varthabharthi

ನಿಮ್ಮ ಅಂಕಣ

ದಕ್ಷಿಣ ಕನ್ನಡದ ಸಂಘಸಂಸ್ಥೆಗಳು ಏನು ಮಾಡಬಹುದು ?

ಕೊರೋನ: ನಾವಿನ್ನೂ ಸಜ್ಜುಗೊಂಡಿಲ್ಲ..!

ವಾರ್ತಾ ಭಾರತಿ : 24 Mar, 2020
ರಶೀದ್ ವಿಟ್ಲ

ಕೊರೋನ ವೈರಸ್ (COVID 19) ವಿಶ್ವವ್ಯಾಪಿ ಆವರಿಸಿದೆ. ಸಾವಿನ ಸಂಖ್ಯೆ ದಿನನಿತ್ಯ ಸಾವಿರ ಸಂಖ್ಯೆಯಲ್ಲಿ ಏರುತ್ತಿದೆ. ವೈರಸ್ ಪೀಡಿತರ ಸಂಖ್ಯೆ ದಿನೇದಿನೇ ಅವ್ಯಾಹತವಾಗಿ ಬೆಳೆಯುತ್ತಿದೆ. ಭಾರತದಲ್ಲಿ ಮೊದಲ ವೈರಸ್ ಆಗಮನವಾದಾಗ ನಾವು ದಂಗಾಗಲಿಲ್ಲ. ನಂತರ ಏರುತ್ತಾ ಹೋಯ್ತು. ಅಧಿಕೃತ ಸಂಖ್ಯೆ ಮೂರಂಕೆಯಲ್ಲಿದ್ದರೂ ಕೆಲವೇ ಕ್ಷಣಗಳಲ್ಲಿ ಸಹಸ್ರ ಸಹಸ್ರ ಸಂಖ್ಯೆ ತಲುಪುವುದರಲ್ಲಿ ಸಂಶಯವಿಲ್ಲ.

ದಕ್ಷಿಣ ಕನ್ನಡಿಗರು ವಿದ್ಯಾವಂತರು, ಬುದ್ಧಿವಂತರು ಎಂಬ ಹೆಗ್ಗಳಿಕೆ ಇದೆ. ಆದರೆ ನಮ್ಮ ಅತಿಯಾದ ಬುದ್ಧಿಯಿಂದಲೇ ಕೊರೋನ ವೈರಸ್ ಅತೀ ವೇಗವಾಗಿ ಹರಡುವುದರಲ್ಲಿ ಸಂಶಯವಿಲ್ಲ. ನಮ್ಮ ಲೈಫ್ ಸ್ಟೈಲೇ ಆ ರೀತಿ ಇದೆ. ನಾವು ಇಟಲಿ ತೋರಿದ ಅದೇ ಅಹಂಭಾವವನ್ನು ತೋರಿಸುತ್ತಿದ್ದೇವೆಯೇನೋ ಎಂಬ ಸಂಶಯವಿದೆ. ಅದಕ್ಕೆ ಉದಾಹರಣೆ ನಮ್ಮ ಮಾರುಕಟ್ಟೆಯಲ್ಲಿರುವ ಜನಸಂದಣಿ. ಸರಕಾರ ಪದೇಪದೇ ಎಚ್ಚರಿಕೆ ಕೊಟ್ಟು ಮನೆಯಲ್ಲಿರಿ ಎಂದರೂ ನಾವು ಕ್ಯಾರೇ ಮಾಡುತ್ತಿಲ್ಲ. ಈ ರೋಗ ತಡೆಯಲು ಅತ್ಯಂತ ದೊಡ್ಡ ಔಷಧಿ ಏನೆಂದರೆ ನಾವು ಮನೆಯೊಳಗೇ ಇರಬೇಕೆಂಬ ನಿಯಮವನ್ನು ಪಾಲಿಸುತ್ತಿಲ್ಲ.

