varthabharthi


ವಿಶೇಷ-ವರದಿಗಳು

ಕೊರೊನಾ ವೈರಸ್ ನ ದಿನದಿನದ ಲಕ್ಷಣಗಳು ಮತ್ತು ಹಂತಗಳು

ವಾರ್ತಾ ಭಾರತಿ : 22 Mar, 2020

ಕೊರೋನವೈರಸ್ ಮಹಾಮಾರಿ ಹಲವಾರು ರಾಷ್ಟ್ರಗಳನ್ನು ತಲ್ಲಣಗೊಳಿಸಿದ್ದು,ಜನರು ತಮ್ಮ ಮನೆಗಳಲ್ಲಿಯೇ ಸ್ವಯಂ ನಿರ್ಬಂಧವನ್ನು ವಿಧಿಸಿಕೊಳ್ಳುವಂತೆ ಮಾಡಿದೆ. ಸಂಭಾವ್ಯ ಕೊರೋನಾ ವೈರಸ್ ಸೋಂಕಿತರ ಸಂಪರ್ಕವುಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಜನರು ಅನುಸರಿಸುತ್ತಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮಾರಣಾಂತಿಕ ವೈರಸ್‌ನ ಲಕ್ಷಣಗಳನ್ನು ಗುರುತಿಸುವುದು ಹೇಗೆ ಎನ್ನುವುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ.

ಕೊರೋನವೈರಸ್ ತನ್ನ ಲಕ್ಷಣಗಳನ್ನು ಪ್ರಕಟಿಸಲು ಒಂಭತ್ತು ದಿನಗಳನ್ನು ತೆಗೆದುಕೊಳ್ಳುತ್ತದೆ,ಸ್ವಲ್ಪವೇ ಲಕ್ಷಣಗಳು ಕಂಡು ಬಂದರೂ ಶಂಕಿತರು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡರೆ ಈ ಮಹಾಮಾರಿಯ ಅಪಾಯದಿಂದ ಪಾರಾಗಲು ಸಾಧ್ಯವಾಗುತ್ತದೆ. ಆದರೆ ಕೊರೋನವೈರಸ್ ನಮ್ಮ ಶರೀರದಲ್ಲಿ ಹೇಗೆ ಬೆಳೆಯುತ್ತದೆ ಎನ್ನುವುದು ನಿಮಗೆ ಗೊತ್ತೇ? ಕೊರೋನಾ ವೈರಸ್ ದಿನೇ ದಿನೇ ಪ್ರಕಟಿಸುವ ಲಕ್ಷಣಗಳು ಮತ್ತು ನಾವು ಯಾವಾಗ ತಕ್ಷಣ ವೈದ್ಯಕೀಯ ನೆರವು ಪಡೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿಗಳಿಲ್ಲಿವೆ,ಓದಿಕೊಳ್ಳಿ.

ಅದಕ್ಕೂ ಮುನ್ನ ಕೊರೋನವೈರಸ್ ಹರಡುವಿಕೆಯನ್ನು ತಡೆಯಲು ಹೆಚ್ಚಾಗಿ ಮನೆಯಲ್ಲಿಯೇ ಉಳಿದುಕೊಳ್ಳಬೇಕು ಮತ್ತು ಇತರರ ಸಂಪರ್ಕದಲ್ಲಿ ಬರುವುದನ್ನು ಸಾಧ್ಯವಾದಷ್ಟು ನಿವಾರಿಸಬೇಕು ಎನ್ನುವುದು ನಿಮಗೆ ಗೊತ್ತಿರಲಿ.

ಕೊರೋನಾ ವೈರಸ್ ವಿಶ್ವಾದ್ಯಂತ ನಡೆಸುತ್ತಿರುವ ಹಾವಳಿಯ ನಡುವೆಯೇ ಈ ಪಿಡುಗಿನ ಬಗ್ಗೆ ನಿರಂತರ ಅಧ್ಯಯನಗಳನ್ನು ನಡೆಸುತ್ತಿರುವ ವಿಜ್ಞಾನಿಗಳು ವೈರಸ್‌ನ ಲಕ್ಷಣಗಳು ಹೇಗೆ ಕಾಣಿಸಿಕೊಳ್ಳುತ್ತವೆ ಮತ್ತು ರೋಗಿಯ ಶರೀರದಲ್ಲಿ ಸಂಪೂರ್ಣ ಪರಿಣಾಮವನ್ನುಂಟು ಮಾಡಲು ಹೇಗೆ ಸಾಕಷ್ಟು ಸಮಯಾವಕಾಶವನ್ನು ತೆಗೆದುಕೊಳ್ಳುತ್ತದೆ ಎಂಬ ಬಗ್ಗೆ ತಿಳಿಸಿದ್ದಾರೆ.

