varthabharthi

ನಿಮ್ಮ ಅಂಕಣ

ದಲಿತರು ಇಂದು ಚೌಡಾರ್ ಕೆರೆಗಿಳಿದ ದಿನ

ದಲಿತರ ಪಾಲಿಗೆ ಐತಿಹಾಸಿಕ ಸಾಮಾಜಿಕ ಹೋರಾಟದ ಪ್ರತೀಕ ಮಹಾಡ್ ಸತ್ಯಾಗ್ರಹ

ವಾರ್ತಾ ಭಾರತಿ : 19 Mar, 2020
ಡಾ. ಕೆ.ಪಿ.ಮಹಾಲಿಂಗು ಕಲ್ಕುಂದ

1927-ಮಾರ್ಚ್-20 ಮಹಾರಾಷ್ಟ್ರದ ದಲಿತರಿಗಷ್ಟೇ ಅಲ್ಲದೆ, ಭಾರತದ ಶೋಷಿತರು ಸಮಾನತೆಗಾಗಿ ನಡೆಸಿದ ಸಾಮಾಜಿಕ ಹೋರಾಟಕ್ಕೆ ಗಜ ಶಕ್ತಿ ಬಂದ ದಿನ. ಚೌಡಾರ್‌ಕೆರೆ ಸತ್ಯಾಗ್ರಹ ದಲಿತರ ಪಾಲಿಗೆ ಒಂದು ಐತಿಹಾಸಿಕ, ಸಾಮಾಜಿಕ ಹೋರಾಟದ ಪ್ರತೀಕ. 93 ವರ್ಷಗಳ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್‌ರವರು ನಡೆಸಿದ ಈ ಹೋರಾಟ ದಲಿತರ ಪಾಲಿಗೆ ಸ್ವಾತಂತ್ರ್ಯ ಲಭಿಸಿದಷ್ಟೆ ಪ್ರಮುಖವಾದದು. ಈ ಹೋರಾಟದಿಂದ ದಲಿತರಲ್ಲಿ ಇಂದು ಸಾಮಾಜಿಕ ಹೋರಾಟದ ಪ್ರಜ್ಞೆ ಬೆಳೆಯಿತು.


ಭಾರತದ ನೆಲೆಯ ಮೂಲ ನಿವಾಸಿಗಳಾದ ಅಸ್ಪಶ್ಯರಿಗೆ ಶತಶತಮಾನಗಳಿಂದ ಕೆರೆ, ಬಾವಿ, ಹೊಟೇಲ್, ದೇವಸ್ಥಾನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತ ಪ್ರವೇಶ ಇರಲಿಲ್ಲ. ಸವರ್ಣೀಯರು ನಾಯಿ, ಬೆಕ್ಕು ಇನ್ನಿತರ ಸಾಕು ಪ್ರಾಣಿಗಳನ್ನು ತಮ್ಮ ಮನೆ ಮತ್ತು ತೋಟದ ಒಳಗೆ ಬಿಟ್ಟುಕೊಂಡು ಜೀವನ ನಡೆಸುತ್ತಾರೆ. ವಿಪರ್ಯಾಸವೆಂದರೆ ಮನುಷ್ಯರಾದ ಶೋಷಿತ ಸಮುದಾಯದ ಜನರನ್ನು ಮನೆಯ ಒಳಗಿರಲಿ, ಸಾರ್ವಜನಿಕ ಸ್ಥಳಗಳಲ್ಲೂ ಸೇರಿಸುತ್ತಿರಲಿಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಈ ಹೀನಾಯ ಪದ್ಧತಿ ಅತ್ಯಂತ ಕಠೋರವಾಗಿ ನಡೆದುಕೊಂಡು ಸಾಗುತ್ತಿದೆ. ಡಾ. ಬಿ.ಆರ್.