varthabharthi

ನಿಮ್ಮ ಅಂಕಣ

ಶ್ರಮ-ಶ್ರಮಿಕ-ವಲಸೆ ಮತ್ತು ಬಂಡವಾಳ

ವಾರ್ತಾ ಭಾರತಿ : 20 Mar, 2020
ನಾ ದಿವಾಕರ

ಖರೀದಿಸಬಹುದಾದ ಶ್ರಮವನ್ನು ಇನ್ನಿತರ ಮಾರುಕಟ್ಟೆ ವಸ್ತುವಿನಂತೆಯೇ ಅಗ್ಗದ ದರದಲ್ಲಿ ಖರೀದಿಸಿ ತನ್ನ ಲಾಭವನ್ನು ಹೆಚ್ಚಿಸಿಕೊಳ್ಳಲು ಬಂಡವಾಳಿಗ ಉದ್ಯಮಿ ಬಯಸುತ್ತಾನೆ. ಇಲ್ಲಿ ವಲಸೆ ಕಾರ್ಮಿಕರು ಅಗ್ಗದ ವಸ್ತುವಾಗಿ ಕಾಣುತ್ತಾರೆ. ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ, ತನ್ನ ಔದ್ಯಮಿಕ ಹಿತಾಸಕ್ತಿಯನ್ನು ರಕ್ಷಿಸಲು ಬಂಡವಾಳಿಗನು ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ಆಸರೆ ನೀಡುವ ಮೂಲಕ ಔದಾರ್ಯ ತೋರುತ್ತಾನೆ. ಆದರೆ ಈ ಔದಾರ್ಯದ ಹಿಂದೆ ಮಾನವ ಸಂವೇದನೆಯ ಬದಲು ಮಾರುಕಟ್ಟೆ ಹಿತಾಸಕ್ತಿಗಳೇ ಪ್ರಧಾನವಾಗಿರುತ್ತವೆ. ಶ್ರಮದ ಬೆಲೆಯಲ್ಲಿ ಏರುಪೇರಾದಂತೆಲ್ಲಾ ವಲಸೆ ಕಾರ್ಮಿಕರ ಅಸ್ತಿತ್ವವೂ ಬದಲಾಗುತ್ತಾ ಹೋಗುತ್ತದೆ. ಶ್ರಮದ ಬೇಡಿಕೆ ಹೆಚ್ಚಾದಂತೆಲ್ಲಾ ಹೆಚ್ಚು ವಲಸೆ ಕಾರ್ಮಿಕರನ್ನು ಬಂಡವಾಳ ವ್ಯವಸ್ಥೆ ಪೋಷಿಸುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಇದರ ನೇರ ಪರಿಣಾಮವನ್ನು ಕಾಣಬಹುದು.


ಭಾರತದ ಪ್ರಜಾತಂತ್ರ ವ್ಯವಸ್ಥೆ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಳ್ಳುವ ಹಂತ ತಲುಪಿದೆ. 