varthabharthi


ಕರ್ನಾಟಕ

ಕೊಡಗಿನಲ್ಲಿ ಕಠಿಣ ನಿರ್ಬಂಧ: ದಿನದಲ್ಲಿ ಕೇವಲ 2 ಗಂಟೆ ತೆರೆಯಲಿದೆ ದಿನಸಿ ಅಂಗಡಿಗಳು

ವಾರ್ತಾ ಭಾರತಿ : 23 Mar, 2020

ಮಡಿಕೇರಿ, ಮಾ.23: ಕೊಡಗು ಜಿಲ್ಲೆಯಲ್ಲಿ ಮಾ.23ರ ಮಧ್ಯರಾತ್ರಿ 12 ಗಂಟೆಯಿಂದ ಮಾ.31ರ ವರೆಗೆ ನಿಷೇಧಾಜ್ಞೆ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನ ಭೀತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು. 

ವೈದ್ಯಕೀಯ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಹೊರತುಪಡಿಸಿ ಯಾರೂ ಕಾರಣವಿಲ್ಲದೇ ಸಂಚರಿಸುವಂತಿಲ್ಲ ಎಂದು ಹೇಳಿದರು. ಪಡಿತರ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಪಡೆಯಲು ಮಾತ್ರವೇ ಅಗತ್ಯಕ್ಕೆ ಅನುಗುಣವಾಗಿ ಖಾಸಗಿ ವಾಹನಗಳು ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ಮಾತ್ರ ಬಳಸಬಹುದು. ಇದನ್ನು ಹೊರತುಪಡಿಸಿದರೆ, ಆರೋಗ್ಯ ವಿಚಾರದ ತುರ್ತು ಸೇವೆಗಳಿಗೆ ಮಾತ್ರವೇ ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಅಗತ್ಯ ವಸ್ತುಗಳ ಅಂಗಡಿಗಳು ಕೂಡ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯ ವರೆಗೆ ಮಾತ್ರವೇ ತೆರೆದಿರಲಿವೆ. ಜನರು ಕೂಡ ಸರತಿ ಸಾಲಿನಲ್ಲಿ ನಿಂತು ಪಡಿತರ ಪಡೆಯಬೇಕು. ಇದಕ್ಕೆ ಪೊಲೀಸರು, ಆಹಾರ ಇಲಾಖೆ ಸಿಬ್ಬಂದಿಗಳು ನೆರವಾಗಲಿದ್ದಾರೆ ಎಂದು ಹೇಳಿದರು.

ಮೆಡಿಕಲ್ ಶಾಪ್, ಆಸ್ಪತ್ರೆ, ಡಯಾಲಿಸಿಸ್ ಕೇಂದ್ರಗಳು, ಪತ್ರಿಕಾ ಮಾಧ್ಯಮ, ತುರ್ತು ಸೇವಾ ವಾಹನ, ತುರ್ತು ಸೇವೆ ಒದಗಿಸುವ ಇಲಾಖೆಗಳಿಗೆ ಈ ಆದೇಶ ಅನ್ವಯವಾಗಲ್ಲ. ಖಾಸಗಿ ಸೆಕ್ಯುರಿಟಿ ಸಿಬ್ಬಂದಿಗಳು ಕೂಡ ಇದರಿಂದ ಹೊರಗಿರಲಿದ್ದಾರೆ ಎಂದು ಮಾಹಿತಿ ನೀಡಿದರು. ಇಂದಿನವರೆಗೆ ಕೇವಲ ಮನವಿ ಮಾಡಲಾಗಿತ್ತು. ಇಂದು ಮಧ್ಯರಾತ್ರಿಯಿಂದ ಈ ಎಲ್ಲಾ ಕಾನೂನುಗಳು ಸರಕಾರದ ಆದೇಶದಂತೆ ಜಾರಿಯಲ್ಲಿರಲಿವೆ ಎಂದು ಸೂಚನೆ ನೀಡಿದರು.

