varthabharthi

ಗಲ್ಫ್ ಸುದ್ದಿ

ಶಾಲೆ, ಸರಕಾರಿ ಕಚೇರಿ, ಮಾಲ್ ಗಳು, ಸಾರಿಗೆ ಬಂದ್; ಮುಂದುವರಿದ ವಿಮಾನಯಾನ ರದ್ದು

ಕೊರೋನ ವೈರಸ್ ಭೀತಿ : ಕುವೈತ್ ನಲ್ಲಿ ಜುಮಾ ಸಹಿತ ದೈನಂದಿನ ಸಾಮೂಹಿಕ ನಮಾಝ್ ಗಳಿಗೆ ನಿರ್ಬಂಧ

ವಾರ್ತಾ ಭಾರತಿ : 21 Mar, 2020
ವರದಿ : ಅಬ್ದುಲ್ ಶುಕೂರ್ ಕುವೈತ್

ಕುವೈತ್ : ಕೊರೋನ ವೈರಸ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಕುವೈತ್ ರಾಷ್ಟ್ರಾದ್ಯಂತ ಶುಕ್ರವಾರದ ಜುಮಾ ನಮಾಝ್ ಹಾಗು ಸಾಮೂಹಿಕ ನಮಾಝ್ ಗೆ ನಿರ್ಬಂಧ ಹೇರಲಾಗಿದೆ.

ಮಾ. 20ರಂದು ಇಲ್ಲಿನ ಮಸೀದಿಗಳಲ್ಲಿ ಜುಮಾ ನಮಾಝ್ ನಿರ್ವಹಿಸಿಲ್ಲ. ಕಳೆದ ಶುಕ್ರವಾರ (ಮಾ.13) ಎಲ್ಲಾ ಮಸೀದಿಗಳಲ್ಲಿ ಜುಮಾ ನಮಾಝ್ ನಿರ್ವಹಿಸಲಾಗಿದ್ದರೂ ಅದೇ ದಿನ ಮಸೀದಿಗಳಲ್ಲಿ ನೆರವೇರಿಸಲಾಗುವ ದೈನಂದಿನ ಸಮೂಹಿಕ ನಮಾಝ್ ಗಳಿಗೆ ನಿರ್ಬಂಧ ಹೇರಲಾಗಿದ್ದು, ಮುಂದಿನ ಆದೇಶದವರೆಗೆ ಇದು ಮುಂದುವರಿಯಲಿದೆ. 

ನಮಾಝಿಗರಿಗೆ ನೀಡಲಾಗುವ ಕರೆಯಲ್ಲಿ (ಅಝಾನ್) ಹಯ್ಯ ಅಲಸ್ವಲಾಹ್ (ನಮಾಝ್  ಗಾಗಿ ಧಾವಿಸಿ) ಹಯ್ಯ ಅಲಲ್ ಫಲಾಹ್ (ವಿಜಯದ ಕಡೆಗೆ ಬನ್ನಿ) ಬದಲಿಗೆ ಸ್ವಲಾತು ಫಿ ಬುಯೂತಿಕುಂ (ಮನೆಗಳಲ್ಲೇ ನಮಾಝ್ ನಿರ್ವಹಿಸಿ) ಎಂದು ಕರೆ ನೀಡಲಾಗುತ್ತಿದೆ.

ಕೊರೋನ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಕುವೈತ್ ಆಡಳಿತವು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜನ ಸಂದಣಿಯನ್ನು ತಡೆಯುವ ಉದ್ದೇಶದಿಂದ ಮಾಲ್ ಗಳು, ರೆಸ್ಟೋರೆಂಟ್, ಥಿಯೇಟರ್ ಗಳು, ಶಿಕ್ಷಣ ಸಂಸ್ಥೆ, ಸರಕಾರಿ ಕಚೇರಿ ಗಳನ್ನು ಮುಚ್ಚಲಾಗಿದೆ.

ವಿಮಾನಯಾನ ರದ್ದು

ಕುವೈತ್ ನಿಂದ ಹೊರಹೋಗುವ ಹಾಗು ಒಳಬರುವ ಎಲ್ಲಾ ವಿಮಾನಗಳನ್ನು ಮಾ. 7ರಿಂದ ಒಂದು ವಾರ ಕಾಲ ರದ್ದುಗೊಳಿಸಿತ್ತು. ಬಳಿಕ ಮುಂದಿನ ಆದೇಶದವರೆಗೆ ಅನಿರ್ಧಿಷ್ಠ ದಿನಾಂಕದ ವರೆಗೆ ಮುಂದೂಡಲಾಗಿದೆ. ವಿಮಾನ ಯಾನ ರದ್ದುಗೊಂಡಿರುವುದರಿಂದ ಕಂಪೆನಿಗಳಲ್ಲಿ ಕುವೈತ್ ನಲ್ಲಿರುವ ಅನಿವಾಸಿ ಭಾರತೀಯರು ಸಂಕಷ್ಟವನ್ನು ಎದುರಿಸುವಂತಾಗಿದೆ. 

ಉದ್ಯೋಗಿಗಳಿಗೆ ರಜೆ ಘೋಷಿಸಿದ ಕಂಪೆನಿಗಳು 

ಕೊರೋನ ವೈರಸ್ ಹರಡುವ ಭೀತಿಯಿಂದ ಕುವೈತ್ ನಲ್ಲಿರುವ ಬಹುತೇಕ ಕಂಪೆನಿಗಳು ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಉದ್ಯೋಗಿಗಳಿಗೆ 15 ದಿನಗಳ ಕಾಲ ರಜೆ ಘೋಷಿಸಿದೆ. ಕುವೈತ್ ಕಾನೂನು ಪ್ರಕಾರ ರಜೆ ದಿನದಿಂದ ಮೂಲ ವೇತನ (ಬೇಸಿಕ್ ಸ್ಯಾಲರಿ) ವನ್ನು ಕಂಪೆನಿ ಪಾವತಿಸಬೇಕಾಗುತ್ತದೆ. ಆದರೆ ಈ ರಜೆ ಇನ್ನೂ ಹೆಚ್ಚಿನ ಅವಧಿಗೆ ಮುಂದುವರಿಯಬಹುದು ಎಂಬ ಆತಂಕವನ್ನು ಉದ್ಯೋಗಿಗಳು ವ್ಯಕ್ತಪಡಿಸುತ್ತಾರೆ. ಕಂಪೆನಿಗಳು ಉದ್ಯೋಗಿಗಳಿಗೆ ದಿಢೀರ್ ರಜೆ ಘೋಷಿಸಿರುವುದರಿಂದ ಹಾಗು ವಿಮಾನ ಯಾನ ಸ್ಥಗಿತ ಗೊಂಡಿರುವುದರಿಂದ ಭಾರತಕ್ಕೆ ಮರಳಲು ಸಾಧ್ಯವಾಗದಿರುವುದರಿಂದ ಉದ್ಯೋಗಿಗಳು ಸಂಕಷ್ಟ ಎದುರಿಸುತ್ತಿವಂತಾಗಿದೆ. 

ಸಾರಿಗೆ ಸ್ತಬ್ಧ

ಕುವೈತ್ ನಲ್ಲಿ ಸಂಚರಿಸುತ್ತಿದ್ದ ವಿವಿಧ ಕಂಪೆಗಳ ಬಸ್ ಸಂಚಾರವನ್ನು ಮಾ. 12ರಿಂದ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾರಿಗೆ ಕಂಪೆನಿಗಳು ಮಾ. 12ರಂದು ಸಂಜೆ ಎಲ್ಲಾ ಚಾಲಕರಿಗೆ ಸೂಚನೆ ನೀಡಿ ಮುಂದಿನ ಆದೇಶದವರೆಗೆ ಕರ್ತವ್ಯಕ್ಕೆ ಹಾಜರಾಗದಂತೆ ತಿಳಿಸಿದೆ.

ಹೈಪರ್ ಮಾರ್ಕೆಟ್ ಗಳಿಗೆ ವಿನಾಯಿತಿ

ಸ್ಥಳೀಯಡಳಿತ ವಿವಿಧ ಮಾಲ್ ಗಳಿಗೆ ನಿರ್ಬಂಧ ಹೇರಿದರೂ ಸ್ಥಳೀಯ ಹೈಪರ್ ಮಾರ್ಕೆಟ್ ಗಳಿಗೆ ವಿನಾಯಿತಿ ನೀಡಿದೆ. ಜನರಿಗೆ ದೈನಂದಿನ ಅಗತ್ಯ ವಸ್ತುಗಳ ಅಗತ್ಯ ಮನಗಂಡು ಆಹಾರ ದಾನ್ಯಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಹೈಪರ್ ಮಾರ್ಕೆಟ್ ಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳಲಾಗುತ್ತದೆ. ಬಸ್ ಸಂಚಾರ ಇಲ್ಲದಿರುವುದರಿಂದ ಹೈಪರ್ ಮಾರ್ಕೆಟ್ ಗಳಲ್ಲೂ ಜನರು ಬಹಳ ವಿರಳವಾಗಿದೆ.

ಕುವೈತ್ ನಗರ ಹಾಗು ಫಾಹಿಲ್ ಸಂಪರ್ಕಿಸುವ ಪ್ರಮುಖ ರಸ್ತೆಗಳು ವಾಹನ ಸಂಚಾರವಿಲ್ಲದೆ ವಿರಳವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)