72 ವರ್ಷಗಳ ಸ್ವತಂತ್ರ ಆಡಳಿತ ವ್ಯವಸ್ಥೆಯನ್ನು ಕಂಡಿರುವ ಒಂದು ಬಹುಸಂಸ್ಕೃತಿಯ ದೇಶ ತನ್ನ ಮೂಲ ಜನಸಂಸ್ಕೃತಿಯನ್ನು ಕಳೆದುಕೊಂಡು ಹೊಸ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಸಮಾನತೆ, ಭ್ರಾತೃತ್ವ, ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮುಕ್ತ ರಾಜಕೀಯ ವಾತಾವರಣದ ಭಾರತ ಇಂದು ಉಸಿರುಗಟ್ಟುವ ವಾತಾವರಣದಲ್ಲಿ ಮುನ್ನಡೆಯುತ್ತಿದೆ. ಏಳು ದಶಕಗಳಿಂದಲೂ ತಮ್ಮ ಇಚ್ಛೆಯಂತೆ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿದ್ದ ಭಾರತದ ಸಾರ್ವಭೌಮ ಪ್ರಜೆಗಳು ಇಂದು ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಸಾಬೀತುಪಡಿಸಲು ಲಿಖಿತ ದಾಖಲೆಗಳನ್ನು ನೀಡಬೇಕಾಗಿದೆ. ಇದೇ ಪ್ರಜೆಗಳ ಮತಗಳನ್ನು ಪಡೆದು ಅಧಿಕಾರ ಪೀಠವನ್ನು ಅಲಂಕರಿಸಿರುವ ರಾಜಕೀಯ ಪಕ್ಷವೊಂದು ತನ್ನ ಆಯ್ಕೆಯನ್ನು ಸ್ವತಃ ಪ್ರಶ್ನಿಸಿಕೊಳ್ಳುತ್ತಿದೆ. ಹೊರದೇಶದಿಂದ ಬಂದ ಅಕ್ರಮ ವಲಸಿಗರನ್ನು ಗುರುತಿಸುವ ನಿಟ್ಟಿನಲ್ಲಿ ಸಮಸ್ತ ಭಾರತೀಯರನ್ನು ಸಾಲುಗಟ್ಟಿ ನಿಲ್ಲಿಸಿ ಅಗ್ನಿಪರೀಕ್ಷೆಗೆ ದೂಡುತ್ತಿರುವ ದುರಂತವನ್ನು ನಾವು ಕಾಣುತ್ತಿದ್ದೇವೆ. ನಿಜ, ಅಕ್ರಮ ವಲಸಿಗರು ದೇಶದ ಆರ್ಥಿಕತೆಗೆ ಹೊರೆಯಾಗುತ್ತಾರೆ, ಸ್ಥಳೀಯರ ಅವಕಾಶಗಳನ್ನು ಕಸಿದುಕೊಳ್ಳುತ್ತಾರೆ. ಆದರೆ ಈ ವಲಸಿಗರು ಮೂಲತಃ ದುಡಿಯುವ ವರ್ಗಗಳಾಗಿದ್ದು ತಮ್ಮ ಮೂಲ ನೆಲೆಯಿಂದ ಹೊರಬಂದು ನಮ್ಮ ದೇಶದ ಉತ್ಪಾದನೆ ಮತ್ತು ಉತ್ಪಾದಕೀಯತೆಗೆ ತಮ್ಮದೇ ಆದ ಕೊಡುಗೆ ಸಲ್ಲಿಸಿರುತ್ತಾರೆ.

