varthabharthiಸಂಪಾದಕೀಯ

ಕೊರೋನ ಸೋಂಕು: ಪೂರ್ವ ಸಿದ್ಧತೆ ಸಾಲದು

ವಾರ್ತಾ ಭಾರತಿ : 24 Mar, 2020

ಭಾರತಕ್ಕೆ ಕೊರೋನ ವೈರಸ್ ಅಪ್ಪಳಿಸಿ ಎರಡು ತಿಂಗಳಾಗುತ್ತ ಬಂತು.ಈಗ ಅದು ಆತಂಕದ ಹಂತವನ್ನು ತಲುಪಿದೆ. ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಲೇ ಇದೆ. ಈ ವರೆಗೆ 11 ಜನ ಅಸುನೀಗಿದ್ದಾರೆ. ದೇಶದಲ್ಲಿ ಈ ಸೋಂಕಿಗೆ ಒಳಗಾದವರ ಸಂಖ್ಯೆ 498 ತಲುಪಿದೆ. ಇಂತಹ ಸ್ಥಿತಿ ಎಂದೂ ಉಂಟಾಗಿರಲಿಲ್ಲ. ಇಡೀ ದೇಶವೇ ಬಾಗಿಲು ಮುಚ್ಚಿಕೊಂಡು ಮನೆಯೊಳಗೆ ಕುಳಿತಿದೆ. ಭಾರತ ಮಾತ್ರವಲ್ಲ ಇಡೀ ಭೂಮಂಡಲ ಕೋವಿಡ್-19 ಹೊಡೆತಕ್ಕೆ ತತ್ತರಿಸಿ ಹೋಗಿದೆ. ಅಮೆರಿಕ, ಇಂಗ್ಲೆಂಡ್, ಇಟಲಿ, ಸ್ಪೇನ್ ದೇಶಗಳು ದಿಕ್ಕುತಪ್ಪಿನಿಂತಿವೆ. ಈ ವೈರಸ್ ಮೊದಲು ಕಾಣಿಸಿಕೊಂಡ ಚೀನಾ ಹೇಗೋ ಪಾರಾಗಿ ಇದೀಗ ನಿಟ್ಟುಸಿರು ಬಿಡುತ್ತಿದೆ. ಜಾತಿ, ಮತ, ಭಾಷೆ, ಪ್ರದೇಶ, ದೇಶ ಎಲ್ಲವನ್ನು ಮೀರಿ ಇಡೀ ಮನುಕುಲವನ್ನು ಕಂಗೆಡಿಸಿರುವ ಈ ಕೊರೋನ ಎದುರು ಸೆಣಸಿ ಬಚಾವಾಗಲು ಮನುಷ್ಯರು ತಾವೇ ಸೃಷ್ಟಿಸಿಕೊಂಡ ಜಾತಿ, ಮತದ ಬಿಲಗಳಿಂದ ಹೊರಬಂದಂತೆ ಕಾಣುತ್ತಿದೆ. ಆದರೆ ಅದರಿಂದ ಸಂಪೂರ್ಣ ಹೊರಗೆ ಬಂದಂತೆ ಕಾಣುತ್ತಿಲ್ಲ.

ಈ ಕೊರೋನ ಒಮ್ಮೆಲೆ ಅಪ್ಪಳಿಸಿದಾಗ ಅದನ್ನು ಎದುರಿಸಿ ಹಿಮ್ಮೆಟ್ಟಿಸಿದ ಚೀನಾದ ಸಾಧನೆ ಅನನ್ಯವಾದುದು. ಆದರೆ ಈ ನಿಟ್ಟಿನಲ್ಲಿ ಮುಂದುವರಿದ ದೇಶಗಳಾದ ಅಮೆರಿಕ, ಇಂಗ್ಲೆಂಡ್ ಇನ್ನೂ ಆತಂಕದ ಮಡುವಿನಲ್ಲೇ ಇವೆ. ಅತ್ಯಂತ ಆಧುನಿಕ ವೈದ್ಯಕೀಯ ಸೌಕರ್ಯ ಹೊಂದಿರುವ ಇಟಲಿಯಂತೂ ಕೊರೋನ ಎದುರು ಸೋತು ಸುಣ್ಣವಾಗಿದೆ.