ಅಂಬೇಡ್ಕರ್ ಹುಟ್ಟಿದ ನಾಡು ಮಹಾರಾಷ್ಟ್ರದಲ್ಲೂ ಇಂತಹ ಹೀನಾಯ ಪದ್ಧತಿ ಅತ್ಯಂತ ದಾರುಣವಾಗಿತ್ತು. ಪ್ರಕೃತಿದತ್ತವಾಗಿ ದೊರಕುವ ಕೆರೆ ನೀರನ್ನು ಮುಟ್ಟಲು ಕೆಳಸ್ತರದ ಜನರು ಯೋಗ್ಯರಲ್ಲ ಮತ್ತು ಇವರು ಮೇಲ್ವರ್ಗದ ಮನುಷ್ಯರನ್ನು ಮುಟ್ಟಲು ಅನರ್ಹರು ಎಂಬ ಮನುಷ್ಯ ವಿರೋಧಿ ನೀತಿ ಹಿಂದೂ ಧರ್ಮದ ಶ್ರೇಣೀಕೃತ ಸಮಾಜದಲ್ಲಿ ಇಂದು ಸಹ ಪ್ರಬಲವಾಗಿ ಬೇರೂರಿದೆ. ನಾಯಿ, ನರಿಗಳು, ಪ್ರಾಣಿ, ಪಕ್ಷಿಗಳು ಕೆರೆ, ಬಾವಿಯ ನೀರನ್ನು ಕುಡಿಯಬಹುದು. ಮನುಷ್ಯರಾದ ಶೋಷಿತರು ಇವುಗಳನ್ನು ಮುಟ್ಟಬಾರದು ಇದು 19ನೇ ಶತಮಾನ ದಲ್ಲಿ ಮಹಾರಾಷ್ಟ್ರದ ಸವರ್ಣೀಯರ ರೂಢಿ ನಿಯಮವಾಗಿತ್ತು. ಇಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಪ್ರತ್ಯಕ್ಷ ಸಂಘರ್ಷಕ್ಕೆ ಇಳಿಯಲು ಡಾ. ಬಿ.ಆರ್. ಅಂಬೇಡ್ಕರ್ ನಿರ್ಧರಿಸಿದ್ದರು.

ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳ ವಿರುದ್ದ ‘ಮೂಕನಾಯಕ’ ಮತ್ತು ‘ಬಹಿಷ್ಕೃತ ಭಾರತ’ ಪತ್ರಿಕೆಗಳ ಮೂಲಕ ಅರಿವು ಮೂಡಿಸುತ್ತಿದ್ದರು. ಜೊತೆಗೆ ಅವರ ಬಹಿಷ್ಕೃತ ಹಿತಕಾರಣಿ ಸಭಾದ ಸಾಮಾಜಿಕ, ಧಾರ್ಮಿಕ ಹೋರಾಟದ ಮೂಲಕ ಈ ದೇಶದ ಶೋಷಿತರ ವಿಮೋಚನೆಗಾಗಿ ಹೋರಾಡುತ್ತಿದ್ದರು. ಮುಂಬೈ ಅಸೆಂಬ್ಲಿಯಲ್ಲಿ ಮಂತ್ರಿಯಾಗಿದ್ದ ಡಾ. ಎಸ್.ಕೆ. ಬೋಳೆಯವರು 1923 ಆಗಸ್ಟ್ ತಿಂಗಳಲ್ಲಿ ಅಸ್ಪಶ್ಯರು ಬಾವಿ, ಕೆರೆ, ಹೊಳೆ, ಹೊಂಡ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೀರನ್ನು ಪಡೆದುಕೊಳ್ಳಬಹುದು ಎಂದು ಮಹತ್ವರವಾದ ಗೊತ್ತುವಳಿಯೊಂದನ್ನು ಮಂಡಿಸಿದ್ದರು. ಈ ಗೊತ್ತುವಳಿ ಪ್ರಕಾರ ಅಸ್ಪಶ್ಯರಿಗೆ ನೀರನ್ನು ಮುಟ್ಟುವ ಅಧಿಕಾರ ಸಂಪೂರ್ಣವಾಗಿ ಇದೆ ಎಂದು ಶಾಲೆ, ಅಸ್ಪತ್ರೆ, ನ್ಯಾಯಾಲಯ ಸೇರಿದಂತೆ ಸಮಸ್ತ ಸಾರ್ವಜನಿಕ ಸ್ಥಳಗಳಲ್ಲಿ ಇದು ಜಾರಿಗೆ ಬರುವಂತೆ ಮಂಡನೆಯಾಗಿತ್ತು. ಮುಂಬೈ ಸರಕಾರ ಎಲ್ಲಾ ಸರಕಾರಿ ಕಚೇರಿಗಳಿಗೆ ಈ ಆದೇಶವನ್ನು ಕಳುಹಿಸಿತ್ತು. ಚೌಡಾರ್‌ಕೆರೆ ಮಹಾಡ್ ನಗರ ಪರಿಷತ್‌ನ ಸರಹದ್ದಿನಲ್ಲಿರುವುದರಿಂದ ಈ ಆದೇಶದ ಪ್ರಕಾರ, ಮುಂಬೈ ಜಿಲ್ಲೆಯ ಮಹಾಡ್ ಮುನ್ಸಿಪಾಲಿಟಿ ಚೌಡಾರ್‌ಕೆರೆಯ ನೀರನ್ನು ಅಸ್ಪಶ್ಯರು ಉಪಯೋಗಿಸಿಕೊಳ್ಳಬಹುದೆಂದು ಪ್ರಕಟಣೆಯನ್ನು ಹೊರಡಿಸಿತ್ತು. ಈ ಕೆರೆ ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪಶ್ಯರಿಗೆ ಪ್ರವೇಶ ಬಹಿಷ್ಕಾರ ಇತ್ತು. ಸದರಿ ಅದೇಶವಿದ್ದರೂ, ಮೇಲ್ಜಾತಿಯವರು ಮತ್ತು ಅಸ್ಪಶ್ಯರಲ್ಲಿ ಘರ್ಷಣೆ ಉಂಟಾಗಬಹುದೆಂದು ಅಸ್ಪಶ್ಯರು ಈ ಕೆರೆಯನ್ನು 1927ರವರೆಗೂ ಸಾರ್ವಜನಿಕವಾಗಿ ಉಪಯೋಗಿಸಲು ಹಿಂಜರಿಯುತ್ತಿದ್ದರು.

ಇಂತಹ ಹೀನಾಯ ಪದ್ದತಿಯಾದ ಅಸ್ಪಶ್ಯತೆಯ ವಿರುದ್ದ ಹೋರಾಡಲು ಮತ್ತು ದಲಿತರಲ್ಲಿದ್ದ ಕೀಳಿರಿಮೆಯನ್ನು ತೊಳಗಿಸಿ ಅಸ್ಪಶ್ಯತೆ ನಿರ್ಮೂಲನೆ ಮಾಡಲು ಡಾ. ಬಿ.ಆರ್. ಅಂಬೇಡ್ಕರ್‌ರವರು ಚೌಡಾರ್‌ಕೆರೆ ನೀರನ್ನು ಮುಟ್ಟಿ ಕುಡಿಯುವ ಮಹತ್ತರವಾದ ಸತ್ಯಾಗ್ರಹವನ್ನು ನಡೆಸಲು 1927 ಮಾರ್ಚ್ 19ರಿಂದ ಅಲ್ಲೇ ಸಮ್ಮೇಳನ ನಡೆಸಲು ನಿರ್ಧರಿಸಿದರು. ಸಾಮಾಜದಲ್ಲಿ ಸಮಾನತೆ ಸ್ಥಾಪನೆ ಮಾಡುವುದು ಬಾಬಾ ಸಾಹೇಬರ ಮೂಲ ಗುರಿಯಾಗಿತ್ತು. ಹೀಗಾಗಿ, ಇಂತಹದೊಂದು ಐತಿಹಾಸಿಕ ನಿರ್ಧಾರದ ಮೂಲಕ ಈ ದೇಶದ ಕೋಟ್ಯಂತರ ಶೋಷಿತರಿಗೆ ಅತ್ಮಸ್ಥ್ಯೆರ್ಯ ಮತ್ತು ಅತ್ಮಾಭಿಮಾನವನ್ನು ತುಂಬಲು ಅವರು ಕಟಿಬದ್ಧರಾದರು. ಹೀಗಾಗಿ, ಮಹಾಡ್ ಕೆರೆ ನೀರು ಕುಡಿಯುವ ಚಳವಳಿ ಆ ಕಾಲಕ್ಕೆ ಒಂದು ಗಂಭೀರವಾದ ಸಾಮಾಜಿಕ ಹೋರಾಟವಾಗಿತ್ತು. ಈ ಐತಿಹಾಸಿಕ ಸಮಾವೇಶಕ್ಕೆ ಮಹಾರಾಷ್ಟ್ರ ಮತ್ತು ಗುಜರಾತ್‌ನ ಅನೇಕ ಕಡೆಗಳಿಂದ ಮಾಂಗ್, ಮಹಾರ್, ಚಮ್ಮಾರ್ ಸೇರಿದಂತೆ ಸುಮಾರು 10 ಸಾವಿರ ಶೋಷಿತ ಜನರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಅಂದು ಸಂಜೆ ಸಮಾವೇಶದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರು ಪ್ರಾಸ್ತವಿಕವಾಗಿ ಮಾತನಾಡುತ್ತಾ, ‘‘ಈ ಭೂಮಿಯ ಮೇಲೆ ಎಲ್ಲಾ ಜೀವರಾಶಿಗಳಿಗೂ ವಾಸಿಸುವ ಹಕ್ಕಿದೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅಹಿಂಸೆಯ ಹಾದಿಯಲ್ಲಿ ಹೋರಾಡುವುದು ನಮ್ಮ ಧರ್ಮ. ನಮ್ಮದು ಮಾನವೀಯ ಹೋರಾಟವಾದ್ದರಿಂದ ನಮಗೆ ಜಯ ಸಿಗುತ್ತದೆ. ಇದಕ್ಕಾಗಿ ನಾವೆಲ್ಲರೂ ಶಾಂತಿಯಿಂದ ಹೋರಾಡಬೇಕಾಗಿದೆ. ದಲಿತರು ಮಾನವೀಯ ನೆಲೆಯುಳ್ಳ ಆಚಾರ, ವಿಚಾರಗಳನ್ನು ಮಾತ್ರ ಪಾಲಿಸಿರಿ. ಮೃತ ಪ್ರಾಣಿಯ ಮಾಂಸಗಳನ್ನು ತಿನ್ನಬೇಡಿ. ಮೇಲು-ಕೀಳು ಭಾವನೆ ನಿಮ್ಮಲ್ಲಿ ಕೀಳರಿಮೆ ಸೃಷ್ಟಿಸುತ್ತದೆ. ಅದನ್ನು ಮೊದಲು ಕಿತ್ತೊಗೆಯಿರಿ. ನಿಮ್ಮ ಜೀವನ ಶೈಲಿಯನ್ನು ನೀವೇ ಬದಲಾಯಿಸಿಕೊಳ್ಳಬೇಕು. ಕಾಲ ಕಾಲಕ್ಕೆ ಸರಿಯಾಗಿ ಹೊಲ-ಗದ್ದೆಗಳಲ್ಲಿ ಬೇಸಾಯ ಮಾಡಿ ಅನ್ನದ ದಾಹ ನೀಗಿಸಿಕೊಳ್ಳಿ. ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮಾಡಿಸಿರಿ’’ ಎಂದು ಶೋಷಿತ ಸಮುದಾಯಗಳಲ್ಲಿ ಸ್ವಾಭಿಮಾನ ಮೂಡಿಸುವ ಭಾಷಣ ಮಾಡಿದರು.

