varthabharthi

ನಿಮ್ಮ ಅಂಕಣ

ಕೊರೋನ ವೈರಸ್‌ನಿಂದಾದ ಜನಸಾಮಾನ್ಯರ ಸ್ಥಿತಿಗತಿಗಳು ಮತ್ತು ಮನುಕುಲಕ್ಕೆ ಪಾಠಗಳು

ವಾರ್ತಾ ಭಾರತಿ : 23 Mar, 2020
ಡಾ. ಜಗನ್ನಾಥ ಕೆ. ಡಾಂಗೆ ಭವ್ಯಾ. ಆರ್.

ಈ ಮೇಲಿನ ಕೋಷ್ಟಕದಲ್ಲಿರುವ ಪರಿಸ್ಥಿತಿಯನ್ನು ಗಮನಿಸಿದರೆ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರ ಜೀವನ ಚಿಂತಾಜನಕವಾಗಿ ಗೋಚರಿಸುತ್ತಿದೆ.

ಪ್ರಪಂಚದಾದ್ಯಂತ ಯಾವ ಮಾಧ್ಯಮಗಳಲ್ಲಿ ನೋಡಿದರೂ ಮನುಕುಲವನ್ನು ನರಳಿಸಿ ಬಲಿ ತೆಗೆದುಕೊಳ್ಳುತ್ತಿರುವ ಕೊರೋನ ವೈರಸ್‌ನದೇ ಸುದ್ದಿ ಬಿತ್ತರವಾಗುತ್ತಿದೆ. ಮನುಷ್ಯರಿಲ್ಲದ ಬೀದಿಗಳು ಮತ್ತು ನಗರಗಳಿದ್ದರೂ ಅಲ್ಲಿಯೂ ಮನುಷ್ಯರು ಮುಖಗವಸುಗಳನ್ನು ಹಾಕಿಕೊಂಡು ಓಡಾಡುತ್ತಿರುವುದು ಸರ್ವೇ ಸಾಮಾನ್ಯವಾದ ಸಂಗತಿಯಾಗಿ ಬಿಟ್ಟಿದೆ. ಮಕ್ಕಳಿಂದ ವೃದ್ಧರವರೆಗೂ ಕೊರೋನದ ಬಗ್ಗೆಯೇ ಚರ್ಚೆ ನೆಡೆಯುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಪತ್ರಗಳು, ಪ್ರಕಟನೆಗಳು, ಅಂಗಡಿ-ಮುಂಗಟ್ಟುಗಳು ಮುಚ್ಚಿರುವುದು ಮತ್ತು ಜನತಾ ಕರ್ಫ್ಯೂನಂತಹ ಕಾರ್ಯಕ್ರಮಗಳು ಕೊರೋನ ಒಂದು ಭಯಂಕರ ವೈರಸ್ ಎಂದು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ವಾತಾವರಣ ನಿರ್ಮಿಸಿದಂತಾಗಿದೆ. ಕೊರೋನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಸರಕಾರವು ದೇಶದ ಜನರ ಒಳಿತಿಗಾಗಿ ಹೊಸ-ಹೊಸ ಯೋಜನೆಗಳನ್ನು ರೂಪಿಸುವ ಪ್ರಯತ್ನದಲ್ಲಿದೆ. ಜನಸಾಮಾನ್ಯರ ಬದುಕಿಗೆ ಮತ್ತು ಭಾರತದ ಆರ್ಥಿಕ ವ್ಯವಸ್ಥೆಗೆ ಕೊರೋನದಿಂದಾಗಿ ಪರಿತಪಿಸುವಂತಾಗಿದೆ. ಕೊರೋನ ವೈರಸ್ ಸಹಜವಾಗಿ ಬರುವ ನೆಗಡಿ, ಕೆಮ್ಮು, ಶೀತ, ಜ್ವರದ ಲಕ್ಷಣಗಳೊಂದಿಗಿದ್ದು, ಈ ವೈರಸ್‌ನ ಸೋಂಕಿತರು ಸೀನಿದಾಗ, ಕೆಮ್ಮಿದಾಗ ಬರುವ ಸಣ್ಣ ಹನಿಗಳನ್ನು ಮುಟ್ಟಿದ್ದರೆ ಅಥವಾ ತಗಲಿದರೆ ಸಾಕು ವೈರಸ್ ಬೇರೆಯವರ ಕೈಗಳ ಮೂಲಕ ಅವರ ಕಣ್ಣು, ಬಾಯಿ ಮತ್ತು ಮೂಗನ್ನು ಸ್ಪರ್ಶಿಸಿದಲ್ಲಿ ದೇಹವನ್ನು ಪ್ರವೇಶಿಸಿ ಅವರನ್ನು ಸೋಂಕಿತರನ್ನಾಗಿ ಮಾಡುತ್ತದೆ. ಯಾರಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆ ಇರುತ್ತದೆಯೋ ಅಂತಹವರಲ್ಲಿ ಕೊರೋನ ಬೇಗ ತಗಲಿ ಬಲಿ ತೆಗೆದುಕೊಳ್ಳುತ್ತದೆ. ಹೆಚ್ಚಾಗಿ ಕೊರೋನವು 8 ವರ್ಷದೊಳಗಿನ ಮಕ್ಕಳಲ್ಲಿ ಹಾಗೂ 60 ವರ್ಷದ ವೃದ್ಧರಲ್ಲಿ ಈ ಸೊಂಕು ಕಾಣಿಸಿಕೊಳ್ಳತ್ತದೆ.