ಈ ವಲಸಿಗರು ಅನ್ಯ ದೇಶದೊಳಗೆ ಅಕ್ರಮವಾಗಿ ನುಸುಳಲು ಮೂಲ ಕಾರಣ ಜೀವನ ನಿರ್ವಹಣೆ ಮತ್ತು ನಾಳಿನ ಬದುಕಿನ ಶೋಧ. ಉದ್ಯೋಗಾವಕಾಶಗಳಿಲ್ಲದ ದೇಶಗಳಿಂದ ನೌಕರಿಯನ್ನರಸಿ ಬರುವ ವಲಸಿಗರಿಗೆ ಸ್ಥಳೀಯ ಉದ್ಯಮಿಗಳೇ ಆಶ್ರಯದಾತರಾಗಿರುತ್ತಾರೆ. ಭಾರತದ ಸಂದರ್ಭದಲ್ಲಿ ಈ ಪ್ರಕ್ರಿಯೆಯನ್ನು ಈಶಾನ್ಯ ರಾಜ್ಯಗಳಲ್ಲಿ, ಪಶ್ಚಿಮ ಬಂಗಾಲದಲ್ಲಿ ಕಾಣಬಹುದು. ಬಂಡವಾಳಶಾಹಿ ಉದ್ಯಮಿಗಳಿಗೆ ಅಗ್ಗದ ಕೂಲಿ ನೀಡಿ ಹೆಚ್ಚಿನ ಲಾಭ ಗಳಿಸುವುದು ಒಂದು ವೃತ್ತಿಧರ್ಮ. ಹಾಗಾಗಿ ಅಗ್ಗದ ಕೂಲಿಗೆ ದೊರೆಯುವ ಕಾರ್ಮಿಕರು ವಿದೇಶೀಯರಾಗಿದ್ದರೂ ಅವರಿಗೆ ಆಶ್ರಯ ನೀಡಿ ತಮ್ಮ ಔದ್ಯಮಿಕ ಸಾಮ್ರಾಜ್ಯವನ್ನು ವಿಸ್ತರಿಸುವ ಹಪಹಪಿ ಉದ್ಯಮಿಗಳಲ್ಲಿರುತ್ತದೆ. ಅಸ್ಸಾಂ ಮತ್ತಿತರ ಈಶಾನ್ಯ ರಾಜ್ಯಗಳಲ್ಲಿ ಈ ಪ್ರವೃತ್ತಿಯನ್ನು ಕಾಣಬಹುದು. ಕೂಲಿಗಾಗಿ ಅಂಡಲೆಯುವ ವಲಸೆ ಕಾರ್ಮಿಕರು ತಮ್ಮ ನಿತ್ಯ ಜೀವನ ನಿರ್ವಹಣೆಗಾಗಿ ಸ್ಥಳೀಯ ಸರಕಾರದ ಸವಲತ್ತುಗಳನ್ನು ಪಡೆಯುವ ಕೆಲವು ಸಾಧನಗಳನ್ನು ಬಳಸಿಕೊಳ್ಳುವುದು ಸಹಜ. ಇದು ದೇಶದ ಕಾನೂನಿನ ಅನುಸಾರ ಅಪರಾಧ ಎಂದಾದರೆ, ಈ ವಲಸಿಗರನ್ನು ಕರೆತಂದ ಉದ್ಯಮಿಗಳೂ ಅಪರಾಧಿಗಳಾಗಬೇಕಲ್ಲವೇ?

ಈ ಆರ್ಥಿಕ ಮತ್ತು ಸಮಾಜೋ ಸಾಂಸ್ಕೃತಿಕ ಸೂಕ್ಷ್ಮ ಸಂಬಂಧಗಳನ್ನು ಮಾನವ ಸಂವೇದನೆಯ ನೆಲೆಯಲ್ಲಿ ವಿಶ್ಲೇಷಿಸಿದಾಗ ನಮಗೆ ವಲಸೆ ಕಾರ್ಮಿಕರ ಸಕ್ರಮ ಅಕ್ರಮಗಳನ್ನು ಗ್ರಹಿಸಲು ಸಾಧ್ಯ. ಭಾರತದಲ್ಲಿ ಆಂತರಿಕವಾಗಿಯೇ ಈ ರೀತಿಯ ವಲಸಿಗರ ಸಮಸ್ಯೆ ವ್ಯಾಪಕವಾಗಿದ್ದು ಪ್ರತಿಯೊಂದು ರಾಜ್ಯದಲ್ಲೂ ಸ್ಥಳೀಯರು ವಲಸಿಗರ ವಿರುದ್ಧ ಸೆಣಸುತ್ತಿರುವುದನ್ನು ಕಾಣುತ್ತಿದ್ದೇವೆ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಅಸ್ಸಾಮಿನಿಂದ ವಲಸೆ ಬಂದ ಶ್ರಮಿಕರ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಈಗಲೂ ಕರ್ನಾಟಕದ ಪ್ರಮುಖ ಪಟ್ಟಣಗಳಲ್ಲಿ ಔದ್ಯಮಿಕ, ವ್ಯಾಪಾರಿ ಕ್ಷೇತ್ರವನ್ನು ಆಕ್ರಮಿಸಿರುವ ವಲಸಿಗರ ವಿರುದ್ಧ ಅಸಮಾಧಾನದ ಹೊಗೆ ಕಾಣುತ್ತಲೇ ಇದೆ. ಬಂಡವಾಳ ವ್ಯವಸ್ಥೆ ಒಂದೆಡೆ ಕಾರ್ಮಿಕರ ವಲಸೆಯನ್ನು ಉತ್ತೇಜಿಸುವಂತೆಯೇ ಮತ್ತೊಂದೆಡೆ ವಿರೋಧಿಸುತ್ತದೆ. ಉತ್ಪಾದನಾ ಕ್ರಿಯೆಯಲ್ಲಿ ಅಗ್ಗದ ಕೂಲಿಗೆ ದುಡಿಯುವ ಶ್ರಮಜೀವಿಗಳನ್ನು ಅಕ್ರಮ ಸಕ್ರಮದತ್ತ ನೋಡದೆ ಸ್ವೀಕರಿಸುವ ಬಂಡವಾಳ ವ್ಯವಸ್ಥೆ, ಆರ್ಥಿಕತೆಯ ನೆಲೆಯಲ್ಲಿ ಆಳುವ ವರ್ಗಗಳ ಮೂಲಕ ಇದೇ ಶ್ರಮಜೀವಿಗಳನ್ನು ಅನ್ಯರ ಗುಂಪಿಗೆ ಸೇರಿಸಿ ಪ್ರತ್ಯೇಕಿಸಿಬಿಡುತ್ತದೆ. ಈ ದ್ವಂದ್ವದಲ್ಲಿ ತಮ್ಮ ಮೂಲ ನೆಲೆಯನ್ನು ತೊರೆದು ಮತ್ತಾವುದೋ ದೇಶದ ಸಂಪತ್ತನ್ನು ಸೃಷ್ಟಿಸುವ ವಲಸೆ ಕಾರ್ಮಿಕರು ಒಂದೇ ವ್ಯವಸ್ಥೆಯ ಎರಡು ಕ್ರೂರ ಧ್ರುವಗಳ ನಡುವೆ ಸಿಲುಕಿ ನಲುಗಿಹೋಗುತ್ತಾರೆ.

ದೇಶದಲ್ಲಿ ಆಂತರಿಕವಾಗಿಯೂ ವಲಸೆ ಕಾರ್ಮಿಕರ ಸಮಸ್ಯೆ ಕೆಲವೊಮ್ಮೆ ಸಂಘರ್ಷದ ವಾತಾವರಣವನ್ನು ಸೃಷ್ಟಿಸುತ್ತದೆ. ಏಕೆಂದರೆ ಸಾಮಾಜಿಕ ಅಸಮತೋಲನ ಮತ್ತು ಆರ್ಥಿಕ ಅಸಮಾನತೆಯನ್ನೇ ಪೋಷಿಸುತ್ತಾ ಬೆಳೆಯುವ ಬಂಡವಾಳಶಾಹಿ ವ್ಯವಸ್ಥೆ ಶ್ರಮ ಮತ್ತು ಉತ್ಪಾದನೆಯ ನಡುವೆ, ಶ್ರಮಿಕ ಮತ್ತು ಉತ್ಪಾದಕರ ನಡುವೆ ಸದಾ ಸಂಘರ್ಷವನ್ನು ಸೃಷ್ಟಿಸುತ್ತದೆ. ಉತ್ಪಾದನಾ ಪ್ರಕ್ರಿಯೆಯ ಮೇಲೆ ಸಂಪೂರ್ಣ ಏಕಸ್ವಾಮ್ಯ ಸಾಧಿಸಲು ಎಲ್ಲ ವಾಮ ಮಾರ್ಗಗಳನ್ನೂ ಅನುಸರಿಸುವ ಬಂಡವಾಳಿಗರಿಗೆ ಶ್ರಮ ಎನ್ನುವುದು