varthabharthi

ಕರಾವಳಿ

ಕುಂದಾಪುರ: ರಸ್ತೆಗಳಿದವರಿಗೆ ಪೊಲೀಸರಿಂದ ಖಡಕ್ ಎಚ್ಚರಿಕೆ

ವಾರ್ತಾ ಭಾರತಿ : 24 Mar, 2020

ಕುಂದಾಪುರ, ಮಾ. 24: ವಿಶ್ವದಾದ್ಯಂತ ಅಲ್ಲೋಲಕಲ್ಲೋಲ ಎಬ್ಬಿಸುತ್ತಿರುವ ನೋವೆಲ್ ಕೊರೋನ ವೈರಸ್‌ನ್ನು ನಿಯಂತ್ರಿಸಲು ಸರಕಾರ, ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಅನುಷ್ಠಾನಗೊಳ್ಳಿಸುತಿದ್ದರೂ, ಅವುಗಳನ್ನು ನಿರ್ಲಕ್ಷಿಸಿ ರಸ್ತೆಗಿಳಿದ ಕುಂದಾಪುರ ತಾಲೂಕಿನ ಜನತೆ ಪೊಲೀಸರು ಕಟುವಾದ ಎಚ್ಚರಿಕೆಯ ಮಾತುಗಳನ್ನು ಕೇಳುವಂತಾಯಿತು.

ರಾಜ್ಯ ಸರಕಾರ ನಿನ್ನೆಯಿಂದ ರಾಜ್ಯಾದ್ಯಂತ ಲಾಕ್‌ಡೌನ್‌ನ್ನು ಘೋಷಿಸಿದ್ದರೂ, ಜನರು ಇಂದು ತಮ್ಮ ತಮ್ಮ ವಾಹನಗಳಲ್ಲಿ ಆರಾಮವಾಗಿ ರಸ್ತೆಗಳಲ್ಲಿ ಸಂಚರಿಸುವುದನ್ನು ಕಂಡ ಕುಂದಾಪುರ ಪೊಲೀಸರು ಪ್ರಮುಖ ಸ್ಥಳಗಳಲ್ಲಿ ನಿಂತು ಬಂದ ಪ್ರತಿಯೊಂದು ವಾಹನವನ್ನು ನಿಲ್ಲಿಸಿ, ಅವರು ತೆರಳುತ್ತಿರುವ ಕಾರಣಗಳನ್ನು ವಿಚಾರಿಸಿ ಮುಂದಕ್ಕೆ ಚಲಿಸಲು ಅನುಮತಿ ನೀಡುತಿದ್ದರು.

ಹೆಚ್ಚಿನವರಿಗೆ ಎಚ್ಚರಿಕೆ ನೀಡಿ ಮನೆಗೆ ವಾಪಾಸು ಕಳುಹಿಸಿದ ಪೊಲೀಸರು, ಅವರಿಗೆ ಕೊರೋನ ವೈರಸ್‌ನ ಅಪಾಯದ ಕುರಿತು ವಿವರಿಸಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಕುರಿತು ಮಾಹಿತಿಗಳನ್ನೂ ನೀಡುತ್ತಿರುವುದು ಕಂಡು ಬಂತು. ಮಾಸ್ಕ್‌ಗಳನ್ನು ಧರಿಸದೇ ತೆರಳುತ್ತಿರು ವವರನ್ನು ನಿಲ್ಲಿಸಿ ಅವರಿಗೆ ಮಾಸ್ಕ್‌ನ ಮಹತ್ವವನ್ನು ವಿವರಿಸಿ ಧರಿಸುವಂತೆ ಉಪದೇಶಿಸುತಿದ್ದರು.

‘ಪೊಲೀಸರು ಜನರನ್ನು ನಿಲ್ಲಿಸಿ ಅವರಿಗೆ ಎಚ್ಚರಿಕೆ ನೀಡುತ್ತಿರುವುದು ಅವರಿಗೆ ಭಯ ಹುಟ್ಟಿಸಲು ಅಲ್ಲ. ಜನರ ಆರೋಗ್ಯದ ಬಗ್ಗೆ ಇರುವ ಕಾಳಜಿಯಿಂದ. ಇದನ್ನು ಜನರು ಅರ್ಥಮಾಡಿಕೊಂಡು ಸರಕಾರ, ವೈದ್ಯರು ಹೇಳುತ್ತಿರುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಇದಕ್ಕೆ ಜನರ ಸಹಕಾರವೂ ಬೇಕಾಗಿದೆ.’ ಎಂದು ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ತಿಳಿಸಿದರು.

ಪರದಾಡಿದ ಜನರು: ರಾಜ್ಯಾದ್ಯಂತ ಕೆಎಸ್ಸಾರ್ಟಿಸಿ ಬಸ್‌ಗಳು ಸೇರಿದಂತೆ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವುದರಿಂದ ಬೆಂಗಳೂರಿನಿಂದ ಸಣ್ಣ ಸಣ್ಣ ಟಿಟಿಗಳಲ್ಲಿ ಇಂದು ಮುಂಜಾನೆ ಹುಟ್ಟೂರಿಗೆ ಆಗಮಿಸಿದ ಕುಂದಾಪುರ ಹಾಗೂ ಬೈಂದೂರುಗಳ ವಿವಿಧ ಊರುಗಳ ಜನರು ನೀರು ಮತ್ತು ಆಹಾರಗಳಿಗೆ ಪರದಾಡುವಂತಾಯಿತು.

