varthabharthi


ಸಂಪಾದಕೀಯ

ನಿರ್ಭಯಾಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ!

ವಾರ್ತಾ ಭಾರತಿ : 20 Mar, 2020

‘‘ಕೊರೋನ ವೈರಸ್ ಪೀಡಿತರನ್ನು ಚೀನಾದಲ್ಲಿ ಬರ್ಬರವಾಗಿ ಕೊಂದು ಹಾಕಲಾಗುತ್ತದೆ’’ ಎನ್ನುವ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಆದರೆ ಬಳಿಕ ವದಂತಿಯನ್ನು ಚೀನಾ ತಿರಸ್ಕರಿಸಿತು. ವೈರಸ್ ಚೀನಾದಲ್ಲೇ ಹುಟ್ಟಿದೆಯಾದರೂ, ಅದು ತಕ್ಷಣ ತೆಗೆದುಕೊಂಡ ಪರಿಣಾಮಕಾರಿ ಕ್ರಮಗಳಿಂದಾಗಿ ವೈರಸ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ವಿಶ್ವಾದ್ಯಂತ ಕೊರೋನ ಚರ್ಚೆಯಲ್ಲಿರುವಾಗಲೇ, ಶುಕ್ರವಾರ ಮುಂಜಾನೆ, ಭಾರತದಲ್ಲಿ ನಾಲ್ವರನ್ನು ಗಲ್ಲಿಗೇರಿಸಿ ಕೊಂದು ಹಾಕಲಾಯಿತು. ಇವರೇನು ಕೊರೋನ ವೈರಸ್ ಸೋಂಕಿತರು ಆಗಿರಲಿಲ್ಲ. ಆದರೂ ಇವರನ್ನು ಕೊಂದು ಹಾಕುವ ಮೂಲಕ, ಈ ದೇಶಾದ್ಯಂತ ಅತ್ಯಂತ ಆತಂಕಕಾರಿ ರೂಪದಲ್ಲಿ ವ್ಯಾಪಿಸಿರುವ ವೈರಸ್‌ಗಳಿಗೆ ಎಚ್ಚರಿಕೆ ನೀಡುವ ಉದ್ದೇಶವನ್ನು ಸರಕಾರ ಹೊಂದಿತ್ತು.

ನಿರ್ಭಯಾ ಪ್ರಕರಣದ ಈ ಹಂತಕರನ್ನು ಅಂಟಿಕೊಂಡಿದ್ದ ವೈರಸ್ ಅದೆಷ್ಟು ಭೀಕರವಾಗಿತ್ತು ಎಂದರೆ, ಅವರು ಎಸಗಿದ ಕೃತ್ಯ ಕೊರೋನಾ ಎಸಗುತ್ತಿರುವ ಕೃತ್ಯಕ್ಕಿಂತಲೂ ಭೀಕರವಾಗಿತ್ತು. ಈ ಹಂತಕರನ್ನು ಕೊಂದ ಸಂಭ್ರಮವನ್ನು ಹಲವರು ಹಂಚಿಕೊಂಡಿದ್ದಾರೆ. ಆದರೆ ಇದು ಭಾರತದ ಪಾಲಿಗೆ ಸಂಭ್ರಮಿಸುವ ವಿಷಯ ಅಲ್ಲವೇ ಅಲ್ಲ. ಯಾಕೆಂದರೆ ನಾವು ವೈರಸ್ ಪೀಡಿತರಾಗಿ ಕೃತ್ಯ ಎಸಗಿದ ನಾಲ್ವರನ್ನಷ್ಟೇ ಕೊಂದಿದ್ದೇವೆ. ಆದರೆ ಆ ವೈರಸ್‌ನ್ನೇ ನಾಶ ಪಡಿಸಿದವರಂತೆ ಸಂಭ್ರಮಿಸುತ್ತಿದ್ದೇವೆ. ನಿರ್ಭಯಾಳಿಗೆ ನ್ಯಾಯ ಸಿಕ್ಕಿತು ಎಂದು ಘೋಷಣೆ ಕೂಗುತ್ತಿದ್ದೇವೆ. ‘ನಿರ್ಭಯಾ’ ಒಬ್ಬ ನಿರ್ದಿಷ್ಟ ಹೆಣ್ಣು ಮಗಳ ಹೆಸರಲ್ಲ. ಈ ದೇಶದಲ್ಲಿ ಬರ್ಬರ ಅತ್ಯಾಚಾರಕ್ಕೆ ಬಲಿಯಾಗುತ್ತಿರುವ ಲಕ್ಷಾಂತರ ಹೆಣ್ಣು ಮಕ್ಕಳನ್ನು ಅವರು ಪ್ರತಿನಿಧಿಸುತ್ತಿದ್ದಾರೆ. ಈ ನಾಲ್ವರು ಹಂತಕರನ್ನು ಕೊಂದಾಕ್ಷಣ ಈ ದೇಶದಲ್ಲಿ ಅತ್ಯಾಚಾರವೇನೂ ನಿಲ್ಲುವುದಿಲ್ಲ. ನ್ಯಾಯ ವ್ಯವಸ್ಥೆ ಈ ಪ್ರಕರಣದಲ್ಲಾದರೂ ಕಣ್ಣು ತೆರೆಯಿತಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬಹುದೇ ಹೊರತು, ಸಂಭ್ರಮಿಸುವ ಸ್ಥಿತಿಯಲ್ಲಿ ದೇಶ ಇಲ್ಲ.