ಕೊರೋನವೈರಸ್‌ನ ಹಂತಗಳು

ಈ ಮಾರಣಾಂತಿಕ ರೋಗವನ್ನು ಎರಡು ಮುಖ್ಯ ಹಂತಗಳಲ್ಲಿ ವಿಭಜಿಸಬಹುದು. ಮೊದಲ ಹಂತವು ಸಾಮಾನ್ಯವಾಗಿ ಏಳು ದಿನಗಳವರೆಗೆ ಮತ್ತು ಎರಡನೇ ಹಂತ ಇನ್ನೂ ಎರಡು ವಾರಗಳ ಕಾಲ ಇರುತ್ತವೆ. ಶೇ.85ರಷ್ಟು ರೋಗಿಗಳು ಕೊರೋನವೈರಸ್‌ನ ಮೊದಲ ಎರಡು ಹಂತಗಳನ್ನು ಮಾತ್ರ ಅನುಭವಿಸುತ್ತಾರೆ ಎನ್ನುವುದು ಇದ್ದುದರಲ್ಲಿ ನೆಮ್ಮದಿಯ ಸಂಗತಿಯಾಗಿದೆ. ಪ್ರತಿ ಏಳು ವ್ಯಕ್ತಿಗಳಲ್ಲಿ ಓರ್ವನಲ್ಲಿ ಲಕ್ಷಣಗಳು ಸಂಪೂರ್ಣ ಮೂರು ವಾರಗಳವರೆಗೆ ಇರುತ್ತವೆೆ.

ಹಂತ 1: ಕೊರೋನವೈರಸ್ ಸೋಂಕಿಗೆ ಗುರಿಯಾದ ಹೆಚ್ಚಿನ ರೋಗಿಗಳಲ್ಲಿ ಮೊದಲು ಜ್ವರವು ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ಬಳಲಿಕೆ,ಸ್ನಾಯುಗಳಲ್ಲಿ ನೋವು ಮತ್ತು ಒಣಕೆಮ್ಮು ಸಹ ಕಾಡುತ್ತವೆ. ಕೆಲವರಿಗೆ ಒಂದೆರಡು ದಿನಗಳ ಕಾಲ ವಾಂತಿ ಅಥವಾ ಅತಿಸಾರವೂ ಕಾಡಬಹುದು. ಮರುದಿನ ರೋಗಿಯು ಅತಿಯಾದ ಆಯಾಸವನ್ನು ಅನುಭವಿಸುತ್ತಾನೆ ಮತ್ತು ಯಾವುದೇ ಕೆಲಸವನ್ನು ಮಾಡುವಲ್ಲಿ ಅಸಹಾಯಕನಾಗುತ್ತಾನೆ. ಆದರೆ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಕೊಂಚ ಭಿನ್ನವಾಗಿರಬಹುದು. ಈ ಸಮಯದಲ್ಲಿ ಗಂಟಲು ಒಣಗುವುದು ಮತ್ತು ಗಂಟಲಿನ ಕಿರಿಕಿರಿಯೂ ಅಲ್ಪ ಪ್ರಮಾಣದಲ್ಲಿ ಕಾಣಿಸಿಕೊಳ್ಳಬಹುದು. ಜ್ವರ ಮತ್ತು ಉಸಿರಾಟಕ್ಕೆ ತೊಂದರೆಯೊಂದಿಗೆ ರೋಗವು ಪ್ರಗತಿಗೊಳ್ಳುತ್ತದೆ.

