varthabharthi

ನಿಮ್ಮ ಅಂಕಣ

ಕೊರೋನ: ಔಷಧಿಗಳ ಬಗ್ಗೆ ವಿವಾದ ಬೇಡ

ವಾರ್ತಾ ಭಾರತಿ : 23 Mar, 2020
- ಕೆ. ಲಕ್ಷ್ಮೀಕಾಂತ್ ರಾವ್, ಕೊಟ್ಟಾರ, ಮಂಗಳೂರು

ಮಾನ್ಯರೇ, 

ದೇಶದ ಮೇಲೆ ಕೊರೋನ ವೈರಾಣುವಿನ ಭೀಕರ ಛಾಯೆ ಕವಿದಿರುವಾಗ ಪರ್ಯಾಯ ವೈದ್ಯಕೀಯ ಪದ್ಧತಿಯ ಔಷಧಿಗಳ ಬಗ್ಗೆ ವಿವಾದ ಬೇಡ. ಆಯುರ್ವೇದ ಮತ್ತು ಹೋಮಿಯೋಪತಿಯ ಕುರಿತು ಅಲೋಪತಿ ಅರ್ಥಾತ್ ಪಾಶ್ಚಿಮಾತ್ಯ ವೈದ್ಯಕೀಯ ಪದ್ಧತಿಯ ತಜ್ಞರು ಈಗಲೂ ಮತ್ಸರ ಭರಿತ ಪೂರ್ವಗ್ರಹ ಹೊಂದಿದ್ದು, ಆಯುರ್ವೇದ ಮತ್ತು ಹೋಮಿಯೋಪತಿ ಪದ್ಧತಿಯ ಔಷಧಿಗಳು ಕೊರೋನ ವೈರಸ್ ರೋಗಕ್ಕೆ ಪರಿಣಾಮಕಾರಿ ಅಲ್ಲ ಎಂಬ ವಾದ ಮಾಡುತ್ತಿದ್ದಾರೆ. ಈಗಿನ ಸಂಕಷ್ಟಕಾಲದಲ್ಲಿ ಈ ವಿವಾದ ಬೇಡ. ನಮ್ಮ ದೇಶದಲ್ಲಿ ಈ ಮೂರೂ ವೈದ್ಯಕೀಯ ಪದ್ಧತಿಯಲ್ಲಿ ಪ್ರಯೋಗ ನಡೆಯುತ್ತಿರಲಿ. ವಿದೇಶದಲ್ಲಿಯೂ ಅಲೋಪತಿಯ ಜತೆ ಯುನಾನಿ ಮತ್ತು ಹೋಮಿಯೋಪತಿಯ ಔಷಧಿಗಳಿಂದ ಕೊರೋನ ವೈರಸ್ ತಡೆಯುವ ಪ್ರಯೋಗಗಳು ನಡೆಯುತ್ತಲೇ ಇವೆ. ಇನ್ನು ಕೆಲವೇ ದಿನಗಳಲ್ಲಿ ಯಾವ ಪದ್ಧ್ದತಿಯ ಔಷಧಿ ಹೆಚ್ಚು ಪರಿಣಾಮಕಾರಿ ಎಂಬ ಫಲಿತಾಂಶ ಬರುವುದು ಖಚಿತ. ಜೈಪುರದಲ್ಲಿಯೂ ಆಯುರ್ವೇದಿಕ್ ಔಷಧಿಯು ಕೊರೋನವನ್ನು ಪರಿಣಾಮಕಾರಿಯಾಗಿ ತಡೆಯಬಲ್ಲದು ಎಂಬ ಪ್ರಾಥಮಿಕ ವರದಿ ಬಂದಿದೆ. ಜೈಪುರದಲ್ಲಿ ಪ್ರಯೋಗ ಮುಂದುವರಿಯುತ್ತಿದೆ. ಹೋಮಿಯೋಪತಿಯ ಹುಟ್ಟೂರಾದ ಜರ್ಮನಿಯಲ್ಲಿ ಹೋಮಿಯೋಪತಿ ಔಷಧಿಗಳು ವಯಸ್ಸಾದವರಲ್ಲಿ ರೋಗನಿರೋಧಕ ಶಕ್ತಿ (ಇಮ್ಯೂನಿಟಿ) ಹೆಚ್ಚಿಸಿ ಕೊರೋನ ತಡೆಯುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಪ್ರಯೋಗದಲ್ಲಿ ಕಂಡಿಬಂದಿದೆ ಎನ್ನಲಾಗಿದೆ. (ಕೊರೋನದಿಂದ ಜಗತ್ತಿನಾದ್ಯಂತ ಬಲಿಯಾಗುತ್ತಿರುವವರಲ್ಲಿ ಶೇ.90ರಷ್ಟು ಜನರು 50 ವರ್ಷ ಮೇಲ್ಪಟ್ಟವರು). ಹಾಗಾಗಿ ಯಾವುದೇ ಪದ್ಧತಿಯ ಔಷಧಿಯನ್ನೂ ಕಡೆಗಣಿಸುವುದು ಬೇಡ. ಅಲೋಪತಿ ಆಯುರ್ವೇದಿಕ್, ಹೋಮಿಯೋಪತಿ, ಯುನಾನಿ ಈ ನಾಲ್ಕೂ ಪದ್ಧತಿಯ ಔಷಧಿಗಳ ಪ್ರಯೋಗ ನಡೆಯುತ್ತಲೇ ಇರಲಿ. ಎಲ್ಲದರ ಉದ್ದೇಶ ಒಂದೇ-ಅದು ರೋಗ ನಿವಾರಿಸುವುದು ಹಾಗೂ ಮನುಷ್ಯನ ಜೀವ ಉಳಿಸುವುದು! 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)