varthabharthi

ನಿಮ್ಮ ಅಂಕಣ

ನ್ಯಾಯಬೆಲೆ ಅಂಗಡಿಗೆ ಕೊರೋನ ಭೀತಿ

ವಾರ್ತಾ ಭಾರತಿ : 19 Mar, 2020
-ಶಂಕರಗೌಡ ಬಿರಾದಾರ, ಮುಳಸಾವಳಗಿ

ಮಾನ್ಯರೇ,

 ದೇಶ ದೇಶಗಳಲ್ಲಿ ರಾಜ್ಯ ರಾಜ್ಯಗಳಲ್ಲಿ ದಿನೇದಿನೇ ಕೊರೋನ ಭೀತಿ ಹೆಚ್ಚಾಗುತ್ತಿದೆ. ಈ ಭೀತಿಗೆ ಈಗ ನ್ಯಾಯಬೆಲೆ ಅಂಗಡಿಯವರು ಹಾಗೂ ಗ್ರಾಹಕರು ಕೂಡಾ ಸಿಲುಕುವಂತಾಗಿದೆ. ಹಿಂದೆ ಸರಕಾರದ ಹಳೆ ಯೋಜನೆಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯ ವಿತರಣೆ ಪಡೆಯಲು ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಕುಟುಂಬದ ಒಬ್ಬ ಸದಸ್ಯ ಮಾತ್ರ ಬಯೋಮೆಟ್ರಿಕ್‌ನಲ್ಲಿ ಬೆರಳಿನ ಗುರುತು ನೀಡಿದರೆ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಎಲ್ಲಾ ಸದಸ್ಯರ ಆಹಾರಧಾನ್ಯ ತೆಗೆದುಕೊಳ್ಳಬಹುದಾಗಿತ್ತು. ಆದರೆ ಈಗ ಸರಕಾರ ಹೊಸದಾಗಿ ಮಂಡಿಸಿರುವ ಆದೇಶದಂತೆ ಪಡಿತರ ಚೀಟಿ ಯಲ್ಲಿ ಹೆಸರು ಹೊಂದಿರುವ ಕುಟುಂಬದ ಎಲ್ಲಾ ಸದಸ್ಯರು ತಮ್ಮ ಬೆರಳಿನ ಗುರುತು ಬಯೋಮೆಟ್ರಿಕ್ ನಲ್ಲಿಟ್ಟು ಆಹಾರ ಧಾನ್ಯ ಪಡೆದುಕೊಳ್ಳಬೇಕಾಗಿದೆ.

ನಮ್ಮ ಉತ್ತರ ಕರ್ನಾಟಕ ಭಾಗದ ಜನ ಹೈದರಾಬಾದ್ ಕಡೆ ಉದ್ಯೋಗ ಅರಸಿ ಹೋಗುತ್ತಾರೆ. ಸರಕಾರ ಈಗ ಹೊಸದಾಗಿ ಮಂಡಿಸಿರುವ ಯೋಜನೆ ಸಲುವಾಗಿ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಕುಟುಂಬದ ಎಲ್ಲಾ ಸದಸ್ಯರು ಬಯೋಮೆಟ್ರಿಕ್‌ನಲ್ಲಿ ತಮ್ಮ ತಮ್ಮ ಬೆರಳಿನ ಗುರುತನ್ನು ನೀಡಿ ತಮಗೆ ಬರುವ ಆಹಾರಧಾನ್ಯವನ್ನು ಪಡೆಯುವುದಕ್ಕೆ ಹೈದರಾಬಾದ್ ನಿಂದ ಆಗಮಿಸುತ್ತಿದ್ದಾರೆ. ಹೀಗಾಗಿ ಜನ ಕೊರೋನ ಭೀತಿಯ ಆತಂಕದಲ್ಲಿ ಭಯಭೀತರಾಗಿದ್ದಾರೆ. ಸಾವಿರಾರು ಜನ ಸಾವಿರಾರು ನ್ಯಾಯಬೆಲೆ ಅಂಗಡಿಗೆ ಆಗಮಿಸಿ ಬಯೋಮೆಟ್ರಿಕ್‌ನಲ್ಲಿ ತಮ್ಮ ಬೆರಳನ್ನು ಇಡಬೇಕಾಗುತ್ತದೆ. ಇದರಲ್ಲಿ ಸೊಂಕಿತ ವ್ಯಕ್ತಿಗಳಿದ್ದರೆ ಏನು ಗತಿ ಎನ್ನುವ ಭಯ ಗ್ರಾಹಕರಿಗೆ ಕಾಡುತ್ತಿದೆ. ಆದ್ದರಿಂದ ಸರಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡದೆ ಕೊರೋನ ರೋಗದ ಭಯ ದೂರವಾಗುವವರೆಗೂ ಬಯೋಮೆಟ್ರಿಕ್‌ನಲ್ಲಿ ಬೆರಳಿನ ಗುರುತು ತೆಗೆದುಕೊಳ್ಳುವುದನ್ನು ಕೈಬಿಟ್ಟು, ಪಡಿತರ ಚೀಟಿಯಲ್ಲಿ ಹೆಸರು ಇರುವ ಕುಟುಂಬದ ಒಬ್ಬ ಸದಸ್ಯ ನ್ಯಾಯಬೆಲೆ ಅಂಗಡಿಗೆ ಬಂದು ಪಡಿತರ ಚೀಟಿಯಲ್ಲಿ ಹೆಸರು ಇರುವ ಕುಟುಂಬದ ಎಲ್ಲಾ ಸದಸ್ಯರ ಆಹಾರಧಾನ್ಯ ತೆಗೆದುಕೊಂಡು ಹೋಗುವ ಯೋಜನೆ ಕೂಡಲೇ ಜಾರಿಗೆ ತರಬೇಕಾಗಿ ವಿನಂತಿ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)