varthabharthi

ಸಂಪಾದಕೀಯ

ಕೊರೋನ ವೈರಸ್‌: ಮೊದಲು ಜನನಾಯಕರು ಜಾಗೃತರಾಗಲಿ

ವಾರ್ತಾ ಭಾರತಿ : 19 Mar, 2020

ರೋಗದ ಕುರಿತಂತೆ ಇರುವ ಅಜ್ಞಾನ ಯಾವುದೇ ವೈರಸ್‌ಗಳಿಗಿಂತ ಅಪಾಯಕಾರಿ ಎನ್ನುವುದು ಕೋರೋನ ಗದ್ದಲಗಳಲ್ಲಿ ಬಹಿರಂಗವಾಗುತ್ತಿದೆ. ವೈದ್ಯರು, ವಿಜ್ಞಾನಿಗಳು, ಚಿಂತಕರು ಅದೆಷ್ಟು ಜಾಗೃತಿಗಳನ್ನು ಬಿತ್ತಿದರೂ, ಜನರು ಮತ್ತೆ ಮತ್ತೆ ಅಜ್ಞಾನಕ್ಕೆ ಬಲಿಯಾಗಿ ತಾವಾಗಿಯೇ ರೋಗಕ್ಕೆ ಬಲಿಬೀಳುವುದಲ್ಲದೆ ಇತರರನ್ನೂ ಬಲಿ ಬೀಳಿಸುತ್ತಿದ್ದಾರೆ. ಕೊರೋನ ವೈರಸ್ ಸೋಂಕಿತರಷ್ಟೇ ಅಲ್ಲ, ತೀವ್ರ ನೆಗಡಿ, ಕೆಮ್ಮು ಇರುವವರೂ ತಮ್ಮ ಹೊಣೆಗಾರಿಕೆಗಳನ್ನು ಪ್ರದರ್ಶಿಸುವ ಸಮಯ ಇದು. ಆದಷ್ಟು ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಳ್ಳದೇ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕಾದುದು ಅವರ ಜವಾಬ್ದಾರಿಯಾಗಿದೆ. ಕೊರೋನ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಬೀರುತ್ತಿರುವ ದುಷ್ಪರಿಣಾಮಗಳು ಮಾಧ್ಯಮಗಳ ಮೂಲಕ ಬೆಚ್ಚಿ ಬೀಳಿಸುತ್ತಿರುವಾಗ, ಕೊರೋನ ಶಂಕಿತನೊಬ್ಬ ಬೇಜವಾಬ್ದಾರಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಅಜ್ಞಾನ ಮಾತ್ರವಲ್ಲ, ಅಪರಾಧವೂ ಆಗಿದೆ. ಸಾಮಾಜಿಕ ಬದ್ಧತೆಯ ಕೊರತೆಯನ್ನು ಅವರಲ್ಲಿ ಗುರುತಿಸಬಹುದು. ಕೆಲವು ಶಂಕಿತರು ಮಾಧ್ಯಮಗಳಿಗೆ ಹೆದರಿ ಆಸ್ಪತ್ರೆಗಳಿಂದ ನಾಪತ್ತೆಯಾಗಿ ಇನ್ನಿತರರಿಗೆ ಸೋಂಕನ್ನು ಹರಡಿಸಿದ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ.