ಮುಂದುವರಿದು, ಅವರು ‘‘ಭಾರತದಲ್ಲಿ ಅಭಿವೃದ್ಧಿ ಮತ್ತು ಸ್ವಾತಂತ್ರ್ಯದ ಬಗ್ಗೆ ಮಾತಾನಾಡುವವರು ಮನುಷ್ಯರಾದ ಅಸ್ಪಶ್ಯರ ಬಗ್ಗೆ ಏಕೆ ಮಾತನಾಡುವುದಿಲ್ಲ? ಭಾರತದ ಹಿಂದೂ ಧರ್ಮದಲ್ಲಿ ಒಂದು ಜಾತಿ ಇನ್ನೊಂದು ಜಾತಿಯನ್ನು ಒಪ್ಪಿಕೊಳ್ಳುವುದಿಲ್ಲ. ತನ್ನ ಜಾತಿ ಶ್ರೇಷ್ಠವೆಂದು ಮತ್ತೊಂದು ಜಾತಿಯು ಪ್ರತಿಪಾದಿಸುತ್ತದೆ. ಇದಕ್ಕೆಲ್ಲ ಭಾರತದಲ್ಲಿರುವ ಶ್ರೇಣೀಕೃತ ಜಾತಿವ್ಯವಸ್ಥೆಯೇ ಕಾರಣ. ಇದು ಜಾತಿ ವ್ಯವಸ್ಥೆಯ ಒಂದು ಕಿರುನೋಟ. ಜಾತಿಯಿಂದಾಗಿ ಅಸಮಾನತೆ, ಅಶಾಂತಿ ದೇಶದಲ್ಲಿ ನೆಲೆಸಿದೆ. ಹಿಂದೂ ಸಂಸ್ಕೃತಿಯಲ್ಲಿ ಸವರ್ಣೀಯರು ನಾಯಿ, ನರಿ, ಪ್ರಾಣಿಗಳಿಗೆ ದಯೆ ತೋರಿಸುತ್ತಾರೆ. ಅಸ್ಪಶ್ಯರನ್ನು ಕಂಡರೆ ಪ್ರಾಣಿಗಳಿಗಿಂತಲೂ ಕಡೆಯಾಗಿ ಕಾಣುತ್ತಾರೆ. ಇದೇ ಚೌಡಾರ್ ಕೆರೆಯ ನೀರನ್ನು ಮುಟ್ಟಿದ ಅಸ್ಪಶ್ಯರ ಮೇಲೆ ಆನೇಕ ಬಾರಿ ಮೊಕದ್ದಮೆಗಳನ್ನು ದಾಖಲಿಸಿ ಹಲವಾರು ಸಲ ಜೈಲು ಶಿಕ್ಷೆಯನ್ನು ನೀಡಿದ್ದಾರೆ. ವ್ಯೆಜ್ಞಾನಿಕವಾಗಿ ನೋಡಿದರೆ, ನೀರು ಮುಟ್ಟಿ ಕುಡಿದರೆ ನೀರು ಮಲಿನವಾಗುವುದಿಲ್ಲ. ಬದಲಿಗೆ ನೀರು ಶುದ್ಧಿಯಾಗುತ್ತದೆ. ನಾವೆಲ್ಲ ಈ ದೇಶದ ಜನರು. ನಮ್ಮ ಹಕ್ಕನ್ನು ನಾವು ಚಲಾಯಿಸೋಣ’’ ಎಂದ ಅವರು ಮಾರ್ಚ್ 20-1927ರ ಬೆಳಗ್ಗೆ ಸಾವಿರಾರು ಕಾರ್ಯಕರ್ತರೊಂದಿಗೆ ಚೌಡಾರ್‌ಕೆರೆಯ ಕಡೆಗೆ ಹೆಜ್ಜೆ ಹಾಕಿ ಮುನ್ನಡೆದರು.