ಹೊಟೇಲ್‌ಗಳೆಲ್ಲವೂ ಮುಚ್ಚಿದ್ದು, ತೆರೆದಿದ್ದ ಇಂದಿರಾ ಕ್ಯಾಂಟೀನ್‌ಗೆ ಜನರು ನುಗ್ಗಿದ್ದರಿಂದ ಅಲ್ಲಿನ ತಿಂಡಿ ಬೇಗ ಖಾಲಿಯಾಗಿ ಅದು ಬಾಗಿಲು ಹಾಕುವಂತಾಯಿತು. ಬೆಂಗಳೂರಿನಿಂದ ಬಂದ ಟಿಟಿಗಳ ಚಾಲಕರು, ಸಿಬ್ಬಂದಿಗಳಿಗೂ ಏನೂ ಸಿಗುವಂತಿರಲಿಲ್ಲ. ಅವರ ಸಹ ಕನಿಷ್ಠ ಕುಡಿಯುವ ನೀರು ಸಿಗದೇ ಕಷ್ಟ ಅನುಭವಿಸಿದರು. ಬೆಂಗಳೂರಿನಿಂದ ಬಂದ ಸ್ಥಳೀಯರು, ಕುಂದಾಪುರದಿಂದ ಲಾರಿಗಳಲ್ಲಿ ತೀರಾ ಒಳಪ್ರದೇಶದ ಊರುಗಳಿಗೆ ಪ್ರಯಾಣ ಬೆಳೆಸಿದರು.

ಇನ್ನು ವಿವಿಧ ಕೆಲಸಗಳ ಮೇಲೆ ಉತ್ತರ ಭಾರತದಿಂದ ಜಿಲ್ಲೆಗೆ ಆಗಮಿಸಿ ಕುಂದಾಪುರ ಲಾಡ್ಜ್‌ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಕೆಲವರು ಊಟ-ತಿಂಡಿ ದೊರೆಯದೇ ತೀರಾ ಕಷ್ಟ ಅನುಭವಿಸಿದರು. ದಿಲ್ಲಿಯಿಂದ ಬಂದಿದ್ದ ಒಬ್ಬರು ಪತ್ರಕರ್ತರೊಬ್ಬರ ಬಳಿ ತಮಗೆ ಕಷ್ಟ, ತೊಂದರೆಗಳನ್ನು ಹೇಳಿಕೊಂಡು ಸಹಾಯ ಯಾಚಿಸಿದರು.

ಅದೇ ರೀತಿ ನಗರದ ವಿವಿಧ ಆಸ್ಪತ್ರೆಗಳಲ್ಲಿರುವ ರೋಗಿಗಳ ಆರೈಕೆಗೆ ಬಂದವರು ಸಹ ಹೊಟ್ಟೆಗೆ ಏನೂ ಸಿಗದೇ ಪರದಾಡುವಂತಾಯಿತು.

ವಿದೇಶದಿಂದ ಬಂದವರಿಗೆ ಆತಂಕ

ಕೊಲ್ಲಿ ರಾಷ್ಟ್ರಗಳಿಂದ ವಿಮಾನದಲ್ಲಿ ಬಂದು, ತಮ್ಮ ಸಹ ಪ್ರಯಾಣಿಕರೊಬ್ಬರು ಕೊರೋನ ವೈರಸ್ ಸೋಂಕು ಇರುವುದು ಪತ್ತೆಯಾದ ಬಳಿಕ ಅದೇ ವಿಮಾನದಲ್ಲಿ ಪ್ರಯಾಣಿಸಿದ ಕುಂದಾಪುರದ ಏಳು ಮಂದಿ ಇದೀಗ ಆತಂಕದಿಂದ ದಿನ ದೂಡುವಂತಾಗಿದೆ.

ಮಾ. 19ರಂದು ವಿಮಾನದಲ್ಲಿ ಬಂದ ಭಟ್ಕಳದ ಒಬ್ಬರಲ್ಲಿ ಇದೀಗ ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು, ಅವರ ಜೊತೆ ಅದೇ ವಿಮಾನದಲ್ಲಿ ಬಂದವರಲ್ಲಿ ಏಳು ಮಂದಿ ಕುಂದಾಪುರದ ಆಸುಪಾಸಿನವರು. ಅವರಲ್ಲಿ ಸೋಂಕಿನ ಯಾವುದೇ ಲಕ್ಷಣ ಕಾಣಿಸಿಕೊಳ್ಳದಿದ್ದರೂ, ಮನೆಯ ಆಸುಪಾಸಿನಲ್ಲಿರುವವರು ಅವರಿಗೂ ಆಸ್ಪತ್ರೆಯಲ್ಲಿರುವಂತೆ ಒತ್ತಡ ಹೇರುತಿದ್ದಾರೆ. ಇದರಿಂದ ವಿದೇಶದಿಂದ ಬಂದವರ ಮನೆಯವರು ಸಹ ಆತಂಕದಿಂದ ದಿನ ದೂಡುವಂತಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)