ಕೊಡಗಿನಲ್ಲಿ ಶಂಕಿತ ರೋಗಿ ಬಸ್‌ನಲ್ಲಿ ಪ್ರಯಾಣಿಸಿರುವುದು ಗೊತ್ತಾಗಿದೆ. ಇದೀಗ ಬಸ್‌ನಲ್ಲಿರುವ ಇತರರಿಗೂ ಸೋಂಕು ಹರಡಿರಬಹುದೇ ಎನ್ನುವ ಭೀತಿ ಕಾಡುತ್ತಿದೆ. ಒಬ್ಬನ ಬೇಜವಾಬ್ದಾರಿಗೆೆ ತೆರಬೇಕಾದ ಬೆಲೆ ಬಹುದೊಡ್ಡದು. ಈ ಹಿನ್ನೆಲೆಯಲ್ಲಿ ತನಗೆ ಕೊರೋನ ವೈರಸ್ ಇರಬಹುದೇ ಎಂಬ ಶಂಕೆಯಿರುವ ಯಾವನೇ ವ್ಯಕ್ತಿ ಸಾರ್ವಜನಿಕ ಸಂಪರ್ಕದ ಕುರಿತಂತೆ ಸ್ವಯಂ ನೀತಿ ಸಂಹಿತೆಯನ್ನು ವಿಧಿಸಿಕೊಳ್ಳಬೇಕು ಮಾತ್ರವಲ್ಲ, ತಕ್ಷಣ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಬೇಕು. ‘ತನಗೆ ತಾನೇ ವೈದ್ಯನಾಗಿ’ ಸೋಂಕು ಇಲ್ಲ ಎನ್ನುವ ನಿಲುವನ್ನು ಯಾವ ಕಾರಣಕ್ಕೂ ತಳೆಯಬಾರದು. ಇದೇ ಸಂದರ್ಭದಲ್ಲಿ ಕೊರೋನ ವೈರಸ್‌ಗೆ ಸಂಬಂಧಿಸಿದಂತೆ ಭಾರೀ ಸಂಖ್ಯೆಯ ‘ವಾಟ್ಸಆ್ಯಪ್ ವೈದ್ಯರು’ ಹುಟ್ಟಿಕೊಳ್ಳುತ್ತಿದ್ದಾರೆ. ಆಯುರ್ವೇದದಿಂದ ಕೊರೋನ ಸೋಂಕನ್ನು ತಡೆಯಬಹುದು, ಇಂತಹ ಮಂತ್ರಗಳಿಂದ ರೋಗದಿಂದ ದೂರ ಇರಬಹುದು ಎನ್ನುವ ಸಲಹೆ ನೀಡುವ ಮೂಲಕ, ಕೊರೋನ ಹರಡುವುದಕ್ಕೆ ತಮ್ಮ ಪಾಲಿನ ಕೊಡುಗೆಗಳನ್ನು ನೀಡುತ್ತಿದ್ದಾರೆ. ವೈದ್ಯಕೀಯ ಸಲಹೆಗಳನ್ನು ನೀಡಬೇಕಾದರೆ ಅವರು ವೈದ್ಯ ಶಾಸ್ತ್ರದಲ್ಲಿ ಅಧಿಕೃತ ಪದವಿ ಪಡೆದಿರಬೇಕು. ಕೊರೋನದಂತಹ ಮಾರಕ ವೈರಸ್‌ನ ಬಗ್ಗೆ ಉಡಾಫೆಯ ಔಷಧಿಗಳನ್ನು ಘೋಷಿಸುವುದು ಅಪರಾಧವಾಗಿದೆ. ಇಂತಹ ನಕಲಿ ವೈದ್ಯರ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಗೊಳ್ಳುವುದು ಅತ್ಯಗತ್ಯ.