ಇನ್ನು ಈ ಸೋಂಕಿನ ಜಾಗೃತಿಗಾಗಿ ಕರ್ನಾಟಕ ಸರಕಾರ ಲಾಕ್'ಡೌನ್ ಮಾಡಿದ್ದಂತೂ ನಿಜ. ಆದರೆ ಇತರೇ ವ್ಯವಸ್ಥೆ ಮಾಡುವತ್ತ ತುರ್ತು ಗಮನಹರಿಸಬೇಕಿದೆ. ಬಡವರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತ ಅಕ್ಕಿಯನ್ನು ಹೆಚ್ಚುವರಿ ಕೊಟ್ಟ ತಕ್ಷಣ ಹೊಣೆಗಾರಿಕೆ ಮುಗಿಯದು. ಈ ರೋಗ ಖಂಡಿತಾ ಸಹಸ್ರ ಸಹಸ್ರ ಸಂಖ್ಯೆ ದಾಟುವುದರಲ್ಲಿ ಸಂಶಯವಿಲ್ಲ. ಇಂತಹ ಸಂದರ್ಭದಲ್ಲಿ ಮಾಡಬೇಕಾದ ಕೆಲಸಕ್ಕೆ ಈಗಲೇ ಪೂರ್ವ ಸಿದ್ಧತೆ ಮಾಡಬೇಕಾದ ತುರ್ತು ಅವಶ್ಯಕತೆಯಿದೆ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆ ಕೊರೋನ ವೈರಸ್ ಪೀಡಿತರಿಂದ ತುಂಬಲು ಪ್ರಾರಂಭವಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಸಂಪೂರ್ಣವಾಗಿ ಇರುವುದು ವಾರ್ಡ್'ಗಳು. ಅಂತಹ ವಾರ್ಡುಗಳನ್ನೇ ಕೋಣೆಗಳನ್ನಾಗಿ ಮಾರ್ಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಕೊರೋನಾ ಪೀಡಿತರಿಗೆ ಮತ್ತು ಸಂಶಯಿತರಿಗೆ ಅವಶ್ಯಕವಾದುದು ಕ್ವಾರೆಂಟೈನ್ (ದಿಗ್ಬಂಧನ) ಕೋಣೆಗಳು ಮತ್ತು ಐಸೊಲೇಶನ್ (ಪ್ರತ್ಯೇಕ ಕೊಠಡಿ) ವಾರ್ಡುಗಳು. ಮುಂದಿನ ದಿನಗಳಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಅದರ ಕೊರತೆ ಉದ್ಭವಿಸದೇ ಇರದು. ಜೊತೆಗೆ ಐಸಿಯು, ವೆಂಟಿಲೇಟರ್ ಸಮಸ್ಯೆ ಕೂಡಾ ಬರಬಹುದು. ಖಾಸಗಿ ಆಸ್ಪತ್ರೆಗಳ ಪ್ರತ್ಯೇಕ ವಾರ್ಡುಗಳು ಕೂಡಾ ತುಂಬಬಹುದು. ಇದನ್ನೆಲ್ಲಾ ಈಗಲೇ ಯೋಚಿಸಿ ಪರಿಹಾರ ಕಂಡುಕೊಳ್ಳಬೇಕಾದ ತುರ್ತು ಅನಿವಾರ್ಯತೆ ಇದೆ.

ನಮ್ಮ ಜಿಲ್ಲೆ ಲಾಕ್'ಡೌನ್ ಆದ ಕಾರಣ ನಮ್ಮಲ್ಲಿರುವ ವಿದ್ಯಾಸಂಸ್ಥೆಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ. ನಮ್ಮ ಜಿಲ್ಲೆಯಲ್ಲಿ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ನೆಲ್ಯಾಡಿ, ಮಂಗಳೂರು, ಮೂಡಬಿದಿರೆ, ಉಳ್ಳಾಲ ಸೇರಿದಂತೆ 8 ತಾಲೂಕುಗಳಿವೆ. ಪ್ರತಿ ತಾಲೂಕುಗಳಲ್ಲಿ ಕನಿಷ್ಟ ಪಕ್ಷ ತಲಾ ಹತ್ತತ್ತು ಸುಸಜ್ಜಿತ ಸರಕಾರಿ ಶಾಲೆಗಳನ್ನು ಕೊರೋನಾ ವೈರಸ್ ಪೀಡಿತರ ಚಿಕಿತ್ಸಾ ಕೇಂದ್ರಗಳನ್ನಾಗಿ ಮಾರ್ಪಡಿಸಬಹುದು. ಅಲ್ಲಿಗೆ ಬೇಕಾದ ಮೆಡಿಸಿನ್, ಇತರ ಸಲಕರಣೆಗಳು, ಜನರೇಟರ್ ಮೊದಲಾದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು. ಹಲವು ಸುಸಜ್ಜಿತ ಮದುವೆ ಹಾಲ್'ಗಳೂ ನಮ್ಮಲ್ಲಿವೆ. ಧಾರ್ಮಿಕ ಕೇಂದ್ರಗಳ ಸಮುದಾಯ ಭವನಗಳಿವೆ. ಅದನ್ನೂ ಕ್ವಾರಂಟೈನ್/ಐಸೊಲೇಶನ್ ಕೇಂದ್ರವಾಗಿಸಬಹುದು. ನಮ್ಮ ಜಿಲ್ಲೆಯಲ್ಲಿ ಮಾನವೀಯ ಸೇವೆಗೈಯ್ಯುವ ಎಷ್ಟೋ ಸಂಘಸಂಸ್ಥೆಗಳಿವೆ. ಅವರಿಂದ ಆರ್ಥಿಕ ಸಹಕಾರದೊಂದಿಗೆ ಸ್ವಯಂಸೇವಕರನ್ನೂ ಪಡೆಯಬಹುದು. ಇದು ಅತ್ಯಂತ ಜರೂರಾಗಿ ಆಗಬೇಕಾದಂತಹ ಕೆಲಸ. ಇದಕ್ಕೆ ಸೇವಾಸಂಸ್ಥೆಗಳೂ ಮುಂದೆ ಬರಬೇಕು.
ಪ್ರಸ್ತುತ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಾಸ್ಕ್ ಕೊರತೆ ವಿಪರೀತವಾಗಿದೆ. ನಮ್ಮ ಜಿಲ್ಲೆಯಲ್ಲಿ ಹಲವಾರು ಟೈಲರಿಂಗ್ ಇಂಡಸ್ಟ್ರಿಗಳಿವೆ. ಹೊಲಿಗೆ ಕಾರ್ಖಾನೆಗಳಿವೆ. ಅಂತಹವರಲ್ಲಿ ವಿನಂತಿಸಿದರೆ ನಮಗೆ ಬೇಕಾದಷ್ಟು ಮಾಸ್ಕ್ ಇಲ್ಲೇ ಉತ್ಪಾದಿಸಬಹುದು. ಸರಕಾರದ ಮಾಸ್ಕನ್ನು ಕಾಯುವ ಅಗತ್ಯತೆ ಎದುರಾಗದು.

