varthabharthi

ಕ್ರೀಡೆ

ಟೆಸ್ಟ್ ಬ್ಯಾಟಿಂಗ್ ಸಲಹೆಗಾರ ಹುದ್ದೆಗೆ ಸಂಜಯ್‌ರನ್ನು ಸಂಪರ್ಕಿಸಿದ ಬಿಸಿಬಿ

ವಾರ್ತಾ ಭಾರತಿ : 18 Mar, 2020

ಹೊಸದಿಲ್ಲಿ, ಮಾ.18: ರಾಷ್ಟ್ರೀಯ ತಂಡದ ಟೆಸ್ಟ್ ಕ್ರಿಕೆಟ್ ಸಲಹೆಗಾರ ಹುದ್ದೆಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು(ಬಿಸಿಬಿ)ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್‌ರನ್ನು ಸಂಪರ್ಕಿಸಿದೆ.

ಟೆಸ್ಟ್ ಬ್ಯಾಟಿಂಗ್ ಸಲಹೆಗಾರ ಹುದ್ದೆಗಾಗಿ ಸಂಜಯ್‌ರನ್ನು ಸಂಪರ್ಕಿಸಲಾಗಿದೆ. ಆದರೆ ಅವರಿಂದ ಸ್ಪಷ್ಟ ಉತ್ತರ ಬಂದಿಲ್ಲ ಎಂದು ಬಿಸಿಬಿ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ನೀಲ್ ಮೆಕೆಂಝಿ ಪ್ರಸ್ತುತ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳೊಂದಿಗೆ ಸೀಮಿತ ಓವರ್ ಕ್ರಿಕೆಟ್‌ಗೆ ಸಂಬಂಧಿಸಿ ಕೆಲಸ ಮಾಡುತ್ತಿದ್ದಾರೆ.

ಬಂಗಾರ್ ಅವರು 2014ರಿಂದ 2019ರ ತನಕ ಭಾರತೀಯ ಕ್ರಿಕೆಟ್ ತಂಡದಲ್ಲಿ ಕಾರ್ಯನಿರ್ವಹಿಸಿದ್ದರು. ಸೆಪ್ಟಂಬರ್‌ನ ಆರಂಭದಲ್ಲಿ ಬಂಗಾರ್ ಬದಲಿಗೆ ವಿಕ್ರಂ ರಾಥೋರ್ ಆಯ್ಕೆಯಾಗಿದ್ದಾರೆ. ವಿಶ್ವಕಪ್‌ನ ಬಳಿಕ ನಡೆದಿದ್ದ ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ತನಕ ರಾಥೋರ್ ಕೋಚಿಂಗ್ ಬಳಗದಲ್ಲಿದ್ದರು.

ಭಾರತದ ಸಹಾಯಕ ಸಿಬ್ಬಂದಿಯ ಬಳಗದಿಂದ ಬಂಗಾರ್‌ರನ್ನು ಮಾತ್ರ ಹೊರಗಿಡಲಾಗಿದೆ. ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದರು.

ಬ್ಯಾಟಿಂಗ್ ಕೋಚ್ ಹುದ್ದೆ ಕಳೆದುಕೊಂಡ ಬಳಿಕ ಬಂಗಾರ್ ವೀಕ್ಷಕವಿವರಣೆ ನೀಡುವುದರಲ್ಲಿ ವ್ಯಸ್ತರಾಗಿದ್ದಾರೆ. 47ರ ಹರೆಯದ ಬಂಗಾರ್ 2001 ಹಾಗೂ 2004ರ ಮಧ್ಯೆ ಭಾರತದ ಪರ 12 ಟೆಸ್ಟ್ ಹಾಗೂ 15 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.

‘‘ನಾವು ಟೆಸ್ಟ್ ಬ್ಯಾಟಿಂಗ್ ಸಲಹೆಗಾರ ಹುದ್ದೆಗೆ ಸಂಬಂಧಿಸಿ ಬಂಗಾರ್‌ರೊಂದಿಗೆ ಮಾತನಾಡಿದ್ದೇವೆ. ಆದರೆ, ಈ ತನಕ ಯಾವುದೂ ಅಂತಿಮವಾಗಿಲ್ಲ. ನಾವು ಇತರ ಕೆಲವರೊಂದಿಗೆ ಮಾತನಾಡುತ್ತಿದ್ದೇವೆ’’ ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಝಾಮುದ್ದೀನ್ ಚೌಧರಿ ಸುದ್ದಿಗಾರರಿಗೆ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)