ಯಾವುದೇ ಕಾರಣಕ್ಕೂ ಆಯುರ್ವೇದ, ಹೋಮಿಯೋಪತಿ ಎನ್ನುವ ಪ್ರಯೋಗಕ್ಕೆ ಸೋಂಕಿತರು ತಮ್ಮನ್ನು ಒಡ್ಡಿಕೊಳ್ಳದೆ, ಸಂಬಂಧ ಪಟ್ಟ ಆಸ್ಪತ್ರೆಗಳನ್ನೇ ಸಂಪರ್ಕಿಸಬೇಕು. ಇದೇ ಸಂದರ್ಭದಲ್ಲಿ ‘ಗೋಮೂತ್ರದಿಂದ ಕೊರೋನ ವಾಸಿಯಾಗುತ್ತದೆ’ ಎಂಬ ಮೂರ್ಖ ಸಲಹೆಗಳು ಮುನ್ನೆಲೆಗೆ ಬಂದಿರುವುದು ಆತಂಕಕಾರಿ. ಈ ಹಿಂದೆ, ಗೋಮೂತ್ರದಿಂದ ಕ್ಯಾನ್ಸರ್ ನಿವಾರಣೆಯಾಗುತ್ತದೆ ಎನ್ನುತ್ತಿದ್ದ ಜನರೇ ಈ ಸುಳ್ಳನ್ನು ಹರಡುತ್ತಿದ್ದಾರೆ. ಕೋಲ್ಕತಾದಲ್ಲಿ ಬಿಜೆಪಿ ಮುಖಂಡನೊಬ್ಬ ಗೋಮೂತ್ರದ ಬಗ್ಗೆ ಪ್ರಚಾರ ಮಾಡುತ್ತಾ, ಓರ್ವನಿಗೆ ಅದನ್ನು ಕುಡಿಸಿದ ಕಾರಣದಿಂದ ಆತ ಅಸ್ವಸ್ಥನಾಗಿದ್ದಾನೆ. ಗೋಮೂತ್ರ ಕುಡಿಸಿದ ಬಿಜೆಪಿ ಮುಖಂಡನನ್ನು ಬಂಧಿಸಲಾಗಿದೆ. ಆದರೆ, ಗೋಮೂತ್ರದ ಬಗ್ಗೆ ಕೇಂದ್ರದಲ್ಲಿರುವ ಸಚಿವರು, ಸಂಸದರೇ ಸುಳ್ಳುಗಳನ್ನು ಹರಡುತ್ತಿದ್ದಾರೆ. ಅದನ್ನು ನಂಬಿ ಅವರ ಹಿಂಬಾಲಕರು ಗೋಮೂತ್ರದ ಕುರಿತಂತೆ ಪ್ರಚಾರ ಮಾಡುತ್ತಿದ್ದಾರೆ.

ಪ್ರಧಾನಿ ಮೋದಿಯವರು, ಮೊತ್ತ ಮೊದಲು ತಮ್ಮ ಸರಕಾರದೊಳಗಿರುವ ಈ ಗೋಮೂತ್ರ ಪ್ರವೀಣರನ್ನು ಬಾಯಿ ಮುಚ್ಚಿಸಬೇಕು. ಇವರ ಮೇಲೆ ಕ್ರಮ ತೆಗೆದುಕೊಳ್ಳದೇ, ತಳಸ್ತರದ ಬಿಜೆಪಿಯ ನಾಯಕರ ಮೇಲೆ ಕ್ರಮ ತೆಗೆದುಕೊಳ್ಳುವುದರಿಂದ ಅನಾಹುತಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಅತ್ಯಂತ ವಿಷಾದನೀಯ ಸಂಗತಿಯೆಂದರೆ, ಕೇಂದ್ರ ಸರಕಾರದ ಸಹಾಯಕ ಆರೋಗ್ಯ ಸಚಿವರಾದ ಅಶ್ವಿನ್ ಚೌಬೆಯೂ ಕೊರೋನಕ್ಕೆ ಔಷಧಿ ಕಂಡು ಹಿಡಿದಿರುವುದು. ‘‘15 ನಿಮಿಷ ಬಿಸಿಲಲ್ಲಿ ನಿಂತರೆ ಕೊರೋನ ರೋಗ ನಿರೋಧಕ ಶಕ್ತಿ ಬರುತ್ತದೆ. ಆದುದರಿಂದ ಬಿಸಿಲಲ್ಲಿ ನಿಲ್ಲಿ’’ ಎಂದು ದೇಶದ ಜನರಿಗೆ ಸಲಹೆ ನೀಡಿದ್ದಾರೆ. ಇಂತಹದೊಂದು ಬೇಜವಾಬ್ದಾರಿ ಹೇಳಿಕೆಯನ್ನು ಆರೋಗ್ಯ ಸಚಿವರೇ ನೀಡುತ್ತಿರುವಾಗ, ಅವರ ಹಿಂಬಾಲಕರಿಂದ ಬೇರೇನು ನಿರೀಕ್ಷಿಸಬಹುದು? ನರೇಂದ್ರ ಮೋದಿಯವರು ಟಿವಿ ಮಾಧ್ಯಮಗಳಲ್ಲಿ ಅನಗತ್ಯ ಭಾಷಣ ಕೊಡುವುದಕ್ಕಿಂತ, ತನ್ನ ಸಚಿವ ಸಂಪುಟದಲ್ಲಿರುವ ‘ಅಜ್ಞಾನಿ’ಗಳನ್ನು ಸುಶಿಕ್ಷಿತರನ್ನಾಗಿಸಲು ತರಗತಿ ತೆಗೆದುಕೊಳ್ಳಬೇಕು.

