varthabharthi

ಕರ್ನಾಟಕ

'ಲಾಕ್‍ ಡೌನ್' ಬ್ರೇಕ್ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ: ಕೊಡಗು ಎಸ್‍ಪಿ ಡಾ.ಸುಮನ್ ಎಚ್ಚರಿಕೆ

ವಾರ್ತಾ ಭಾರತಿ : 23 Mar, 2020

ಮಡಿಕೇರಿ, ಮಾ.23: ಸರಕಾರದ ಆದೇಶದಂತೆ ಕೊಡಗು ಜಿಲ್ಲೆ ಕೂಡ ಮಾ.31ರ ವರೆಗೆ 'ಲಾಕ್‍ ಡೌನ್' ಆಗಬೇಕಿದ್ದು, ಈ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕೊಡಗು ಜಿಲ್ಲಾಡಳಿತದ ನಿರ್ದೇಶನದಂತೆ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ.ಪನ್ನೇಕರ್ ಎಚ್ಚರಿಕೆ ನೀಡಿದ್ದಾರೆ. 

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‍ಪಿ, ಸರಕಾರ ಮತ್ತು ಜಿಲ್ಲಾಡಳಿತದ ಸೂಚನೆಯಂತೆ ಅಂತರಾಜ್ಯ ಹಾಗೂ ಅಂತರ್ ಜಿಲ್ಲೆಗಳನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ಒಟ್ಟು 13 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಈ ಚೆಕ್ ಪೋಸ್ಟ್ ಗಳು ಮಾ.23ರ ಬೆಳಗಿನಿಂದಲೇ ಕಾರ್ಯಾಚರಣೆ ಮಾಡುತ್ತಿವೆ. ಮಾಕುಟ್ಟ, ಕುಟ್ಟ, ಕರಿಕೆ ಅಂತರ್ ರಾಜ್ಯ ಚೆಕ್ ಪೋಸ್ಟ್ ಗಳಾಗಿದ್ದು, ಶಿರಂಗಾಲ, ಮಾಲ್ದಾರೆ, ನಿಲುವಾಗಿಲು, ಕೊಪ್ಪ, ಸಂಪಾಜೆ ಸೇರಿದಂತೆ ಇತರ 10 ಚೆಕ್ ಪೋಸ್ಟ್ ಗಳು ಅಂತರ್ ಜಿಲ್ಲೆಯನ್ನು ಸಂಪರ್ಕಿಸುತ್ತವೆ. ಹೀಗಾಗಿ ಕೇರಳ ಸೇರಿದಂತೆ ಹಾಸನ, ಮೈಸೂರು ಮತ್ತು ದಕ್ಷಿಣ ಕನ್ನಡ ಸಂಪರ್ಕವನ್ನು ಕೂಡ ಬಂದ್ ಮಾಡಲಾಗಿದೆ ಎಂದು ತಿಳಿಸಿದರು. 

ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಕೊಡಗಿಗೆ ಬರುವ ಎಲ್ಲಾ ವಾಹನಗಳಿಗೆ ತಡೆ ಒಡ್ಡಲಾಗುತ್ತಿದ್ದು, ತುರ್ತು ಕೆಲಸಗಳು ಮತ್ತು ಅಗತ್ಯ ವಸ್ತುಗಳ ಪೂರೈಕೆಯ ವಾಹನಗಳನ್ನು ತಪಾಸಣೆಯೊಂದಿಗೆ ಜಿಲ್ಲೆ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಶಾಲಾ ಮಕ್ಕಳನ್ನು ಜಿಲ್ಲೆಯ ಹೊರ ಭಾಗಗಳಿಂದ ಕರೆತರಲು ಪೊಲೀಸ್ ಇಲಾಖೆಯ ಮೂಲಕವೇ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಇನ್ನು ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಜನ ಸಂಚಾರ ಮತ್ತು ವಾಹನ ಸಂಚಾರ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಕೆಲವು ಮಂದಿ ಪಡಿತರಗಳನ್ನು ಪಡೆದುಕೊಳ್ಳಲು ರಸ್ತೆಗೆ ಬಂದಿದ್ದರೆ ಮತ್ತೆ ಕೆಲವರು ಅನಗತ್ಯವಾಗಿ ಸಂಚಾರ ನಡೆಸುತ್ತಿದ್ದಾರೆ. ಹೀಗಾಗಿ ಇವರನ್ನು ನಿಯಂತ್ರಿಸಲು ಮಡಿಕೇರಿ, ಗೋಣಿಕೊಪ್ಪ, ಮತ್ತು ಪೆರುಂಬಾಡಿಯಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು. ಪೊಲೀಸ್ ವಾಹನಗಳ ಮೂಲಕ ಮೊದಲ ಹಂತದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶಗಳನ್ನು ನೀಡಲಾಗುತ್ತಿದೆ. ಪ್ರತಿ ಚೆಕ್‍ಪೋಸ್ಟ್ ಗಳಲ್ಲಿ ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳನ್ನು ನಿಯೋಜಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಕ್ರಮ ವಹಿಸಲಾಗಿದೆ ಎಂದು ಎಸ್‍ಪಿ ಹೇಳಿದರು. 