ಹಂತ 2: ಮೊದಲ ಹಂತವು ಅಂತ್ಯಗೊಳ್ಳುವ ವೇಳೆ ಶೇ.85ರಷ್ಟು ರೋಗಿಗಳಲ್ಲಿ ಲಕ್ಷಣಗಳು ಕ್ಷೀಣಿಸಲಾರಂಭಿಸುತ್ತವೆ. ನೀವು ಒಂಟಿಯಾಗಿ ವಾಸವಾಗಿದ್ದರೆ ಮತ್ತು ಸ್ವಲ್ಪ ಹಿತವೆನಿಸುತ್ತಿದ್ದರೆ, ನೀವು ಬಳಸುವ ವಸ್ತುಗಳನ್ನೆಲ್ಲ ಸ್ಯಾನಿಟೈಸ್ ಮಾಡಿ. ವೈದ್ಯಕೀಯ ತಪಾಸಣೆ ಮಾಡಿಸಿಕೊಂಡ ಬಳಿಕ ವೈದ್ಯರ ಸಲಹೆಯ ಮೇರೆಗೆ ಕೆಲಸವನ್ನು ಪುನರಾರಂಭಿಸುವ ಅಥವಾ ಮನೆಯಿಂದ ಹೊರಗಡಿಯಿಡುವ ಬಗ್ಗೆ ಯೋಚಿಸಿ. ನಿಮ್ಮ ಮನೆಯಲ್ಲಿ ಇತರ ಕುಟುಂಬ ಸದಸ್ಯರಿದ್ದರೆ ನಿಮ್ಮ ಸೋಂಕು ಅವರಿಗೆ ಹರಡದಂತಿರಲು ಇನ್ನೂ ಏಳು ದಿನಗಳ ಕಾಲ ಪ್ರತ್ಯೇಕವಾಗಿರಬೇಕು. ಆದರೆ ಏಳನೇ ದಿನದ ವೇಳೆಗೆ ನಿಮಗೆ ಉಸಿರಾಟದ ತೊಂದರೆಗಳು ಆರಂಭಗೊಂಡರೆ ನೀವು ರೋಗದ ಎರಡನೇ ಹಂತವನ್ನು ಪ್ರವೇಶಿಸಿದ್ದೀರಿ ಎಂದು ಅರ್ಥ. ಈ ಹಂತದಲ್ಲಿ ಕೆಲವು ರೋಗಿಗಳು ಆಸ್ಪತ್ರೆಗೆ ದಾಖಲಾಗುವುದು ಅಗತ್ಯವಾಗಬಹುದು.

ಯಾವುದೇ ರೋಗಿಯು ಕೊರೋನವೈರಸ್ ಸೋಂಕಿನ 17ನೇ ದಿನವನ್ನು ದಾಟಿದರೆ ಗಂಭೀರ ಸ್ಥಿತಿಯನ್ನು ತಲುಪುತ್ತಾನೆ/ಳೆ ಮತ್ತು ಕೆಲವು ಪ್ರಕರಣಗಳಲ್ಲಿ ಸಾವುಗಳು ಸಂಭವಿಸಬಹುದು. ಆದರೆ ಈ ಹಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಈಗಲೂ ಶೇ.1ರಿಂದ ಶೇ.2ರೊಳಗೇ ಇದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ಹೆಚ್ಚುತ್ತಿರುವ ಕೊರೊನಾ ವೈರಸ್ ಪಿಡುಗಿನ ಬಗ್ಗೆ ವಿಶ್ವಾದ್ಯಂತ ಹಲವಾರು ಅಧ್ಯಯನಗಳು ನಡೆಯುತ್ತಿವೆ. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಿಂದ ಈ ರೋಗವು ಹರಡುತ್ತದೆ. ಆದ್ದರಿಂದ ಜ್ವರ, ಕೆಮ್ಮು, ಉಸಿರಾಡಲು ತೊಂದರೆಯಂತಹ ಲಕ್ಷಣಗಳನ್ನು ಹೊಂದಿರುವವರಿಂದ ದೂರವಿರಬೇಕು. ಕೈಗಳನ್ನು ಆಗಾಗ್ಗೆ ಸ್ಯಾನಿಟೈಸರ್ ಅಥವಾ ಸಾಬೂನು ಬಳಸಿ ಚೆನ್ನಾಗಿ ತೊಳೆದುಕೊಳ್ಳುವುದು, ಕೆಮ್ಮುವಾಗ ಟಿಶ್ಯೂ ಪೇಪರ್‌ನ್ನು ಬಾಯಿಗೆ ಅಡ್ಡ ಹಿಡಿದುಕೊಳ್ಳುವುದು,ಮುಖವನ್ನು ಕೈಗಳಿಂದ ಸ್ಪರ್ಶಿಸುವುದನ್ನು ನಿವಾರಿಸುವುದು ಇವು ನಾವು ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)