ಇದೇ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮನವಮಿಯ ಸಂದರ್ಭದಲ್ಲಿ ಮಾರ್ಚ್ 25ರಿಂದ ಎಪ್ರಿಲ್ 2ರವರೆಗೆ ನಡೆಯುವ ಸಮಾರಂಭವನ್ನು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ ಎನ್ನುವ ಮೂರ್ಖ ಹೇಳಿಕೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ನೀಡಿದ್ದಾರೆ. ಒಂದೆಡೆ ಈ ದೇಶದ ಪ್ರಧಾನಿ ನರೇಂದ್ರ ಮೋದಿ ‘ಮಾರ್ಚ್ 22’ರಂದು ಜನರೆಲ್ಲ ಸ್ವಯಂ ಕರ್ಫ್ಯೂ ಆಚರಿಸಿ ಎಂದು ಕರೆ ನೀಡುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಒಂದು ವಾರ ನಡೆಯಲಿರುವ ಬೃಹತ್ ಸಮಾವೇಶದ ಕುರಿತಂತೆ ವೌನ ತಾಳುತ್ತಾರೆ. ಕೆಲವು ಸನ್ಯಾಸಿಗಳು ‘ಅಪಾಯವಾಗದಂತೆ ಶ್ರೀರಾಮ ನೋಡಿಕೊಳ್ಳುತ್ತಾನೆ’ ಎಂಬ ಹೇಳಿಕೆ ನೀಡಿದ್ದಾರೆ. ಶ್ರೀರಾಮನೇ ನೋಡಿಕೊಳ್ಳುತ್ತಾನೆ ಎಂದಾದರೆ ಇಷ್ಟೆಲ್ಲ ಭದ್ರತೆಗಳನ್ನು ಯಾಕೆ ಮಾಡಬೇಕು? ಪ್ರಧಾನಿ ಮೋದಿ ಈ ಬಗ್ಗೆ ಆದಿತ್ಯನಾಥ್‌ಗೆ ಪಾಠ ಮಾಡುವ ಅಗತ್ಯವಿದೆ.

