varthabharthi

ನಿಮ್ಮ ಅಂಕಣ

ಕೊರೋನ ಭವಿಷ್ಯ ನುಡಿಯುವ ಒಂದು ಮಾದರಿ

ವಾರ್ತಾ ಭಾರತಿ : 20 Mar, 2020
ಅತನು ಬಿಶ್ವಾಸ್

ಕೊರೋನ ವೈರಾಣುವಿನ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆಯನ್ನು ಅಂದಾಜಿಸುವುದು ಅಸಾಧ್ಯವಾದರೂ ಈ ವರ್ಷದ ಆದಿಯಲ್ಲಿ ಚೀನಾದ ವುಹಾನ್‌ನಲ್ಲಿ ಒಟ್ಟು ಸೋಂಕು ಪ್ರಕರಣವನ್ನು ಅಂದಾಜಿಸುವ ಒಂದು ಪ್ರಯತ್ನ ನಡೆಯಿತು. ‘ನೇಚರ್’ ಪತ್ರಿಕೆಯಲ್ಲಿ ‘ಸೆಲ್ ಡಿಸ್ಕವರಿ’ (ಜೀವಕೋಶ ಶೋಧನೆ) ಕುರಿತು ಇತ್ತೀಚೆಗೆ ಪ್ರಕಟವಾದ ಲೇಖನವೊಂದರಲ್ಲಿ ವಿಜ್ಞಾನಿಗಳ ಒಂದು ತಂಡ ವುಹಾನ್‌ನಲ್ಲಿ ಸಂಭವಿಸಿದ ಒಟ್ಟು ಅಂತಿಮ ಸೋಂಕು ಹಾಗೂ ಸಾವುಗಳ ಸಂಖ್ಯೆಯನ್ನು ಅಂದಾಜಿಸಲು ಪ್ರಯತ್ನಿಸಿತು. ‘ಎಸ್‌ಇಐಆರ್’ (ಸಸೆಪ್ಟಿಬಾಲ್ ಎಕ್ಸ್‌ಪೋಸ್ಡ್ ಇನ್‌ಫೆಕ್ಷಿಯಸ್ ರೆಸಿಸ್ಟೆಂಟ್) ಎಂದು ಕರೆಯಲ್ಪಡುವ ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚುವ ಮಾದರಿಯೊಂದನ್ನು ಇದಕ್ಕಾಗಿಯೇ ಬಳಸಿಕೊಳ್ಳಲಾಯಿತು. ಎಬೋಲಾ ಮತ್ತು ಸಾರ್ಸ್‌ನಂತಹ ತೀವ್ರ ಸ್ವರೂಪದ ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚುವಲ್ಲಿ ಈ ಮಾದರಿ ತುಂಬಾ ನಿಖರವಾಗಿತ್ತು.

ಈ ಮಾದರಿ ಜನರನ್ನು ನಾಲ್ಕು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸುತ್ತದೆ: ರೋಗದ ಸೋಂಕಿಗೆ ಒಳಗಾಗುವ ಅಪಾಯವಿರುವವರು, ಸೋಂಕು ತಗಲಿರುವವರು(ಆದರೆ ಇನ್ನೂ ಸೋಂಕು ಹರಡದವರು), ಸೋಂಕು ಹರಡಲು ಸಮರ್ಥರು ಮತ್ತು ಸೋಂಕಿನಿಂದ ಗುಣಮುಖರಾಗಿರುವವರು ಅಥವಾ ರೋಗದಿಂದಾಗಿ ಸಾಯುವವರು. ಸೋಂಕಿಗೆ ಒಳಗಾಗುವ ಅಪಾಯವಿರುವ ವ್ಯಕ್ತಿ ಸೋಂಕು ಹರಡುವ ಹಂತದ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಾಗ ಮಾತ್ರ ಸೋಂಕಿಗೆ ಒಳಗಾಗುತ್ತಾನೆ. ‘ಸೋಂಕು ಹರಡುವ ದರ’ ಎಂಬುದು ಸೋಂಕು ತಗಲಿರುವ ವ್ಯಕ್ತಿಯಿಂದ ಸೋಂಕು ತಗಲುವ ಅಪಾಯವಿರುವ ವ್ಯಕ್ತಿಗೆ ಸೋಂಕು ತಗಲುವ ಸಾಧ್ಯತೆಯನ್ನು ಸೂಚಿಸುತ್ತದೆ. ಹಾಗೆಯೇ ‘ಬೇಸಿಕ್ ರೀಪ್ರೊಡಕ್ಷನ್ ನಂಬರ್’ (ಬಿಆರ್‌ಎನ್) ಎಂಬುದು ಒಂದು ಸೋಂಕು ಪ್ರಕರಣದಿಂದ ನೇರವಾಗಿ ಹರಡುವ ನಿರೀಕ್ಷಿತ ಸಂಖ್ಯೆಯನ್ನು ಸೂಚಿಸುತ್ತದೆ.

