varthabharthi

ಕರಾವಳಿ

ಹೋಮ್ ಕ್ವಾರೆಂಟೀನ್‌ಗಳಿಗೆ ಅಗತ್ಯ ವಸ್ತು ಪೂರೈಕೆ: ಡಿಸಿ ಜಗದೀಶ್

ವಾರ್ತಾ ಭಾರತಿ : 24 Mar, 2020

ಉಡುಪಿ, ಮಾ.24: ಹೊರದೇಶದಿಂದ ಉಡುಪಿ ಜಿಲ್ಲೆಗೆ ಆಗಮಿಸಿರುವ 900 ಮಂದಿಯ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗಿದ್ದು, ಇವರಿಗೆ ಕುಟುಂಬ ಸಮೇತರಾಗಿ ಕಡ್ಡಾಯವಾಗಿ 28 ದಿನಗಳ ಹೋಮ್ ಕ್ವಾರೆಂಟೇನ್ (ಗೃಹ ನಿರ್ಬಂಧ) ಪಾಲಿಸಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಈ ಕುಟುಂಬ ಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿ, ಇವರ ಮನೆಗಳಿಗೆ ನೋಟೀಸ್ ಅಂಟಿಸಲಾ ಗಿದ್ದು, ದಿನಕ್ಕೆ ಎರಡು ಬಾರಿ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರುಗಿ ಅವರ ಬಗ್ಗೆ ಪರಿಶೀಲನೆ ಮಾಡಲಿರುವರು. ಅಲ್ಲದೇ ಈ ಮನೆಗಳ ಪಕ್ಕದವರಿಗೂ ಇವರ ಬಗ್ಗೆ ಮಾಹಿತಿ ನೀಡಿದ್ದು, ಇವರು ಮನೆಯಿಂದ ಹೊರ ಬಂದಲ್ಲಿ ಕೂಡಲೇ ಜಿಲ್ಲಾಡಳಿತದ ಉಚಿತ ಟೋಲ್ ಫ್ರೀ ನಂ.1077 ಹಾಗೂ ಪೊಲೀಸ್ ಕಂಟ್ರೋಲ್ ರೂಂ ನಂ.100ಕ್ಕೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಈ ನಿರ್ಬಂಧ ಉಲ್ಲಂಘಿಸಿ ದರೆ ಕಠಿಣ ಕ್ರಮ ಕೈಗೊಳ್ಳಲಾಗು ವುದು ಎಂದು ಎಚ್ಚರಿಕೆ ನೀಡಿದರು.

ದುಬೈಯಿಂದ ಮಂಗಳೂರಿಗೆ ಆಗಮಿಸಿದ ಭಟ್ಕಳದ ಯುವಕನಲ್ಲಿ ಕೊರೋನ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತನೊಂದಿಗೆ ಪ್ರಯಾಣಿಸಿದ ಉಡುಪಿ ಜಿಲ್ಲೆಯ 21 ಮಂದಿಯನ್ನು ಗುರುತಿಸಲಾಗಿದೆ. ಓರ್ವ ಸುರತ್ಕಲ್‌ನಲ್ಲೇ ಹೋಂ ಕ್ವಾರೆಂಟೇನ್‌ನಲ್ಲಿದ್ದರೆ, ಉಳಿದ 20 ಮಂದಿಗೆ ಮನೆಯಲ್ಲಿಯೇ ಇರಲು ಸೂಚಿಸಿ, ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದರು.

ನಿರ್ಬಂಧ ಉಲ್ಲಂಘಿಸಿದರೆ ಕ್ರಮ

ರಾಜ್ಯ ಸರಕಾರ ಸೂಚಿಸಿರುವ ನಿರ್ಬಂಧಗಳನ್ನು ಜಿಲ್ಲೆಯ ಜನತೆ ಕಡ್ಡಾಯ ವಾಗಿ ಪಾಲನೆ ಮಾಡಬೇಕು. ಈ ನಿರ್ಬಂಧಗಳನ್ನು ಉಲ್ಲಂಘಿಸುವವರ ವಿರುದ್ದ ಕಾನೂನು ರೀತಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸು ವುದನ್ನು ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಮನೆಯಿಂದ ಹೊರಬರಲು ಅವಕಾಶ ನೀಡ ಲಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಕೆಲವೊಂದು ಅಂಗಡಿಗಳು, ವಾಣಿಜ್ಯ ಸಂಸ್ಥೆ, ಕೈಗಾರಿಕೆಗಳ ವ್ಯವಹಾರವನ್ನು ಸ್ಥಗಿತಗೊಳಿಸಿದ್ದು, ಅಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನಸಹಿತ ರಜೆ ನೀಡಬೇಕು ಮತ್ತು ಅವರನ್ನು ಉದ್ಯೋಗ ದಿಂದ ವಜಾಗೊಳಿಸಬಾರದು. ಬಾರ್ ಹಾಗೂ ವೈನ್‌ಶಾಪ್‌ಗಳು ಸಂಪೂರ್ಣ ವಾಗಿ ಬಂದ್ ಮಾಡಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಮತ್ತು ಕ್ಲಿನಿಕ್‌ಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಬಾರದು. ಎಲ್ಲಾ ರೋಗಿಗಳನ್ನು ಸ್ಕ್ರೀನಿಂಗ್ ಮಾಡಬೇಕು. ಯಾರಲ್ಲಿಯಾದರೂ ಕೊರೋನ ಲಕ್ಷಣಗಳು ಕಂಡು ಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ತಿಳಿಸಬೇಕು. ಅವಶ್ಯಕ ಸೇವೆ ಹೊರತು ಪಡಿಸಿ ಇತರೆ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಕಚೇರಿಗೆ ಬರುವ ಅಗತ್ಯ ಇಲ್ಲ. ಆದರೆ ಕೇಂದ್ರ ಸ್ಥಾನದಲ್ಲಿರುವವರು ತುರ್ತು ಸಂದರ್ಭದಲ್ಲಿ ಹಾಜರಾಗ ಬೇಕು ಎಂದು ಅವರು ಸೂಚನೆ ನೀಡಿದರು.

ಮಲ್ಪೆ ಬಂದರಿನಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿರುವ ಬೋಟುಗಳು ಮಾತ್ರ ವಾಪಾಸ್ಸು ಬರುತ್ತಿದ್ದು, ಬಂದರಿನಲ್ಲಿರುವ ಯಾವುದೇ ಬೋಟುಗಳು ಸಮುದ್ರಕ್ಕೆ ತೆರಳಲು ಅವಕಾಶವಿಲ್ಲ. ಈಗಾಗಲೇ ಬೋಟುಗಳಿಗೆ ನೀಡಲಾಗುವ ಇಂಧನ ಸಬ್ಸಿಡಿಯನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಎಸಿ ರಾಜು, ಡಿಎಚ್‌ಓ ಡಾ.ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ಉಪಸ್ಥಿತ ರಿದ್ದರು.

ಅಭಾವ ಸೃಷ್ಠಿಸಿ ಬೆಲೆ ಏರಿಸಿದರೆ ಕ್ರಮ

ತರಕಾರಿ, ಹಣ್ಣುಹಂಪಲು ಸೇರಿದಂತೆ ಅಗತ್ಯ ವಸ್ತುಗಳ ಕೃತಕ ಅಭಾವ ಸೃಷ್ಠಿಸಿ, ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಜಿಲ್ಲೆಗೆ ಹೊರ ಜಿಲ್ಲೆಯಿಂದ ಬರುವ ದಿನಸಿ ಮತ್ತು ತರಕಾರಿ ವಾಹನಗಳ ಚಾಲಕರ ಆರೋಗ್ಯವನ್ನು ಪರಿಶೀಲಿಸಿ ಜಿಲ್ಲೆಯೊಳಗೆ ಪ್ರವೇಶ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ವ್ಯಾಪಾರಿಗಳು ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳು ವುದರ ಜೊತೆಗೆ ಗ್ರಾಹಕರೊಂದಿಗೆ ಆರು ಅಡಿ ಅಂತರದಲ್ಲಿ ವ್ಯವಹಾರ ಮಾಡಬೇಕು ಎಂದರು.

ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅನುಮತಿ ನೀಡಲಾಗಿದೆಯೇ ಹೊರತು ಕುಳಿತು ತಿನ್ನಲು ಇಲ್ಲ. ಇದನ್ನು ಉಲ್ಲಂಘಿಸುವ ಗ್ರಾಹಕರು ಮತ್ತು ಹೊಟೇಲ್ ಮಾಲಕರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಸೂಚಿಸಿದರು.

ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತನೆ

ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೋನ ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ. ಒಂದು ವೇಳೆ ಕಂಡುಬಂದಲ್ಲಿ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಯನ್ನಾಗಿ ಪರಿವರ್ತಿಸಿ, ಕೊರೋನಾ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗು ವುದು. ಉಳಿದಂತೆ ಜಿಲ್ಲಾಸ್ಪತ್ರೆಯಲ್ಲಿ ಬೇರೆ ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.

ಕರೋನಾ ರೋಗಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಕೊರೋನಾ ಶಂಕಿತರನ್ನು ಐಸೋಲೇಶನ್‌ನಲ್ಲಿಡಲು ಉದ್ಯಾವರದ ಎಸ್‌ಡಿಎಂ ಕಾಲೇಜಿನಲ್ಲಿ 150 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಇನ್ನೂ ಅಗತ್ಯ ಬಿದ್ದಲ್ಲಿ ಕೆಎಂಸಿಯಲ್ಲಿ 100 ಬೆಡ್‌ಗಳು ಮತ್ತು ನಗರದ ನೂತನ ಗ್ರಂಥಾಲಯ ಕಟ್ಟಡದಲ್ಲಿ 100 ಬೆಡ್‌ಗಳ ವ್ಯವಸ್ಥೆ ಮಾಲಾಗಿದೆ ಎಂದು ಅವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)