ಒಂದೆಡೆ ಜನಸಾಮಾನ್ಯರಿಗೆ ‘ಜಾಗೃತಿ’ಯ ಬೋಧನೆ ಮಾಡುವುದು, ಮಗದೊಂದೆಡೆ ಮುಖ್ಯಮಂತ್ರಿಯೇ ಮದುವೆ ಸಮಾರಂಭದಲ್ಲಿ ಭಾಗವಹಿಸುವುದು, ಒಂದೆಡೆ ಮನೆಯಿಂದ ಇಡೀ ದಿನ ಹೊರಗೆ ಬರಬೇಡಿ ಎಂದು ಪ್ರಧಾನಿ ಘೋಷಿಸುವುದು, ಮಗದೊಂದೆಡೆ ಒಂದು ವಾರಗಳ ಕಾಲ ಜಾತ್ರೆ ನಡೆಸಲು ಅನುಮತಿ ನೀಡುವುದು...ಇಂತಹ ದ್ವಂದ್ವಗಳಿಂದ ಕೊರೋನದಿಂದ ಜನರನ್ನು ರಕ್ಷಿಸುವುದು ಸಾಧ್ಯವಿಲ್ಲ? ಜಾಗೃತಿಯ ವಿಷಯದಲ್ಲಿ ನಮ್ಮ ನಾಯಕರು ಜನರಿಗೆ ಮಾದರಿಯಾಗುವುದು ಇಂದು ಅತ್ಯಗತ್ಯವಾಗಿದೆ. ಕೋರೋನ ವೈರಸ್ ಹುಟ್ಟಿಸಿರುವ ತಲ್ಲಣಗಳ ನಡುವೆಯೇ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಎರಡು ವರ್ಗಗಳು ಹೋರಾಟ ನಡೆಸುತ್ತಿವೆ. ಮೊದಲನೆಯ ವರ್ಗ ವೈದ್ಯರು. ಇವರೇನಾದರೂ ಕೊರೋನಗೆ ಹೆದರಿ ಮನೆಯಲ್ಲಿ ಕುಳಿತರೆ ಅಥವಾ ರಜೆ ಹಾಕಿದರೆ ಜನರ ಸ್ಥಿತಿ ದಯನೀಯವಾಗಿ ಬಿಡುತ್ತಿತ್ತು. ಇವರ ಕರ್ತವ್ಯ ಬದ್ಧತೆ ಶ್ಲಾಘನೀಯವಾದುದು. ವೈದ್ಯರ ಸೇವೆಯನ್ನು ಈಗಾಗಲೇ ಸಮಾಜ ಗುರುತಿಸಿದೆ ಕೂಡ. ಆದರೆ ಇನ್ನೊಂದು ವರ್ಗವೂ, ಈ ವೈರಸ್‌ಗೆ ಅಂಜದೆ ಬೀದಿಗಿಳಿದು ಜನರ ಆರೋಗ್ಯವನ್ನು ರಕ್ಷಿಸುತ್ತಿದೆ. ಅವರೇ ಪೌರ ಕಾರ್ಮಿಕರು.

ಈ ಕೊರೋನ ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯದ ಭಯದಿಂದ ಮನೆಯೊಳಗೆ ಕೂತಿರುವ ಹೊತ್ತಿನಲ್ಲಿ ಪೌರ ಕಾರ್ಮಿಕರು ಯಾವುದೇ ಅತ್ಯಾಧುನಿಕ ಸಲಕರಣೆಗಳಿಲ್ಲದೇ ಬೀದಿ, ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಒಂದು ವೇಳೆ ಇವರೇನಾದರೂ ಕೊರೋನಗೆ ಅಂಜಿ ರಜೆ ಹಾಕಿದರೆ, ಇಡೀ ದೇಶ ವಿವಿಧ ರೋಗಗಳಿಂದ ತತ್ತರಿಸಿ ಹಾಹಾಕಾರ ಎದ್ದು ಬಿಡುತ್ತಿತ್ತು. ಅವರು ತಮ್ಮ ಕರ್ತವ್ಯವನ್ನು ಬದ್ಧತೆಯಿಂದ ನಿರ್ವಹಿಸುತ್ತಿರುವ ಕಾರಣದಿಂದಲೇ ದೇಶ ಆರೋಗ್ಯದಿಂದಿದೆ. ಸದ್ಯ ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಅವರುಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೇವೆಯನ್ನು ಸರಕಾರ ಗುರುತಿಸಿ ಗೌರವಿಸಬೇಕು ಮಾತ್ರವಲ್ಲ, ಮುಂದಿನ ಮೂರು ತಿಂಗಳ ಕಾಲವಾದರೂ ಅವರ ಸೇವೆಗೆ ದುಪ್ಪಟ್ಟು ವೇತನಗಳನ್ನು ನೀಡಬೇಕು. ಈಗಾಗಲೇ ಅವರು ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ. ಆ ಬೇಡಿಕೆಗಳನ್ನು ಮನ್ನಿಸುವುದೂ ಕೊರೋನ ವೈರಸನ್ನು ಎದುರಿಸುವ ಒಂದು ಪ್ರಮುಖ ಭಾಗ ಎನ್ನುವುದನ್ನು ಸರಕಾರ ಅರ್ಥಮಾಡಿಕೊಳ್ಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)