ವುಹಾನ್ ಕೊರೋನ ದತ್ತಾಂಶಗಳನ್ನು ಬಳಸಿಕೊಂಡು ಹಲವಾರು ಅಧ್ಯಯನಗಳು ನಡೆದಿವೆ. ಹೆಚ್ಚಿನ ಅಧ್ಯಯನಗಳಲ್ಲಿ ವೈರಸ್‌ನ ಇನ್ಕುಬೇಷನ್ (ಕಾವು) ಅವಧಿ ಅಂದರೆ ಅದು ಹರಡಲು ತೆಗೆದುಕೊಳ್ಳುವ ಅವಧಿ 5.2 ದಿನಗಳು ಎಂದು ತಿಳಿದು ಬಂದಿದೆ. ಹಾಗೆಯೇ ಸೋಂಕು ತಗಲಿದವರಿಗೆ ಆಸ್ಪತ್ರೆಯಲ್ಲಿ ನೀಡಬೇಕಾದ ಚಿಕಿತ್ಸೆಯ ಅವಧಿ 12.39+4.77 ದಿನಗಳೆಂದು ಲೆಕ್ಕಾಚಾರ ಮಾಡಲಾಗಿದೆ.

ವುಹಾನ್‌ನಲ್ಲಿ ಕೊರೋನ ಹರಡುವಿಕೆಯ ಕುರಿತಾದ ಭವಿಷ್ಯವನ್ನು ನಾಲ್ಕು ಹಂತಗಳಲ್ಲಿ ಗುರುತಿಸಲಾಯಿತು: ಎ) ಡಿಸೆಂಬರ್1- ಜನವರಿ 23; ಬಿ) ಜನವರಿ 24- ಫೆಬ್ರವರಿ 2, ಸಿ) ಫೆಬ್ರವರಿ 3-15; ಡಿ) ಆ ಬಳಿಕ. ಜನವರಿ 23ರಂದು ನಗರದೊಳಗೆ ವಿಮಾನ, ರೈಲು ಮತ್ತು ಇತರ ಸಾರ್ವಜನಿಕ ಸಾರಿಗೆಯನ್ನು ನಿರ್ಬಂಧಿಸಲಾಯಿತು ಮತ್ತು ಕ್ರಮೇಣ ಕ್ವಾರಂಟೈನ್ ಹಾಗೂ ಪ್ರತ್ಯೇಕ ವಾರ್ಡ್‌ಗಳಂತಹ ಇತರ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಇದು ಮೊದಲನೆಯ ಹಂತ. ಎರಡನೇ ಹಂತ ವಸಂತ ಋತುವಿನ ರಜೆಯ ಮಧ್ಯ ಭಾಗದವರೆಗೆ ಮುಂದುವರಿಯಿತು. ಫೆಬ್ರವರಿ 3ರಿಂದ ಇನ್ನಷ್ಟು ಹೆಚ್ಚು ವೈದ್ಯಕೀಯ ಸಂಪನ್ಮೂಲಗಳನ್ನು ಒದಗಿಸಲಾಯಿತು. ಫೆಬ್ರವರಿ 16ರಿಂದ ಸೋಂಕು ತಡೆ ಹಾಗೂ ನಿಯಂತ್ರಣ ಕ್ರಮಗಳು ಸಾಕಷ್ಟು ಇವೆ ಮತ್ತು ಅವುಗಳು ಪರಿಣಾಮಕಾರಿಯಾಗಿವೆ ಎಂದು ತಿಳಿಯಲಾಯಿತು.

ಹನ್ನೊಂದು ಮಿಲಿಯ ಜನಸಂಖ್ಯೆ ಹೊಂದಿರುವ ಮಹಾನ್ ನಗರದಲ್ಲಿ ಆರಂಭಿಕ ಹಂತದಲ್ಲಿದ್ದ ಕರೋನ ಪ್ರಕರಣಗಳು 40. ಸೋಂಕಿಗೆ ತೆರೆದುಕೊಂಡವರ ಸಂಖ್ಯೆ ಇದರ 20 ಪಟ್ಟು ಎಂದು ಅಂದಾಜಿಸಲಾಯಿತು. ಮೊದಲ ಮೂರು ಹಂತಗಳಲ್ಲಿ ಬಿಆರ್‌ಎನ್ ಅನುಕ್ರಮವಾಗಿ 3.1, 2.6, ಮತ್ತು 1.9 ಎಂದು ಅಂದಾಜಿಸಲಾಯಿತು. 2003ರಲ್ಲಿ ‘ಸಾಯನ್ಸ್’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವೊಂದರ ಪ್ರಕಾರ ಸಾರ್ಸ್‌ನ ಬಿಆರ್‌ಎನ್, ಸೋಂಕು ಪೀಡಿತರನ್ನು ಪ್ರತ್ಯೇಕಿಸಿ ಸೋಂಕನ್ನು ನಿಯಂತ್ರಿಸಲು ಆರಂಭಿಸಿದ ಬಳಿಕ 2.7ರಿಂದ 0.25ಕ್ಕೆ ಇಳಿಯಿತು.

