varthabharthi

ಕರ್ನಾಟಕ

ಲಾಕ್ ಡೌನ್ ವೇಳೆ ಪೊಲೀಸ್ ಲಾಠಿಚಾರ್ಜ್ ಅಮಾನವೀಯ: ಮಾಜಿ ಸಿಎಂ ಸಿದ್ದರಾಮಯ್ಯ

ವಾರ್ತಾ ಭಾರತಿ : 24 Mar, 2020

ಬೆಂಗಳೂರು, ಮಾ.24: ಬಜೆಟ್ ಮೇಲಿನ ಚರ್ಚೆ ಅಪೂರ್ಣವಾಗಿದೆ. ಜೊತೆಗೆ ಬೇಡಿಕೆಗಳ ಮೇಲೆ ಚರ್ಚೆ ನಡೆದು ಸಂಬಂಧಿತ ಸಚಿವರು ಉತ್ತರ ನೀಡಬೇಕು. ಇದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕು. ಹಾಗಾಗಿ ಬಜೆಟ್‍ಗೆ ತಿದ್ದುಪಡಿ ಮಾಡಿ ಮುಂದಿನ 4 ತಿಂಗಳಿಗೆ ಅನ್ವಯವಾಗುವಂತೆ ಧನ ವಿನಿಯೋಗ ಮಸೂದೆಗೆ ಅಂಗೀಕಾರ ಪಡೆಯಲು ಸರಕಾರಕ್ಕೆ ಸಲಹೆ ನೀಡಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನ ರೋಗ ವ್ಯಾಪಕವಾಗಿ ಹರಡುತ್ತಿರುವ ಇಂತಹ ಸಮಯದಲ್ಲಿ ಸದನವನ್ನು ಇನ್ನೂ ಮೂರು, ನಾಲ್ಕು ದಿನ ನಡೆಸೋದು ಸರಿಯಲ್ಲ. ಮತ್ತೆ ಜೂನ್-ಜುಲೈ ತಿಂಗಳಿನಲ್ಲಿ ಅಧಿವೇಶನ ಕರೆದು ಬೇಡಿಕೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಬಜೆಟ್‍ಗೆ ಒಪ್ಪಿಗೆ ಕೊಡೋಣ ಎಂದು ಸಲಹೆ ನೀಡಿದರೆ ಇದನ್ನು ಒಪ್ಪಲು ಸರಕಾರ ಸಿದ್ಧವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಜೆಟ್ ಮೇಲೆ, ಬೇಡಿಕೆಗಳ ಮೇಲೆ ಚರ್ಚೆ ನಡೆಯದಿದ್ದರೂ ಪರವಾಗಿಲ್ಲ, ಎಲ್ಲ ಆರ್ಥಿಕ ಮಸೂದೆಗಳಿಗೆ ಒಪ್ಪಿಗೆ ನೀಡುತ್ತೇವೆ, ಅಧಿವೇಶನವನ್ನು ಇಂದೇ ಮುಂದೂಡಿ ಎಂದು ಸಲಹೆ ನೀಡಿದೆವು. ಸರಕಾರ ಇದನ್ನು ಕೂಡ ಒಪ್ಪಲು ತಯಾರಿಲ್ಲ. ಅವರು ಒಂದೆ ಸಲ ಪೂರ್ಣ ಬಜೆಟ್‍ಗೆ ಒಪ್ಪಿಗೆ ಪಡೆಯುವ ಇರಾದೆ ಹೊಂದಿದಂತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇಡೀ ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸುವಂತಹ ಹಲವು ತಿದ್ದುಪಡಿಗಳನ್ನು ತರಲು ರಾಜ್ಯ ಸರಕಾರ ಮುಂದಾಗಿದೆ. ನಾವು ಗಾಂಧೀಜಿಯವರ ಗ್ರಾಮ ಸ್ವರಾಜ್ಯದಲ್ಲಿ ನಂಬಿಕೆಯಿಟ್ಟವರು, ಅಧಿಕಾರ ವಿಕೇಂದ್ರೀಕರಣ ತತ್ವಕ್ಕೆ ಧಕ್ಕೆಯಾಗುವಂತಹ ಯಾವೊಂದು ತಿದ್ದುಪಡಿ, ಕಾಯ್ದೆಗಳಿಗೆ ನಾವೀಗ ಒಪ್ಪಿಗೆ ನೀಡಲು ಸಿದ್ಧರಿಲ್ಲ ಎಂದು ಅವರು ತಿಳಿಸಿದರು.