ನಮ್ಮ ಭಾರತದ ಪರಿಸ್ಥಿತಿ ಇನ್ನೂ ಕಳವಳಕಾರಿಯಾಗಿದೆ. ಚೀನಾದ ವುಹಾನ್ ನಗರದಲ್ಲಿ ಇದು ಕಾಣಿಸಿಕೊಂಡು ಇಡೀ ನಗರವನ್ನು ಸಾವಿನ ಮನೆಯನ್ನಾಗಿ ಮಾಡಿದಾಗಲೇ ಭಾರತ ಎಚ್ಚೆತ್ತುಕೊಳ್ಳಬೇಕಾಗಿತ್ತು.ಆರಂಭದಲ್ಲಿ ನಿರ್ಲಕ್ಷ ತೋರಿಸಿ ಮೂರು ವಾರಗಳ ಹಿಂದೆ ಎಚ್ಚೆತ್ತ ಭಾರತ ತಡವಾಗಿಯಾದರೂ, ಇದನ್ನೆದುರಿಸಲು ಸಂಕಲ್ಪ ಮಾಡಿದೆ. ಇಡೀ ದೇಶದಲ್ಲಿ ಒಂದು ವಿಧದ ಕರ್ಫ್ಯೂ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮನವಿಗೆ ಸ್ಪಂದಿಸಿ 22ನೇ ತಾರೀಕು ಜನತಾ ಕರ್ಫ್ಯೂ ಆಚರಿಸಲಾಯಿತು. ಆದರೂ ಇದರ ಅಪಾಯವನ್ನು ಅರಿಯದ ಜನ ಮಾರನೇ ದಿನ ಅಲ್ಲಲ್ಲಿ ಕಾಣಿಸಿಕೊಂಡರು. ಈಗ ಮತ್ತೆ ಬಲವಂತದ ಕರ್ಫ್ಯೂ ಹೇರಿ ಎಲ್ಲರನ್ನು ಮನೆ ಸೇರಿಸಲಾಗಿದೆ.

ಆದರೆ ಬರೀ ಜನತಾ ಕರ್ಫ್ಯೂನಿಂದ ಈ ಮಾರಣಾಂತಿಕ ವೈರಸ್‌ನ್ನು ಹಿಮ್ಮೆಟ್ಟಿಸಲು ಸಾಧ್ಯವೇ? ಸಾಧ್ಯವಿಲ್ಲ ಎಂದು ವೈದ್ಯಕೀಯ ಮೂಲಗಳು ಹೇಳುತ್ತವೆ. ಇದನ್ನು ತಡೆದು ನಿಗ್ರಹಿಸಲು ಅತ್ಯಾಧುನಿಕ ಆಸ್ಪತ್ರೆಗಳು ಬೇಕು, ವಿಶೇಷ ವಾರ್ಡುಗಳು ಬೇಕು, ವೆಂಟಿಲೇಟರ್‌ಗಳು, ಟೆಸ್ಟ್ ಲ್ಯಾಬ್‌ಗಳು ಬೇಕು. ಈಗ ಇವುಗಳ ಕೊರತೆ ಎದ್ದು ಕಾಣುತ್ತಿದೆ. ಚೀನಾ ಮತ್ತು ಇಟಲಿಯಂತೆ ಇದು ವ್ಯಾಪಿಸಿದರೆ ನೂರಾರು ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲು ಸಾಕಷ್ಟು ಸರಕಾರಿ ಆಸ್ಪತ್ರೆಗಳು ಇಲ್ಲಿಲ್ಲ. ವೈದ್ಯರ ಕೊರತೆಯೂ ಇದೆ. ನೆಹರೂ ಕಾಲದಿಂದಲೂ ಕಟ್ಟಿ ಬೆಳೆಸಿದ ಸಾರ್ವಜನಿಕ ವೈದ್ಯಕೀಯ ವ್ಯವಸ್ಥೆ ಇರುವುದರಿಂದ ಈಗ ಇಷ್ಟಾದರೂ ಇದನ್ನು ಎದುರಿಸಲು ಸಾಧ್ಯವಾಗಿದೆ. ಆದರೆ ಕಳೆದ ಮೂರು ದಶಕಗಳಲ್ಲಿ ಜಾಗತೀಕರಣದ ಆರ್ಥಿಕ ನೀತಿ ಒಪ್ಪಿಕೊಂಡ ನಂತರ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ಈಗ ಅದಕ್ಕೆ ಪುನಶ್ಚೇತನ ನೀಡಬೇಕಾಗಿದೆ.