 ಯಾವುದೇ ಧರ್ಮ, ಜಾತಿ, ಮತ, ಪ್ರಾಂತವನ್ನು ಪರಿಗಣಿಸದೇ ಎಲ್ಲರನ್ನೂ ಸಮಾನವಾಗಿ ಕಾಡಿದ ಕೋವಿಡ್-19 ಮೊದಲು ಚೀನಾದಲ್ಲಿ ಕಾಣಿಸಿಕೊಂಡು ಇಂದು ಇಡೀ ವಿಶ್ವವನ್ನೇ (169 ದೇಶಗಳಲ್ಲಿ) ನರಳುವಂತೆ ಮಾಡಿ ದಿನದಿಂದ ದಿನಕ್ಕೆ ಮನುಷ್ಯರನ್ನು ಬಲಿ ತೆಗೆದುಕೊಳ್ಳುವಂತಾಗಿದೆ. ಜಾನ್‌ಹಾಕಿನ್ಸ್ ವಿಶ್ವವಿದ್ಯಾನಿಲಯದ ವರದಿಯ ಪ್ರಕಾರ ಈ ಕಳಕಂಡ ಅಂಕಿ ಅಂಶಗಳು ಕೋವಿಡ್-19 ಪ್ರಪಂಚದಲ್ಲಿ ತನ್ನ ಆಧಿಪತ್ಯವನ್ನು ಹೇಗೆ ಸಾಧಿಸುತ್ತಿದೆ ಎಂಬುದನ್ನು ಹಾಗೂ ಈ ವೈರಸ್‌ಗೆ ಬಲಿಯಾದವರ ಸಂಖ್ಯೆಯನ್ನು ಸೂಚಿಸುತ್ತಿದೆ.

