varthabharthi


ವಿಶೇಷ-ವರದಿಗಳು

ಬಡವರಿಗೆ ಕೊರೋನ ಹಂಚುತ್ತಿರುವ ಭಾರತದ ಶ್ರೀಮಂತರು ಚಿಕಿತ್ಸೆಗೆ ಹಣ ಬಿಚ್ಚುತ್ತಿಲ್ಲ !

ವಾರ್ತಾ ಭಾರತಿ : 24 Mar, 2020

ಹೊಸದಿಲ್ಲಿ: ಕೊರೋನ ವೈರಸ್ ಇಡೀ ದೇಶವನ್ನೇ ಲಾಕ್ ಡೌನ್ ಸ್ಥಿತಿಯಲ್ಲಿರುವಂತೆ ಮಾಡಿದೆ. ಅಷ್ಟಕ್ಕೂ ಈ  ಮಾರಕ ಸೋಂಕು ಭಾರತಕ್ಕೆ ಪ್ರವೇಶಿಸಿದ್ದೇ ದೇಶದ ಶ್ರೀಮಂತರಿಂದ. ಅದು ಈಗ ಬಡವರನ್ನು ಆವರಿಸಲು ಸನ್ನದ್ಧವಾದಂತಿದೆ.

ಭಾರತದ ಮೊದಲ ಕೊರೋನ ಪ್ರಕರಣ ವುಹಾನ್‍ ನಿಂದ ಹಿಂದಿರುಗಿದ್ದ ಕೇರಳದ ವಿದ್ಯಾರ್ಥಿಯಾಗಿದ್ದರೆ, ತೀರಾ ಇತ್ತೀಚೆಗೆ ಇಂಗ್ಲೆಂಡಿನಿಂದ ಬಂದ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಕೊರೊನಾ ಪಾಸಿಟಿವ್ ಆಗಿದ್ದಾರೆ. ಆದರೆ ಅವರು ಅಜಾಗರೂಕತೆಯಿಂದ ಪಾರ್ಟಿಯನ್ನೂ ಆಯೋಜಿಸಿದ್ದು, ಅವರ ಸಂಪರ್ಕಕ್ಕೆ ಬಂದ ಹಲವು ಗಣ್ಯರು ಆತಂಕಕ್ಕೊಳಗಾಗಿ ಕ್ವಾರಂಟೈನ್‍ ಗೊಳಗಾಗಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಸೋಶಿಯಲ್ ಡಿಸ್ಟೆನ್ಸಿಂಗ್ ಕಾಪಾಡದ ಗಣ್ಯರ ವಿರುದ್ಧ ಚಕಾರವೆತ್ತಿಲ್ಲ.

ಅಷ್ಟೇ ಏಕೆ ಚೀನಾ ದೇಶ ಕೊರೋನ ಸೋಂಕಿನಿಂದ ತತ್ತರಿಸುತ್ತಿದ್ದ ಸಂದರ್ಭದಲ್ಲಿಯೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ತಂಡ ಫೆಬ್ರವರಿ ಅಂತ್ಯದ ವೇಳೆ ಭಾರತ ಪ್ರವಾಸಕ್ಕೆ ಆಗಮಿಸಿತ್ತು.

ಏನೇ ಇರಲಿ ಶ್ರೀಮಂತರಿಂದ ಭಾರತಕ್ಕೆ ತಗಲಿದ ಕೊರೋನ ಇದೀಗ ಬಡವರನ್ನು ಬಾಧಿಸುತ್ತಿದೆ. ಮಹಾರಾಷ್ಟ್ರದ ಮೊದಲ ಕೊರೋನ ಪಾಸಿಟಿವ್ ಕೇಸ್ ಮುಂಬೈಯ ಬಡ ಮನೆಕೆಲಸದಾಳು ಮಹಿಳೆಯದ್ದಾಗಿತ್ತು. ಇತ್ತೀಚೆಗೆ ಅಮೆರಿಕಾದಿಂದ ವಾಪಸಾಗಿದ್ದ ಮಾಲಕನನಿಂದ ಆಕೆಗೆ ಈ ಸೋಂಕು ತಗಲಿತ್ತು.

ಪಶ್ಚಿಮ ಬಂಗಾಳದಲ್ಲೂ ಐಎಎಸ್ ಅಧಿಕಾರಿಯೊಬ್ಬರ ಪುತ್ರ ಕೊರೋನ ಪರೀಕ್ಷೆಯನ್ನು ಆರಂಭದ ದಿನಗಳಲ್ಲಿ ತಪ್ಪಿಸಿಕೊಂಡರೂ ನಂತರ ಆತನ ವರದಿ ಪಾಸಿಟಿವ್ ಆಗಿತ್ತು. ಆದರೆ ಅಷ್ಟರೊಳಗಾಗಿ ಆತನ ತಾಯಿ ಹಲವಾರು ಅಧಿಕೃತ ಸಭೆಗಳಲ್ಲಿ ಭಾಗವಹಿಸಿಯಾಗಿತ್ತು.

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಜಾಕ್ ಮಾ ಈಗಾಗಲೇ ಲಕ್ಷಗಟ್ಟಲೆ ಫೇಸ್ ಮಾಸ್ಕ್ ಹಾಗೂ ಟೆಸ್ಟಿಂಗ್ ಕಿಟ್‍ ಗಳನ್ನು ಆಫ್ರಿಕಾ ಮತ್ತು ಏಷ್ಯಾ ದೇಶಗಳಿಗೆ ರವಾನಿಸಿದ್ದಾರೆ. ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಕೂಡ 100 ಮಿಲಿಯನ್ ಡಾಲರ್ ಧನಸಹಾಯ ಘೋಷಿಸಿದ್ದಾರೆ. ಪಾಪ್ ಗಾಯಕಿ ರಿಹಾನ್ನ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‍ ಗಳಿಗೆ 5 ಮಿಲಿಯನ್ ಡಾಲರ್ ನೀಡುವುದಾಗಿ ತಿಳಿಸಿದ್ದಾರೆ. ನೆಟ್‍ಫ್ಲಿಕ್ಸ್ 1000 ಮಿಲಿಯನ್ ಡಾಲರ್ ಪರಿಹಾರ ನಿಧಿ ಘೋಷಿಸಿದೆ.

ಆದರೆ ಭಾರತದ ಶ್ರೀಮಂತರು ತಮ್ಮ ಮನೆಗಳ ಬಾಲ್ಕನಿಗಳಲ್ಲಿ ನಿಂತು ಚಪ್ಪಾಳೆ ಹೊಡೆಯುವುದನ್ನು ಬಿಟ್ಟು ಏನನ್ನು ಮಾಡಿದ್ದಾರೆ?.

ಮಹೀಂದ್ರ ಗ್ರೂಪ್ ಆಧ್ಯಕ್ಷ ಆನಂದ್ ಮಹೀಂದ್ರ ಹೊರತಾಗಿ ಇಲ್ಲಿಯ ತನಕ ಭಾರತದ ಯಾವುದೇ ಶ್ರೀಮಂತ ಉದ್ಯಮಿ  ಸಹಾಯಹಸ್ತ ಚಾಚಲು ಮುಂದೆ ಬಾರದೇ ಇರುವುದು ವಿಪರ್ಯಾಸವೇ ಸರಿ.

ಕೃಪೆ: theprint.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)