 ಪ್ರಧಾನ ಮಂತ್ರಿ ಈ ಮೊದಲು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಕೊರೋನ ಎದುರಿಸಲು ಯಾವುದೇ ವಿಶೇಷ ಪ್ಯಾಕೇಜನ್ನು ಘೋಷಿಸಲಿಲ್ಲ.ಬರೀ ಜನತಾ ಕರ್ಫ್ಯೂನ ಮನವಿ ಮಾಡಿದರು. ಪ್ರಧಾನಿಯಾಗಿ ಅವರು ಕೊರೋನ ಎದುರಿಸಲು ರಾಷ್ಟ್ರ ಕೈಗೊಂಡ ಕ್ರಮಗಳ ಬಗ್ಗೆ ಪ್ರಜೆಗಳಿಗೆ ವಿವರಿಸಬೇಕಾಗಿತ್ತು. ಆ ಜವಾಬ್ದಾರಿಯನ್ನು ಅವರು ನಿಭಾಯಿಸಲಿಲ್ಲ.ಅಮೆರಿಕದಂತಹ ದೇಶದಲ್ಲಿ ಟ್ರಂಪ್‌ನಂತಹ ಅಧ್ಯಕ್ಷ ಕೂಡ ನಿತ್ಯವೂ ರಾಷ್ಟ್ರವನ್ನುದ್ದೇಶಿಸಿ ಮಾತಾಡಿ ಕರೋನ ಎದುರಿಸಲು ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸುತ್ತಾರೆ. ನಮ್ಮ ಪ್ರಧಾನ ಮಂತ್ರಿಯಿಂದ ದೇಶ ಅದನ್ನು ನಿರೀಕ್ಷಿಸಿತ್ತು.

 ಪ್ರಧಾನ ಮಂತ್ರಿ ಮೊದಲ ಭಾಷಣದಲ್ಲೇ ಕೊರೋನ ಎದುರಿಸಲು ವಿಶೇಷ ಹಣಕಾಸು ಪ್ಯಾಕೇಜ್‌ನ್ನು ಘೋಷಿಸಬೇಕಾಗಿತ್ತು.ಆದರೆ ಅವರು ಮಾತಿನಲ್ಲಿ ಮಾವಿನಕಾಯಿ ಉದುರಿಸಲು ಹೋದರು.

ಈ ದೇಶದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಮೂರು ಸಾವಿರ ಕೋಟಿ ರೂ.ಮಂಜೂರು ಮಾಡಲು ಹಣವಿದೆ. ಗಂಗಾನದಿ ಶುದ್ಧೀಕರಣಕ್ಕಾಗಿ ಎಂಟು ಸಾವಿರ ಕೋಟಿ ರೂಪಾಯಿ ಒದಗಿಸುವ ಉದಾರತನವಿದೆ. ದಿಲ್ಲಿಯಲ್ಲಿ ಹೊಸ ಸಂಸತ್ ಭವನವನ್ನು ನಿರ್ಮಿಸಲು, ರಾಜ ಪಥ ನಿರ್ಮಿಸಲು ಇಪ್ಪತ್ತು ಸಾವಿರ ಕೋಟಿ ರೂಪಾಯಿ ನೀಡುವ ಧಾರಾಳತನವಿದೆ. ಆದರೆ ಕೊರೋನದಂತಹ ಭೀಕರ ಪಿಡುಗಿನಿಂದ ಇಡೀ ಭಾರತದ ಜನಸಂಖ್ಯೆಯೇ ನಾಶವಾಗುತ್ತಿರುವ ಅಪಾಯ ಎದುರಾದಾಗ ವಿಶೇಷ ನೆರವಿನ ಪ್ಯಾಕೇಜ್ ಬಿಡುಗಡೆ ಮಾಡುವ ಕನಿಷ್ಠ ಮಾನವೀಯತೆ ಯಾಕಿಲ್ಲ.?