ನಗರ, ಪಟ್ಟಣ ಪ್ರದೇಶದಲ್ಲಿ ಜನರು ಮನೆಗಳಿಂದ ಹೊರ ಬಂದು ಯಾವುದೇ ಕಾರಣಕ್ಕೂ ಗುಂಪು ಸೇರುವಂತಿಲ್ಲ ಎಂದು ಈ ಮೊದಲೇ ಜಿಲ್ಲಾಡಳಿತದಿಂದ ಆಜ್ಞೆ ಹೊರಡಿಸಲಾಗಿದೆ. ಹೀಗಿದ್ದರೂ ಕೂಡ ಸಾರ್ವಜನಿಕರು ಅನಾವಶ್ಯವಾಗಿ ತಿರುಗಾಡುತ್ತಿರುವ ದೂರುಗಳು ಕೇಳಿ ಬಂದಿದೆ. ಆದ್ದರಿಂದ ಸಾರ್ವಜನಿಕರನ್ನು ಚದುರಿಸಲು ಅನಿವಾರ್ಯವಾಗಿ ಬಲ ಪ್ರಯೋಗಿಸಲು ಕೂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮೊದಲ ಹಂತದ ಸೂಚನೆ ನೀಡಲಾಗಿದೆ. ಇದಕ್ಕೂ ಬಗ್ಗದಿದ್ದರೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪೊಲೀಸ್ ಇಲಾಖೆ ಅತ್ಯಂತ ಕಠಿಣ ಕ್ರಮಕ್ಕೂ ಮುಂದಾಗಲಿದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಇದನ್ನು ಅರಿತುಕೊಳ್ಳಬೇಕು ಎಂದು ಎಸ್‍ಪಿ ಮನವಿ ಮಾಡಿದರು.

2 ವರ್ಷ ಜೈಲು
ಕೆಲವು ವ್ಯಕ್ತಿಗಳಿಗೆ ಕಡ್ಡಾಯವಾಗಿ 14 ದಿನಗಳ ಕಾಲ ಮನೆ ಸಂಪರ್ಕ ತಡೆಯಲ್ಲಿ ಇರುವಂತೆ ಸೂಚಿಸಲಾಗಿದೆ. ಆದರೆ ಕೆಲವರು ಈ ಆದೇಶವನ್ನು ಉಲ್ಲಂಘಿಸುತ್ತಿದ್ದು, ಇಂತಹ ಒಂದು ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ನೋಟೀಸ್ ನೀಡಲಾಗಿದೆ. ಆದರೆ ಐಪಿಸಿ ಸೆಕ್ಷನ್ 270 ಮತ್ತು 271 ಪ್ರಕಾರ ಸರಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಆದೇಶವನ್ನು ಉಲ್ಲಂಘಿಸುವ ಇಂತಹ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲು ಅವಕಾಶವಿದ್ದು, ಇಂತಹ ವ್ಯಕ್ತಿಗೆ 2 ವರ್ಷ ಶಿಕ್ಷೆ ಹಾಗೂ ದಂಡವನ್ನೂ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಮನೆಯಿಂದ ಹೊರ ಬಂದು ತೊಂದರೆಗೆ ಸಿಲುಕಿಕೊಳ್ಳಬೇಡಿ ಎಂದು ಎಸ್‍ಪಿ ಡಾ.ಸುಮನ್ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)