ಮೇಲಿನ ಅಂಕಿ ಅಂಶಗಳನ್ನು ನೋಡಿದರೆ ಕೊರೋನ ವೈರಸ್ ಪ್ರತಿವಾರದಿಂದ ವಾರಕ್ಕೆ ಮಿತಿಮೀರಿ ಹರಡುತ್ತಾ ಯಾವ ಪರಿಮಿತಿಗೂ ಸಿಗದೆ ಇಡೀ ಪ್ರಪಂಚವನ್ನೇ ವ್ಯಾಪಿಸಲು ಹೊರಟಿದೆ. ಭಾರತಕ್ಕೆ ನಾಲ್ಕನೇ ವಾರ ಮಹತ್ತರವಾದ ಸಮಯವಾಗಿದೆ, ಈ ವಾರದಲ್ಲಿ ಪ್ರಕರಣಗಳು ಕಡಿಮೆಯಾದರೆ ನಾವು ಇದರಿಂದ ಹೊರಬಂದಂತೆ (ಈವತ್ತಿನ ವರದಿ ಪ್ರಕಾರ 400 ಪ್ರಕರಣಗಳು).
 ಈ ವೈರಸ್ ಬಂದಾಗಿನಿಂದ ಒಂದೆಡೆ ಜನರ ಸಾವು-ನೋವುಗಳ ಭೀತಿ ಹೆಚ್ಚಾಗುತ್ತಿದ್ದು, ಏಕಾಏಕಿ ಅಂಗಡಿ-ಮುಂಗಟ್ಟುಗಳು, ವ್ಯಾಪಾರ ಸ್ಥಗಿತವಾದರೆ, ದೇಶದ 27 ಕೋಟಿ ಬಡತನ ರೇಖೆಗಿಂತ ಕೆಳಗಿರುವ ಸಾಮಾನ್ಯ ಜನರಿಗೆ ಇಂತಹ ಪರಿಸ್ಥಿತಿ ಕಷ್ಟ-ಸಾಧ್ಯ. ಏಕೆಂದರೆ ತಮ್ಮ ದಿನನಿತ್ಯದ ಕೆಲಸಗಳ ಮೇಲೆಯೇ ಅವರ ಹೊಟ್ಟೆ ತುಂಬುವುದು. ಅವರನ್ನು ಆಶ್ರಯಿಸಿ ಮನೆಯ ಕುಟುಂಬದವರು ಜೀವನ ನಡೆಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಹಾಗಾಗಿ ಕೇಂದ್ರ ಸರಕಾರ ಪೂರಕವಾಗಿ ಅನುದಾನ ನೀಡಿ ಕಾರ್ಯನಿರ್ವಹಿಸಬೇಕಾಗಿದೆ. ಕರ್ನಾಟಕ ರಾಜ್ಯದಲ್ಲಿರುವ 1.32 ಕೋಟಿ ಸಂಘಟಿತ ಕಾರ್ಮಿಕರಿಗೆ ಮತ್ತು ಬಡವರಿಗೆ ಕೇರಳ ಸರಕಾರದ ಮಾದರಿಯಲ್ಲಿ ರಾಜ್ಯ ಸರಕಾರವು ಸುಮಾರು 3,000 ಕೋಟಿ ರೂ. ಪರಿಹಾರ ಯೋಜನೆಯನ್ನು ರೂಪಿಸಬೇಕಿದೆ. ಇದರಲ್ಲಿ, ಬಡ ಕುಟುಂಬಗಳಿಗೆ ಪಿಂಚಣಿ ವ್ಯವಸ್ಥೆ, ಕಡಿಮೆ ದರದಲ್ಲಿ ಊಟ-ತಿಂಡಿ ವ್ಯವಸ್ಥೆ. ಆರೋಗ್ಯ ತಪಾಸಣೆ ಶಿಬಿರಗಳು ಮತ್ತು ಉಚಿತವಾಗಿ ಮುಖಗವಸುಗಳನ್ನು, ಔಷಧಿಗಳನ್ನು ಸರಕಾರವು ಒದಗಿಸಬೇಕು. ಸರಕಾರವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಗಣಿಸಿ ಅವರಿಗೆ ಅನುಕೂಲಗಳನ್ನು ಮಾಡಿಕೊಡಬೇಕಾಗಿದೆ.

ಸರಕಾರವು ಕೊರೋನ ವೈರಸ್‌ನಬಗ್ಗೆ ಮಾಹಿತಿ ಮತ್ತು ಅರಿವು ಮೂಡಿಸುವ ಮಾಹಿತಿಯನ್ನು ದೇಶದ ಎಲ್ಲಾ ಮೊಬೈಲ್‌ಗಳಿಗೆ ಅಳವಡಿಸಲಾಗಿದೆ. ಇಂತಹ ಆಲೋಚನೆಗಳು ಶ್ಲಾಘನೀಯವಾಗಿದೆ ಹಾಗೂ ನಮ್ಮ ಸಂವಿಧಾನದ ವಿಧಿಗಳು, ದೇಶದ ಸರ್ವತೋಮುಖದ ಬೆಳವಣಿಗೆಗೆ ಬೇಕಾದ ಮಾಹಿತಿಗಳನ್ನು ಇದೇ ನಿಟ್ಟಿನಲ್ಲಿ ನೀಡಿದ್ದೇ ಆದರೆ ಸಮಾಜದಲ್ಲಿ ಅಪರಾಧಗಳು ಕಡಿಮೆಯಾಗುತ್ತಿದ್ದವು. ಇಂತಹ ಸಂದರ್ಭಗಳಲ್ಲಿ ಜನನಾಯಕರು ನಮಗೂ ಇದಕ್ಕೂ ಸಂಭಂಧವಿಲ್ಲ ಎನ್ನುವಂತೆ ವರ್ತಿಸದೆ ಸ್ವಯಂ ಸೇವಕರಾಗಿ ಅವರವರ ಕ್ಷೇತ್ರದ ಹಳ್ಳಿಗಳಿಗೆ, ಆರೋಗ್ಯ ಕೇಂದ್ರಗಳಿಗೆ ಹಾಗೂ ಸೋಂಕಿತರಿಗೆ ಬೇಕಾದ ಸೌಲಭ್ಯಗಳನ್ನು ಕೊಡುವುದರ ಜೊತೆಗೆ ದಿನಗೂಲಿಯನ್ನೇ ಆಧರಿಸಿ ಬದುಕುತ್ತಿರುವ ಜನರಿಗೆ ಕನಿಷ್ಠ ಪಕ್ಷ ಊಟದ ವ್ಯವಸ್ಥೆಯನ್ನು ಮಾಡಬೇಕಾಗಿದೆ.

