varthabharthi

ಆರೋಗ್ಯ

ಲಸಿಕೆಗಳ ಕುರಿತ ಮಿಥ್ಯೆಗಳು ಮತ್ತು ಸತ್ಯಗಳು

ವಾರ್ತಾ ಭಾರತಿ : 18 Mar, 2020
-ಎನ್.ಕೆ.

ಮಾರಣಾಂತಿಕ ಕಾಯಿಲೆಗಳನ್ನು ತಡೆಯುವಲ್ಲಿ ಲಸಿಕೆಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ,ಆದರೆ ಈ ಲಸಿಕೆಗಳ ಸುತ್ತ ಹಲವಾರು ಮಿಥ್ಯೆಗಳು ಸೃಷ್ಟಿಯಾಗಿವೆ.

ಲಸಿಕೆಗಳು ಕಾಯಿಲೆಗಳ ಹರಡುವಿಕೆಯನ್ನು ತಡೆಯುವ ಮೂಲಕ ನಮಗೆ ಮತ್ತು ಮುಂದಿನ ಪೀಳಿಗೆಗೆ ಖಂಡಿತ ರಕ್ಷಣೆಯನ್ನು ನೀಡುತ್ತವೆ. ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರುವ ಲಸಿಕೆಗಳು ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಕಾಯಿಲೆಗಳ ವಿರುದ್ಧ ನಮ್ಮ ಶರೀರದ ರೋಗ ನಿರೋಧಕ ವ್ಯವಸ್ಥೆ ಯನ್ನು ಬಲಗೊಳಿಸುತ್ತವೆ. ಈ ಲಸಿಕೆಗಳ ಸುತ್ತ ಹುಟ್ಟಿಕೊಂಡಿರುವ ಕೆಲವು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ.....

ಮಕ್ಕಳಿಗೆ ಲಸಿಕೆಗಳನ್ನು ನೀಡುವುದರಿಂದ ಅವರು ಅಸ್ವಸ್ಥರಾಗುತ್ತಾರೆ.

-ಇಂತಹ ಸಾಧ್ಯತೆಗಳಿಲ್ಲ. ಶಿಶುಗಳ ಲಸಿಕೆಗಳು ಪ್ರತಿರೋಧಕತೆ ಮತ್ತು ಪ್ರತಿಜೀವಕ ಗಳನ್ನು ಉತ್ತೇಜಿಸುವ ಮೂಲಕ ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುತ್ತವೆ. ವೈರಸ್‌ಗಳ ವಿರುದ್ಧ ಹೋರಾಡಲು ಅಗತ್ಯವಿರುವ ಪ್ರತಿಜೀವಕಗಳನ್ನು ಉತ್ಪಾದಿಸಲು ಮಗುವಿನ ರೋಗ ನಿರೋಧಕ ಶಕ್ತಿಯು ಮುಂದಾಗುವಂತೆ ಮಾಡುವುದು ಲಸಿಕೆ ನೀಡುವಿಕೆಯ ಉದ್ದೇಶವಾಗಿದೆ. ಲಸಿಕೆಗಳು ಕನಿಷ್ಠ ಪ್ರಮಾಣದಲ್ಲಿ ಅಡ್ಡ ಪರಿಣಾಮಗಳನ್ನು ಬೀರಬಹುದಾದರೂ ಅವು ಸ್ವರೂಪದಲ್ಲಿ ಗಂಭೀರವಾಗಿರುವುದಿಲ್ಲ. ಹೆಚ್ಚೆಂದರೆ ಕೆಲವೊಮ್ಮೆ ಮಗುವಿನ ಶರೀರದಲ್ಲಿ ಸೌಮ್ಯ ಜ್ವರದಂತಹ ಪ್ರತಿವರ್ತನೆಗಳು ಕಂಡುಬರಬಹುದು. ಆದರೆ ಇದು ಶಾಶ್ವತವಲ್ಲ ಮತ್ತು ಸಾಮಾನ್ಯ ಪ್ರತಿಕ್ರಿಯೆಯಾಗಿರುತ್ತದೆ. ಉದಾಹರಣೆಗೆ ಸಿಡುಬಿನ ಲಸಿಕೆಯು ಚರ್ಮದಲ್ಲಿ ಕೆಲವು ದದ್ದುಗಳನ್ನುಂಟು ಮಾಡಬಹುದು. ಇದು ಹಾನಿಕರವಲ್ಲ ಮತ್ತು ಲಸಿಕೆಯು ಕೆಲಸ ಮಾಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಲು ನೈಸರ್ಗಿಕ ಪದ್ಧತಿಗಳೇ ಏಕೈಕ ಮಾರ್ಗ.