 ಇಷ್ಟಕ್ಕೂ ನಾವು ಕೊಂದು ಹಾಕಿದ ನಾಲ್ವರು ಯಾವುದೇ ಕ್ರಿಮಿ, ಕೀಟ ವೈರಸ್ ಅಲ್ಲ. ಮೆದುಳು, ಹೃದಯವಿರುವ ನಮ್ಮ ನಿಮ್ಮಂತಹ ಮನುಷ್ಯರು. ಬಹುಶಃ ಇಂದು ನಾವು ಇವರನ್ನು ‘ರಾಕ್ಷಸರು, ಕ್ರೂರಿಗಳು, ವೈರಸ್‌ಗಳು’ ಎಂದೆಲ್ಲ ಕರೆಯುವುದಕ್ಕೆ ಅವರು ಎಸಗಿದ ಬರ್ಬರ ಕೃತ್ಯ ಮಾತ್ರ ಕಾರಣ ಅಲ್ಲ ಎನ್ನುವುದನ್ನು ಗಮನಿಸಬೇಕು. ನಿರ್ಭಯಾ ಪ್ರಕರಣಕ್ಕಿಂತ ಮುಂಚೆ ಈ ದೇಶದಲ್ಲಿ ಅತ್ಯಾಚಾರ ನಡೆದೇ ಇಲ್ಲವೇ? ಎಂಬ ಪ್ರಶ್ನೆ ಕೇಳಿದರೆ ಖೈರ್ಲಾಂಜಿ ಪ್ರಕರಣ, ಉನಾ, ದಾನಮ್ಮ ಪ್ರಕರಣ ಗಹಗಹಿಸಿ ನಗುತ್ತವೆ. ನಿರ್ಭಯಾ ಪ್ರಕರಣಗಳಲ್ಲಿ ಜೀವಂತವಾಗಿ ಸ್ಪಂದಿಸಿದ ಸಮಾಜ, ಮೇಲಿನ ಪ್ರಕರಣಗಳಲ್ಲಿ ಸ್ಪಂದಿಸಿರಲೇ ಇಲ್ಲ. ಯಾಕೆಂದರೆ ಇಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಮಹಿಳೆಯರು ಬಡ ವರ್ಗದ ದಲಿತರು.