ಮಾಧ್ಯಮಗಳು ಕೊರೋನ ವೈರಸ್‌ನ ಬಗ್ಗೆ ಹೆಚ್ಚು-ಹೆಚ್ಚು ಜಾಗೃತಿ ಜನರಲ್ಲಿ ಮೂಡಿಸುತ್ತಿವೆ, ಇದರ ಬೆನ್ನಲ್ಲೇ ಸರಿಯಾದ ಮಾಹಿತಿಗಳನ್ನು ಮತ್ತು ವೈಜ್ಞಾನಿಕ ಪರಿಹಾರಗಳನ್ನು ನೀಡಿ ಜನರಲ್ಲಿ ಭಯದ ವಾತಾವರಣ ಮೂಡಿಸದೇ, ಗೊಂದಲಗಳನ್ನು ದೂರಮಾಡಿ ಅರಿವು ಮೂಡಿಸಬೇಕು.  ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಸಹಾಯಕ ಆರೋಗ್ಯ ಸಚಿವ ಅಶ್ವಿನಿ ಚೌಬೆಯವರು ಬಿಸಿಲಿನಲ್ಲಿ ಕುಳಿತು ಕೊರೋನ ದೂರವಿಡಿ ಎಂದು ಬಿಟ್ಟಿ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಈ ಹಿಂದೆ ಇವರು ಗೋ ಮೂತ್ರವನ್ನು ಸೇವಿಸಿದರೆ ಕ್ಯಾನ್ಸರ್‌ನ್ನು ಗುಣಪಡಿಸಬಹುದೆಂದು ಹೇಳಿಕೆ ನೀಡಿ ಜನಪ್ರಿಯತೆಯನ್ನು ಗಳಿಸಿದ್ದರು. ಸಾಂವಿಧಾನಿಕ ಮೌಲ್ಯಗಳನ್ನು ಪರಿಪಾಲಿಸುವುದಾಗಿ ಪ್ರಮಾಣ ಮಾಡಿ ಅಂತಹ ಜವಾಬ್ದಾರಿ ಸ್ಥಾನದಲ್ಲಿದ್ದು ಅಶಿಕ್ಷಕರಂತೆ ಮಾಧ್ಯಮಗಳಲ್ಲಿ ಹೇಳಿಕೆಯನ್ನು ಕೊಡುವುದು, ವೌಢ್ಯತೆಯನ್ನು ಬೆಳೆಸುವುದು ಅವರ ಬೇಜವಾಬ್ದಾರಿಯನ್ನು ತೋರಿಸುತ್ತಿದೆ. ಕೈಗೆ ಮಂತ್ರಿಸಿದ ತಾಯತ ಕಟ್ಟಿಕೊಳ್ಳುವುದರಿಂದ ಕೊರೋನ ವೈರಸ್‌ನ್ನು ತಡೆಗಟ್ಟಬಹುದೆಂದು ಉತ್ತರ ಪ್ರದೇಶದ ಹಕೀಮ್‌ರೊಬ್ಬರು ಹೇಳಿದ್ದಾರೆ. ಹಾಗಾದರೆ ವೈದ್ಯರಿಗೆ ಕೆಲಸವೇ ಇಲ್ಲದಂತಾಯಿತಲ್ಲ. ಇಂತಹ ಹೇಳಿಕೆ ಆಚರಣೆಗಳು ಮತ್ತು ಮೂಢನಂಬಿಕೆಗಳಿಗೆ ಎಡೆಮಾಡಿ ಕೊಡುವುದಲ್ಲದೆ ಈಗಿನ ಭಯದ ವಾತಾವರಣದಲ್ಲಿ ಜನ ಮರಳೋ ಜಾತ್ರೆ ಮರಳೋ ಎಂಬಂತೆ ಎಲ್ಲರೂ ಸೋಂಕಿನಿಂದ ಹೊರಬರಲು ಮೂಢನಂಬಿಕೆಗಳನ್ನು ಪ್ರೇರೇಪಿಸಿದಂತಾಗುತ್ತಿದೆ. ಆದ್ದರಿಂದ ಸರಕಾರವು ಇಂತಹುಗಳಿಗೆ ಪ್ರೋತ್ಸಾಹ ಮಾಡದೆ ವೈಜ್ಞಾನಿಕವಾಗಿ ಕೊರೋನ ವೈರಸ್‌ಗೆ ಔಷಧಿಯನ್ನು ಕಂಡು ಹಿಡಿದು, ತಡೆಗಟ್ಟುವ ಕ್ರಮವನ್ನು ಸರಳವಾಗಿ ತಿಳಿಸಿ ಹಾಗೂ ಇತ್ಯಾದಿ ಸೌಲಭ್ಯಗಳನ್ನು ಜನರಿಗೆ ಒದಗಿಸಿ ಜೀವರಕ್ಷಣೆ ಮಾಡಬೇಕಾಗಿದೆ. ಈ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ಕಾರ್ಯವೂ ಮಹತ್ತರವಾಗಿದೆ.