ಸೆಕ್ಷನ್ ಜಾರಿಯಾದ ಹಿನ್ನೆಲೆಯಲ್ಲಿ ಒಂದೆಡೆ 5 ಜನರು ಗುಂಪು ಸೇರುವಂತಿಲ್ಲ. ಎಲ್ಲಾ ರೀತಿಯ ಸಾರಿಗೆಯನ್ನು ಸಂಪೂರ್ಣ ಬಂದ್ ಆಗಲಿದ್ದು, ದಿನಸಿ ಮತ್ತು ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿರುತ್ತವೆ. ಇಂದಿರಾ ಕ್ಯಾಂಟೀನ್ ಕೂಡ ಎಂದಿನಂತೆ ತೆರದಿರಲಿದೆ ಎಂದರು. 

ಇಂದು ಮತ್ತೊಬ್ಬ ಶಂಕಿತ ವ್ಯಕ್ತಿ ಆಸ್ಪತ್ರೆ ದಾಖಲಾಗಿದ್ದು, ಆತ ದುಬೈ ಪ್ರಯಾಣದ ಮಾಹಿತಿ ಹೊಂದಿದ್ದಾನೆ. ಆತನನ್ನು ಐಸೋಲೇಷನ್‍ನಲ್ಲಿ ಇಡಲಾಗಿದೆ. ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ದಾಖಲಾಗಿದ್ದ ನಾಲ್ವರಿಗೆ ಸೋಂಕು ಇರಲಿಲ್ಲವೆಂದು ವರದಿ ಬಂದ ನಂತರ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.  

ಕೊರೋನ ಪಾಸಿಟಿವ್ ಇರುವ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ. ಕೊರೋನ ಪಾಸಿಟಿವ್ ಇರುವ ವ್ಯಕ್ತಿಯ 25 ಕುಟುಂಬ ಸದಸ್ಯರು ಗೃಹ ನಿರ್ಬಂಧದಲ್ಲಿದ್ದಾರೆ. ಈ 25 ಮಂದಿಯ ಗಂಟಲಿನ ದ್ರವ ಮತ್ತು ರಕ್ತದ ಮಾದರಿಗಳನ್ನು ಮೈಸೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರ ಪ್ರಯೋಗಾಲಯ ವರದಿ ಇನ್ನೂ ಬಂದಿಲ್ಲ. ಮೇಲ್ನೋಟಕ್ಕೆ ಇವರಿಗೆ ಯಾರಿಗೂ ಕೊರೋನ ಸೋಂಕು ಕಂಡು ಬಂದಿಲ್ಲ. ಸದ್ಯ ಇದುವರೆಗೆ 266 ಜನ ಗೃಹ ನಿರ್ಬಂಧದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೊಂಡಂಗೇರಿ ವ್ಯಾಪ್ತಿಯ ಕಂಟೋನ್‍ಮೆಂಟ್ ಪ್ರದೇಶದಲ್ಲಿರುವ 75 ಮನೆಯವರು ಮನೆಯಲ್ಲೇ ಇರಬೇಕು. ಬಫರ್ ಝೋನ್ ಏರಿಯಾದಲ್ಲಿ ಇರುವವರು ಅಂಗಡಿಗಳಿಗೆ ಹೋಗಬಹುದು. ಒಂದು ವೇಳೆ ವಸ್ತುಗಳ ಅಗತ್ಯವಿದ್ದರೆ ತಾಲೂಕು ತಹಶೀಲ್ದಾರ್ ಗೆ ಸೂಚನೆ ನೀಡಲಿದ್ದು, ತಾವು ಹಣ ಪಾವತಿಸಿ ಖರೀದಿಸಬೇಕು ಎಂದರು. ಸೂಕ್ಷ್ಮ ಪ್ರದೇಶದಲ್ಲಿ ಇರುವವರಿಗೆ ಆಹಾರ ವಿತರಿಸಬೇಕು ಎಂದು ಸರ್ಕಾರ ತಿಳಿಸಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಮಾತನಾಡಿ, ಐಪಿಸಿ 144 ಉಲ್ಲಂಘಿಸಿದವರ ವಿರುದ್ಧ ಐಪಿಸಿ 188, 269, 270 ಹಾಗೂ 271 ಕಠಿಣ ಶಿಕ್ಷೆ ವಿಧಿಸಲಾಗುವುದು. ಈ ಕಾಯಿದೆಗಳಲ್ಲಿ ಕನಿಷ್ಠ 6 ತಿಂಗಳಿಂದ 2 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಆದ್ದರಿಂದ ನಾಗರಿಕರು ಆವೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದರು. 

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)