ಇದೇ ಸಂದರ್ಭದಲ್ಲಿ ಕೃತ್ಯ ಎಸಗಿದ ಮಂದಿ ಮೇಲ್ ಜಾತಿಗೆ ಸೇರಿದವರು. ಅಂದರೆ ಇಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯರು ನ್ಯಾಯ ನ್ಯಾಯ ಪಡೆಯಬೇಕಾದರೆ ಸಂತ್ರಸ್ತ ಹೆಣ್ಣಿಗೆ ಕೆಲವು ಅರ್ಹತೆಗಳಿರುವುದು ಅತ್ಯಗತ್ಯ. ಇದೇ ಸಂದರ್ಭದಲ್ಲಿ ಶಿಕ್ಷೆ ಶೀಘ್ರವಾಗಬೇಕಾದರೆ, ಅತ್ಯಾಚಾರ ಎಸಗಿದವರಿಗೂ ಕೆಲವು ಅರ್ಹತೆಗಳಿರಬೇಕು. ಆರೋಪಿಗಳು ಕೆಳವರ್ಗಕ್ಕೆ, ಕೆಳಜಾತಿಗೆ ಸೇರಿದ್ದರೆ, ಅವರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೇ ಇದ್ದರೆ ತಕ್ಷಣ ಸಮಾಜದ ನೈತಿಕ ಪ್ರಜ್ಞೆ ಜಾಗೃತವಾಗುತ್ತದೆ. ಆ ಆರೋಪಿಗಳಲ್ಲಿ ನಮಗೆ ‘ರಾಕ್ಷಸರನ್ನು, ವೈರಸ್‌ಗಳನ್ನು’ ಕಾಣಲು ಸಾಧ್ಯವಾಗುತ್ತದೆ. ಅದಿಲ್ಲದೇ ಇದ್ದಾಗ, ನಾಗರಿಕರೆನಿಸಿಕೊಂಡವರೇ ‘ಅತ್ಯಾಚಾರವನ್ನು ಬಹಿರಂಗವಾಗಿ ಸಮರ್ಥಿಸುವುದಕ್ಕೂ’ ಹೇಸುವುದಿಲ್ಲ. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರ ಕ್ರೌರ್ಯ, ನಿರ್ಭಯಾ ಪ್ರಕರಣದಲ್ಲಿ ಭಾಗವಹಿಸಿದವರಿಗಿಂತ ಯಾವ ರೀತಿಯಲ್ಲೂ ಕಡಿಮೆಯಿರಲಿಲ್ಲ. ಗುಜರಾತ್ ಹತ್ಯಾಕಾಂಡದ ಆರೋಪಿಗಳಿಗೆ ಶಿಕ್ಷೆಯಾಗುವುದಿರಲಿ, ಒಂದು ನಿರ್ದಿಷ್ಟ ಗುಂಪುಗಳು ಅವುಗಳನ್ನು ‘ಸಾಂಸ್ಕೃತಿಕ ಪುನರುತ್ಥಾನ’ವೆಂದು ಹೆಮ್ಮೆಯಿಂದ ಗುರುತಿಸುತ್ತಿವೆ.

ಜಮ್ಮುವಿನಲ್ಲಿ ಆಸೀಫಾ ಎನ್ನುವ ಮಗುವಿನ ಮೇಲೆ ನಡೆದ ಬರ್ಬರ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಆರೋಪಿಗಳಿಗೆ ಯಾಕೆ ಗಲ್ಲಾಗಲಿಲ್ಲ? ಎನ್ನುವ ಪ್ರಶ್ನೆ ಮತ್ತೆ ನಮ್ಮನ್ನು ಕಾಡುತ್ತದೆ. ನಿರ್ಭಯಾ ಅತ್ಯಾಚಾರ ಪ್ರಕರಣದಷ್ಟೇ ಗಂಭೀರವಾದ ಅಥವಾ ಅದಕ್ಕಿಂತಲೂ ಕ್ರೂರವಾದ ಕೃತ್ಯ ಇದು. ಎಳೆ ಬಾಲಕಿಯನ್ನು ಎರಡು ದಿನಗಳ ಕಾಲ ದೇವಸ್ಥಾನದ ಒಳಗೆ ಅತ್ಯಾಚಾರಗೈದು, ಆಕೆಯನ್ನು ಬರ್ಬರವಾಗಿ ಕೊಂದು ಹಾಕುತ್ತಾರೆ. ಆದರೆ ಇಲ್ಲಿ ಆರೋಪಿಗಳು ನಿರ್ಭಯಾ ಪ್ರಕರಣದ ಆರೋಪಿಗಳಂತೆ ವಿಳಾಸವಿಲ್ಲದ ಕೂಲಿಕಾರ್ಮಿಕರಲ್ಲ. ಆಸೀಫಾ ಪ್ರಕರಣದಲ್ಲಿ ಭಾಗವಹಿಸಿದವರೆಲ್ಲ ಸಮಾಜದಲ್ಲಿ ಗಣ್ಯರೆಂದು ಗುರುತಿಸಿಕೊಂಡವರು. ಈಕೆಗೆ ನ್ಯಾಯ ಸಿಗಲಿ ಎಂದು ಸಮಾಜ ಮೊಂಬತ್ತಿ ಹಚ್ಚಿ ಪ್ರತಿಭಟನೆ ನಡೆಸಲಿಲ್ಲ. ಬದಲಿಗೆ, ಬಂಧಿತ ಆರೋಪಿಗಳನ್ನು ಬಿಡುಗಡೆಗೊಳಿಸಬೇಕು ಎಂದು ಒಂದು ನಿರ್ದಿಷ್ಟ ಪಕ್ಷಕ್ಕೆ ಸೇರಿದ ಜನಪ್ರತಿನಿಧಿಗಳೇ ಬೀದಿಗಿಳಿದು ದಾಂಧಲೆ ನಡೆಸಿದರು. ನಿರ್ಭಯಾ ಈ ದೇಶದ ಸಕಲ ಹೆಣ್ಣು ಜೀವಗಳ ಪ್ರತಿನಿಧಿಯೇ ಆಗಿದ್ದರೆ ಆಸೀಫಾಳ ಆರೋಪಿಗಳಿಗೆ ಗಲ್ಲಾಗುವವರೆಗೆ ನಿರ್ಭಯಾಳಿಗೆ ನ್ಯಾಯ ದೊರಕುವುದಿಲ್ಲ.