-ಇದು ಯಾವಾಗಲೂ ಅಲ್ಲ, ಆದರೆ ನೀವು ನೈಸರ್ಗಿಕ ಪದ್ಧತಿಗಳನ್ನು ನೆಚ್ಚಿಕೊಳ್ಳಬಹುದು. ಆರೋಗ್ಯಕರ ಆಹಾರಕ್ರಮ, ಕ್ರಿಯಾಶೀಲ ಜೀವನಶೈಲಿ ಮತ್ತು ಬದುಕಿಗೆ ಉತ್ತಮ ವಾತಾವರಣದ ಜೊತೆಗೆ ಲಸಿಕೆಗಳನ್ನು ನೀಡುವುದು ಪೂರಕವಾಗಿ ಕೆಲಸ ಮಾಡುತ್ತದೆ. ಲಸಿಕೆಗಳು ಅತ್ಯಂತ ಕಡಿಮೆ ಮತ್ತು ದುರ್ಬಲ ಪ್ರಮಾಣದಲ್ಲಿ ರೋಗಕಾರಕ ವೈರಸ್‌ಗಳನ್ನು ಹೊಂದಿರುತ್ತವೆ. ಇವುಗಳನ್ನು ಶರೀರದಲ್ಲಿ ಸೇರಿಸಿದಾಗ ಆ ರೋಗಾಣುಗಳ ವಿರುದ್ಧ ಹೋರಾಡುವ ಪ್ರತಿಜೀವಕಗಳು ಉತ್ಪತ್ತಿಯಾಗಿ ರೋಗ ಬಾರದಂತೆ ತಡೆಗಟ್ಟುತ್ತವೆ. ಇದು ಲಸಿಕೆಗಳ ಕಾರ್ಯವಿಧಾನವಾಗಿದೆ.

ರೋಗವು ಬಂದಾಗ ಅದರ ವಿರುದ್ಧ ಹೋರಾಡಲು ಮಗುವು ಶಕ್ತವಾಗಿರುತ್ತದೆ.

ಲಸಿಕೆಗಳು ವೈರಸ್‌ಗಳಿಂದ ರಕ್ಷಣೆ ನೀಡುವ ಕೇವಲ ಕವಚಗಳಾಗಿವೆ ಮತ್ತು ರೋಗದ ವಿರುದ್ಧ ಹೋರಾಡುವ ನೋವನ್ನು ತಡೆಯುತ್ತವೆ. ಸಿಡುಬಿನ ಲಸಿಕೆಯನ್ನು ಶರೀರದಲ್ಲಿ ಸೇರಿಸಲಾಗಿರುವ ಮಗುವಿಗೆ ಸಿಡುಬು ಉಂಟಾಗುವ ಸಾಧ್ಯತೆಯು ಕಡಿಮೆಯಾಗಿರುತ್ತದೆ. ಲಸಿಕೆಗಳನ್ನು ನೀಡದ ಮಕ್ಕಳಿಗೆ ಹೋಲಿಸಿದರೆ ಲಸಿಕೆ ಪಡೆದಿರುವ ಮಕ್ಕಳಲ್ಲಿ ಕಾಯಿಲೆಗಳಿಗೆ ಗುರಿಯಾಗುವ ಅಪಾಯವು ತುಂಬ ಕಡಿಮೆಯಾಗಿರುತ್ತದೆ.

ಹಳೆಯ ರೋಗಗಳು ಮಾಯವಾಗಿರು ವುದರಿಂದ ಲಸಿಕೆಯ ಅಗತ್ಯವಿಲ್ಲ.