ಹಾಗೆ ನೋಡಿದರೆ ಕರ್ನಾಟಕದ ಯಡಿಯೂರಪ್ಪನವರ ಸರಕಾರವೇ ವಾಸಿ ಎನಿಸುತ್ತದೆ. ಕೊರೋನದಿಂದ ಕಲಬುರಗಿಯಲ್ಲಿ ಒಬ್ಬ ವ್ಯಕ್ತಿ ಅಸುನೀಗುತ್ತಿದ್ದಂತೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ ಸರಕಾರ ಈ ಪಿಡುಗನ್ನು ತಹಬಂದಿಗೆ ತರಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರಕಾರ ಘೋಷಿಸುವ ಮುನ್ನವೇ ಇಡೀ ಕರ್ನಾಟಕದಲ್ಲಿ ದಿಗ್ಬಂಧನ (ಲಾಕ್ ಡೌನ್) ಘೋಷಣೆ ಮಾಡಿದೆ. ಆದರೆ ಇದಿಷ್ಟೇ ಸಾಲದು. ಈ ಕರ್ಫ್ಯೂ ಪರಿಣಾಮವಾಗಿ ದುಡಿದುಂಡು ಜೀವಿಸುವ ಬಡವರ, ಕೂಲಿಕಾರರ ಬದುಕು ಮೂರಾ ಬಟ್ಟೆಯಾಗಿದೆ. ಅವರ ದುಡಿಮೆ ನಿಂತು ಹೋಗಿದೆ. ಕಾರಣ ಯಡಿಯೂರಪ್ಪನವರ ಸರಕಾರವೂ ಕೇರಳ ಮಾದರಿಯಲ್ಲಿ ಪ್ರತಿ ಮನೆಗೆ ಆರು ತಿಂಗಳ ಕಾಲ ಉಚಿತ ಪಡಿತರ ವಿತರಣೆ ಮಾಡಲಿ. ಬಡವರ ಖರ್ಚು ವೆಚ್ಚಗಳಿಗೆ ಮಾಸಿಕ ಹಣಕಾಸಿನ ನೆರವನ್ನು ನಿಗದಿಪಡಿಸಲಿ.ಇದು ಬಡವರು ದುಡಿಯುವ ಜನರು, ಅಲ್ಪಸಂಖ್ಯಾತರು, ದಲಿತರು ಕಟ್ಟಿದ ಕರ್ನಾಟಕ. ಈ ಸಂಕಷ್ಟ ಕಾಲದಲ್ಲಿ ಬೀದಿಗೆ ಬಿದ್ದವರ ನೆರವಿಗೆ ಬರಲಿ.

ಎಲ್ಲರೂ ನಮ್ಮೆಲ್ಲ ಜಾತಿ, ಮತ, ಭೇದ ಮರೆತು ಈ ಕೊರೋನವನ್ನು ಹಿಮ್ಮೆಟ್ಟಿಸಿ ನಾವೂ ಬದುಕೋಣ, ಸಹಬಂಧುಗಳನ್ನು ಬದುಕಿಸೋಣ. ಅದಕ್ಕಾಗಿ ಸ್ವಯಂ ದಿಗ್ಬಂಧನ ಹಾಕಿಕೊಂಡು ಮನೆಯೊಳಗೆ ಉಳಿದು ಪರಿಸ್ಥಿತಿ ಎದುರಿಸಿ ಗೆಲ್ಲೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)