varthabharthi

ಕ್ರೀಡೆ

ಮೀರಾಬಾಯಿಗೆ ಎರಡನೇ ಬಾರಿ ಒಲಿಂಪಿಕ್ಸ್ ನಲ್ಲಿ ಸ್ಥಾನ ಖಚಿತ

ವಾರ್ತಾ ಭಾರತಿ : 20 Mar, 2020

ಹೊಸದಿಲ್ಲಿ,ಮಾ.20: ಕೋವಿಡ್-19 ಭೀತಿಯಿಂದಾಗಿ ವೇಟ್‌ಲಿಫ್ಟಿಂಗ್ ಅರ್ಹತಾ ಟೂರ್ನಿಯ ವೇಳಾಪಟ್ಟಿ ಅಸ್ತವ್ಯಸ್ತವಾಗಿದೆ. ಆದಾಗ್ಯೂ ಭಾರತದ ಮೀರಾಬಾಯಿ ಚಾನು ಟೋಕಿಯೊ ಗೇಮ್ಸ್‌ನಲ್ಲಿ ಭಾಗವಹಿಸುವುದು ನಿಶ್ಚಿತವಾಗಿದೆ. ಯುವ ವೇಟ್‌ಲಿಫ್ಟರ್ ಜೆರೆಮಿ ಲಾಲ್‌ರಿನ್ನುಂಗಾ ಕೂಡ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ಸಜ್ಜಾಗಿದ್ದಾರೆ.

 ಮಾಜಿ ವಿಶ್ವ ಚಾಂಪಿಯನ್ ಚಾನು ಮಹಿಳೆಯರ 49 ಕೆ.ಜಿ. ವರ್ಲ್ಡ್ ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಒಲಿಂಪಿಕ್ಸ್ ಗೆ ಕೊನೆಯ ಅರ್ಹತಾ ಟೂರ್ನಿಯಾಗಿದ್ದ ಏಶ್ಯನ್ ಚಾಂಪಿಯನ್‌ಶಿಪ್ ಕೊರೋನ ವೈರಸ್ ಭೀತಿಯಿಂದಾಗಿ ರದ್ದಾಗಿದೆ. ಹೊಸ ಅರ್ಹತಾ ನಿಯಮಗಳಡಿ ಚಾನು ಆರು ಕಡ್ಡಾಯ ಟೂರ್ನಿಗಳ ಪೈಕಿ ಐದು ಟೂರ್ನಿಗಳಲ್ಲಿ ಭಾಗವಹಿಸಿದ್ದರು. ವೀಡಿಯೊ ಕಾನ್ಫರೆನ್ಸ್ ಮೂಲಕ ಮಾ.17-18ರಂದು ನಡೆದ ಅಂತರ್‌ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಗೆ(ಐಒಸಿ)ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳಿಗೆ ಸಂಬಂಧಿಸಿ ಕೆಲವು ಶಿಫಾರಸುಗಳನ್ನು ಮಾಡಲಾಗಿದೆ. ಒಂದು ಪ್ರಮುಖ ಶಿಫಾರಸುಗಳ ಪೈಕಿ ಕೋವಿಡ್-19 ವೈರಸ್‌ನಿಂದಾಗಿ ಎಲ್ಲ ಐದು ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನ ಅರ್ಹತಾ ಪ್ರಕ್ರಿಯೆ ರದ್ದಾದರೆ, ಹಾಲಿ ವಿಶ್ವ ರ್ಯಾಂಕಿಂಗ್ ಆಧಾರದಲ್ಲಿ ಒಲಿಂಪಿಕ್ಸ್ ಅರ್ಹತೆ ನಡೆಯಲಿದೆ. ಅಂತರ್‌ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ಶಿಫಾರಸುಗಳ ಕುರಿತು ಐಒಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

‘‘ವಿಶ್ವ ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಮೀರಾಬಾಯಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವುದು ನಿಶ್ಚಿತ. ಅರ್ಹತಾ ಅವಧಿ ಮುಗಿದ ಬಳಿಕ ವಿಶ್ವ ರ್ಯಾಂಕಿಂಗ್‌ನಲ್ಲಿನ ಅಗ್ರ-8 ಲಿಫ್ಟರ್‌ಗಳು ಟೋಕಿಯೊ ಒಲಿಂಪಿಕ್ಸ್ ಗೆ ನೇರವಾಗಿ ಅರ್ಹತೆ ಪಡೆಯುತ್ತಾರೆ’’ ಎಂದು ಭಾರತೀಯ ವೇಟ್‌ಲಿಫ್ಟಿಂಗ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಹದೇವ್ ಯಾದವ್ ಹೇಳಿದ್ದಾರೆ.

‘‘ಮೀರಾಬಾಯಿ ಐದು ಅರ್ಹತಾ ಟೂರ್ನಿಗಳಲ್ಲಿ ಭಾಗವಹಿಸಿದ್ದು, ಆರನೇ ಟೂರ್ನಿ ಏಶ್ಯನ್ ಚಾಂಪಿಯನ್‌ಶಿಪ್ ರದ್ದಾಗಿದೆ. ನನ್ನ ಪ್ರಕಾರ ಇನ್ನು ಯಾವುದೇ ಅರ್ಹತಾ ಟೂರ್ನಿಯು ನಡೆಯುವುದಿಲ್ಲ’’ ಎಂದು ಸಹದೇವ್ ಹೇಳಿದ್ದಾರೆ.

25ರ ಹರೆಯದ ಮೀರಾಬಾಯಿ ಚಾನು ಇದೀಗ 3,869 ಅಂಕ ಸಂಗ್ರಹಿಸಿದ್ದು, ಚೀನಾದ ಹೌ ಝಿಹುಯ್(4,703) ಹಾಗೂ ಉತ್ತರ ಕೊರಿಯಾದ ರಿ ಸಾಂಗ್ ಗಮ್(4,209)ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)