ಮೊತ್ತ ಮೊದಲಾಗಿ ಹೆಣ್ಣಿನ ಮೇಲೆ ನಡೆಯುವ ಎಲ್ಲ ಅತ್ಯಾಚಾರಗಳನ್ನು, ಅತ್ಯಾಚಾರ ಆರೋಪಿಗಳನ್ನು ಒಂದೇ ದೃಷ್ಟಿಯಿಂದ ನೋಡುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆಯಾಗಬೇಕಾದರೆ, ಸಂತ್ರಸ್ತರಿಗೆ ನ್ಯಾಯ ಸಿಗಬೇಕಾದರೆ ಜಾತಿ, ಹಣ, ವರ್ಗ ಮೊದಲಾದ ‘ಮಾನದಂಡ’ಗಳನ್ನು ಇಟ್ಟುಕೊಂಡು ಮಾತನಾಡುವವರೆಗೂ ನಮಗೆ ನಿರ್ಭಯಾ ಪ್ರಕರಣದ ಆರೋಪಿಗಳ ಕುರಿತಂತೆ ಮಾತನಾಡುವ ನೈತಿಕತೆ ಇರುವುದಿಲ್ಲ. ಗಲ್ಲೀರಿಸಲ್ಪಟ್ಟ ನಾಲ್ವರಲ್ಲಿ ಕಂಡ ರಾಕ್ಷಸತ್ವವನ್ನು ನಮಗೆ ಅತ್ಯಾಚಾರ ಆರೋಪಿಗಳಾಗಿ ಗುರುತಿಸಲ್ಪಟ್ಟಿರುವ ರಾಜಕಾರಣಿಗಳು, ನಕಲಿ ಸ್ವಾಮೀಜಿಗಳಲ್ಲೂ ಕಾಣಲು ಸಾಧ್ಯವಾಗಬೇಕು. ಇಷ್ಟಕ್ಕೂ ನಿರ್ಭಯಾ ಪ್ರಕರಣದ ಆರೋಪಿಗಳು ಆಕಾಶದಿಂದ ಕೆಳಗಿಳಿದ ರಕ್ಕಸರೇನೂ ಅಲ್ಲ. ಅವರೂ ಈ ಭೂಮಿಯ ಮೇಲೆ ನಮ್ಮ ನಿಮ್ಮಂತೆಯೇ ಹುಟ್ಟಿ, ಇದೇ ಸಮಾಜದ ನಡುವೆ ಬೆಳೆದವರು. ಅವರನ್ನು ಸರಿದಾರಿಯಲ್ಲಿ ರೂಪಿಸಬೇಕಾದ ಸಮಾಜ ತನ್ನ ಪಾತ್ರವನ್ನು ಎಷ್ಟರಮಟ್ಟಿಗೆ ನಿರ್ವಹಿಸಿದೆ? ಸಮಾಜದಲ್ಲಿರುವ ಪ್ರತಿ ಮಗುವಿಗೂ ಶಿಕ್ಷಣ, ನೈತಿಕ ವೌಲ್ಯಗಳನ್ನು ಬಿತ್ತುವಲ್ಲಿ ನಾವು ಸೋತಿದ್ದೇವೆ. ಬಡತನ, ಅನಕ್ಷರತೆ ಮದ್ಯದ ಚಟ ಇತ್ಯಾದಿಗಳು ನಿಧಾನಕ್ಕೆ ಅವರೊಳಗೆ ರಾಕ್ಷಸರನ್ನು ಹುಟ್ಟಿಸಿ ಬೆಳೆಸಿದೆ. ಆದುದರಿಂದ ಅವರ ಕೃತ್ಯದಲ್ಲಿ ಈ ಸಮಾಜ, ಸರಕಾರಗಳ ಸಹಭಾಗಿತ್ವವೂ ಇದೆ. ಇಂದು ಮುಂಜಾನೆ ಗಲ್ಲಿಗೇರಿಸಲ್ಪಟ್ಟ ಆ ನಾಲ್ವರು ತರುಣರ ಜೊತೆಗೆ ನಾವೆಲ್ಲರೂ ಪರೋಕ್ಷವಾಗಿ ಗಲ್ಲಿಗೇರಿಸಲ್ಪಟ್ಟಿದ್ದೇವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)