varthabharthi

ಕರಾವಳಿ

ಮಂಗಳೂರು: ಕರ್ಫ್ಯೂ-ಸೆಕ್ಷನ್ ಮಧ್ಯೆ ಬಸವಳಿದವರಿಗೆ ಆಹಾರ ವಿತರಣೆ

ವಾರ್ತಾ ಭಾರತಿ : 24 Mar, 2020

ಮಂಗಳೂರು, ಮಾ.24: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರಕಾರಗಳ ಸೂಚನೆಯಂತೆ ದ.ಕ. ಜಿಲ್ಲೆಯಲ್ಲಿ ನಡೆದ ಜನತಾ ಕರ್ಫ್ಯೂ, ಕರ್ಫ್ಯೂ ಮತ್ತು ಸೆಕ್ಷನ್ ಹಾಗೂ ಬಂದ್, ನಿರ್ಬಂಧದ ಮಧ್ಯೆ ಅಡಕತ್ತರಿಗೆ ಸಿಲುಕಿದ, ಬಸವಳಿದ ಮತ್ತು ತೀರಾ ಅಸಹಾಯಕರಿಗೆ ಮಧ್ಯಾಹ್ನ ಮತ್ತು ರಾತ್ರಿಯ ವೇಳೆ ಆಹಾರ ವಿತರಿಸುವ ತಂಡವೊಂದು ನಗರದಲ್ಲಿ ಸಕ್ರಿಯವಾಗಿದೆ.

ಬಂದರ್ ಕಂದುಕ ಪ್ರದೇಶದ ಯುವಕರ ತಂಡವು ಆಹಾರವನ್ನು ತಯಾರಿಸಿ ಅನ್ನ ಆಹಾರವಿಲ್ಲದೆ ಪರದಾಡುತ್ತಿರುವ ಭಿಕ್ಷುಕರಿಗೆ, ಕೂಲಿ ಕಾರ್ಮಿಕರಿಗೆ ಮನೆಯಲ್ಲೇ ಆಹಾರ ತಯಾರಿಸಿ ಪೊಟ್ಟಣದಲ್ಲಿ ಪ್ಯಾಕ್ ಮಾಡಿ ವಿತರಿಸುತ್ತಿದೆ.

ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಶೌಕತ್ ಅಲಿ ‘ಜನತಾ ಕರ್ಫ್ಯೂ ವಿಧಿಸಲ್ಪಟ್ಟ ರವಿವಾರ ಮಧ್ಯಾಹ್ನ ನಾನು ಬಂದರ್ ಠಾಣಾ ಪರಿಸರದಲ್ಲಿ ಸುತ್ತಾಡಿದೆ. ಈ ವೇಳೆ ಕೆಲವು ಮಂದಿ ಊಟ ಮಾಡದೆ ಹಸಿವಿನಿಂದ ಬಸವಳಿದಿರುವುದು ಕಂಡು ಬಂತು. ತಕ್ಷಣ ಮನೆಗೆ ತೆರಳಿ ಅವರಿಗೆ ಊಟ ತಯಾರಿಸಿ ಹಂಚಿದೆ. ಬಳಿಕ ನಾನು ಸಾಮಾಜಿಕ ಜಾಲತಾಣದಲ್ಲಿ ಇದರ ವೀಡಿಯೊ ಹಾಕಿ ನಿಮ್ಮ ಕಡೆಯೂ ಹೀಗೆ ತೊಂದರೆಗೊಳಗಾದವರಿಗೆ ನೆರವು ನೀಡಿ ಎಂದು ಮನವಿ ಮಾಡಿದೆ. ನನ್ನ ಮನವಿಗೆ ಉತ್ತಮ ಸ್ಪಂದನೆ ಸಿಕ್ಕಿತು. ಪಾಂಡೇಶ್ವರ, ತೊಕ್ಕೊಟ್ಟು ಮತ್ತಿತರ ಕಡೆಯ ಸಹೃದಯಿಗಳು ಕೈ ಜೋಡಿಸಿದರು. ಹಾಗೇ ಕಳೆದ ಎರಡು ದಿನದಿಂದ ಮಧ್ಯಾಹ್ನ ಮತ್ತು ರಾತ್ರಿ ಸುಮಾರು 200ಕ್ಕೂ ಅಧಿಕ ಮಂದಿಗೆ ಎಚ್‌ಆರ್‌ಎಸ್ (ಹುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ) ವತಿಯಿಂದ ಆಹಾರವನ್ನು ಒದಗಿಸಲಾಗುತ್ತಿದೆ. ಇದೀಗ ನಾವೇ ಒಂದು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಯಾರ್ಯಾರು ಯಾವ್ಯಾವ ರೂಟಿಗೆ ತೆರಳಿ ಅನ್ನಹಾರ ಹಂಚಬೇಕು ಎಂದು ನಿರ್ಧರಿಸುತ್ತಿದ್ದೇವೆ’ ಎಂದರು.

ಶೌಕತ್ ಅಲಿಯ ಜೊತೆಗೆ ಶಬ್ಬೀರ್ ಮಂಗಳೂರು, ಅಮೀರ್ ಕುದ್ರೋಳಿ, ಕಾಸಿಮ್, ಮುನವ್ವರ್, ಇರ್ಷಾದ್, ಮುನ್ನ ಕಮ್ಮರಡಿ, ಬ್ಯಾರಿ ಝುಲ್ಫಿ, ಹಬೀಬ್ ಖಾದರ್ ಮತ್ತಿತರರಿದ್ದಾರೆ.

ಉದ್ಯಮಿ, ಸಮಾಜ ಸೇವಕ ಬಿ.ಎ. ಅಕ್ಬರ್ ಅಲಿ ಅವರು 1000 ಆಹಾರದ ಪೊಟ್ಟಣ ಮತ್ತು ನೀರಿನ ಬಾಟಲಿಯ ಕೊಡುಗೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)