ಮೇಲಿನ ಅಂಕಿ ಅಂಶಗಳು, ಪ್ರಸ್ತುತ ಜನಸಾಮಾನ್ಯರ ಜೀವನ, ಜನನಾಯಕರ ಚಿಂತನೆಯ ಹೇಳಿಕೆಗಳು, ಸರಕಾರದ ನಿಲುವುಗಳು, ಮಾಧ್ಯಮಗಳ ಕಾರ್ಯವೈಖರಿ ಎಲ್ಲವೂ ಒಂದು ಸ್ವರೂಪ ಪಡೆದು ಪ್ರಪಂಚದಿಂದ ಕೊರೋನ ವೈರಸ್‌ನ್ನು ಹೊಡೆದಟ್ಟುವ ದಾರಿಯಲ್ಲಿದ್ದೇವೆ. ಮನುಷ್ಯನಿಗೆ ವೈರಸ್ ಬಂದರೆ ಎಷ್ಟೇ ಶ್ರೀಮಂತನಾಗಿದ್ದರೂ ಬದುಕಲಾಗುತ್ತಿಲ್ಲ. ಮಾನವನ ಜೀವ ಮುಖ್ಯವಾದದ್ದು ಹಣ, ಅಧಿಕಾರ, ಆಸ್ತಿಯಲ್ಲ ಎಂಬ ಮೌಲ್ಯಯುತವಾದ ಸಂದೇಶವನ್ನು ಈ ವೈರಸ್ ನೀಡುತ್ತಿದೆ. ಯಾವುದೇ ಧರ್ಮ, ಜಾತಿ, ಮತ, ಪ್ರಾಂತವನ್ನು ಪರಿಗಣಿಸದೇ ಇಡೀ ಪ್ರಪಂಚದ ಜನರು ಒಂದೇ ಎಂಬ ಉದ್ದೇಶದಿಂದ ಎಲ್ಲರ ಏಳಿಗೆಗಾಗಿ ಎಲ್ಲಾ ದೇಶಗಳು ಒಂದಾಗಿ ದುಡಿಯುತ್ತಾ ಮನುಷ್ಯ-ಮನುಷ್ಯನನ್ನು ಪ್ರೀತಿಸಿ ಗೌರವಿಸಬೇಕು ಎಂಬ ಮನೋಭಾವನೆಯನ್ನು ಹೊಂದುವಂತಾಗುವುದೇ ಮನುಕುಲಕ್ಕೆ ಪಾಠವಾಗಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)