-ಇದೊಂದು ಸಾಮಾನ್ಯ ಮಿಥ್ಯೆಯಾಗಿದೆ. ಸಾಂಕ್ರಾಮಿಕ ರೋಗಗಳು ದಿಢೀರನೆ ಕಾಣಿಸಿಕೊಳ್ಳುವುದು ಅಪಾಯಕಾರಿಯಾಗುತ್ತದೆ. ಲಸಿಕೆಗಳಿಗೆ ರೋಗಗಳನ್ನು ನಿರ್ಮೂಲನಗೊಳಿಸುವ ಸಾಮರ್ಥ್ಯವಿದೆ, ನಿಜ. ಆದರೂ ರೋಗಾಣುಗಳು ಮುಂದಿನ ಪೀಳಿಗೆಗೆ ದಾಟದಂತೆ ಮುಂಜಾಗ್ರತೆಯ ಕ್ರಮಗಳು ಮತ್ತು ಎಳೆಯ ಮಕ್ಕಳಿಗೆ ಲಸಿಕೆ ನೀಡಿಕೆ ಸಾಮಾಜಿಕ ಹೊಣೆಗಾರಿಕೆಯಾಗಿದೆ.

ವಯಸ್ಕರಿಗೆ ಲಸಿಕೆಯ ಅಗತ್ಯವಿಲ್ಲ.

ಹೆಚ್ಚಿನ ಜನರು ಲಸಿಕೆ ತೆಗೆದುಕೊಳ್ಳುವುದನ್ನು ನಿವಾರಿಸುತ್ತಾರಾದರೂ ಟೆಟಾನಸ್, ಡಿಫ್ತೀರಿಯಾ, ಹೆಪಟೈಟಿಸ್, ಮೆನಿಂಜೈಟಿಸ್ ಇತ್ಯಾದಿಗಳಿಗಾಗಿ ನಿಯಮಿತವಾಗಿ ತಪಾಸಣೆ ಅಥವಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೂಸ್ಟರ್ ಶಾಟ್‌ಗಳನ್ನು ತಜ್ಞರು ಶಿಫಾರಸು ಮಾಡುತ್ತಾರೆ. ಪರಿಸ್ಥಿತಿಗಳು, ವಯಸ್ಸು ಮತ್ತು ಆರೋಗ್ಯ ಸ್ಥಿತಿ ಇತ್ಯಾದಿಗಳನ್ನು ಅವಲಂಬಿಸಿ ವಯಸ್ಕರಿಗೆ ಲಸಿಕೆಗಳನ್ನು ನೀಡಬೇಕಾಗುತ್ತದೆ. ಆಫ್ರಿಕಾದಂತಹ ದೇಶಗಳಿಗೆ ಪ್ರಯಾಣಿಸುವವರು ಹಳದಿ ಜ್ವರಕ್ಕಾಗಿ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಪ್ರಯಾಣಿಸುವವವರು ಕ್ಷಯ ಮತ್ತು ಟೈಫಾಯ್ಡಾಗಾಗಿ ಲಸಿಕೆಗಳನ್ನು ತೆಗೆದುಕೊಳ್ಳುವುದು ಈ ರೋಗಗಳಿಗೆ ಗುರಿಯಾಗುವ ಸಂಭವನೀಯತೆಯ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ.

ಕೆಲವೊಮ್ಮೆ ಜನರಿಗೆ ಲಸಿಕೆಗಳ ಬಗ್ಗೆ ಅರಿವಿರುವುದಿಲ್ಲ ಮತ್ತು ಅವು ನೀಡುವ ಆರೋಗ್ಯ ಲಾಭಗಳನ್ನು ನಂಬುವುದಿಲ್ಲ. ಲಸಿಕೆಗಳು ಮಾರುಕಟ್ಟೆಗೆ ಪರಿಚಯಿಸಲ್ಪಡುವ ಮುನ್ನ ಸುರಕ್ಷತೆ ಮತ್ತು ಪರಿಣಾಮಕಾರಿ ಕಾರ್ಯಕ್ಕಾಗಿ ಹಲವಾರು ವೈದ್ಯಕೀಯ ಪ್ರಯೋಗಗಳಿಗೆ ಒಳಪಟ್ಟಿರುತ್ತವೆ. ಹೀಗಾಗಿ ಅವುಗಳ ಬಗ್ಗೆ ಅನಗತ್ಯವಾಗಿ ಚಿಂತೆ ಪಡಬೇಕಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)