ಮಾರುಕಟ್ಟೆಯ ಸರಕಿನಂತೆ ಕಾಣುವುದೇ ಹೊರತು, ಯಾವುದೇ ಪ್ರಾದೇಶಿಕ ಅಸ್ಮಿತೆಯ ನೆಲೆಯಲ್ಲಿ ಕಾಣುವುದಿಲ್ಲ. ಖರೀದಿಸಬಹುದಾದ ಶ್ರಮವನ್ನು ಇನ್ನಿತರ ಮಾರುಕಟ್ಟೆ ವಸ್ತುವಿನಂತೆಯೇ ಅಗ್ಗದ ದರದಲ್ಲಿ ಖರೀದಿಸಿ ತನ್ನ ಲಾಭವನ್ನು ಹೆಚ್ಚಿಸಿಕೊಳ್ಳಲು ಬಂಡವಾಳಿಗ ಉದ್ಯಮಿ ಬಯಸುತ್ತಾನೆ. ಇಲ್ಲಿ ವಲಸೆ ಕಾರ್ಮಿಕರು ಅಗ್ಗದ ವಸ್ತುವಾಗಿ ಕಾಣುತ್ತಾರೆ. ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ, ತನ್ನ ಔದ್ಯಮಿಕ ಹಿತಾಸಕ್ತಿಯನ್ನು ರಕ್ಷಿಸಲು ಬಂಡವಾಳಿಗನು ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ಆಸರೆ ನೀಡುವ ಮೂಲಕ ಔದಾರ್ಯ ತೋರುತ್ತಾನೆ. ಆದರೆ ಈ ಔದಾರ್ಯದ ಹಿಂದೆ ಮಾನವ ಸಂವೇದನೆಯ ಬದಲು ಮಾರುಕಟ್ಟೆ ಹಿತಾಸಕ್ತಿಗಳೇ ಪ್ರಧಾನವಾಗಿರುತ್ತವೆ. ಶ್ರಮದ ಬೆಲೆಯಲ್ಲಿ ಏರುಪೇರಾದಂತೆಲ್ಲಾ ವಲಸೆ ಕಾರ್ಮಿಕರ ಅಸ್ತಿತ್ವವೂ ಬದಲಾಗುತ್ತಾ ಹೋಗುತ್ತದೆ. ಶ್ರಮದ ಬೇಡಿಕೆ ಹೆಚ್ಚಾದಂತೆಲ್ಲಾ ಹೆಚ್ಚು ವಲಸೆ ಕಾರ್ಮಿಕರನ್ನು ಬಂಡವಾಳ ವ್ಯವಸ್ಥೆ ಪೋಷಿಸುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಇದರ ನೇರ ಪರಿಣಾಮವನ್ನು ಕಾಣಬಹುದು.

ಭಾರತದ ಬಹುತೇಕ ಮಹಾನಗರಗಳಲ್ಲಿ ಈ ವಲಸಿಗರ ಸಮಸ್ಯೆಯನ್ನು ಕಾಣಬಹುದು. ಬಂಡವಾಳಶಾಹಿ ಅಭಿವೃದ್ಧಿ ಪಥವನ್ನು ಸದಾ ಸ್ವಾಗತಿಸುವ ಮಧ್ಯಮ ವರ್ಗದ ಮತ್ತು ಶ್ರೀಮಂತ ವರ್ಗದ ಫಲಾನುಭವಿಗಳಿಗೆ ವಲಸೆ ಕಾರ್ಮಿಕರು ಉತ್ಪಾದನೆ ಮತ್ತು ಅಭಿವೃದ್ಧಿ ಪಥದ ಮೈಲುಗಲ್ಲುಗಳಾಗಿ ಕಾಣದೆ, ಹಾಸುಗಲ್ಲುಗಳಾಗಿ ಕಾಣುತ್ತಾರೆ. ತಮ್ಮ ಬದುಕಿನ ಪ್ರಗತಿಯ ಹಾದಿಯನ್ನು ನವಿರಾಗಿಸುವ ವಲಸೆ ಕಾರ್ಮಿಕರು ಮೇಲ್ವರ್ಗಗಳಿಗೆ ನವಿರಾದ ಹಾಸುಗಲ್ಲುಗಳಂತೆ ಕಾಣುತ್ತಾರೆ. ಅಭಿವೃದ್ಧಿಯ ಅಂತಿಮ ಹಂತ ತಲುಪಿ ತಮ್ಮ ಸುಸ್ಥಿರ ನೆಲೆ ಕಂಡುಕೊಂಡ ಕೂಡಲೇ ವಲಸೆ ಕಾರ್ಮಿಕರು ನಿರ್ಲಕ್ಷಿತರಾಗಿಬಿಡುತ್ತಾರೆ, ಬಹಿಷ್ಕೃತರಾಗಿಬಿಡುತ್ತಾರೆ. ಕೆಲವೊಮ್ಮೆ ಈ ವಲಸೆ ಕಾರ್ಮಿಕರ ಅಸ್ತಿತ್ವವೇ ಬೇಡವಾಗಿಬಿಡುತ್ತದೆ. ಹೆದ್ದಾರಿ, ಕೂಡು ರಸ್ತೆ, ಮೇಲ್ ಸೇತುವೆ, ಮೆಟ್ರೋ, ಬೃಹತ್ ವಸತಿ ಸಮುಚ್ಚಯಗಳು, ಉದ್ಯಮ ಸಮುಚ್ಚಯಗಳು, ರೈಲ್ವೆ ಕಾಮಗಾರಿ ಹೀಗೆ ಎಲ್ಲ ಉತ್ಪಾದಕ ಕ್ಷೇತ್ರಗಳಲ್ಲೂ ಶ್ರಮಿಕರು ಈ ರೀತಿ ಪ್ರತ್ಯೇಕಿಸಲ್ಪಡುವುದನ್ನು ನಿತ್ಯ ಜೀವನದಲ್ಲಿ ನೋಡುತ್ತಲೇ ಬಂದಿದ್ದೇವೆ. ನಿರ್ಮಾಣ ಪ್ರಕ್ರಿಯೆ ಮತ್ತು ಅಭಿವೃದ್ಧಿ ಪಥ ಸಂಪೂರ್ಣವಾದ ಕೂಡಲೇ ಈ ವಲಸೆ ಕಾರ್ಮಿಕರು ನೆಲೆಸಿರುವ ತುಂಡು ಭೂಮಿ ‘‘ಅಕ್ರಮ ಅತಿಕ್ರಮಣದ’’ ತಾಣವಾಗಿಬಿಡುತ್ತದೆ. ಮೂಲ ನಿರ್ಮಾತೃಗಳು ಅನ್ಯರಾಗಿಬಿಡುತ್ತಾರೆ. ಇದು ಬಂಡವಾಳ ವ್ಯವಸ್ಥೆಯ ಗರ್ಭದಲ್ಲಿ ಅಡಗಿರುವ ಕ್ರೌರ್ಯ.

ಬಂಡವಾಳ ವ್ಯವಸ್ಥೆ ತನ್ನ ಅತ್ಯುನ್ನತ ಹಂತವನ್ನು ತಲುಪಿ ನಾಲ್ಕನೆಯ ಔದ್ಯಮಿಕ ಕ್ರಾಂತಿಯ ಸನಿಹದಲ್ಲಿರುವ ಸಂದರ್ಭದಲ್ಲಿ ಹಣಕಾಸು ಬಂಡವಾಳ ಅಭಿವೃದ್ಧಿಯ ಮಾರ್ಗಗಳನ್ನು ನಿಯಂತ್ರಿಸುತ್ತಿದೆ. ಈ ಪರ್ವದಲ್ಲಿ ಶ್ರಮ ಹೆಚ್ಚು ಮೌಲ್ಯಯುತವಾಗಿ ಕಂಡುಬಂದರೂ ಶ್ರಮದ ಆಂತರಿಕ ಮೌಲ್ಯವನ್ನು ಮಾರುಕಟ್ಟೆ ಶಕ್ತಿಗಳು ನಿರ್ಧರಿಸುವುದರಿಂದ ಶ್ರಮಿಕ ವಿನಿಮಯದ ವಸ್ತುವಾಗಿಬಿಡುತ್ತಾನೆ. ಶ್ರಮಿಕನ ಶ್ರಮದ ಬೆಲೆ ಹಣಕಾಸು ಬಂಡವಾಳದ ಹಿಡಿತಕ್ಕೆ ಸಿಲುಕಿಬಿಡುತ್ತದೆ. ಯಾಂತ್ರೀಕರಣ ಯುಗದಿಂದ ಡಿಜಿಟಲೀಕರಣ ಯುಗಕ್ಕೆ ತಲುಪಿರುವ ಬಂಡವಾಳ ವ್ಯವಸ್ಥೆ ಶ್ರಮಿಕರಹಿತ ಅಭಿವೃದ್ಧಿ ಪಥದಲ್ಲಿ ಸಾಗಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಶ್ರಮಿಕ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ತನ್ನ ಸ್ಥಳಾವಕಾಶವನ್ನು ಕಳೆದುಕೊಳ್ಳುತ್ತಲೇ ಹೋಗುತ್ತಾನೆ. ಒಂದು ಹಂತದಲ್ಲಿ ಉತ್ಪಾದನೆ ಮತ್ತು ನಿರ್ಮಾಣ ಕ್ಷೇತ್ರಕ್ಕೆ ಅನಿವಾರ್ಯವಾಗಿದ್ದು ತನ್ನ ಮೂಲ ನೆಲೆಯನ್ನು ತೊರೆದು ಅನ್ಯ ಪ್ರದೇಶಗಳಿಗೆ ವಲಸೆ ಹೋಗುವ ಶ್ರಮಿಕ, ಶ್ರಮ ರಹಿತ, ಶ್ರಮಿಕ ರಹಿತ ಅಭಿವೃದ್ಧಿ ಪಥದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾನೆ. ಹೀಗೆ ಅಸ್ತಿತ್ವ ಕಳೆದುಕೊಂಡ ಶ್ರಮಿಕನನ್ನು ಮತಧಾರ್ಮಿಕ, ಪ್ರಾದೇಶಿಕ, ಭಾಷಿಕ ಮತ್ತು ಜಾತಿ ಅಸ್ಮಿತೆಯ ನೆಲೆಯಲ್ಲಿ ವಿಂಗಡಿಸಲಾಗುತ್ತದೆ. ಇಲ್ಲಿ ಶ್ರಮಿಕ ತನ್ನದೇ ಆದ ಶ್ರಮದ ಪ್ರತಿಫಲದಿಂದ ಪ್ರತ್ಯೇಕಿಸಲ್ಪಡುತ್ತಾನೆ.

ಸಾಮಾಜಿಕ ಸ್ತರದಲ್ಲಿ ಈ ಅಸ್ಮಿತೆಗಳೇ ಪ್ರಧಾನ ಬಿಂದುವಾಗಿ ಸಮಾಜೋ ಸಾಂಸ್ಕೃತಿಕ ನೆಲೆಯಲ್ಲಿ ಜನಸಾಮಾನ್ಯರನ್ನು ವಿಂಗಡಿಸಿ ನೋಡುವ ಪ್ರವೃತ್ತಿ ಹೆಚ್ಚಾದಾಗ, ವಲಸೆ ಕಾರ್ಮಿಕ ತನ್ನ ಅಸ್ಮಿತೆಗಾಗಿ ತಡಕಾಡಬೇಕಾಗುತ್ತದೆ. ತಾನು ಹುಟ್ಟಿದ ನೆಲವನ್ನು ಮರೆತು ನಿಂತ ನೆಲವನ್ನೇ ತನ್ನದೆಂದು ಭಾವಿಸಿ ಸಮಾಜದ ಪ್ರಗತಿಗೆ ಬೆವರು ಸುರಿಸಿ ದುಡಿದಿರುವ ಶ್ರಮಿಕರಿಗೆ ‘‘ಈ ನೆಲ ನಿನ್ನದಲ್ಲ’’ ಎನ್ನುವ ಕಠೋರ ಸಂದೇಶವನ್ನು ರವಾನಿಸಲಾಗುತ್ತದೆ. ಈ ವೇಳೆಗೆ ಬಂಡವಾಳ ವ್ಯವಸ್ಥೆ ಮತ್ತೊಂದು ಹಂತ ತಲುಪಿದ್ದು ತಾನೇ ಕರೆತಂದ ಶ್ರಮಿಕ ಸಮುದಾಯವನ್ನು ಹೊರಹಾಕಲು ಸಜ್ಜಾಗಿರುತ್ತದೆ. ಸಾಮುದಾಯಿಕ ಹಿತಾಸಕ್ತಿ ಮತ್ತು ಸಮಾಜೋ ಸಾಂಸ್ಕೃತಿಕ ಅಸ್ಮಿತೆಗಳ ಚೌಕಟ್ಟಿನಲ್ಲಿ ವಲಸೆ ಕಾರ್ಮಿಕರು ತ್ರಿಶಂಕು ಸ್ಥಿತಿ ತಲುಪುತ್ತಾರೆ. ಪೌರತ್ವದ ಪ್ರಶ್ನೆ ಎದುರಾದಾಗ ಈ ಶ್ರಮಜೀವಿಗಳ ಅಸ್ತಿತ್ವವೇ ಅಲುಗಾಡಿಬಿಡುತ್ತದೆ. ಶ್ರಮಕ್ಕೆ ಭೌಗೋಳಿಕ ಗಡಿರೇಖೆಗಳಿರುವುದಿಲ.್ಲ ಬಂಡವಾಳ ವ್ಯವಸ್ಥೆಯಲ್ಲಿ ಶ್ರಮಿಕರಿಗೂ ಇರುವುದಿಲ್ಲ. ಆದರೆ ಶ್ರಮಿಕರ ಬಳಿ ಅಧಿಕಾರ ಸೂತ್ರದ ಎಳೆಗಳು ಇರುವುದಿಲ್ಲ. ಹಾಗಾಗಿ ತಮ್ಮ ನೆಲೆ ಕಂಡುಕೊಳ್ಳಲು ಪರದಾಡಬೇಕಾಗುತ್ತದೆ. ಈ ಪರದಾಟದ ನಡುವೆಯೇ ತಮ್ಮ ಔದ್ಯಮಿಕ ಸಾಮ್ರಾಜ್ಯ ವಿಸ್ತರಿಸಲು ಬಂಡವಾಳದೊಡನೆಯೇ ವಲಸೆ ಹೋಗಿ ತಮ್ಮದಲ್ಲದ ನೆಲದಲ್ಲಿ ಬದುಕು ಕಟ್ಟಿಕೊಳ್ಳುವ ಉದ್ಯಮಿಗಳು ಯಾವುದೇ ಅಸ್ಮಿತೆ, ಅಸ್ತಿತ್ವದ ಸೋಂಕಿಲ್ಲದೆ ತಮ್ಮ ಭದ್ರಕೋಟೆಯನ್ನು ನಿರ್ಮಿಸಿಕೊಳ್ಳುತ್ತಾರೆ. ಬಂಡವಾಳ ವ್ಯವಸ್ಥೆ ಮತ್ತಷ್ಟು ವಲಸಿಗರನ್ನು ಸೃಷ್ಟಿಸುತ್ತಲೇ ಹೋಗುತ್ತದೆ, ಔದ್ಯಮಿಕ ಸಾಮ್ರಾಜ್ಯ ವಿಸ್ತರಣೆಯಲ್ಲಿ ಮತ್ತಷ್ಟು ವಲಸಿಗರು ಬಲಿಯಾಗುತ್ತಲೇ ಹೋಗುತ್ತಾರೆ. ಶ್ರಮ ಮಾರುಕಟ್ಟೆಯಲ್ಲಿ ಹರಿದಾಡುತ್ತಿರುತ್ತದೆ ಶ್ರಮಿಕ ತನ್ನ ಗೂಡಿನಲ್ಲಿ ಕುಳಿತು ನಾಳಿನ ಚಿಂತೆಯಲ್ಲಿ ನಕ್ಷತ್ರಗಳನ್ನು ಎಣಿಸುತ್ತಿರುತ್ತಾನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)