ಈ ಮಾದರಿಯ ಪ್ರಕಾರ, ವುಹಾನ್‌ನಲ್ಲಿ ಮೊದಲ ಹಂತದಲ್ಲಿ ಸೋಂಕು ಪ್ರಕರಣಗಳು 17,656ರಿಂದ 25,875ಕ್ಕೆ ಎರಡನೇ ಹಂತದಲ್ಲಿ 32,061ರಿಂದ 46,905ಕ್ಕೆ ಮತ್ತು ಮೂರನೇ ಹಂತದಲ್ಲಿ 53,070ರಿಂದ 77,390ಕ್ಕೆ ತಲುಪಿದವು. ಸಾಂಕ್ರಾಮಿಕ ಸೋಂಕು ಫೆಬ್ರವರಿ 19ರಂದು ಅಥವಾ ಫೆಬ್ರವರಿ 23ರಂದು 58,017ರಿಂದ 84,520ಕ್ಕೆ ಅಥವಾ 55,869ರಿಂದ 81,393ಕ್ಕೆ ಗರಿಷ್ಠ ಏರಿತು. ಇದು ಬಿಆರ್‌ಎನ್‌ನ 0.9 ಮತ್ತು 0.5 ಮೌಲ್ಯಕ್ಕೆ, ಅನುಕ್ರಮವಾಗಿ ಅಂದಾಜಿಸಲಾದ ಏರಿಕೆಯ ಪ್ರಮಾಣ. ವಾಸ್ತವಿಕವಾಗಿ ಫೆಬ್ರವರಿ 16ರಿಂದ ವುಹಾನ್‌ನಲ್ಲಿ ದೈನಿಕ ಸೋಂಕುಗಳ ಪ್ರಕರಣ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಇಷ್ಟರವರೆಗೆ ನಿಖರವಾದ ದತ್ತಾಂಶಗಳು ಸಿಗದಿರುವುದರಿಂದ ಭಾರತದ ಬಿಆರ್‌ಎನ್ ಮೌಲ್ಯ ಎಷ್ಟು ಎನ್ನುವುದು ತಿಳಿದಿಲ್ಲ. ಅದೇನಿದ್ದರೂ ತೀವ್ರವಾದ ತಪಾಸಣೆಯ ಪರೀಕ್ಷೆಯ ಮೂಲಕ. ರೋಗಿಗಳನ್ನು ಪ್ರತ್ಯೇಕಿಸಿಡುವುದರಿಂದ ಹಾಗೂ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಮೂಲಕ ಅದು (ಬಿಆರ್‌ಎನ್) ಚಿಕ್ಕದಿರುವಂತೆ ನೋಡಿಕೊಳ್ಳಬಹುದು. ವಿಮಾನ ನಿಲ್ದಾಣಗಳಲ್ಲಿ ಹಾಗೂ ಇತರ ಮುಖ್ಯ ಸ್ಥಳಗಳಲ್ಲಿ ಅಲ್ಲಿಗೆ ಬರುವವರ ತೀವ್ರವಾದ ತಪಾಸಣೆ ಬಹಳ ಮುಖ್ಯ. ಮಾರ್ಚ್ 16ರ ವರೆಗೆ ನೂರ ಹತ್ತು ಸಕ್ರಿಯ ಕೊರೋನ ಪ್ರಕರಣಗಳು ದಾಖಲಾಗಿರುವುದನ್ನು ಗಮನಿಸಿದರೆ ನಮ್ಮ ದೇಶದಲ್ಲಿ 0.5 ರಷ್ಟು ಬಿಆರ್‌ಎನ್ ಮೌಲ್ಯ ಕಂಡುಬಂದಲ್ಲಿ ಆಶ್ಚರ್ಯವೇನೂ ಇಲ್ಲ. ಅದು ಅಷ್ಟೇ ಆಗಿ ಉಳಿಯುತ್ತದೆ ಹೆಚ್ಚಾಗಲಾರದು ಎಂದು ನಾವು ಆಶಿಸೋಣ.

(ಲೇಖಕರು ಕೋಲ್ಕತಾದ ಇಂಡಿಯನ್ ಸ್ಟೆಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ನಲ್ಲಿ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ)

ಕೃಪೆ: thehindu  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)