ಹಣಕಾಸು ಮಸೂದೆಗಳ ಮೇಲೆ ಚರ್ಚೆ ನಡೆಸದೆ ಅವುಗಳಿಗೆ ಒಪ್ಪಿಗೆ ಪಡೆಯುವುದು ಮತ್ತು ಸದನವನ್ನು ನಿನ್ನೆಗೆ ಮುಗಿಸುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿದರೂ ಕಾನೂನು ಸಚಿವ ಮಾಧುಸ್ವಾಮಿ ಒಪ್ಪಲು ಸಿದ್ಧರಿಲ್ಲ. ಇತ್ತ ಸ್ಪೀಕರ್, ಕಾನೂನು ಸಚಿವರು ಹೇಳಿದ್ದಕ್ಕೆಲ್ಲಾ ತಲೆಯಲ್ಲಾಡಿಸುತ್ತಾರೆ. ಹೀಗಾದರೆ ಸದನದ ನಿರ್ಣಯಕ್ಕೇನು ಬೆಲೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ವಿರೋಧ ಪಕ್ಷದವರ ಮಾತನ್ನು ಕೇಳುವ ಸೌಜನ್ಯವೆ ಇಲ್ಲದವರ ಜೊತೆ ಚರ್ಚೆ ಮಾಡುವುದು ವ್ಯರ್ಥ ಎಂಬ ಕಾರಣಕ್ಕೆ ನಮ್ಮ ಪಕ್ಷ ಸದನವನ್ನು ಬಹಿಷ್ಕರಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪನವರ ಹೇಳಿಕೆ ಅವರ ಮೂರ್ಖತನವನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಜೀವನಾವಶ್ಯಕ ವಸ್ತುಗಳಾದ ಹಣ್ಣು, ತರಕಾರಿ, ದಿನಸಿ ಸಾಮಾನುಗಳನ್ನು ಕೊಳ್ಳಲು ಮನೆಯಿಂದ ಹೊರ ಹೋದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವುದು ಅಮಾನವೀಯ ಮತ್ತು ಖಂಡನೀಯ. ಮತ್ತೆ ಇಂತಹ ಘಟನೆಗೆ ಆಸ್ಪದ ನೀಡದೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ತಿಳಿಸಿದರು.

ಕೊರೋನ ನಿಯಂತ್ರಣ ವಿಷಯದಲ್ಲಿ ಸರಕಾರ ತನ್ನ ಪ್ರತಿಷ್ಠೆಯನ್ನು ಬದಿಗೊತ್ತಿ, ಹಿರಿಯ ವೈದ್ಯರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪೊಲೀಸ್ ಇಲಾಖೆ ಕೂಡ ಸಂಯಮದಿಂದ ವರ್ತಿಸಲಿ. ಬಹುಮುಖ್ಯವಾಗಿ ಜನರು ಸಾಧ್ಯವಾದಷ್ಟು ಮಟ್ಟಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರಕಾರ ರೇಸ್ ಕ್ಲಬ್‍ಗೆ ಸಂಬಂಧಿಸಿದ ಮಸೂದೆಗೆ ಒಪ್ಪಿಗೆ ಪಡೆಯಲು ತೋರುವ ಕಾಳಜಿಯನ್ನು ಕೊರೋನ ರೋಗ ತಡೆಗಟ್ಟಲು ತೋರಲಿ. ಮೂರು ತಿಂಗಳು ರೇಸ್ ಕ್ಲಬ್ ಬಂದ್ ಆದರೆ ಯಾರ ಪ್ರಾಣವೂ ಹೋಗುವುದಿಲ್ಲ. ಸರಕಾರದ ಗಮನ ಸಂಪೂರ್ಣವಾಗಿ ರೋಗ ನಿರ್ಮೂಲನೆ ಕಡೆಗಿರಬೇಕೆ ಹೊರತು ರೇಸ್ ನಡೆಸುವುದರ ಮೇಲಲ್ಲ.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)