varthabharthi


ಕರ್ನಾಟಕ

ಕೊರೋನ ಹಿನ್ನೆಲೆಯಲ್ಲಿ 'ಸಾಮಾಜಿಕ ಅಂತರ': ಮಾದರಿಯಾದ ಕೊಪ್ಪದ ಅಂಗಡಿಗಳು

ವಾರ್ತಾ ಭಾರತಿ : 25 Mar, 2020

ಚಿಕ್ಕಮಗಳೂರು, ಮಾ.22: ಇಡೀ ದೇಶದಲ್ಲಿ ಕೊರೋನ ವೈರಸ್ ಸೋಂಕು ಹರಡುತ್ತಿರುವ ಆತಂಕ ಎಲ್ಲರನ್ನೂ ಕಾಡುತ್ತಿದ್ದು, ಸರಕಾರಗಳು ಈ ಸಂಬಂಧ ಹಲವು ರೀತಿಯಲ್ಲಿ ಜನಜಾಗೃತಿ ಮೂಡಿಸುತ್ತಿದೆ. ದೇಶಾದ್ಯಂತ ಲಾಕ್ ಡೌನ್ ಕೂಡಾ ಮಾಡಲಾಗಿದೆ. ಜನತೆಯೂ ಜಾಗೃತರಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಸ್ವಚ್ಚತೆ, ಗೃಹಬಂಧನದ ಮೂಲಕ ಕೊರೋನ ಹರಡದಂತೆ ಜಾಗೃತೆ ವಹಿಸುತ್ತಿದ್ದಾರೆ. ಈ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಹಲವು ಅಂಗಡಿ, ಮೆಡಿಕಲ್ ಮಾಲಕರು 'ಸಾಮಾಜಿಕ ಅಂತರ'ದ ಮೂಲಕ ಗಮನ ಸೆಳೆದಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಕೊಪ್ಪದ ಹಲವು ದಿನಸಿ, ತರಕಾರಿ ಅಂಗಡಿಗಳು, ಮೆಡಿಕಲ್ ಶಾಪ್ ಗಳು 'ಸಾಮಾಜಿಕ ಅಂತರ'ದ ಮೂಲಕ ಕೊರೋನ ಹರಡದಂತೆ ಜಾಗೃತೆ ವಹಿಸುತ್ತಿದ್ದು, ಅಂಗಡಿಗಳ ಮುಂಭಾಗ ಗ್ರಾಹಕರ ನಡುವೆ ಅಂತರ ಕಾಪಾಡಲು ಮೀಟರ್ ಅಂತರದಲ್ಲಿ ಚೌಕಾಕಾರದಲ್ಲಿ ಮಾರ್ಕ್ ಮಾಡಿದ್ದಾರೆ. ಗ್ರಾಹಕರು ಈ ಮಾರ್ಕ್ ನಲ್ಲೇ ನಿಲ್ಲಬೇಕಾಗಿದ್ದು, ಇತರೆ ಗ್ರಾಹಕರು ಪರಸ್ಪರ ಅಂತರ ಕಾಯ್ದುಕೊಳ್ಳಲು ಇದು ಸಹಕಾರಿಯಾಗುತ್ತದೆ. ಈ ರೀತಿಯ ಮಾರ್ಕ್ ಗಳು ಕೊಪ್ಪದ ಹಲವು ಕಡೆಗಳಲ್ಲಿ ಅಂಗಡಿಗಳ ಮುಂಭಾಗ ಕಂಡುಬಂದಿದೆ.

ಲೌಕ್‌ ಡೌನ್ ಹೊರತಾಗಿಯೂ ದಿನಬಳಕೆಯ ಸಾಮಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಜನಸಾಮಾನ್ಯರು ಮಾರುಕಟ್ಟೆ ಸೇರಿದಂತೆ ಅಂಗಡಿಗಳ ಎದುರು ಗುಂಪುಗೂಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮವನ್ನೇ ಮರೆತು ನೂರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಹೀಗಾಗಿ ಸ್ವತಃ ಅಂಗಡಿ, ಮೆಡಿಕಲ್ ಗಳ ಮಾಲಕರೇ ಈ ಬಗ್ಗೆ ಜಾಗೃತರಾಗಿದ್ದು, 'ಸಾಮಾಜಿಕ ಅಂತರ'ದ  ಮೂಲಕ ಕೊರೋನ ಹರಡದಂತೆ ಮುನ್ನೆಚ್ಚರಿಕೆ ವಹಿಸುವಲ್ಲಿ ಇತರರಿಗೆ ಮಾದರಿಯಾಗಿದ್ದಾರೆ. 

ಕೊರೋನ ವೈರಸ್ ಹರಡುತ್ತಿರುವ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಸರಕಾರ ಜನತೆಗೆ ಮನವಿ ಮಾಡುತ್ತಿದೆ. ಆದರೂ ಜನತೆ ಈ ಬಗ್ಗೆ ಸಂಪೂರ್ಣ ಎಚ್ಚರ ವಹಿಸಿದಂತೆ ಕಾಣುತ್ತಿಲ್ಲ. ಜನಸಾಮಾನ್ಯರು ಬಹುತೇಕವಾಗಿ ಜಿಲ್ಲಾಡಳಿತದ ಸೂಚನೆಗಳನ್ನು ಪಾಲನೆ ಮಾಡುತ್ತಿದ್ದಾರೆ. ಹೆದ್ದಾರಿ ಸೇರಿದಂತೆ ನಗರದ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಯಂತ್ರಿಸಲ್ಪಟ್ಟಿದೆ. ಹಾಗಿದ್ದರೂ ಮಾರುಕಟ್ಟೆ ಹಾಗೂ ದಿನಸಿ ಅಂಗಡಿಗಳಲ್ಲಿ ಮಾತ್ರ ಜನ ಸಾಮಾನ್ಯರು ಮುಗಿಬೀಳುವ ಸನ್ನಿವೇಶ ಉಂಟಾಗುತ್ತಿದೆ. ಹೀಗಾಗಿ ಕೊಪ್ಪದ ಅಂಗಡಿ ಮಾಲಕರು 'ಮಾರ್ಕ್' ಮೂಲಕ 'ಸಾಮಾಜಿಕ ಅಂತರ' ಕಾಪಾಡಿ ಗಮನ ಸೆಳೆದಿದ್ದಾರೆ.

ಇದರ ಫೋಟೋಗಳನ್ನು ಕೊಪ್ಪದ ಉದ್ಯಮಿ ಸುನಿಲ್ ಕುಮಾರ್ ತನ್ನ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)