ಜಿಲ್ಲೆ ಲಾಕೌಟ್ ಆದ ಕಾರಣ ಹೊರರಾಜ್ಯಗಳಿಂದ ಹೊರ ಜಿಲ್ಲೆಗಳಿಂದ ಬಂದಿರುವ ಹಲವಾರು ದಿನಗೂಲಿ ಕಾರ್ಮಿಕರು ಹಣವೂ ಇಲ್ಲದೇ, ಊಟವೂ ಇಲ್ಲದೇ ಈಗಾಗಲೇ ಬೀದಿಗೆ ಬಂದಿದ್ದಾರೆ. ಇವರ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಂಭವವಿದೆ. ಇವರಿಗೆ ಮಂಗಳೂರಿನ ಇಂದಿರಾ ಕ್ಯಾಂಟೀನಲ್ಲಿ 3 ಹೊತ್ತಿನ ಉಚಿತ ಊಟದ ಪಾರ್ಸೆಲ್ ವ್ಯವಸ್ಥೆಯನ್ನು ಸರಕಾರ ಕೈಗೊಳ್ಳಬೇಕು. ಖಾಸಗಿ ಸಂಘಸಂಸ್ಥೆಗಳು ಕೂಡಾ ಇಂತಹ ಅಶಕ್ತರತ್ತ ಕಾರುಣ್ಯದ ನೋಟ ಬೀರಬೇಕು. ಅಲೆಮಾರಿ ಪಶು-ಪಕ್ಷಿಗಳತ್ತಲೂ ನಮ್ಮ ದೃಷ್ಟಿ ಹಾಯಿಸುವ ಅಗತ್ಯವಿದೆ.

ಕೊರೋನಾ ವೈರಸ್ ಜಾಗೃತಿಯು ಹಳ್ಳಿ ಗ್ರಾಮಗಳತ್ತ ತಲುಪಿಲ್ಲ. ಗಂಭೀರತೆಯ ಅರಿವಾಗಿಲ್ಲ. ಅಂತಹವರಿಗೆ ಸಮರ್ಪಕವಾದ ಮಾಹಿತಿ ನೀಡುವ ಅಗತ್ಯವಿದೆ. ಜಿಲ್ಲೆಯಲ್ಲಿರುವ ಆಶಾ ಕಾರ್ಯಕರ್ತರನ್ನು ಜಾಗೃತಿ ಮೂಡಿಸಲು ಉಪಯೋಗಿಸಬೇಕು. ಗ್ರಾಮೀಣ ಪ್ರದೇಶದ ಸಂಘಸಂಸ್ಥೆಗಳು ಕೂಡಾ ಮೈಕ್ ಎನೌನ್ಸ್'ಮೆಂಟ್ ಅಥವಾ ಮನೆಮನೆ ಕರಪತ್ರ ಹಂಚಿ ವಿಷಯದ ಗಂಭೀರತೆಯನ್ನು ಮನದಟ್ಟು ಮಾಡಬೇಕು. ಗ್ರಾಮೀಣ ಪ್ರದೇಶದ ಹಲವು ಬಡ/ಅಶಕ್ತರ ಮನೆಗಳು ಒಂದೊತ್ತಿನ ತುತ್ತಿಗಾಗಿ ತತ್ವಾರ ಪಡುವ ಸನ್ನಿವೇಶ ಎದುರಾಗಿದೆ. ಅವರಿಗೆ ಬೇಕಾದಂತಹ ದಿನಸಿ, ತರಕಾರಿ ಸಾಮಗ್ರಿಯನ್ನು ವ್ಯವಸ್ಥೆಗೊಳಿಸುವ ತಂಡ ರೂಪುಗೊಳ್ಳಬೇಕು. ಇವೆಲ್ಲಾ ತುರ್ತಾಗಿ ಆಗದೇ ಇದ್ದರೆ ನಾವು ಮುಂದಿನ ದಿನಗಳಲ್ಲಿ ಗಂಭೀರ ಪರಿಸ್ಥಿತಿಯನ್ನು ಎದುರಿಸುವುದಂತೂ ಖಂಡಿತಾ. ಆದ್ದರಿಂದ ನಾವು ಜಾಗೃತರಾಗೋಣ. ಸಮಾಜವನ್ನು ಜಾಗೃತಿಗೊಳಿಸೋಣ. ಅಪಾಯವನ್ನು ತಪ್ಪಿಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)