ಡಾ. ಬಿ.ಆರ್. ಅಂಬೇಡ್ಕರ್‌ರ ಹಿಂದೆ ಸುಮಾರು 10 ಸಾವಿರ ಜನ ಮೆರವಣಿಗೆಯಲ್ಲಿ ಚೌಡಾರ್‌ಕೆರೆಯ ಕಡೆಗೆ ಸಾಗಿದರು. ಈ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಮೇಲೆ ಹಲ್ಲೆ ನಡೆಸಲು ಮನುವಾದಿಗಳು ಸಜ್ಜಾಗಿದ್ದರು. ಆದರೆ, ಡಾ. ಬಿ.ಆರ್. ಅಂಬೇಡ್ಕರ್‌ರ ಅನುಯಾಯಿಗಳ ಸಮಯೋಚಿತ ನಿರ್ಧಾರ ಮತ್ತು ಬಿಗಿ ಭದ್ರತೆಯಿಂದ ಅದು ಸಫಲವಾಗಲಿಲ್ಲ! ಸಾವಿರಾರು ಜನರು ಮಹಾಡ್ ನಗರದ ವಿವಿಧ ಬೀದಿಗಳಿಂದ ಸಾಗರೋಪಾದಿಯಾಗಿ ಚೌಡಾರ್‌ಕೆರೆಗೆ ಬಂದು ತಲುಪಿದರು. ಅಲ್ಲಿ ಮೊದಲು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರು ಬೊಗಸೆ ನೀರನ್ನು ತಮ್ಮ ಕೈಯಲ್ಲಿ ತೆಗೆದುಕೊಂಡು ಕುಡಿದರು. ನಂತರ ಇತರ ಶೋಷಿತ ಚಳವಳಿಗಾರರು ಕೆರೆಯ ನೀರನ್ನು ಕುಡಿದು ತಮ್ಮ ಹಕ್ಕನ್ನು ಚಲಾಯಿಸಿದರು. ತಲೆತಲಾಂತರದಿಂದ ನೊಂದು-ಬೆಂದು ಬೆಂಡಾಗಿದ್ದ ಶೋಷಿತರ ಮುಖಗಳ ಮೇಲೆ ಅಂದು ಹೊಸ ಮಂದಹಾಸ ಮೂಡಿತು. ಅವರ ಮುಖದಲ್ಲಿ ಯುದ್ಧ ಗೆದ್ದ ವಿಜಯೋತ್ಸವದ ರಣಕಹಳೆ ತುಂಬಿ ತುಳುಕಿತ್ತು. ಈ ಮಹಾಡ್ ಹೋರಾಟ ಭಾರತ ದೇಶದ ಇತಿಹಾಸದಲ್ಲೇ ಅಸ್ಪಶ್ಯತೆಯ ವಿರುದ್ಧ ನಡೆದ ಐತಿಹಾಸಿಕ ಸಾಮಾಜಿಕ ಹೋರಾಟವಾಯಿತು.

ಬಾಬಾ ಸಾಹೇಬರು ಚೌಡಾರ್ ಕೆರೆ ನೀರನ್ನು ಕುಡಿಯುವ ಮೂಲಕ ದಲಿತರ ಸಾಮಾಜಿಕ ವಿಮೋಚನೆಗೆ ಮುಂದಾದರು. ಸನಾತನಾವಾದಿಗಳು ಚೌಡಾರ್‌ಕೆರೆಯ ನೀರನ್ನು ದಲಿತರು ಬಳಸಿದ್ದಕ್ಕಾಗಿ ಅಸ್ಪಶ್ಯರ ಮೇಲೆ ದೌರ್ಜನ್ಯಗಳನ್ನು ನಡೆಸಿದರು. ಕೆರೆಯನ್ನು ಶುದ್ಧೀಕರಿಸುತ್ತೇವೆಂದು ಬ್ರಾಹ್ಮಣರ ಮನೆಗಳಿಂದ ಸಗಣಿ, ಗೋಮೂತ್ರ, ಹಾಲು, ಮೊಸರು ಮಿಶ್ರಣ ಮಾಡಿ ಚೌಡಾರ್‌ಕೆರೆಗೆ ಸುರಿದರು. ಅದರೆ, ಕೆರೆ ಶುದ್ಧಿಯಾಗಲಿಲ್ಲ, ಬದಲಾಗಿ ಮಲಿನಗೊಂಡಿತು. ಇಂತಹ ಅವೈಜ್ಞಾನಿಕ ಮೂಢ ನಂಬಿಕೆಗೆ ವೈದಿಕತ್ವ ಅಂದು ಸಾಕ್ಷಿಯಾಯಿತು. ಮುಂದುವರಿದು ನ್ಯಾಯಾಲಯದಿಂದ ಅಸ್ಪಶ್ಯರು ಚೌಡಾರ್‌ಕೆರೆ ನೀರನ್ನು ಮುಟ್ಟಬಾರದೆಂದು ತಡೆಯಾಜ್ಞೆ ತಂದರು. ನ್ಯಾಯಾಲಯದ ತೀರ್ಪಿನಿಂದ ದಲಿತರಲ್ಲಿ ಆತಂಕ ಮೂಡಿತು. ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರು ‘‘ಸವರ್ಣೀಯರು ಮತ್ತು ಸರಕಾರ ದಲಿತರ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದರೆ, ನಾನು ಈ ವಿಷಯವನ್ನು ಅಂತರ್‌ರಾಷ್ಟ್ರೀಯ (Leage of Nations) ಮಟ್ಟಕ್ಕೆ ಕೊಂಡೊಯ್ಯುತ್ತೇನೆ. ಈ ಮೂಲಕ ಭಾರತದಲ್ಲಿ ನಡೆಯುವ ನೀಚ ಸಂಸ್ಕೃತಿಯನ್ನು ಜಗತ್ತಿಗೆಲ್ಲ ತಿಳಿಸುತ್ತೇನೆ’’ ಎಂದು ಎಚ್ಚರಿಸಿದರು. ದಲಿತರು ಡಾ. ಅಂಬೇಡ್ಕರ್‌ರವರ ನೇತೃತ್ವದಲ್ಲಿ ಮನುವಾದಿಗಳು ನಡೆಸಿದ ಹಲ್ಲೆ, ದೌರ್ಜನ್ಯದ ವಿರೋಧ, ಚೌಡಾರ್ ಕೆರೆ ಮರು ಪ್ರವೇಶಕ್ಕಾಗಿ ಮತ್ತು ದಲಿತರು ಚೌಡಾರ್ ಕೆರೆ ನೀರನ್ನು ಉಪಯೋಗಿಸಲು ನ್ಯಾಯಾಲಯದಲ್ಲಿ ದಾವೆ ಹೂಡಿದರು.

ಚಳವಳಿ ನಡೆದ 10 ವರ್ಷಗಳ ನಂತರ ಮುಂಬೈ ನ್ಯಾಯಾಲಯ 1937ರಲ್ಲಿ ಚೌಡಾರ್‌ಕೆರೆಯ ನೀರನ್ನು ಅಸ್ಪಶ್ಯರು ಉಪಯೋಗಿಸಬಹುದೆಂದು ತೀರ್ಪು ನೀಡಿತು. ಡಾ. ಅಂಬೇಡ್ಕರ್ ನೇತೃತ್ವದಲ್ಲಿ ಶೋಷಿತ ಸಮುದಾಯಗಳು ನಡೆಸಿದ ಸಾಮಾಜಿಕ ಹೋರಾಟಕ್ಕೆ ಕಾನೂನು ಮೂಲಕ ಅಂದು ಜಯ ಲಭಿಸಿತು. 1927-ಮಾರ್ಚ್-20 ಮಹಾರಾಷ್ಟ್ರದ ದಲಿತರಿಗಷ್ಟೇ ಅಲ್ಲದೆ, ಭಾರತದ ಶೋಷಿತರು ಸಮಾನತೆಗಾಗಿ ನಡೆಸಿದ ಸಾಮಾಜಿಕ ಹೋರಾಟಕ್ಕೆ ಗಜ ಶಕ್ತಿ ಬಂದ ದಿನ. ಚೌಡಾರ್‌ಕೆರೆ ಸತ್ಯಾಗ್ರಹ ದಲಿತರ ಪಾಲಿಗೆ ಒಂದು ಐತಿಹಾಸಿಕ, ಸಾಮಾಜಿಕ ಹೋರಾಟದ ಪ್ರತೀಕ. 93 ವರ್ಷಗಳ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್‌ರವರು ನಡೆಸಿದ ಈ ಹೋರಾಟ ದಲಿತರ ಪಾಲಿಗೆ ಸ್ವಾತಂತ್ರ್ಯ ಲಭಿಸಿದಷ್ಟೆ ಪ್ರಮುಖವಾದದು. ಈ ಹೋರಾಟದಿಂದ ದಲಿತರಲ್ಲಿ ಇಂದು ಸಾಮಾಜಿಕ ಹೋರಾಟದ ಪ್ರಜ್ಞೆ ಬೆಳೆಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)