varthabharthi


ಕ್ರೀಡೆ

ಕೊರೋನ ವೈರಸ್: ನಿರ್ಬಂಧದ ಶಿಷ್ಟಾಚಾರ ಉಲ್ಲಂಘಿಸಿದ ಮೇರಿಕೋಮ್

ವಾರ್ತಾ ಭಾರತಿ : 21 Mar, 2020

ಹೊಸದಿಲ್ಲಿ, ಮಾ.21: ಕೊರೋನ ವೈರಸ್ ಸಮುದಾಯಕ್ಕೆ ಪಸರಿಸುವ ಭೀತಿಯ ಸಾಧ್ಯತೆ ನಡುವೆ ಹಿರಿಯ ಬಾಕ್ಸರ್ ಹಾಗೂ ರಾಜ್ಯಸಭಾ ಸಂಸದೆ ಮೇರಿಕೋಮ್ ವಿಶ್ವ ಆರೋಗ್ಯ ಸಂಘಟನೆ(ಡಬ್ಲುಟಿಎ)ಹಾಗೂ ಸರಕಾರಗಳು ವಿಶ್ವದಾದ್ಯಂತ ವಿಧಿಸಿರುವ 14 ದಿನಗಳ ನಿರ್ಬಂಧದ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ.

ಜೋರ್ಡನ್‌ನ ಅಮ್ಮಾನ್‌ನಲ್ಲಿ ಏಶ್ಯ-ಒಶಿಯಾನಿಯ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಸ್ಪರ್ಧಿಸಿರುವ ಮೇರಿ ಕೋಮ್ ಮಾ.13ರಂದು ಸ್ವದೇಶಕ್ಕೆ ವಾಪಸಾಗಿದ್ದರು. ಮೇರಿಕೋಮ್ ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಕನಿಷ್ಠ 14 ದಿನಗಳ ಕಾಲ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಬೇಕಾಗಿತ್ತು.

ಆದರೆ ಅವರು ಮಾರ್ಚ್ 18ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ರಾಷ್ಟ್ರಪತಿ ಭವನದಲ್ಲಿ ಅಯೋಜಿಸಿದ್ದ ಉಪಹಾರ ಕೂಟದಲ್ಲಿ ಭಾಗವಹಿಸಿದ್ದರು. ರಾಷ್ಟ್ರಪತಿಗಳ ಅಧಿಕೃತ ಟ್ವಿಟರ್‌ನಲ್ಲಿ ಟ್ವೀಟ್ ಮಾಡಲ್ಪಟ್ಟಿರುವ ನಾಲ್ಕು ಚಿತ್ರಗಳ ಪೈಕಿ ಒಂದರಲ್ಲಿ ಮೇರಿಕೋಮ್ ಅವರು ಇತರ ಸಂಸತ್ ಸದಸ್ಯರೊಂದಿಗೆ ಕಾಣಿಸಿಕೊಂಡಿದ್ದರು.

ರಾಷ್ಟ್ರಪತಿ ಕೋವಿಂದ್ ಅವರು ಉತ್ತರಪ್ರದೇಶ ಹಾಗೂ ರಾಜಸ್ಥಾನ ಸಂಸತ್ ಸದಸ್ಯರಿಗೆ ಇಂದು ಬೆಳಗ್ಗೆ ಉಪಹಾರ ಕೂಟ ಏರ್ಪಡಿಸಿದ್ದರು ಎಂದು ಫೋಟೊದ ಕೆಳಗೆ ಬರೆಯಲಾಗಿತ್ತು. ಅದೇ ದಿನ ರಾಷ್ಟ್ರಪತಿ ಭವನದಲ್ಲಿ ಬಿಜೆಪಿ ಸಂಸದ ದುಷ್ಯಂತ್ ಸಿಂಗ್ ಅವರು ವೈರಸ್ ಸೋಂಕು ಪೀಡಿತ ಬಾಲಿವುಡ್ ಗಾಯಕಿ ಕನಿಕಾ ಕಪೂರ್‌ರನ್ನು ಸಂಪರ್ಕಿಸಿದ್ದರು. ಸಿಂಗ್ ಇದೀಗ ಅವರು ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ.

ಜೋರ್ಡನ್‌ನಲ್ಲಿ ಭಾಗವಹಿಸಿರುವ ಭಾರತದ ಬಾಕ್ಸಿಂಗ್ ತಂಡ ಕಡ್ಡಾಯವಾಗಿ 14 ದಿನಗಳ ಗೃಹನಿರ್ಬಂಧಕ್ಕೆ ಒಳಗಾಗಿದೆೆಎಂದು ಬಾಕ್ಸಿಂಗ್ ಕೋಚ್ ಸ್ಯಾಂಟಿಯಾಗೊ ನೀವಾ ಶುಕ್ರವಾರ ತಿಳಿಸಿದ್ದಾರೆ.

‘‘ನಾನು ಜೋರ್ಡನ್‌ನಿಂದ ವಾಪಸಾದ ಬಳಿಕ ಮನೆಯಲ್ಲೇ ಇದ್ದೆ. ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಮಾತ್ರ ಹಾಜರಾಗಿದ್ದೆ. ದುಷ್ಯಂತ್‌ರನ್ನು ಭೇಟಿಯಾಗಿಲ್ಲ ಅಥವಾ ಅವರ ಕೈಕುಲುಕಿಲ್ಲ. ಜೋರ್ಡನ್ ನಿಂದ ವಾಪಸಾದ ಬಳಿಕ ನನ್ನ 14 ದಿನಗಳ ಗೃಹನಿರ್ಬಂಧದ ಅವಧಿಯು ಕೊನೆಗೊಂಡಿದೆ. ಮುಂದಿನ 3-4 ದಿನಗಳು ಮಾತ್ರ ಮನೆಯಲ್ಲಿರುತ್ತೇನೆ’’ ಎಂದು ಮೇರಿಕೋಮ್ ಹೇಳಿದ್ದಾರೆ.

ಉಪಹಾರ ಕೂಟದಲ್ಲಿ ದುಷ್ಯಂತ್ ಸಿಂಗ್ ಅವರು ರಾಷ್ಟ್ರಪತಿಯವರನ್ನು ಭೇಟಿಯಾಗಿರುವ ಕಾರಣ ರಾಷ್ಟ್ರಪತಿ ಕೋವಿಂದ್ ಕೊರೋನ ವೈರಸ್ ಪರೀಕ್ಷೆಗೆ ಒಳಗಾಗುವ ಸಾಧ್ಯತೆಯಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)