಸಿಯಾಗುತ್ತದೆ. ಮಾಧ್ಯಮಗಳೇ ಇಂದು ಮಾರಕ ರೋಗವಾಗಿ ಪರಿಣಮಿಸಿದೆ.

ದಿವಸದಲ್ಲಿ ಒಂದು ಬಾರಿಯಾದರೂ ಕೆಮ್ಮದ, ಸೀನದ ವ್ಯಕ್ತಿ ಇರಲು ಸಾಧ್ಯವೇ? ಏರ್‌ಪೋರ್ಟ್ ಒಳಗೆ ಕೆಮ್ಮಿದಾಗಲೇ ಕೊರೋನ ಸೋಂಕು ಭಾದಿತನೆಂದು ಚಿತ್ರೀಕರಿಸುವ ಮಾಧ್ಯಮಗಳ ಕೆಟ್ಟ ನಡೆಯ ಬಗ್ಗೆ ಜಾಗೃತಿವಹಿಸಬೇಕಾದ ಅನಿವಾರ್ಯತೆ ಇದೆ. ಶಂಕಿತ ಎಂದು ಹೇಳಿ ಗಂಟೆಗೆ 60 ಬಾರಿ ಬ್ರೇಕಿಂಗ್ ನ್ಯೂಸ್ ಸುಳ್ಳುಗಳನ್ನು ಹಾಕಿ ಸತ್ಯ ಮಾಡಲು ಹೊರಟು ಕೊನೆಗೆ ನೆಗೆಟಿವ್ ಎಂದು ವರದಿ ಬಂದರೆ ಅದನ್ನು ಹೇಳಲು ಬ್ರೇಕಿಂಗ್ ನ್ಯೂಸ್ ಇರುವುದಿಲ್ಲ. ನಂತರ ಮನೆಯವರೇ ಯಾರಾದರೂ ವಾಯ್ಸೆ ಮೆಸೇಜ್ ಹಾಕಿ ತಿಳಿಸಬೇಕು. ಇಂತಹ ಮಾನಹರಾಜು ಮಾಡುವ ಲಜ್ಜೆಗೆಟ್ಟ ಮಾಧ್ಯಮಗಳಿಂದ ಸಮಾಜ ಭಯಪಡುತ್ತದೆಯೇ ಹೊರತು ತಪಾಸಣೆಗೆ ಸ್ಪಂದಿಸಲು ಸಾಧ್ಯವಿಲ್ಲ. ಮುನ್ನೆಚ್ಚರಿಕೆಗಿಂತ ಮಾನಹಾರಾಜು ಆಗುತ್ತದೆಯೇ ಎಂಬ ಭಯ ಅವರನ್ನು ಆವರಿಸಿರುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಯವರ ಅನುಮತಿ ಇಲ್ಲದೆ ಯಾವುದೇ ಮಾಧ್ಯಮಗಳು ಕೂಡ ನ್ಯೂಸ್ ಬಿತ್ತರಿಸುವಂತಿಲ್ಲ ಎಂಬ ಆಜ್ಞೆ ಹೊರಡಿಸಿ ಅಥವಾ ತಮ್ಮ ಅಧಿಕೃತ ಮಾಧ್ಯಮ ಪ್ರತಿನಿಧಿ ಕೊಟ್ಟ ನ್ಯೂಸ್ ಮಾತ್ರ ಪ್ರಸಾರಪಡಿಸುವಂತೆ ತಿಳಿಸಿ. ಜಿಲ್ಲಾಧಿಕಾರಿಯವರು ಇದರ ಬಗ್ಗೆ ಗಮನಹರಿಸದಿದ್ದರೆ ಇಡೀ ಜಿಲ್ಲೆಯನ್ನು ಕೊರೋನ ಸೋಂಕು ಭಾದಿತರಾಗಿ ಮಾಧ್ಯಮಗಳು ಚಿತ್ರೀಕರಿಸುವುದರಲ್ಲಿ ಸಂಶಯವಿಲ್ಲ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)